Advertisement
ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ, ದೂಧ್‌ಗಂಗಾ ಹಾಗೂ ವೇದಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ರಾಯಬಾಗ, ಖಾನಾಪುರ, ಮೂಡಲಗಿ, ಕಾಗವಾಡ ಹಾಗೂ ಗೋಕಾಕ ತಾಲೂಕುಗಳಲ್ಲಿ 30 ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ಜಾನುವಾರುಗಳಿಗೆ ಮೇವು ನೀಡಲು ಹೋಗಿದ್ದ ಮಾರುತಿ ಜಾಧವ್ (34) ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.
Related Articles
Advertisement
ರಾಯಚೂರಿನಲ್ಲೂ ಭೀತಿ: ಕೃಷ್ಣಾ ನದಿ ಹಾವಳಿಗೆ ರಾಯಚೂರು ಜಿಲ್ಲೆ ತತ್ತರಿಸಿದ್ದು 4 ಸೇತುವೆಗಳು ಜಲಾವೃತವಾಗಿವೆ. ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕು ಸೇರಿ ಒಟ್ಟು 51ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ಅರಷಿಣಗಿ, ಗುರ್ಜಾಪುರದಲ್ಲಿ 200 ಎಕರೆಗೂ ಅ ಧಿಕ ಬೆಳೆ ಹಾನಿಯಾಗಿದೆ. ಪ್ರವಾಹಕ್ಕೆ ಸಿಲುಕಿದ್ದ 70ಕ್ಕೂ ಹೆಚ್ಚು ಜನರನ್ನು ಎನ್‌ಡಿಆರ್‌ಎಫ್ ತಂಡ ಸ್ಥಳಾಂತರಿಸಿದೆ. ಹೂವಿನಹೆಡಗಿ ಸೇತುವೆ ಮುಳುಗಡೆಯಾಗಿದ್ದು, ಕಲಬುರಗಿ-ದೇವದುರ್ಗ ಸಂಪರ್ಕ ಕಡಿತಗೊಂಡಿದೆ. ದೇವದುರ್ಗ ತಾಲೂಕಿನ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ.
ಯಾದಗಿರಿಯಲ್ಲಿ ಅಲ್ಲೋಲ ಕಲ್ಲೋಲ: ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3 ಲಕ್ಷ ಕ್ಯುಸೆಕ್ ನೀರು ಹರಿ ಬಿಡುತ್ತಿರುವುದರಿಂದ ನದಿ ತೀರದ ಪ್ರದೇಶದಲ್ಲಿ ಪ್ರವಾಹ ಉಂಟಾಗಿದೆ. ಸಾವಿರಾರು ಎಕರೆ ಜಲಾವೃತವಾಗಿದೆ. ಸುರಪುರ ತಾಲೂಕಿನಲ್ಲಿ 3 ಗಂಜಿ ಕೇಂದ್ರ ತೆರೆಯಲಾಗಿದೆ. ಶಹಾಪುರ ತಾಲೂಕಿನಲ್ಲಿ ಕೊಳ್ಳುರ ಸೇತುವೆ ಮುಳುಗಡೆಯಾಗಿದೆ. ವಿಜಯಪುರದಲ್ಲಿ ಮಳೆ ಇಲ್ಲದಿದ್ದರೂ ಕೃಷ್ಣಾ ತೀರದಲ್ಲಿ ಪ್ರವಾಹ ಎದುರಾಗಿದೆ. ಆಲಮಟ್ಟಿ ಜಲಾಶಯದಿಂದ 3,30,525 ಕ್ಯುಸೆಕ್ ಹರಿಬಿಡಲಾಗುತ್ತಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಮಲೆನಾಡಲ್ಲೂ ನಿಲ್ಲದ ಮಳೆ: ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲಾದ್ಯಂತ ಮಳೆ ಆರ್ಭಟ ಮುಂದುವರೆದಿದೆ. ತೀರ್ಥಹಳ್ಳಿ ತಾಲೂಕಿನ ಬಿಸಿಲುಮನೆ ಗ್ರಾಮದಲ್ಲಿ ಧರೆ ಕುಸಿದು ರಮೇಶ(50) ಮೃತಪಟ್ಟಿದ್ದಾರೆ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಹೊಸನಗರ, ಸಾಗರ ತಾಲೂಕುಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನೀರಿನ ಮಟ್ಟ ಏರಿಕೆಯಾಗಿದೆ. ಮಳೆ-ಗಾಳಿಗೆ ವಿದ್ಯುತ್ ಕಂಬ ಉರುಳಿ ಬಿದ್ದಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಕಾಳಿ ನದಿ ಮೈದುಂಬಿ ಹರಿಯುತ್ತಿದೆ. ಸಿದ್ದಾಪುರ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ 125.2 ಮಿಮೀ ಮಳೆಯಾಗಿದೆ. ದೊಡ್ಮನೆ ಗ್ರಾಮದ ಶಾಂತಿಗದ್ದೆ ಮಜರೆಯಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಕದ್ರಾ ,ಕೊಡಸಳ್ಳಿ ಜಲಾಶಯಗಳು ಭರ್ತಿಯಾಗಿದ್ದು, ಎಲ್ಲ ಕ್ರಸ್ಟಗೇಟ್‌ಗಳನ್ನು ತೆರೆದು ನದಿಗೆ ನೀರು ಹೊರಬಿಡಲಾಗುತ್ತಿದೆ. ಕದ್ರಾದ ಮಹಾಮಾಯಿ ದೇವಸ್ಥಾನ ನೀರಿನಿಂದ ಜಲಾವೃತವಾಗಿದೆ. 7 ಕುಟುಂಬದ 23 ಜನರನ್ನು ಸ್ಥಳಾಂತರಿಸಲಾಗಿದೆ.
ಹೆದ್ದಾರಿ ಬಂದ್: ಖಾನಾಪುರ ಬಳಿ ಭೂಕುಸಿತ ಉಂಟಾಗಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದಾಗಿದೆ.
ಇಂದು-ನಾಳೆ ಶಾಲೆಗಳಿಗೆ ರಜೆ: ನಿರಂತರ ಮಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ರಾಮದುರ್ಗ ತಾಲೂಕು ಹೊರತುಪಡಿಸಿ ಎಲ್ಲ ತಾಲೂಕುಗಳಲ್ಲಿ ಜು.6, 7, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ,ಎನ್.ಆರ್.ಪುರ, ಕೊಪ್ಪ , ಶೃಂಗೇರಿ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ, ಹೊಸನಗರ ಹಾಗೂ ಉತ್ತರ ಕನ್ನಡ ಜಿಲ್ಲಾದ್ಯಂತ ಮಂಗಳವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.