ಮಾಗಡಿ: ಮಾಗಡಿ-ಬೆಂಗಳೂರು ಮಾರ್ಗದ ಚತು ಷ್ಪಥ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದು ಸವಾರರು ಅಕ್ಷರಶಃ ಹೈರಾಣಾಗಿದ್ದಾರೆ. ದೂರವಾದರೂ ಪರವಾ ಗಿಲ್ಲ, ಈ ರಸ್ತೆಯ ಸಂಚಾರದ ಸಹವಾಸ ಬೇಡ ಎನ್ನು ವಷ್ಟರ ಮಟ್ಟಿಗೆ ವಾಹನ ಸವಾರರು ನೊಂದಿದ್ದಾರೆ. ಜತೆಗೆ ಮುಂಗಾರು ಮಳೆ ಪ್ರಾರಂಭಗೊಂಡಿದೆ. ರಸ್ತೆಯ ಗುಂಡಿಗಳು ಕಾಣಿಸದೇ ಸವಾರರು ಗಾಯಗೊಳ್ಳುವ ಸಂಗತಿಗಳು ಕಂಡು ಬರುತ್ತಿವೆ.
ಜಾಣ ಕುರುಡು: ಮಾಗಡಿ- ಬೆಂಗಳೂರು ಮುಖ್ಯ ರಸ್ತೆ ವಿಸ್ತರಿಸಿ ಸೋಮವಾರಪೇಟೆವರೆಗೆ ಅಂದಾಜು 418 ಕಿ.ಮೀ. ಚತುಷ್ಪಥ ರಸ್ತೆ ಕಾಮಗಾರಿಗೆ ಸುಮಾರು 926 ಕೋಟಿ ರೂ.ಗಳನ್ನು ಸರ್ಕಾರದಿಂದ ಮಂಜೂರಾತಿ ದೊರತಿದ್ದು, ಈ ಚತುಷ್ಪಥ ರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಈಗಾಗಲೇ ಮುಗಿದಿದೆ. ಈ ರಸ್ತೆ ಕಾಮಗಾರಿ ಕಳೆದ 3 ವರ್ಷಗಳ ಹಿಂದೆ ಪ್ರಾರಂಭಗೊಂಡಿದ್ದು, ಕೆಶಿಫ್ನಿಂದ ಕಾಮಗಾರಿ ಸ್ಥಗಿತಗೊಂಡಿದೆ. ಆದರೆ, ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸಿದ್ದಾರೆ. ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿಯೇ ಸಂಚರಿಸಬೇಕಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಭೂಮಿಯನ್ನು ಅಗೆದು ಹಾಗೆಯೇ ಬಿಡಲಾಗಿದೆ. ಆಗಾಗ್ಗೆ ಮಳೆ ಆಗುತ್ತಿರುವುದರಿಂದ ಮಣ್ಣಿನ ರಸ್ತೆ, ಹಳ್ಳ ಗುಂಡಿಗಳಿಂದ ಕೂಡಿದೆ.
ಸಾಕಷ್ಟು ಉದಾಹರಣೆ: ಹಳ್ಳ ಗುಂಡಿಗಳ ಈ ರಸ್ತೆಯಲ್ಲಿ ಬಹುತೇಕ ವಾಹನ ಸವಾರರು ಈ ರಸ್ತೆಯ ಸಂಚಾರದ ಸಹವಾಸವೇ ಬೇಡ ಎಂದು ಬೇರೆ ಕಡೆಯಿಂದ ಸಂಚರಿಸಲು ವಾಪಸ್ ಹೋಗುತ್ತಾರೆ. ಬಹುತೇಕ ಮಂದಿ ವಾಹನಗಳಿಂದ ಬಿದ್ದು, ಕೈಕಾಲು ಮುರಿದುಕೊಂಡು ಎದ್ದು ಹೋಗಿರುವ ಉದಾಹಣೆಗಳು ಸಾಕಷ್ಟಿವೆ. ಅದರಲ್ಲೂ ತುರ್ತು ರೋಗಿಯನ್ನು ಆಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯಬೇಕಾದರೆ ವಾಹನ ಚಾಲಕ ಹರಸಾಹಸ ಮಾಡಬೇಕಿದೆ ಎಂಬ ಹಂತಕ್ಕೆ ಬಂದು ನಿಂತಿದೆ. ಅದರಲ್ಲೂ ಸ್ಥಳೀಯ ವೈದ್ಯರ ಮೇರೆಗೆ ಏನಾದರೂ ಗರ್ಭಿಣಿ ಸ್ತ್ರೀಯರನ್ನು ಬೆಂಗಳೂರಿನ ಆಸ್ಪತ್ರೆಗೆ ಶಿಫಾರಸು ಮಾಡಿ ಕಳುಹಿಸಿದರೆ ಅವರು ಬೆಂಗಳೂರಿನ ಆಸ್ಪತ್ರೆಗೆ ಸೇರುವ ಮುನ್ನವೇ ಹೆರಿಗೆಯಾಗಬಹುದು ಎನ್ನುವಷ್ಟರ ಮಟ್ಟಿಗೆ ರಸ್ತೆ ಹದಗೆಟ್ಟಿದೆ.
