ಬೆಂಗಳೂರು: ರಾಜ್ಯದ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಿಸುವ ಯೋಜನೆಗೆ ಮಂಗಳವಾರ ಚಾಲನೆ ಸಿಗಲಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯೋಜನೆಗೆ ಹಸಿರು ನಿಶಾನೆ ತೋರಲಿದ್ದಾರೆ.
ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕ ಗಳಿಸಿದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹಧನ ಸಹ ವಿತರಿಸಲಾಗುತ್ತಿದೆ. ಜೊತೆಗೆ ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೂತನ ತಂತ್ರಾಂಶ (ವೆಬ್‌ಸೈಟ್) ಲೋಕಾರ್ಪಣೆಗೊಳ್ಳಲಿದೆ.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಕೆಎಸ್‌ಆರ್‌ಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಪಾಸ್‌ಗಳನ್ನು ವಿತರಿಸಲಾಗುತ್ತಿದೆ. ಪಾಸ್ ಪಡೆದ ಕಾರ್ಮಿಕರು ತಮ್ಮ ವಾಸ ಸ್ಥಳದಿಂದ 40 ಕಿ.ಮೀ ವ್ಯಾಪ್ತಿಯೊಳಗೆ ಪ್ರಯಾಣ ಮಾಡಬಹುದು.
ಪ್ರತಿ ಬಸ್ ಪಾಸ್‌ನ ಮಾನ್ಯತಾ ಅವಧಿ 3 ತಿಂಗಳು ಇರಲಿದ್ದು, ಮಾಸಿಕ ವೆಚ್ಚ 1,400 ರೂ. ಆಗಲಿದೆ. ಈ ವೆಚ್ಚವನ್ನು ಸಂಪೂರ್ಣವಾಗಿ ಮಂಡಳಿಯೇ ಭರಿಸಲಿದೆ. 30 ಸಾವಿರ ಕಾರ್ಮಿಕರಿಗೆ ಬಿಎಂಟಿಸಿ ಉಚಿತ ಬಸ್ ಪಾಸ್ ಸಹ ನೀಡಲಾಗುತ್ತಿದ್ದು, ಮಾಸಿಕ ಪಾಸ್ ವೆಚ್ಚ 1,050 ರೂ. ಆಗಲಿದ್ದು, ತಿಂಗಳಿಗೆ 9.45 ಕೋಟಿ ರೂ, ವರ್ಷಕ್ಕೆ 113 ಕೋಟಿ ರೂ. ವೆಚ್ಚ ತಗಲಿದ್ದು, ಇದನ್ನು ಮಂಡಳಿ ಭರಿಸಲಿದೆ.
ಇದಲ್ಲದೇ 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 600ಕ್ಕೂ ಅಧಿಕ ಅಂಕಗಳನ್ನು ಪಡೆದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ತಲಾ 10 ಸಾವಿರ ರೂ. ಪ್ರೋತ್ಸಾಹಧನ ವಿತರಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 2,307 ಮಕ್ಕಳು ಪ್ರೋತ್ಸಾಹಧನ ಪಡೆಯಲು ಅರ್ಹರಿರುತ್ತಾರೆ.
ಕಾರ್ಮಿಕ ಇಲಾಖೆ ಮತ್ತದರ ಅಧೀನದಲ್ಲಿ ಬರುವ ಮಂಡಳಿಗಳ ನೋಂದಣಿ, ನವೀಕರಣ ಮತ್ತು ವಿವಿಧ ಸೌಲಭ್ಯ-ಸೇವೆಗಳನ್ನು ವಿತರಿಸಲು ಸಮಗ್ರವಾದ ತಂತ್ರಾಂಶವನ್ನು ಸಿದ್ದಪಡಿಸಲಾಗಿದ್ದು, ಅದನ್ನೂ ಸಹ ಲೋಕಾರ್ಪಣೆಗೊಳ್ಳಲಿದೆ ಎಂದು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.