ಬೆಂಗಳೂರು: ಉಸ್ತುವಾರಿ ಸಚಿವರಿಲ್ಲದ ಜಿಲ್ಲೆಗಳಿಗೆ ಉಸ್ತುವಾರಿಗಳನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಹೆಚ್ಚುವರಿ ಜಿಲ್ಲಾ ಉಸ್ತುವಾರಿ ಹೊಂದಿರುವ ಪ್ರಭಾವಿ ಸಚಿವರು ಮಾತ್ರ ಬಿಟ್ಟು ಕೊಟ್ಟಿಲ್ಲ.
ರಮೇಶ್ ಜಾರಕಿಹೊಳಿ ಅವರಿಂದ ತೆರವಾಗಿದ್ದ ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ವಹಿಸಲಾಗಿದೆ. ಆರ್.ಶಂಕರ್ ಅವರಿಂದ ತೆರವಾಗಿರುವ ಕೊಪ್ಪಳ ಉಸ್ತುವಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ ಅವರಿಗೆ ನೀಡಲಾಗಿದೆ.
ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಎನ್. ಮಹೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಗದಗ ಜಿಲ್ಲೆಯ ಉಸ್ತುವಾರಿಯನ್ನು ಮುಜರಾಯಿ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ ಅವರಿಗೆ ನೀಡಲಾಗಿದೆ. ವಸತಿ ಸಚಿವ ಎಂ.ಟಿ.ಬಿ.ನಾಗರಾಜ್ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿತ್ತು. ಡಿಸಿ ಎಂ ಡಾ.ಜಿ.ಪರಮೇಶ್ವರ್, ಬೆಂಗಳೂರು ನಗರ ಉಸ್ತುವಾರಿ ಜತೆಗೆ ತುಮ ಕೂರು ಜಿಲ್ಲೆ ಉಸ್ತು ವಾರಿಯನ್ನು ಹೆಚ್ಚುವರಿಯಾಗಿ ಹೊಂದಿದ್ದಾರೆ. ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವ ಕುಮಾರ್, ರಾಮನಗರದ ಜತೆಗೆ ಹೆಚ್ಚುವರಿ ಯಾಗಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿ ದ್ದಾರೆ. ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಉತ್ತರ ಕನ್ನಡ ಜಿಲ್ಲೆ ಜತೆಗೆ ಧಾರವಾಡ ಜಿಲ್ಲೆ ಉಸ್ತುವಾರಿಯನ್ನು ಹೆಚ್ಚುವರಿಯಾಗಿ ವಹಿಸಿಕೊಂಡಿದ್ದಾರೆ.
ಈ ಮೂವರು ಸಚಿವರು ಹೆಚ್ಚುವರಿ ಜಿಲ್ಲೆಗಳನ್ನು ಬಿಟ್ಟು ಕೊಡಲು ನಿರಾಕರಿಸಿದ್ದಾರೆ. ಹೀಗಾಗಿ ಅದೇ ಜಿಲ್ಲೆಯ ಸಚಿವರಾಗಿದ್ದರೂ, ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಧಾರವಾಡ ಜಿಲ್ಲಾ ಉಸ್ತುವಾರಿಯಿಂದ ವಂಚಿತರಾಗಿದ್ದಾರೆ. ಆರ್.ಬಿ.ತಿಮ್ಮಾಪುರ್ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿಯಿಂದ ವಂಚಿತರಾಗಿದ್ದಾರೆ. ಇ.ತುಕಾರಾಂ ಹಾಗೂ ಪಿ.ಟಿ. ಪರಮೇಶ್ವರ್ ನಾಯ್ಕ ಸ್ವಂತ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಯ ಉಸ್ತುವಾರಿಗೆ ತೃಪ್ತಿಪಡುವಂತಾಗಿದೆ.
ಪ್ರಭಾವಿಗಳು ಎರಡೆರಡು ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡಿರುವುದರಿಂದ ಗೃಹ ಸಚಿವ ಎಂ.ಬಿ.ಪಾಟೀಲ್, ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ, ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ್, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ರಹೀಂ ಖಾನ್ ಜಿಲ್ಲಾ ಉಸ್ತುವಾರಿ ಹೊಣೆಯಿಂದ ವಂಚಿತರಾಗುವಂತಾಗಿದೆ.