Advertisement

ಹಿರಿಯ ನಾಗರಿಕರಿಗೆ ಉಚಿತ ಕಾನೂನು ನೆರವು: ಎಡಿಸಿ

07:30 AM Sep 05, 2017 | |

ಉಡುಪಿ: ಹಿರಿಯ ನಾಗರಿಕರು ವಿವಿಧ ಪ್ರಕರಣಗಳ ಮಾಹಿತಿಗೆ ನ್ಯಾಯಾಲಯಗಳಿಗೆ ಅಲೆದಾಡುವುದನ್ನು ತಪ್ಪಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಕಾರದೊಂದಿಗೆ, ಆಯಾ ತಾಲೂಕಿನ ಹಿರಿಯ ನಾಗರಿಕರ ಸಂಸ್ಥೆಗಳ ಕಚೇರಿಗೆ ನಿಗದಿಪಡಿಸಿದ ದಿನ ಸ್ಥಳೀಯ ವಕೀಲರ ಮೂಲಕ ಉಚಿತ ಕಾನೂನು ನೆರವು ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಅನುರಾಧಾ ತಿಳಿಸಿದರು.

Advertisement

ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ 2007 ರ ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಅನುಷ್ಠಾನದ ಜಿಲ್ಲಾ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ನಾಗರೀಕರು ಸ್ವಂತ ಜಾಗದ ಪ್ರಕರಣಗಳ ಕುರಿತು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದು, ಸೂಕ್ತ ಕಾನೂನು ಮಾಹಿತಿ ಕೊರತೆಯಿದೆ. ಅದಕ್ಕಾಗಿ ತಾಲೂಕು ವ್ಯಾಪ್ತಿಯ ಹಿರಿಯ ನಾಗರಿಕರ ಸಂಸ್ಥೆಗಳಲ್ಲಿ ಸ್ಥಳೀಯ ವಕೀಲರೊಂದಿಗ ಮುಖಾಮುಖೀ ಕಾರ್ಯಕ್ರಮ ಏರ್ಪಡಿಸಿ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ಇತ್ಯರ್ಥ ಪಡಿಸಲಾಗುವುದು ಎಂದರು. 

ಪೊಲೀಸ್‌ ಸಹಾಯವಾಣಿ 
ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ 24×7 ಹಿರಿಯ ನಾಗರಿಕರ ಸಹಾಯವಾಣಿ ಆರಂಭಿಸುವ ಬಗ್ಗೆ ಎಸ್ಪಿ ಜತೆ ಚರ್ಚಿಸಲಾಗುವುದು. ಎಲ್ಲ ಖಾಸಗಿ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಮೆಟ್ಟಿಲುಗಳ ಎತ್ತರ ತಗ್ಗಿಸುವಂತೆ ಈಗಾಗಲೇ ಬಸ್‌ ಮಾಲಕರಿಗೆ ಸೂಚಿಸಲಾಗಿದೆ. ಹಿರಿಯ ನಾಗರಿಕರಿಗೆ ಬಸ್‌ಗಳಲ್ಲಿ ಮೀಸಲಿಟ್ಟ ಸೀಟ್‌ಗಳನ್ನು ನೀಡಲು ಎಲ್ಲ ಬಸ್‌ ಕಂಡಕ್ಟರ್‌ಗಳಿಗೆ ಸೂಚಿಸುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಎಡಿಸಿ ಸೂಚಿಸಿದರು.

11 ವೃದ್ಧಾಶ್ರಮಗಳಿಗೆ ಅನುಮತಿ
ಜಿಲ್ಲೆಯಲ್ಲಿ ಈಗಾಗಲೇ 19 ವೃದ್ಧಾಶ್ರಮಗಳು ಅನುಮತಿಗೆ ಪ್ರಸ್ತಾವನೆ ಸಲ್ಲಿಸಿದ್ದು, 11ಕ್ಕೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ನಿರಂಜನ ಭಟ್‌ ತಿಳಿಸಿದರು. ಇದೇ ವೇಳೆ ಅನುಮತಿ ನೀಡಿರುವ ವೃದ್ಧಾಶ್ರಮಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು. 

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಹಿರಿಯ ನಾಗರೀಕರ ವೇದಿಕೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement

ಅಹವಾಲು ಸ್ವೀಕಾರ
ಎಲ್ಲ ತಾಲೂಕುಗಳಲ್ಲಿ ತಹಶೀಲ್ದಾರ್‌ರಿಂದ ಹಿರಿಯ ನಾಗರೀಕರ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ತಿಂಗಳ ಮೊದಲ ಸೋಮವಾರ ಉಡುಪಿ, 2ನೇ ಸೋಮವಾರ ಕುಂದಾಪುರ ಹಾಗೂ 3 ನೇ ಸೋಮವಾರ
ಕಾರ್ಕಳದಲ್ಲಿ ಅಹವಾಲು ಸ್ವೀಕಾರ ನಡೆಯಲಿದ್ದು, ಹಿರಿಯ ನಾಗರಿಕರು ತಮ್ಮ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸುವಂತೆ ಅನುರಾಧಾ ತಿಳಿಸಿದರು. ಹಿರಿಯ ನಾಗರೀಕರಿಗೆ ಗುರುತಿನ ಚೀಟಿ ನೀಡುವಾಗ ಆಧಾರ್‌ ಕಾರ್ಡ್‌ನಲ್ಲಿರುವ ಜನ್ಮದಿನವನ್ನು ಪರಿಗಣಿಸುವಂತೆ ಹಾಗೂ ಅ. 1ರಂದು ಹಿರಿಯ ನಾಗರಿಕರ ದಿನಾಚರಣೆ ಆಚರಿಸಲು ನಿರ್ಧರಿಸಲಾಯಿತು.
 

Advertisement

Udayavani is now on Telegram. Click here to join our channel and stay updated with the latest news.

Next