ಬೆಂಗಳೂರು: ಅಮಾಯಕರಿಗೆ ದುಡ್ಡಿನ ಆಮಿಷವೊಡ್ಡಿ ಆಧಾರ್, ಪ್ಯಾನ್ ಕಾರ್ಡ್ ದಾಖಲೆ ಮೂಲಕ ಬೇನಾಮಿ ಬ್ಯಾಂಕ್ ಖಾತೆ ತೆರೆದು ಸೈಬರ್ ವಂಚಕರಿಗೆ ಒದಗಿಸಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಆರು ಮಂದಿ ಆರೋಪಿಗಳನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಮೊಹಮ್ಮದ್ ಹಸನ್, ಮೊಹಮ್ಮದ್ ಇರ್ಫಾನ್, ಸಮೀರ್, ಆಯನ್ ಬಾಬು, ತಂಝೀಲ್ ಸಾಹುಲ್, ಬೆಂಗಳೂರಿನ ಮಂಜುನಾಥ್ ಬಂಧಿತರು. ಆರೋಪಿಗಳು ಬೇನಾಮಿಯಾಗಿ ತೆರೆದಿದ್ದ 126 ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, ಬೆಂಗಳೂರು ಸೇರಿದಂತೆ ದೇಶಾದ್ಯಂತ 75 ಸೈಬರ್ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ.
ಈ ವಂಚಕರ ತಂಡವು ಅಮಾಯಕ ಜನರನ್ನು ನಂಬಿಸಿ ಅವರಿಂದ ಗುರುತಿನ (ಕೆವೈಸಿ) ದಾಖಲಾತಿಗಳನ್ನು ಪಡೆದು ಅವರ ಹೆಸರಿನಲ್ಲಿ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಬೇನಾಮಿ ಖಾತೆಗಳನ್ನು ತೆರೆಯುತ್ತಿದ್ದರು. ಆ ಖಾತೆಗಳ ದಾಖಲೆಗಳನ್ನು ಸೈಬರ್ ವಂಚಕರಿಗೆ ಒದಗಿಸುತ್ತಿದ್ದರು. ಜತೆಗೆ ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಅಮಾಯಕ ಜನರಿಗೆ ವಂಚಿಸಿ ಸಂಗ್ರಹಿಸಿದ ಹಣವನ್ನು ಈ ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಿಕೊಂಡು ಅದನ್ನು ನಗದು ರೂಪಕ್ಕೆ ಪರಿವರ್ತಿಸಿ ವಂಚಕರಿಗೆ ತಲುಪಿಸುತಿದ್ದರು.
ದುಡ್ಡಿನ ಆಮಿಷವೊಡ್ಡಿ ದಾಖಲೆ ಸಂಗ್ರಹ: ಬೆಂಗಳೂರಿನ ಮತ್ತಿಕೆರೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಆರೋಪಿ ಸಮೀರ್ ಜತೆಗೆ ವಿದೇಶಗಳಲ್ಲಿ ಸೈಬರ್ ವಂಚನೆ ಬಗ್ಗೆ ತರಬೇತಿ ಪಡೆದಿದ್ದ ಇರ್ಫಾನ್, ಮತ್ತೂಬ್ಬ ಆರೋಪಿ ಹಸನ್ ಸೇರಿದಂತೆ ಆರು ಮಂದಿ ಸೈಬರ್ ವಂಚನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆರೋಪಿಗಳು ಸಣ್ಣ-ಪುಟ್ಟ ಅಂಗಡಿ ಸಿಬ್ಬಂದಿ, ಡೆಲಿವರಿ ಬಾಯ್, ಬಡ ಜನರನ್ನೇ ಟಾರ್ಗೆಟ್ ಮಾಡಿ ಅವರಿಗೆ 5-6 ಸಾವಿರ ರೂ. ದುಡ್ಡಿನ ಆಮಿಷವೊಡ್ಡಿ ಅವರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಕೆವೈಸಿ ದಾಖಲಾತಿ ಪಡೆಯುತ್ತಿದ್ದರು. ಆರೋಪಿ ಮಂಜುನಾಥ್ ಸಾರ್ವಜನಿಕರಿಂದ ಸಹಿ ಹಾಕಿರುವ ದಾಖಲೆ ಸಂಗ್ರಹಿಸಿ ಬ್ಯಾಂಕ್ ಖಾತೆ ತೆರೆಯುತ್ತಿದ್ದ. ಆರೋಪಿಗಳು ಇದೇ ದಾಖಲೆ ಬಳಸಿಕೊಂಡು ಸಿಮ್ ಕಾರ್ಡ್ ಖರೀದಿಸುತ್ತಿದ್ದರು. ಈ ಸಿಮ್‌ಕಾರ್ಡ್ ಗಳಿಂದ ಅಪರಿಚಿತರಿಗೆ ಸಂದೇಶ ಅಥವಾ ಮೊಬೈಲ್ ಕರೆ ಮಾಡಿ ಉದ್ಯೋಗ ಕೊಡಿಸುವುದಾಗಿ, ದುಡ್ಡು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದು ಸೇರಿದಂತೆ ವಿವಿಧ ಬಗೆಯ ಆಮಿಷವೊಡ್ಡುತ್ತಿದ್ದರು.
