ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ರಾಜ್ಯಸಭೆ ಮೂಲಕ ಸಂಸತ್ ಪ್ರವೇಶಕ್ಕೆ ಹಾದಿ ಸುಗಮವಾಗಿದೆ ಎನ್ನಲಾಗಿದೆ. ಜೂನಿನಲ್ಲಿ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಚ್.ಡಿ.ದೇವೇಗೌಡರನ್ನು ಆಯ್ಕೆ ಮಾಡುವ ಸಂಬಂಧ ಪ್ರಾಥಮಿಕ ಹಂತದ ಮಾತುಕತೆಗಳು ನಡೆಯುತ್ತಿವೆ.
ಎಚ್.ಡಿ.ದೇವೇಗೌಡರು ಜೆಡಿಎಸ್‌ನಿಂದಲೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದ್ದು ಕಾಂಗ್ರೆಸ್ ತನ್ನ ಹೆಚ್ಚುವರಿ ಮತಗಳನ್ನು ವರ್ಗಾಯಿಸಲಿದೆ. ಹಿಂದೊಮ್ಮೆ ಕಾಂಗ್ರೆಸ್‌ನಿಂದ ಎಸ್.ಎಂ.ಕೃಷ್ಣ ರಾಜ್ಯಸಭೆಗೆ ಸ್ಪರ್ಧೆ ಮಾಡಿದ್ದಾಗ ಜೆಡಿಎಸ್ ಇದೇ ರೀತಿ ಹೆಚ್ಚುವರಿ ಮತ ವರ್ಗಾವಣೆ ಮಾಡಿತ್ತು. ರಾಜ್ಯಸಭೆ ಮೂಲಕ ಸಂಸತ್ ಪ್ರವೇಶಕ್ಕೆ ಎಚ್.ಡಿ.ದೇವೇಗೌಡರು ಹಿಂದೇಟು ಹಾಕುತ್ತಿದ್ದಾರಾದರೂ ಅಂತಿಮವಾಗಿ ಕಾಂಗ್ರೆಸ್‌ಬಲ ನೀಡಿದರೆ ಹೋಗಬಹುದು ಎಂದು ದಳದ ನಾಯಕರು ಗೌಡರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗಿದೆ.
ಸಿದ್ದು ಬಣ ಸಹಕರಿಸುವುದೇ?: ಜಿ.ಟಿ.ದೇವೇಗೌಡರು ಈಗಾಗಲೇ ಬಿಜೆಪಿಯತ್ತ ಮುಖ ಮಾಡಿದ್ದು, ರಾಜ್ಯಸಭೆ ಚುನಾವಣೆ ವೇಳೆ ಬಿಜೆಪಿ ಮತ್ತಷ್ಟು ಜೆಡಿಎಸ್ ಶಾಸಕರನ್ನು ಸೆಳೆಯಬಹುದಾ ಎಂಬ ಆತಂಕವೂ ಇದೆ. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾದರೂ, ಸಿದ್ದರಾಮಯ್ಯ ಮತ್ತು ಅವರ ಬಣ ಕಾಂಗ್ರೆಸ್‌ನಲ್ಲಿ ಇನ್ನೂ ಬಲಿಷ್ಠವಾಗಿದೆ. ಮೂವರು ಕಾರ್ಯಾಧ್ಯಕ್ಷರು ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಪ್ಪಿಗೆಯಿದ್ದರೆ ಮಾತ್ರ ದೇವೇಗೌಡ ರನ್ನು ರಾಜ್ಯಸಭೆಗೆ ಕಳುಹಿಸುವ ಡಿಕೆಶಿ ತಂತ್ರ ಫಲಪ್ರದ ವಾಗಬಲ್ಲುದು.
