Advertisement

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

09:34 PM Jan 08, 2025 | Team Udayavani |

ವಿಶಾಖಪಟ್ಟಣ: ಕೇಂದ್ರ ಸರಕಾರದ ಪ್ರಮುಖ ಪಾಲುದಾರ ಪಕ್ಷವಾಗಿರುವ ಟಿಡಿಪಿ (ತೆಲುಗು ದೇಶಂ ಪಾರ್ಟಿ) -ಜನಸೇನಾ ಮೈತ್ರಿಯಲ್ಲಿರುವ  ಆಂಧ್ರಪ್ರದೇಶದಲ್ಲಿ ಪ್ರಧಾನಿ ಮೋದಿ ಬುಧವಾರ 2 ಲಕ್ಷ ಕೋಟಿ ರೂ.ಗಳ ಬೃಹತ್‌ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

Advertisement

ಈ ವೇಳೆ ಮಾತನಾಡಿದ ಮೋದಿ, “ದೊಡ್ಡ ಪ್ರಮಾಣದ ಎನ್‌ಟಿಪಿಸಿ ಸಹಯೋಗದೊಂದಿಗೆ ಹಸಿರು ಹೈಡ್ರೋಜನ್ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸುವ ವಿಶ್ವದ ಕೆಲವೇ ನಗರಗಳಲ್ಲಿ ವಿಶಾಖಪಟ್ಟಣವೂ ಸೇರುತ್ತದೆ. ಈ ಹಸಿರು ಹೈಡ್ರೋಜನ್ ಹಬ್ ಹಲವು ಉದ್ಯೋಗಾವಕಾಶಗಳ ಸೃಷ್ಟಿಸುತ್ತದೆ. ಇದು ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಆಂಧ್ರಪ್ರದೇಶದಲ್ಲಿ ಉದ್ಯಾನವನಗಳನ್ನು ಸ್ಥಾಪಿಸಲಾಗುತ್ತಿದೆ. ಈ ದೃಷ್ಟಿಕೋನ ಸಾಕಾರಗೊಳಿಸಲು ಬುಧವಾರ ಕೃಷ್ಣಪಟ್ಟಣಂ ಕೈಗಾರಿಕಾ ಪ್ರದೇಶಕ್ಕೆ ಅಡಿಪಾಯ ಹಾಕಲಾಗಿದೆ” ಎಂದರು.

‘ನಾವು ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇವೆ’ ಎಂದಿದ್ದಾರೆ. ಆಂಧ್ರಪ್ರದೇಶವು ಸಾಧ್ಯತೆಗಳು ಮತ್ತು ಅವಕಾಶಗಳ ರಾಜ್ಯವಾಗಿದೆ. ಆಂಧ್ರದಲ್ಲಿನ ಈ ಸಾಧ್ಯತೆಗಳ ಅರಿತುಕೊಂಡಾಗ ಆಂಧ್ರವೂ ಅಭಿವೃದ್ಧಿ ಹೊಂದುತ್ತದೆ ಮತ್ತು ಆಗ ಮಾತ್ರ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

‘ಸ್ವರ್ಣ ಆಂಧ್ರ 2047’ಕ್ಕೆಮುನ್ನುಡಿ:
2047ರ ವೇಳೆಗೆ ಆಂಧ್ರಪ್ರದೇಶವು ಸುಮಾರು 2.5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಹೊಂದಿದೆ. ಆಂಧ್ರದ ಜನರಿಗೆ ಸೇವೆ ಸಲ್ಲಿಸುವುದು ನಮ್ಮ ಗುರಿ. ಈ ಗುರಿಯನ್ನು ಸಾಧಿಸಲು ಕೇಂದ್ರದ ಎನ್‌ಡಿಎ ಸರ್ಕಾರವು ‘ಸ್ವರ್ಣ ಆಂಧ್ರ 2047’ ಉಪಕ್ರಮವನ್ನು ಪ್ರಾರಂಭಿಸಿದೆ. ಕೇಂದ್ರ ಸರ್ಕಾರವು ಇಂದು ಲಕ್ಷ ಕೋಟಿ ಮೌಲ್ಯದ ಯೋಜನೆಗಳಲ್ಲಿ ಆಂಧ್ರಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಹೇಳಿದ್ದಾರೆ.

ರೈಲು ನಿಲ್ದಾಣಗಳ  ‘ಅಮೃತ್’ ಯೋಜನೆ:
“ರೈಲ್ವೆ ಕ್ಷೇತ್ರದಲ್ಲಿ ಆಂಧ್ರಪ್ರದೇಶವು ಶೇ. 100ರಷ್ಟು ವಿದ್ಯುದ್ದೀಕರಣ ಪೂರ್ಣಗೊಳಿಸಿದ ರಾಜ್ಯಗಳಲ್ಲಿ ಒಂದಾಗಿದೆ. ಆಂಧ್ರಪ್ರದೇಶದ 70ಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ‘ಅಮೃತ್’ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತ್ ಸ್ಟೇಷನ್ ಯೋಜನೆ’ಯಡಿ ಆಂಧ್ರಪ್ರದೇಶದ ಜನರ ಅನುಕೂಲಕ್ಕಾಗಿ ಮತ್ತು ಪ್ರಯಾಣಕ್ಕಾಗಿ 7 ವಂದೇ ಭಾರತ್ ರೈಲುಗಳು ಮತ್ತು ಅಮೃತ್ ಭಾರತ್ ರೈಲುಗಳ ನಿರ್ವಹಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದ್ದಾರೆ.

Advertisement

ಬುಧವಾರ 1,518 ಕೋಟಿ ಮೌಲ್ಯದ ಮಹತ್ವದ ಯೋಜನೆಯಾದ ಕೃಷ್ಣಪಟ್ಟಣಂ ಕೈಗಾರಿಕಾ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅಡಿಪಾಯ ಹಾಕಿದರು. ನಕ್ಕಪಲ್ಲಿಯಲ್ಲಿ 1,877 ಕೋಟಿ ರೂ. ಹೂಡಿಕೆಯೊಂದಿಗೆ ಬೃಹತ್ ಡ್ರಗ್ ಪಾರ್ಕ್ ಉದ್ಘಾಟಿಸಲಾಯಿತು. 2,002 ಎಕರೆಯಲ್ಲಿ ನಿರ್ಮಾಣವಾಗಲಿರುವ ಈ ಉದ್ಯಾನವನವು 54,000 ಜನರಿಗೆ ಉದ್ಯೋಗ ಒದಗಿಸುವ ನಿರೀಕ್ಷೆಯಿದೆ.

ಮೋದಿ ಭರ್ಜರಿ ರೋಡ್‌ ಶೋ 
ಪ್ರಧಾನಿ ಮೋದಿ, ಸಿಎಂ ಚಂದ್ರಬಾಬು ನಾಯ್ಡು ಮತ್ತು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರೊಂದಿಗೆ ಬುಧವಾರ ವಿಶಾಖಪಟ್ಟಣಂನಲ್ಲಿ ರೋಡ್ ಶೋ ಆರಂಭಿಸಿದರು. ಬಳಿಕ ಎಯು ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆಂಧ್ರಪ್ರದೇಶದ ಜನರ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಧನ್ಯವಾದಗಳು ಎಂದು ಮೋದಿ ತೆಲುಗಿನಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next