ಬೀದರ್ : ಬಸವಣ್ಣ ನಡೆದಾಡಿದ ಪವಿತ್ರ ಕ್ಷೇತ್ರ ಬಸವಕಲ್ಯಾಣದಲ್ಲಿ 500 ಕೋಟಿ ರೂ. ವೆಚ್ಚದ ಅಂತರಾಷ್ಟ್ರೀಯ ಮಟ್ಟದ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಐತಿಹಾಸಿಕ ಕಾರ್ಯಕ್ಕೆ ಚಾಲನೆ ನೀಡಿದರು.
ಬಸವಕಲ್ಯಾಣದ ಹಳೆ ಅನುಭವ ಮಂಟಪ ಪರಿಸರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬಸವಣ್ಣನಿಗೆ ನಮನ ಸಲ್ಲಿಸಿ, ನಂತರ ಗುದ್ದಲಿ ಪೂಜೆಯೊಂದಿಗೆ ಬೃಹತ್ ಯೋಜನೆ ಕಾರ್ಯಾರಂಭಕ್ಕೆ ಚಾಲನೆ ಕೊಟ್ಟರು. ಐತಿಹಾಸಿಕ ಕ್ಷಣಕ್ಕೆ ನಾಡಿನ ಮಠಾಧೀಶರು, ಜನಪ್ರತಿನಿಧಿಗಳು ಮತ್ತು ಸಾವಿರಾರು ಬಸವ ಅನುಯಾಯಿಗಳು ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಇದು ನನ್ನ ಪೂರ್ವ ಜನ್ಮದ ಪುಣ್ಯ ಕಾರ್ಯ. ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ದಿನವಾಗಿದೆ. ಅನುಭವ ಮಂಟಪ ನಿರ್ಮಾಣಕ್ಕೆ ಈಗಾಗಲೇ 100 ಕೋಟಿ ರೂ. ಬಿಡುಗಡೆ ಮಾಡಿದ್ದು, ಇನ್ನೂ 100 ಕೋಟಿ ರೂ. ವಾರದೊಳಗೆ ಬಿಡುಗಡೆ ಮಾಡಿ, ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಕಟ್ಟಡ ನಿರ್ಮಾಣ ಕಾರ್ಯವನ್ನು ಶೀಘ್ರ ಆರಂಭಿಸಲಾಗುವುದು. ಮುಂದಿನ ಎರಡು ವರ್ಷಗಳಲ್ಲೇ ಬಹು ನಿರೀಕ್ಷಿತ ಯೋಜನೆ ಕಾರ್ಯ ಮುಗಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ ಗೊಳಿಸಲಾಗುವುದು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ- ಸಾಂಸ್ಕೃತಿ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದಲ್ಲಿ ಕಟ್ಟಡ ಕೆಲಸ ಕಾರ್ಯಗಳು ನೆರವೇರಲಿವೆ ಎಂದು ತಿಳಿಸಿದರು.
ಇದನ್ನೂ ಓದಿ:ಕಳವು ಪ್ರಕರಣದ ಆರೋಪಿಯನ್ನು ಬಂಧಿಸಲು ಹೋದ ಕಾನ್ಸ್‌ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ
‘ಸಾಧನೆ ಮಾತನಾಡಬೇಕು, ಮಾತಾಡುವುದೇ ಸಾಧನೆ ಆಗಬಾರದು ಎನ್ನುವುದು ತಮ್ಮ ಮನೋಭಾವವಾಗಿದೆ. ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಗೋ.ರು.ಚ ಅವರಂತಹ ಇನ್ನೂ ಅನೇಕ ಹಿರಿಯ ಚಿಂತಕರ ಸಲಹೆ ಪಡೆದು, ಈ ಭಾಗದ ಜನರ ಬೇಡಿಕೆಯಂತೆ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ, ಪ್ರತಿ ವರ್ಷ ಬಸವ ಉತ್ಸವ ಆಚರಣೆಗೆ ಅವಕಾಶ ಕಲ್ಪಿಸಲಾಗುವುದು. ಇಂತಹ ಒಳ್ಳೆಯ ಕಾರ್ಯಕ್ಕೆ ಹಣಕಾಸಿನ ಕೊರತೆ ಇಲ್ಲ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಸರ್ವ ಸಮುದಾಯದ ಜನರು ಸೇರಿ ಚರ್ಚಿಸಿ ಚಿಂತನ ಮಂಥನ ನಡೆಸುತ್ತಿದ್ದ ಅನುಭವ ಮಂಟಪವು ಆದರ್ಶ ಸಂಸತ್ತಿನ ಮಾದರಿಯಾಗಿದೆ. ಸಾಮಾಜಿಕ ಬದಲಾವಣೆ ತರುವಲ್ಲಿ ಮಂಟಪದ ಪಾತ್ರವು ಅತೀ ಮಹತ್ವದ್ದಾಗಿದೆ. ಮನುಕುಲದ ಏಳ್ಗೆಗೆ ಇಡೀ ವಚನ ಸಾಹಿತ್ಯ ಮಾರ್ಗದರ್ಶಿಯಾಗಿದೆ. ವಿಶ್ವಕ್ಕೆ ಸಮಾನತೆ ಪರಿಕಲ್ಪನೆ ನೀಡಿದ್ದು ಇದೇ ಕನ್ನಡಿಗರ ನೆಲದಿಂದ ಎಂಬುದಕ್ಕೆ ಹೆಮ್ಮೆ ಪಡಬೇಕಿದೆ. ನೂತನ ಕಟ್ಟಡ ವಿಶ್ವದ ಗಮನ ಸೆಳೆಯುವಂಥ ಶ್ರದ್ಧಾ ಕೇಂದ್ರವಾಗಿ ಬೆಳೆದು, ಶರಣರ ವಿಚಾರಧಾರೆಗಳು ಎಲ್ಲೆಡೆ ಪರಿಚಯಿಸುವ ಕೆಲಸ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅನುಭವ ಮಂಟಪ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು, ಇಳಕಲ್‌ನ ಶ್ರೀ ಗುರು ಮಹಾಂತ ಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರು, ತಜ್ಞರ ಸಮಿತಿಯ ಅಧ್ಯಕ್ಷ ಗೋ.ರು ಚನ್ನಬಸಪ್ಪ, ಬಸವರಾಜ ಪಾಟೀಲ ಸೇಡಂ, ಡಿಸಿಎಂ ಲಕ್ಷ್ಮಣ ಸವದಿ, ಆರೋಗ್ಯ ಸಚಿವ ಡಾ. ಸುಧಾಕರ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸಂಸದರಾದ ಭಗವಂತ ಖೂಬಾ, ಉಮೇಶ ಜಾಧವ, ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ರಹೀಮ್ ಖಾನ್ ಸೇರಿ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.