ಬೆಂಗಳೂರು: ರಾಜ್ಯದಲ್ಲಿ ಅಧಿಕ ಬಡ್ಡಿ ಆಸೆ ತೋರಿಸಿ ಗ್ರಾಹಕರಿಂದ ಠೇವಣಿ ಕಟ್ಟಿಸಿಕೊಂಡು ವಂಚನೆ ಮಾಡುವ ಕಂಪನಿಗಳ ನಿಯಂತ್ರಣ ಕುರಿತು ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಹೊಸ ಕಾನೂನು ವಂಚಕ ಕಂಪನಿಗಳಿಗೆ “ಬ್ರೇಕ್’ ಹಾಕುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿರಲಿದೆ.
ಗ್ರಾಹಕರಿಂದ ಠೇವಣಿ ಸಂಗ್ರಹಿಸಿ ವಂಚನೆಯಾದ ನಂತರ ದೂರು ಬಂದಾಗ ಮಾತ್ರ ಪೊಲೀಸರು ಪ್ರಕರಣದಲ್ಲಿ ಪ್ರವೇಶ ಮಾಡುತ್ತಿದ್ದರು. ಆದರೆ, ಹೊಸ ಕಾನೂನಿನಲ್ಲಿ ಗ್ರಾಹಕರ ಭದ್ರತೆ ವಿಚಾರದಲ್ಲಿ ಕಂಪನಿಗಳಿಗೆ ಅನುಮತಿ ದೊರೆಯುವ ಹಂತದಿಂದಲೇ ಕಟ್ಟುನಿಟ್ಟಿನ ನಿಯಮಾವಳಿಗಳು ಇರಲಿವೆ. ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್, ಕಂದಾಯ, ಸಹಕಾರ ಇಲಾಖೆಗಳು ಜತೆಗೂಡಿ ಕಾರ್ಯನಿರ್ವಹಿಸಲಿವೆ. ಇದರಿಂದ ಕಂಪನಿಗಳ ಮೇಲೆ ಹೆಚ್ಚು ನಿಯಂತ್ರಣ ಇರಲಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಕಳೆದ ಎರಡೂವರೆ ದಶಕಗಳಲ್ಲಿ ಹತ್ತಾರು ಕಂಪನಿಗಳು ಲಕ್ಷಾಂತರ ಗ್ರಾಹಕರಿಗೆ ಸಾವಿರಾರು ಕೋಟಿ ರೂ. ವಂಚಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ “ಕರ್ನಾಟಕ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ನಿಯಮ-2020’ರ ಹೆಸರಿನಲ್ಲಿ ಹೊಸ ಕಾಯ್ದೆ ತರಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರದ ರೂಪಿಸಿರುವ ಕಾಯ್ದೆಗೆ ಪೂರಕವಾಗಿ ರಾಜ್ಯ ಸರ್ಕಾರವೂ ಹೊಸ ಕಾನೂನು ತರಲಿದ್ದು, ಇದರಿಂದ ವಂಚಕ ಕಂಪನಿಗಳಿಗೆ ಮೂಗುದಾರ ಹಾಕಿದಂತಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಹಣ ಹಿಂದಿರುಗಿಸಲು ಸಾಧ್ಯವಾಗಿಲ್ಲ: ರಾಜ್ಯದಲ್ಲಿ ಈಗಾಗಲೇ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಂಚಕ ಕಂಪನಿಗಳ ವಿರುದ್ಧ ಸ್ಥಳೀಯ ಪೊಲೀಸರು, ಸಿಸಿಬಿ, ಸಿಐಡಿ ಆರ್ಥಿಕ ವಿಭಾಗದ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಜೈಲಿಗೂ ಕಳುಹಿಸಿದ್ದಾರೆ. ಇದುವರೆಗೂ ಮೋಸ ಮಾಡಿದ ಕಂಪನಿಗಳ ಪೈಕಿ ಡ್ರಿಮ್ಡ್ ಜೆಕೆ, ಅಗ್ರೀಗೋಲ್ಡ್, ವಿನಿವಿಂಕ್, ವಿಕ್ರಂ ಇನ್‌ವೆಸ್ಟ್‌ಮೆಂಟ್, ಇನ್‌ವೆಸ್ಟೆಕ್, ಖಾಸನೀಸ್ ಬ್ರದರ್ಸ್, ಐಎಂಎ, ಕಣ್ವ, ಶ್ರೀಗುರುರಾಘವೇಂದ್ರ ಸಹಕಾರ ಬ್ಯಾಂಕ್‌ಗಳ ವಿರುದ್ಧ ತನಿಖಾ ಸಂಸ್ಥೆಗಳು “ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ರಕ್ಷಣಾ ಕಾಯ್ದೆ'(ಕೆಪಿಐಡಿಎಫ್ಇ) ಆಧಾರದಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಜೈಲಿಗಟ್ಟಿದ್ದು, ಅವರ ಆಸ್ತಿ-ಪಾಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣಗಳ ತನಿಖೆ, ವಿಚಾರಣೆ ಮುಗಿದರೂ ವಂಚನೆಗೊಳಗಾದವರಿಗೆ ಮಾತ್ರ ಹಣ ಕೈಸೇರಿಲ್ಲ. ಇದೇ ಕಾರಣಕ್ಕೆ ಪ್ರಬಲ ಅಂಶಗಳನ್ನು ಸೇರಿಸಿ ಹೊಸ ಕಾನೂನು ರೂಪಿಸಲಾಗುತ್ತಿದೆ. ಇತ್ತೀಚೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ಅನುಮೋದನೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗೇನಾಗುತ್ತಿದೆ?: ತನಿಖಾ ಸಂಸ್ಥೆಗಳು ವಂಚಕ ಕಂಪೆನಿಗಳ ವಿರುದ್ದ ಎಫ್ಐಆರ್ ದಾಖಲಿಸಿ, ಆರೋಪಿಗಳನ್ನು ಬಂಧಿಸಿ, ಅವರಿಗೆ ಸೇರಿದ ಆಸ್ತಿ-ಪಾಸ್ತಿ ಜಪ್ತಿ ಮಾಡುತ್ತದೆ. ಅಲ್ಲದೆ, ಹೇಗೆಲ್ಲ ವಂಚನೆಯಾಗಿದೆ? ಆಮಿಷಗಳೇನು? ಎಂಬೆಲ್ಲ ಮಾಹಿತಿ ಸಂಗ್ರಹಿಸಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸುತ್ತವೆ. ಅನಂತರ ಆರೋಪಿಗಳ ಸ್ಥಿರಾಸ್ತಿ, ಚರಾಸ್ತಿಗಳ ಮಾಹಿತಿ ಪಡೆದು ಸಕ್ಷಮ ಪ್ರಾಧಿಕಾರದ ಮೂಲಕ ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಸಬಹುದು ಎಂದು ಸರ್ಕಾರಕ್ಕೆ ಮನವಿ ಮಾಡುತ್ತದೆ.