ಇವರ ಗಾಳಕ್ಕೆ ಬಿದ್ದವರಿಗೆ ಲಕ್ಷಾಂತರ ರೂ. ವಂಚಿಸಿ ಸಿಮ್‌ಕಾರ್ಡ್ ಎಸೆಯುತ್ತಿದ್ದರು. ಸೈಬರ್ ವಂಚನೆ ಎಸಗಲೆಂದೇ ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಪ್ಲ್ರಾಟ್ ಖರೀದಿಗೆ ಆರೋಪಿಗಳು ಮುಂದಾಗಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳು ಸಿಕ್ಕಿ ಬಿದ್ದಿದ್ದು ಹೇಗೆ?: ಈ ಕೃತ್ಯ ಎಸಗಲೆಂದೇ ಆರೋಪಿಗಳು ಮತ್ತಿಕೆರೆಯಲ್ಲಿ ಮನೆ ಬಾಡಿಗೆಗೆ ಪಡೆದಿದ್ದರು. ಇತ್ತೀಚೆಗೆ ಮಂಜೇಶ್ ಎಂಬುವವರ ಸ್ನೇಹಿತ ಇಲ್ಲಿಗೆ ತೆರಳಿ ಆರೋಪಿಗಳಿಗೆ ಆಧಾರ್, ಪಾನ್‌ಕಾರ್ಡ್ ನೀಡಿ ದುಡ್ಡು ಪಡೆಯಲು ಮುಂದಾಗಿದ್ದ. ಈ ವಿಚಾರವನ್ನು ಮಂಜೇಶ್‌ಗೂ ತಿಳಿಸಿದ್ದ. ಮಂಜೇಶ್ ಆರೋಪಿಗಳ ಮನೆಯಲ್ಲಿದ್ದ ಹಲವಾರು ಬ್ಯಾಂಕ್ ಪುಸ್ತಕ, ಇತರ ದಾಖಲೆ ಕಂಡು ದಂಗಾಗಿದ್ದ. ಮಂಜೇಶ್‌ಗೂ ಕೆವೈಸಿ ದಾಖಲೆ ಕೊಟ್ಟರೆ 10 ಸಾವಿರ ರೂ. ನೀಡುವುದಾಗಿ ಹೇಳಿದ್ದರು. ಇದರಿಂದ ಅನುಮಾನಗೊಂಡ ಮಂಜೇ ಶ್ ನಗರ ಸೈಬರ್ ಕ್ರೈಂ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಜಾಡು ಹಿಡಿದು ಹೊರಟಾಗ ಸೈಬರ್ ಕಳ್ಳರ ಜಾಲದ ಬಗ್ಗೆ ಸುಳಿವು ಸಿಕ್ಕಿತ್ತು.
ದುಬೈನಲ್ಲಿ ಸೈಬರ್ ಕ್ರೈಂ ತರಬೇತಿ ಪಡೆದಿರುವ ಶಂಕೆ: ಸೈಬರ್ ವಂಚನೆಗೆ ಸಂಬಂಧಿಸಿದಂತೆ ದುಬೈನಲ್ಲಿ ನಡೆದ ಕಾರ್ಯಾಗಾರಗಳಲ್ಲಿ ಆರೋಪಿ ಇರ್ಫಾನ್ ಭಾಗವಹಿಸಿದ್ದ. ಅಲ್ಲಿ ಸೈಬರ್ ವಂಚನೆ ಬಗ್ಗೆ ತರಬೇತಿ ಪಡೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಂತರ ಬೆಂಗಳೂರಿಗೆ ವಾಪಸ್ಸಾಗಿ ತನ್ನ ಸ್ನೇಹಿತರಾದ ಇತರ ಆರೋಪಿಗಳ ಜೊತೆಗೆ ಸೇರಿ ಕೃತ್ಯ ಎಸಗುತ್ತಿದ್ದ. ಪ್ರಕರಣದ ಕಿಂಗ್‌ಪಿನ್ ದುಬೈನಲ್ಲಿದ್ದುಕೊಂಡು ಬಂಧಿತ ಆರೋಪಿಗಳಿಗೆ ಸೂಚನೆ ಕೊಡುತ್ತಿದ್ದ ಎನ್ನಲಾಗಿದೆ. ಆತನ ಸೂಚನೆ ಮೇರೆಗೆ ಆರೋಪಿಗಳು ಇಲ್ಲಿ ಕೃತ್ಯ ಎಸಗುತ್ತಿದ್ದರು ಎನ್ನಲಾಗಿದೆ.