Advertisement

ಮಂಗಳೂರು: ಭೂಖರೀದಿ ನೆಪದಲ್ಲಿ ಬಜಪೆಯ ವೃದ್ಧೆಗೆ 60 ಲ.ರೂ.ಗೂ ಮಿಕ್ಕಿ ವಂಚನೆ

09:00 PM May 05, 2022 | Team Udayavani |

ಮಂಗಳೂರು: ವೃದ್ಧೆಯೊಬ್ಬರ ಭೂಮಿ ಮಾರಾಟಕ್ಕೆ ನಕಲಿ ದಾಖಲೆ ಸೃಷ್ಟಿಸಿ 60 ಲ.ರೂಪಾಯಿಗೂ ಅಧಿಕ ವಂಚನೆ ಎಸಗಿದ ಬಗ್ಗೆ ನಗರದ ಸೈಬರ್‌ ಹಾಗೂ ಆರ್ಥಿಕ ಅಪರಾಧಗಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

ಬೆಂಗಳೂರು ಮೂಲದ, ಪ್ರಸ್ತುತ ಬಜಪೆ ಬಳಿಯ ಕೊಂಪದವಿನಲ್ಲಿ ವಾಸವಾಗಿರುವ ಕ್ರಿಸ್ಟಿನ್‌ ಎಡ್ವಿನ್‌ ಜೋಸೆಫ್ ಗೊನ್ಸಾಲ್ವಿಸ್‌ (84) ಎಂಬವರು ವಂಚನೆಗೊಳಗಾದವರು.

ನಕಲಿ ದಾಖಲೆ ಸೃಷ್ಟಿಸಿ, ನಕಲಿ ಸಹಿ ಮಾಡಿ ವಂಚಿಸಿದ ಉಡುಪಿಯ ಅಶೋಕ್‌ ಕುಮಾರ್‌, ರೇಷ್ಮಾ ವಾಸುದೇವ ನಾಯಕ್‌ ಮತ್ತು ರಾಮ ಪೂಜಾರಿ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

ಕ್ರಿಸ್ಟಿನ್‌ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕ್ಸಿತೆಗೆಂದು ಮಂಗಳೂರಿಗೆ ಬಂದು ವಾಸವಾಗಿದ್ದರು. ಅವರಿಗೆ ಉಡುಪಿ ಜಿಲ್ಲೆ ಮೂಡುತೋನ್ಸೆ ಗ್ರಾಮದಲ್ಲಿ 77 ಸೆಂಟ್ಸ್‌ ಭೂಮಿ ಇದ್ದು, ಮಾರಬಯಸಿದ್ದರು. ಈ ವಿಚಾರವನ್ನು ತಮ್ಮ ಪರಿಚಯದ ರಾಮ ಪೂಜಾರಿಗೆ ತಿಳಿಸಿದ್ದರು. ಅಶೋಕ್‌ ಕುಮಾರ್‌ ಮತ್ತು ರೇಷ್ಮಾ ನಾಯಕ್‌ ಎನ್ನುವವರು ಜಮೀನು ಖರೀದಿಸಲು ಆಸಕ್ತಿ ಹೊಂದಿದ್ದಾರೆ ಎಂದು ರಾಮಪೂಜಾರಿ ಅವರಿಬ್ಬರನ್ನು ಕರೆತಂದಿದ್ದರು. ಮಾತುಕತೆ ಬಳಿಕ ಸೆಂಟ್ಸ್‌ಗೆ 2,27,275 ರೂ.ನಂತೆ ಹಣ ನೀಡಲು ಒಪ್ಪಿದ್ದರು.

ಮಾ.3ರಂದು ಮಾರಾಟದ ಬಗ್ಗೆ ಕರಾರುಪತ್ರ ಮಾಡಲಾಗಿತ್ತು. ಆ ಸಂದರ್ಭ ಮುಂಗಡವಾಗಿ ಚೆಕ್‌ ಮೂಲಕ 30 ಲಕ್ಷ ರೂ. ನೀಡಿದ್ದು, ಉಳಿದ ಹಣವನ್ನು 6 ತಿಂಗಳೊಳಗೆ ಕೊಟ್ಟು ಕ್ರಯಪತ್ರ ರಿಜಿಸ್ಟರ್‌ ಮಾಡಿಸಿಕೊಳ್ಳುವುದಾಗಿ ತಿಳಿಸಿದ್ದರು.

Advertisement

ಇದಾದ ನಂತರ ಖರೀದಿದಾರರು ತಮ್ಮಲ್ಲಿ ಹಣದ ಕೊರತೆ ಇರುವುದರಿಂದ ಮೊದಲು 40 ಸೆಂಟ್ಸ್‌ ನೋಂದಣಿ ಮಾಡಿಸಿ ಹಣ ನೀಡಿ, ಉಳಿದ 37 ಸೆಂಟ್ಸ್‌ ಮೊತ್ತ ಹೊಂದಾಣಿಕೆ ಆದ ಬಳಿಕ ನೋಂದಣಿ ಮಾಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಅದರಂತೆ 40 ಸೆಂಟ್ಸ್‌ಗೆ ಸಂಬಂಧಿಸಿದ ದಸ್ತಾವೇಜು ತಯಾರು ಮಾಡಿ, ದಾಖಲೆಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ. ನಂತರ ಎಡ್ವಿನ್‌ ಅವರನ್ನು ಬೆಂಗಳೂರಿಗೆ ಕಳುಹಿಸಿ, ನೋಂದಣಿಯಾದ ದಾಖಲೆ ಪತ್ರಗಳನ್ನು ಪೋಸ್ಟ್‌ನಲ್ಲಿ ಕಳುಹಿಸುವುದಾಗಿ ತಿಳಿಸಿದ್ದಾರೆ.

