ಬೆಂಗಳೂರು: ತನಗೆ ಸಚಿವರು ಹಾಗೂ ಗಣ್ಯರ ಪರಿಚಯವಿದ್ದು, ಖಾಸಗಿ ಶಾಲೆ, ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ಸುಳ್ಳು ಹೇಳಿದಲ್ಲದೆ, ಹಣ ಕೊಡದಿದ್ದಕ್ಕೆ ಮನೆಯಲ್ಲಿದ್ದ ಚಿನ್ನದ ಸರ ಕಳವು ಮಾಡಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ನಾಗನಾಥಪುರ ನಿವಾಸಿ ಸುಧಾಕರ್ (39) ಬಂಧಿತ. ಆರೋಪಿ ದೊಡ್ಡತುಗೂರು ನಿವಾಸಿ ನಾಗರಾಜ್ ಎಂಬವರ ಪುತ್ರನಿಗೆ ಕ್ರೈಸ್ಟ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ. ಅಲ್ಲದೆ, ಅವರ ಮನೆಯಲ್ಲಿದ್ದ ಚಿನ್ನದ ಸರ ಕಳವು ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಪಾನ್‌ಕಾರ್ಡ್, ವಾಹನ ಚಾಲನಾ ಪರವಾನಿಗೆ, ಶಸ್ತ್ರ ಪರವಾನಿಗೆ ಕೊಡಿಸುವ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿರುವ ಸುಧಾಕರ್‌ಗೆ ಕೆಲ ತಿಂಗಳ ಹಿಂದೆ ಪಾನ್‌ಕಾರ್ಡ್ ಮಾಡಿಕೊಡುವ ವಿಚಾರದಲ್ಲಿ ದೊಡ್ಡತುಗೂರಿನ ಉದ್ಯಮಿ ನಾಗರಾಜ್ ಎಂಬವರ ಪರಿಚಯವಾಗಿದೆ. ಈ ವೇಳೆ ಖಾಸಗಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಸದಸ್ಯರ ಪರಿಚವಿದ್ದು, ಸೀಟು ಬೇಕಾದರೆ ಸಂಪರ್ಕಿಸುವಂತೆ ತನ್ನ ಮೊಬೈಲ್ ನಂಬರ್ ಕೊಟ್ಟಿದ್ದ.
ಸಚಿವರು ಗೊತ್ತು: ಆರೋಪಿಯ ನಂಬರ್ ಪಡೆದ ನಾಗರಾಜ್, ಕೆಲ ದಿನಗಳ ಬಳಿಕ ಆತನನ್ನು ಸಂಪರ್ಕಿಸಿ, ತಮ್ಮ ಮಗನಿಗೆ ಕ್ರೈಸ್ಟ್ ಅಕಾಡೆಮಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೀಟು ಕೊಡಿಸುವಂತೆ ಕೇಳಿಕೊಂಡಿದ್ದರು. ಈ ವೇಳೆ ಆರೋಪಿ, ತನಗೆ ಗಣ್ಯರು, ಸಚಿವರ ಪರಿಚಯವಿದ್ದು, ಅವರ ಕಡೆಯಿಂದ ಶಿಫಾರಸು ಮಾಡಿಸಿ ಸೀಟು ಕೊಡಿಸುವುದಾಗಿ ಹೇಳಿದ್ದ. ಅಲ್ಲದೆ, ಕಾರ್ಯಕ್ರಮವೊಂದರಲ್ಲಿ ಸಚಿವರೊಬ್ಬರ ಜತೆ ತೆಗೆಸಿಕೊಂಡಿರುವ ಫೋಟೋ ತೋರಿಸಿ ನಾಗರಾಜ್ ಅವರನ್ನು ನಂಬಿಸಿದ್ದ.
