ಚುನಾವಣಾ ಆಯೋಗ ನಾಗರಿಕರು ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲು ನಾನಾ ವಿಧಾನಗಳನ್ನು ಅನುಸರಿಸುತ್ತಿದೆ. ಅದೇ ರೀತಿ ಬೆಂಗಳೂರಿನಲ್ಲಿ ಅಂಗಡಿ ಮಳಿಗೆಯವರೂ ಆಫರ್ ನೀಡುವ ಮೂಲಕ ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಯುವಕರೇ ಈ ದೇಶದ ಶಕ್ತಿ ಎಂದಿದ್ದರು ವಿವೇಕಾನಂದರು. ಅವರನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ಜವಾಬ್ದಾರಿ ಹಿರಿಯರ ಮೇಲಿನದು. ಈ ಗುರುತರ ಜವಾಬ್ದಾರಿ ಹೊತ್ತವರಲ್ಲಿ ಸಿ.ವಿ. ಕೃಷ್ಣಮೂರ್ತಿಯವರೂ ಒಬ್ಬರು. ದೇಶದ ಭವಿಷ್ಯವನ್ನೇ ರೂಪಿಸುವ ಮತದಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮದೇ ಆದ ರೀತಿಯಲ್ಲಿ ನಾಗರಿಕರನ್ನು ಹುರಿದುಂಬಿಸುತ್ತಿದ್ದಾರೆ.
ಏಪ್ರಿಲ್ 19ರಂದು ತಮ್ಮ ಅಂಗಡಿಗೆ ಬರುವ ಗ್ರಾಹಕರು ಮತದಾನದಲ್ಲಿ ಪಾಲ್ಗೊಂಡಿದ್ದರೆ ಅವರಿಗೆ ಆಯ್ದ ದಿನಸಿ ವಸ್ತುಗಳನ್ನು ಉಚಿತವಾಗಿ ನೀಡುವ ಮೂಲಕ ಮತದಾನದ ಮಹತ್ವವನ್ನು ಸಾರುತ್ತಿದ್ದಾರೆ. ಒಬ್ಬರಿಗೆ ಕಮ್ಮಿಯೆಂದರೂ ಮೂರು ವಸ್ತುಗಳನ್ನು ಅವರು ನೀಡಲಿದ್ದಾರೆ. ಟೂತ್‌ಪೇಸ್ಟ್, ಬ್ರಶ್, ಸೋಪ್ ಅದೇನೇ ಇರಬಹುದು. ಗ್ರಾಹಕರು ಮತ ಹಾಕಿದ ಬೆರಳ ಗುರುತು ತೋರಿಸಬೇಕಷ್ಟೆ.
80 ವರ್ಷದ ಈ ಹಿರಿಯರು ಕಳೆದ 60 ವರ್ಷಗಳಿಂದ ಕೆ.ಆರ್ ಮಾರ್ಕೆಟ್ ಬಳಿಯ ಅವೆನ್ಯೂ ರಸ್ತೆಯಲ್ಲಿ ಕುಸುಮಾ ಜನರಲ್ ಸ್ಟೋರ್ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದರೂ ಕೃಷ್ಣಮೂರ್ತಿಯವರು ಮೂಲತಃ ಕೋಲಾರದವರು. ಮಿನರ್ವ ಬಳಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ವಿಜಯಾ ಕಾಲೇಜಿನಲ್ಲಿ ಇಂಟರ್‌ಮೀಡಿಯೇಟ್‌ವರೆಗೂ(ಪಿ.ಯು.ಸಿ ತತ್ಸಮಾನ) ಓದಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೂ ಕನ್ನಡ ಭಾಷೆಯ ಬಗೆಗಿನ ಕಾಳಜಿ ಅವರಿಗೆ. ಇವತ್ತೂ ಅವರ ಜನರಲ್ ಸ್ಟೋರ್ಗೆ ಭೇಟಿ ನೀಡಿದರೆ ಕನ್ನಡ ಪರ ಘೋಷಣೆಗಳ ಪೋಸ್ಟರ್‌ಗಳನ್ನು ತೋರಣದಂತೆ ಕಟ್ಟಿರುವುದನ್ನು ಕಾಣಬಹುದು. ಕೃಷ್ಣಮೂರ್ತಿಯವರಿಗೆ ಮತದಾನದ ಬಗೆಗೆ ಇರುವ ಕಾಳಜಿ ಕಂಡು ಕೆಲ ದಿನಬಳಕೆ ವಸ್ತುಗಳ ಕಂಪನಿಯವರೂ ಅವರೊಂದಿಗೆ ಕೈಜೋಡಿಸಿದ್ದಾರೆ.
ನಮ್ಮಂಗಡಿಗೆ ಬರೋ ಮತದಾರ ಗ್ರಾಹಕರಿಗೆ ಉಚಿತವಾಗಿ ಕೊಟ್ರೂ ಗೌರವಪೂರ್ವಕವಾಗಿಯೇ ಕೊಡ್ತೀನಿ. ಯಾಕಂದ್ರೆ ಸರ್ಕಾರ ಹೀಗ್ ಮಾಡಬೇಕಿತ್ತು ಹಾಗ್ ಮಾಡಬೇಕಿತ್ತು ಅಂತ ಕೇಳ್ಳೋ ಹಕ್ಕು ಇರೋದು ಮತ ಹಾಕಿದವರಿಗೆ ಮಾತ್ರ. ಅಂಥ ಮತದಾರರಿಗೆ ಗೌರವ ತೋರಿಸೋಕೆ ನನ್ನದೊಂದು ಪುಟ್ಟ ಪ್ರಯತ್ನವಿದು.
-ಸಿ.ವಿ. ಕೃಷ್ಣಮೂರ್ತಿ, ಕುಸುಮಾ ಜನರಲ್ ಸ್ಟೋರ್ ಮಾಲೀಕ
ಎಲ್ಲಿ?: ಕುಸುಮಾ ಜನರಲ್ ಸ್ಟೋರ್, ಅವೆನ್ಯೂ ರಸ್ತೆ
ಯಾವಾಗ?: ಏಪ್ರಿಲ್ 19