ಕೆಲವು ದಿನಗಳ ಬಳಿಕ ನೋಂದಣಿ ದಾಖಲೆಯ ನಕಲು ಪ್ರತಿ ಬೆಂಗಳೂರಿಗೆ ಕಳುಹಿಸಿದ್ದು, 40 ಸೆಂಟ್ಸ್‌ ಮಾತ್ರ ನೋಂದಣಿ ಆಗಿದೆ ಎಂದು ತಿಳಿದು ಕ್ರಿಸ್ಟಿನ್‌ ಬಾಕಿ ಹಣಕ್ಕಾಗಿ ಕಾಯುತ್ತಿದ್ದರು. ನೋಂದಣಿ ಸಂದರ್ಭ 40 ಸೆಂಟ್ಸ್‌ಗೆ ಸಂಬಂಧಿಸಿದ 46 ಲಕ್ಷ ರೂಪಾಯಿಗೆ ಚೆಕ್‌ ನೀಡಿದ್ದರು. ಅಲ್ಲದೆ ಕ್ರಯ ಪತ್ರದಲ್ಲಿ 4.16 ಲಕ್ಷ ರೂ. ನಗದು ಕೊಡಲಾಗಿದೆ ಎಂದು ಬರೆದಿದ್ದು, ಅದನ್ನೂ ನೀಡಿರಲಿಲ್ಲ. ಅವರು ನೀಡಿದ ಚೆಕ್‌ಗಳನ್ನು ಬ್ಯಾಂಕ್‌ಗೆ ಸಲ್ಲಿಸಿದಾಗ ಕೆಲವು ನಗದು ಆಗಿದ್ದು, ಉಳಿದವು ಬೌನ್ಸ್‌ ಆಗಿದೆ. ಈ ಬಗ್ಗೆ ವಿಚಾರಿಸಿದಾಗ ತಾವು ಮೂವರೂ ಬೆಂಗಳೂರಿಗೆ ಬಂದು ಹಣ ಕೊಡುತ್ತೇವೆ ಎಂದು ತಿಳಿಸಿದ್ದರು.

ಕೆಲ ದಿನಗಳ ಹಿಂದೆ ಪರಿಚಯಸ್ಥರೊಬ್ಬರು ನಿಮ್ಮ ಜಾಗ ಬೇರೆಯವರಿಗೆ ಮಾರಾಟ ಮಾಡಿದ್ದೀರಾ ಎಂದು ಕೇಳಿದಾಗ ಪರಿಶೀಲಿಸಲು ಹೇಳಿದ್ದು, ಈ ವೇಳೆ ಎಲ್ಲ 77 ಸೆಂಟ್ಸ್‌ ಜಾಗಕ್ಕೂ ಕ್ರಯಪತ್ರ ಮಾಡಿರುವುದು ತಿಳಿದು ಬಂದಿದೆ. ಆ ಮೂಲಕ ಮೂವರು ಸೇರಿ ಸುಮಾರು 60 ಲಕ್ಷ ರೂ.ಗೂ ಅಧಿಕ ಹಣ ವಂಚನೆ ಮಾಡಿದ್ದಾರೆ. ಸಹಿ ನಕಲು ಮಾಡಿ ಜಾಗವನ್ನು ಲಪಟಾಯಿಸಿ, ಗಮನಕ್ಕೆ ತಾರದೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಭೂ ಉಪಯೋಗ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ.

ಸಹಿಯನ್ನು ಫೋರ್ಜರಿ ಮಾಡಿ, ಪ್ರಮಾಣ ಪತ್ರ, ಘೋಷಣೆ ಪತ್ರಗಳನ್ನು ತಯಾರಿಸಿ ನೋಟರಿ ಮಾಡಿಸಿ, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಪತ್ರ ನೀಡುವಾಗಲೂ ಸಹಿಯನ್ನ ನಕಲು ಮಾಡಲಾಗಿದೆ. ಭೂಉಪಯೋಗ ಬದಲಾವಣೆಗೆ ಸಲ್ಲಿಸಬೇಕಾದ ನಕ್ಷೆಯನ್ನು ಇಂಜಿನಿಯರ್‌ ಬಳಿ ತಯಾರಿಸಿ, ನಕ್ಷೆಯಲ್ಲಿ ನಕಲಿ ಸಹಿ ಮಾಡಲಾಗಿದೆ. ದಿನ ಪತ್ರಿಕೆಯಲ್ಲಿ ಈ ಬಗ್ಗೆ ಜಾಹೀರಾತು ನೀಡಲಾಗಿದೆ ಎಂದು ಕ್ರಿಸ್ಟಿನ್‌ ಎಡ್ವಿನ್‌ ದೂರಿನಲ್ಲಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next