ಸ್ಥಳೀಯರ ಆಕ್ರೋಶ: ನೂತನ ಶಾಸಕ ಎಚ್ .ಸಿ.ಬಾಲಕೃಷ್ಣ ಅವರು ಇತ್ತ ಗಮನಹರಿಸಿ ಕಾಮಗಾರಿಗೆ ಮರು ಚಾಲನೆ ನೀಡಬೇಕಿದೆ. ಮಾಗಡಿಯಿಂದ ಬೆಂಗಳೂರು ನಗರಕ್ಕೆ ಬಹುತೇಕ ಮಂದಿ ಸರ್ಕಾರಿ ಕರ್ತವ್ಯಕ್ಕೆ, ಇಲ್ಲಿಂದಲೇ ತೆರಳುತ್ತಾರೆ. ಸಾವಿರಾರು ಮಂದಿ ದಿನನಿತ್ಯದ ವ್ಯವಹಾರಕ್ಕೆ ಹೋಗುತ್ತಾರೆ. ಇನ್ನೂ ಎಷ್ಟು ವರ್ಷ ಹೀಗೆ ಸಂಚರಿಸಬೇಕು ಎಂಬ ಆತಂಕದಲ್ಲಿದ್ದಾರೆ. ನಮ್ಮ ಗೋಳು ಯಾರಿಗೆ ಹೇಳಿಕೊಳ್ಳುವುದು, ಯಾರು ನಮ್ಮ ನೋವನ್ನು ಕೇಳುತ್ತಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಹಣ ಬಿಡುಗಡೆ ಇಲ್ಲ: 2023ಕ್ಕೆ ರಸ್ತೆ ಕಾಮಗಾರಿ ಪೂರ್ಣವಾಗಲಿದೆ ಎಂಬ ಮಾತು ಜನಪ್ರತಿನಿಧಿಗಳಿಂದ ಕೇಳಿ ಬರುತ್ತಿದೆ. ರಸ್ತೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 3 ವರ್ಷ ಬೇಕಾಗಬಹುದು, ಅಲ್ಲಿಯವರೆಗೂ ವಾಹನ ಸವಾರರಿಗೆ ಇದೇ ಗತಿ. ಕೆಲವು ವಾಹನ ಸವಾರರು ಇದೇ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಾಸಕ ಎ.ಮಂಜುನಾಥ್ ಅವರು ಜಿಲ್ಲಾ ಉಸ್ತವಾರಿ ಸಚಿವರ ಮೇಲೆ ಒತ್ತಡ ಏರಿ 175 ಕೋಟಿರೂ. ಮಂಜೂರಾತಿ ಮಾಡಿಸಿದ್ದಾರೆ. ಆದರೆ ಅಗತ್ಯ ಹಣ ಬಿಡುಗಡೆಯಾಗದ ಕಾರಣ ಕಾಮಗಾರಿ ಆಮೆ ನಡಿಗೆಯಲ್ಲಿ ನಡೆಯುತ್ತಿತ್ತು. ಸದ್ಯಕ್ಕೆ ಸ್ಥಗಿತಗೊಂಡಿದೆ ಎಂಬ ಮಾತು ಕೇಳಿ ಬರುತ್ತಿದೆ.
ಅಧಿಕಾರಿಗಳ ಸಭೆ ಕರೆದು ಚರ್ಚಿಸುವೆ: ರಸ್ತೆಯ ಕಾಮಗಾರಿ ಏಕೆ ಸ್ಥಗಿತಗೊಂಡಿದೆ ಎಂಬ ವಿಚಾರ ಕುರಿತು ಶೀಘ್ರ ಕೆಸಿಫ್ ಅಧಿಕಾರಿಗಳ ಸಭೆ ಕರೆದು ಚರ್ಚಿಸುತ್ತೇನೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ರ ನೇತೃತ್ವದಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಿ ಅಗತ್ಯ ಅನುದಾನ ಬಿಡುಗಡೆಗೆ ಮನವಿ ಮಾಡಲಾಗುವುದು. ರಸ್ತೆಯಲ್ಲಿನ ಹಳ್ಳ, ಗುಂಡಿಗಳನ್ನು ಮುಚ್ಚಲು ಸಹ ಶೀಘ್ರದಲ್ಲಿಯೇ ಕ್ರಮ ವಹಿಸುತ್ತೇನೆ. ಕ್ಷೇತ್ರದ ಜನರ ಹಿತವೇ ನನ್ನ ಧ್ಯೇಯ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಕೆಶಿಫ್ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದು, ಪ್ರಯಾಣಿಕರಿಗೆ ಯಮಯಾತನೆ ಆಗಿದೆ. ಅದರಲ್ಲೂ ಬೈಕ್ ಸವಾರರು ಆಯ ತಪ್ಪಿ ಬಿದ್ದರೆ ಯಾರು ಹೊಣೆ. ಅಲ್ಲಲ್ಲಿ ಸೇತುವೆಗಳ ಕಾಮಗಾರಿಯೂ ಅಪೂರ್ಣಗೊಂಡಿದೆ. ನೂತನ ಶಾಸಕ ಎಚ್.ಸಿ.ಬಾಲಕೃಷ್ಣ ರಸ್ತೆ ಕಾಮಗಾರಿಯನ್ನು ಸವಾಲಾಗಿ ಸ್ವೀಕರಿಸಬೇಕಿದೆ.
-ಎಸ್.ವಿ.ರಾಜಣ್ಣ, ಪ್ರಗತಿಪರ ಚಿಂತಕ