ಬೆಂಗಳೂರು: ಕೇಂದ್ರ ಸರ್ಕಾರದ ಸರ್ವೆ ಇಲಾಖೆಯಲ್ಲಿ ಹಿರಿಯ ಹುದ್ದೆಯಲ್ಲಿದ್ದೇನೆ ಎಂದು ನಂಬಿಸಿ ಉದ್ಯೋಕಾಂಕ್ಷಿಗಳಿಗೆ ಕೋಟ್ಯಂತರ ರೂ. ರೂ. ಪಡೆದು ವಂಚಿಸುತ್ತಿದ್ದ ಉಡುಪಿಯ ಕುಂದಾಪುರ ಮೂಲದ ಆರೋಪಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಜೆ.ಪಿ.ನಗರ ನಿವಾಸಿ ರಾಘವ ಅಲಿಯಾಸ್ ರಾಘವೇಂದ್ರ (39) ಬಂಧಿತ. ಆರೋಪಿಯಿಂದ ಒಂದು ಕಾರು, ದ್ವಿಚಕ್ರ ವಾಹನ, ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್‌ಗ್ಳು, ಚೆಕ್‌ಗಳು, ಬಾಂಡ್ ಪೇಪರ್ ಗಳು, ಆತ ಖರೀದಿಸಿದ್ದ ಆಸ್ತಿಯ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು. ಈತನ ವಿಚಾರಣೆ ಸಂದರ್ಭದಲ್ಲಿ ಆರೋಪಿ ವಿರುದ್ಧ ಜೆ.ಪಿ.ನಗರ, ಯಶವಂತಪುರ, ಬನವಾಸಿ ಪೊಲೀಸ್ ಠಾಣೆ ಹಾಗೂ ಇತರೆ ಜಿಲ್ಲೆಗಳಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಸ್ರೂರು ಮೂಲದ ರಾಘವ 10 ವರ್ಷಗಳ ಹಿಂದೆ ಕುಂದಾ ಪುರದಲ್ಲಿ ಖಾಸಗಿ ಸರ್ವೆಯಲ್ಲಿ ಕೆಲಸ ಮಾಡುತ್ತಿದ್ದ. ಐದಾರು ವರ್ಷಗಳಹಿಂದೆ ಬೆಂಗಳೂರಿನ ಜೆ.ಪಿ.ನಗರಕ್ಕೆ ಬಂದು ಸ್ವಂತವಾಗಿ ರಾಘವೇಂದ್ರ ಎಂಟರ್‌ಪ್ರೈಸಸ್ ಎಂಬ ಕಚೇರಿ ತೆರೆದು ಖಾಸಗಿಯಾಗಿ ಸರ್ವೆ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಹೆಚ್ಚಿನ ಹಣಗಳಿಸುವ ಉದ್ದೇಶದಿಂದ ಸರ್ಕಾರಿ ಅಧಿಕಾರಿ ಸೋಗಿನಲ್ಲಿ ಉದ್ಯೋಕಾಂಕ್ಷಿಗಳಿಂದ ಲಕ್ಷಾಂತರ ರೂ. ಹಣ ಪಡೆದು ಬಾಂಡ್ ಪೇಪರ್ ಮತ್ತು ಖಾಲಿ ಚೆಕ್‌ಗಳಿಗೆ ಸಹಿ ಹಾಕಿಸಿಕೊಳ್ಳುತ್ತಿದ್ದ. ಒಂದು ವೇಳೆ ಹಣ ವಾಪಸ್ ಕೇಳಿದರೆ, ಪ್ರಾಣ ಬೆದರಿಕೆ, ಚೆಕ್ ಬೌನ್ಸ್ ಪ್ರಕರಣ ದಾಖಲಿಸುವು ದಾಗಿ ಹೆದರಿಸುತ್ತಿದ್ದ ಎಂದು ಪೊಲೀಸರು ಹೇಳಿದರು.