ಅನಂತರ ಸರ್ಕಾರ ಉಪವಿಭಾಗಾಧಿಕಾರಿ ಅಥವಾ ಅದಕ್ಕಿಂತ ಉನ್ನತ ಹುದ್ದೆಯ ಅಧಿಕಾರಿಗಳ ನೇತೃತ್ವದಲ್ಲಿ ಸಕ್ಷಮ ಪ್ರಾಧಿಕಾರ ನೇಮಕ ಮಾಡುತ್ತದೆ. ಆದರೆ, ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಗೆ ಕೆಲಸದೊತ್ತಡ ಅಥವಾ ಇತರೆ ಕಾರಣಗಳಿಂದ ಆರೋಪಿಗಳ ಆಸ್ತಿ ಹಾರಾಜು ಪ್ರಕ್ರಿಯೆ ನಿಗದಿತ ಸಮಯಕ್ಕೆ ನಡೆಯುತ್ತಿಲ್ಲ. ಹೊಸ ಕಾನೂನಿನಲ್ಲಿ ಈ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳಲಾಗಿದೆ. ಇದು ಜಾರಿಗೆ ಬಂದರೆ ಖಾಸಗಿ ಹಣಕಾಸು ಸಂಸ್ಥೆಗಳು ಸಾರ್ವಜನಿಕರಿಂದ ಆಮಿಷಗಳನ್ನೊಡ್ಡಿ ಹಣ ಸಂಗ್ರಹಿಸುವ ಪ್ರಕ್ರಿಯೆಗೆ ಬ್ರೇಕ್ ಬೀಳಲಿದೆ. ಸಕ್ಷಮ ಪ್ರಾಧಿಕಾರದ ಅಧಿಕಾರ ಬದಲಾವಣೆಯಾಗಬಹುದು. ಒಂದು ವೇಳೆ ಖಾಸಗಿ ಕಂಪನಿಗಳು ಅಧಿಕ ಬಡ್ಡಿ ಹಾಗೂ ಇತರೆ ಆಮಿಷಗಳನ್ನೊಡ್ಡಿ ವಂಚಿಸುತ್ತಿದ್ದರೆ ನೇರವಾಗಿ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡುವ ಸೌಲಭ್ಯ ಕಲ್ಪಿಸಬಹುದು. ಕಂಪನಿಗಳ ಗ್ರಾಹಕರ ದೂರಿನ್ವಯ ವಂಚಕ ಕಂಪನಿಗಳ ವಿಚಾರಣೆ ನಡೆಸುವ ಅಧಿಕಾರವನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡುವ ಸಾಧ್ಯತೆಯಿದೆ. ಗ್ರಾಹಕರ ಹಣ ವಾಪಸ್‌ಗೆ ಇಂತಿಷ್ಟು ದಿನ ನಿಗದಿ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಹಿಂದಿನ ವಂಚನೆ ಪ್ರಕರಣಗಳ ಗ್ರಾಹಕರಿಗೂ ಅನ್ವಯ? : ಈ ಹಿಂದೆ ವಂಚಕ ಕಂಪನಿಗಳಿಂದ ಅನ್ಯಾಯಕ್ಕೊಳಗಾದ ಗ್ರಾಹಕರಿಗೂ ಹೊಸ ಕಾನೂನಿನಲ್ಲಿ ನ್ಯಾಯ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದು, ಮಸೂದೆ ಜಾರಿಯಾದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ. ಒಂದು ವೇಳೆ ಈ ಬಗ್ಗೆ ಸರ್ಕಾರ ಕ್ರಮಕೈಗೊಂಡರೆ ಲಕ್ಷಾಂತರ ಗ್ರಾಹಕರು ನಿಟ್ಟುಸಿರು ಬಿಡಲಿದ್ದಾರೆ.
–ಮೋಹನ್ ಭದ್ರಾವತಿ