ಬೆಂಗಳೂರು: ಇಂದಿರಾನಗರದ ಲಕ್ಷ್ಮೀಪುರಂನ ಮನೆಯೊಂದರಲ್ಲಿ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಅವಘಡದಲ್ಲಿ ಗಾಯಗೊಂಡಿರುವ ಸಂಗೀತಾ (25) ಅವರಪುತ್ರ ಒಂದೂವರೆ ವರ್ಷದ ನಂದಕಿಶೋರ್, ಭಾಮೈದ ಪ್ರಶಾಂತ್(22) ಹಾಗೂ ಸೋದರ ಸಂಬಂಧಿ ಪ್ರಭು(18) ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿರುವ ಸಂಗೀತಾ ಮಂಗಳವಾರ ಬೆಳಿಗ್ಗೆ ಸುಮಾರು 7-15ರ ಸುಮಾರಿಗೆ ಟೀ ಮಾಡುವ ಸಲುವಾಗಿ ಗ್ಯಾಸ್ ಹಚ್ಚಲು ಹೋಗಿದ್ದಾರೆ. ಗ್ಯಾಸ್ ಲೈಟರ್‌ನಿಂದ ಬೆಂಕಿಯ ಕಿಡಿ ಹೊರಬರುತ್ತಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದ್ದು, ಸಂಗೀತಾ ಅವರೂ ಸೇರಿದಂತೆ ಮನೆಯ ಹಾಲ್‌ನಲ್ಲಿದ್ದ ಮಗ ಕಿಶೋರ್, ಸಂಬಂಧಿಗಳಾದ ಪ್ರಶಾಂತ್ ಹಾಗೂ ಪ್ರಭು ಕೂಡ ಗಾಯಗೊಂಡಿದ್ದಾರೆ.
ಗ್ಯಾಸ್ ಸ್ಫೋಟಗೊಂಡ ಸದ್ದಿಗೆ ಬೆಚ್ಚಿಬಿದ್ದು ಹೊರಬಂದ ಅಕ್ಕ-ಪಕ್ಕದ ಮನೆಯ ನಿವಾಸಿಗಳು, ಸಂಗೀತಾ ಅವರ ಮನೆಯಲ್ಲಿ ಆವರಿಸಿದ್ದ ದಟ್ಟ ಹೊಗೆಯನ್ನು ಕಂಡು ಕೂಡಲೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಆ್ಯಂಬುಲೆನ್ಸ್‌ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾತ್ರಿ ಮಲಗುವಾಗ ಗ್ಯಾಸ್ ಆಫ್ ಮಾಡಿರಲಿಲ್ಲ ಎನ್ನಲಾಗಿದ್ದು ರಾತ್ರಿ ಇಡೀ ಗ್ಯಾಸ್ ಸೋರಿಕೆಯಾಗಿರುವುದರಿಂದಲೇ ಘಟನೆ ಸಂಭವಿಸಿರುವ ಸಾಧ್ಯತೆಯಿದೆ. ಸ್ಫೋಟದ ತೀವ್ರತೆಗೆ ಮನೆಯ ಕಿಟಕಿ ಗಾಜುಗಳು ಹಾಗೂ ಕೆಲವು ವಸ್ತುಗಳು ಅರ್ಧಂಬರ್ಧ ಸುಟ್ಟುಹೋಗಿವೆ ಎಂದು ಪೊಲೀಸರು ತಿಳಿಸಿದರು. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.