ನಕಲಿ ಡೆಪ್ಯೂಟಿ ಕಮಿಷನರ್, ಬೋರ್ಡ್!: ತನ್ನ ಕಾರಿನಲ್ಲಿ ಭಾರತ ಸರ್ಕಾರ ಎಂದು ಬೋರ್ಡ್ ಹಾಕಿಕೊಂಡಿದ್ದು, ತಾನೊಬ್ಬ ಕೇಂದ್ರ ಸರ್ಕಾರದ ಸರ್ವೆ ಇಲಾಖೆಯ ಡೆಪ್ಯೂಟಿ ಕಮಿಷನರ್ ಎಂದು ನಕಲಿ ಗುರುತಿನ ಚೀಟಿ ಮಾಡಿಕೊಂಡಿದ್ದ. ತನ್ನ ಕಚೇರಿಗೆ ಬರುವ ಸಾರ್ವಜನಿಕರಿಗೆ ತಾನೊಬ್ಬ ಕೇಂದ್ರ, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಪರಿಚಯವಿದೆ. ಸರ್ವೆ ಹಾಗೂ ಇತರೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ತಲಾ 8-10 ಲಕ್ಷ ರೂ. ಪಡೆ ಯುತ್ತಿದ್ದ. ತಿಂಗಳುಗಳು ಕಳೆದರೂ ಹಣವನ್ನು ಕೊಡು ತ್ತಿರಲಿಲ್ಲ. ಕೆಲಸ ಕೂಡ ಕೊಡಿಸುತ್ತಿರಲಿಲ್ಲ. ಹೀಗಾಗಿ ವಂಚನೆಗೊಳಗಾದ ವ್ಯಕ್ತಿಯೊಬ್ಬರು ಬನಶಂಕರಿ ಠಾಣೆಗೆ ದೂರು ನೀಡಿದ್ದರು. ಹೆಚ್ಚಿನ ತನಿಖೆಗಾಗಿ ಸಿಸಿಬಿ ಪ್ರಕರಣ ವರ್ಗಾಯಿಸಲಾಗಿತ್ತು. ಸಿಸಿಬಿ ಎಸಿಪಿ ಧರ್ಮೇಂದ್ರ ಕುಮಾರ್ ನೇತೃತ್ವದ ತಂಡ ಸುಮಾರು 1 ತಿಂಗಳ ಕಾಲ ಆತನ ಚಟುವಟಿಕೆಗಳ ಮೇಲೆ ನಿಗಾವಹಿಸಿ, ಉದ್ಯೋಕಾಂಕ್ಷಿ ಸೋಗಿನಲ್ಲಿ ಆರೋಪಿಯನ್ನು ಭೇಟಿಯಾಗಿ ಬಂಧಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಟ್ರುಕಾಲರ್‌ನಲ್ಲೂ ನಕಲಿ ಕಮಿಷನರ್! : ಆರೋಪಿ ಬೆಂಗಳೂರು, ಬಾಗಲಕೋಟೆ, ದಾವಣಗೆರೆ ಮೂಲದ ಮೂವರು ಯುವತಿಯರನ್ನು ಮದುವೆಯಾಗಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ.ಈತನ ಬಂಧನದ ಬಳಿಕ ಮೂವರಿಗೂ ವಿಚಾರ ಗಮನ ಬಂದಿದೆ. ಮೂವರಿಗೂ ತಾನೊಬ್ಬ ಸರ್ಕಾರಿ ಉದ್ಯೋಗಿ ಎಂದೇ ಪರಿಚಯಿಸಿಕೊಂಡು ವಂಚಿಸಿದ್ದಾನೆ. ಈ ಮಧ್ಯೆ ಟ್ರೂಕಾಲರ್‌ನಲ್ಲಿಯೂ ಈತನ ಮೊಬೈಲ್ ನಂಬರ್ ಡಯಲ್ ಮಾಡಿದರೆ, ರೆವಿನ್ಯೂ ಕಮಿಷನರ್, ಡೆಪ್ಯೂಟಿ ಕಮಿಷನರ್ ಎಂದು ಬರುತ್ತದೆ. ಈ ರೀತಿಯೇ ಬರಬೇಕೆಂದು ಆರೋಪಿ ಟ್ರೂಕಾಲರ್‌ನಲ್ಲಿ ಮಾಡಿಸಿಕೊಂಡಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.