ನಂತರ ಕಾಲೇಜಿಗೆ ಪಾವತಿಸುವ ಡೊನೇಷನ್ ಹೊರತುಪಡಿಸಿ 50 ಸಾವಿರ ರೂ.ಗಳನ್ನು ತನಗೆ ಕೊಡುವಂತೆ ಆರೋಪಿ ಬೇಡಿಕೆ ಇಟ್ಟಿದ್ದ. ಅದಕ್ಕೆ ನಾಗರಾಜ್ ಕೂಡ ಒಪ್ಪಿದ್ದರು. ಆದರೆ, ಸೀಟು ಕೊಡಿಸಿರಲಿಲ್ಲ. ನಂತರ ನಾಗರಾಜ್ ಅವರೇ ನೇರವಾಗಿ ಕಾಲೇಜಿನಲ್ಲಿ ವಿಚಾರಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಬಳಿಕ ನಾಗರಾಜ್ ತಮ್ಮ ಮಗನನ್ನು ಹುಳಿಮಾವುನಲ್ಲಿರುವ ಖಾಸಗಿ ಕಾಲೇಜಿಗೆ ಸೇರಿಸಿದ್ದರು ಎಂದು ಪೊಲೀಸರು ಹೇಳಿದರು.
ಮನೆಯಲ್ಲಿದ್ದ ಚಿನ್ನದ ಸರ ಕಳವು: ಈ ಮಧ್ಯೆ ಜೂ.4ರಂದು ನಾಗರಾಜ್ ಅವರ ಮನೆಗೆ ಬಂದ ಆರೋಪಿ, “ಕ್ರೈಸ್ಟ್ ಅಕಾಡೆಮಿ ಕಾಲೇಜಿನಲ್ಲಿ ನಿಮ್ಮ ಮಗನಿಗೆ ಸೀಟು ಕೊಡಿಸಲು ತುಂಬ ಓಡಾಡಿದ್ದೇನೆ. ಹೀಗಾಗಿ 25 ಸಾವಿರ ರೂ. ಕೊಡಿ’ ಎಂದು ಒತ್ತಾಯಿಸಿದ್ದಾನೆ. ಅದಕ್ಕೆ ನಾಗರಾಜ್ ನಿರಾಕರಿಸಿದ್ದು, ಸೀಟು ಕೊಡಿಸದ ಕಾರಣ ಹಣ ಕೊಡಲು ಸಾಧ್ಯವಿಲ್ಲ ಎಂದಿದ್ದರು.
ಈ ವೇಳೆ ಕೋಪಗೊಂಡ ಆರೋಪಿ, ನಾಗರಾಜ್ ಅವರ ಗಮನ ಬೇರೆಡೆ ಸೆಳೆದು ಮನೆಯ ಟಿವಿ ಟೇಬಲ್ ಮೇಲೆ ಇಟ್ಟಿದ್ದ 26 ಗ್ರಾಂ. ತೂಕದ ಚಿನ್ನದ ಸರ ಕಳವು ಮಾಡಿ ಪರಾರಿಯಾಗಿದ್ದ. ಬಳಿಕ ಮನೆಯ ಎಲ್ಲೆಡೆ ಹುಡುಕಿದರೂ ಸರ ಸಿಕ್ಕಿರಲಿಲ್ಲ.
ಅನುಮಾನಗೊಂಡು ಸುಧಾಕರ್‌ಗೆ ಕರೆ ಮಾಡಿ ವಿಚಾರಿಸಿದಾಗ, “ನಾನೇ ಸರ ಕಳವು ಮಾಡಿದ್ದೇನೆ. ನೀವು ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ,’ ಎಂದು ಬೆದರಿಕೆ ಹಾಕಿದ್ದ. ಈ ಸಂಬಂಧ ನಾಗರಾಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಗೆ ಯಾವುದೇ ಸಚಿವರು ಅಥವಾ ಗಣ್ಯರ ಪರಿಚಯವಿಲ್ಲ. ಹಣ ಮಾಡುವ ಉದ್ದೇಶದಿಂದ ಸುಳ್ಳು ಹೇಳಿಕೊಂಡಿದ್ದಾನೆ ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸರು ಹೇಳಿದರು.