ಆದರೆ, ದೇವೇಗೌಡರ ಬೆಳವಣಿಗೆಗೆ ಸಿದ್ದು ಬಣ ನರವಾಗುವುದೇ ಮತ್ತು ಶಿವಕುಮಾರ್ ಅವರೇ ನೇರವಾಗಿ “ನಿರ್ಧಾರ’ಕ್ಕೆ ಬರಲು ಸಹಕರಿಸು ತ್ತದೆಯೇ ಎಂಬ ಪ್ರಶ್ನೆಯೂ ಮೂಡಿದೆ. ಈ ಮಧ್ಯೆ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಿ ದರೆ ಕಾಂಗ್ರೆಸ್‌ಗೆ ಒಕ್ಕಲಿಗ ಮತಬ್ಯಾಂಕ್ ಸೆಳೆಯಲು ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರವೂ ಇದೆ. ಜತೆಗೆ, ತಾನು ಕೆಪಿಸಿಸಿ ಅಧ್ಯಕ್ಷರಾಗಿರುವ ಸಂದರ್ಭ ದೇವೇಗೌಡರು ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯ ಸಭೆಗೆ ಹೋದರೆ, ಖರ್ಗೆ ಅವರಿಗೂ ಅವಕಾಶ ಕಲ್ಪಿಸಿ ದರೆ ಎರಡೂ ಸಮುದಾಯಗಳಿಗೆ ಉತ್ತಮ ಸಂದೇಶ ರವಾನೆಯಾಗುತ್ತದೆ ಎನ್ನಲಾಗಿದೆ.
ದೇವೇಗೌಡರಿಗೆ ಕಾಂಗ್ರೆಸ್ ಬೆಂಬಲ ಸಂಬಂಧ ಎಐಸಿಸಿ ನಾಯಕರ ಜತೆ ಮಾತುಕತೆ ನಡೆಸಿ ಒಪ್ಪಿಸುವ ಹೊಣೆಗಾರಿಕೆಯನ್ನೂ ವಹಿಸಿಕೊಳ್ಳಲು ಸಿದ್ಧ. ಗೌಡರನ್ನು ನೀವು ಒಪ್ಪಿಸಿ ಎಂದು ಜೆಡಿಎಸ್ ನಾಯ ಕರಿಗೂ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರ ಮೊಮ್ಮಗ ನಿಗೆ ಬಿಟ್ಟುಕೊಟ್ಟು ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋಲನುಭವಿಸಿರುವ ಗೌಡರನ್ನು ರಾಜ್ಯಸಭೆ ಮೂಲಕ ಸಂಸತ್‌ಗೆ ಕಳುಹಿಸುವ ಪ್ರಸ್ತಾಪ ಬಂದಿದೆ.
2020 ಜೂ.14 ಕ್ಕೆ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್, ಪ್ರೊ.ರಾಜೀವ್‌ಗೌಡ, ಬಿಜೆಪಿಯ ಪ್ರಭಾಕರ ಕೋರೆ, ಜೆಡಿಎಸ್‌ನ ಕುಪೇಂದ್ರರೆಡ್ಡಿ ನಿವೃತ್ತಿಯಾಗಲಿದ್ದಾರೆ. ವಿಧಾನಸಭೆ ಬಲಾಬಲದ ಪ್ರಕಾರ ಪ್ರತಿ ಸದಸ್ಯರಿಗೆ 45 ರಿಂದ 46 ಮತಗಳ ಅಗತ್ಯ ಇರುತ್ತದೆ. 68 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ ಒಬ್ಬರನ್ನು ಗೆಲ್ಲಿಸಿಕೊಳ್ಳಲು ಸಾಧ್ಯ. ಉಳಿದ 20 ಕ್ಕೂ ಹೆಚ್ಚು ಮತಗಳು ಹೆಚ್ಚುವರಿ ಯಾಗಿರುತ್ತದೆ. ಆ ಮತಗಳು ಜೆಡಿಎಸ್‌ಗೆ ದೊರೆತರೆ ಗೆಲುವು ಸುಲಭ. ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದು, 118 ಸಂಖ್ಯಾಬಲ ಹೊಂದಿರುವ ಬಿಜೆಪಿ 2 ಸ್ಥಾನ ಅವಿರೋಧವಾಗಿ ಗೆಲ್ಲಬಹುದು.
ಜೆಡಿಎಸ್‌ನಿಂದ ಹಾಲಿ ರಾಜ್ಯಸಭೆ ಸದಸ್ಯರಾಗಿರುವ ಕುಪೇಂದ್ರ ರೆಡ್ಡಿ ಅವರನ್ನು ವಿಧಾನಪರಿಷತ್ ಗೆ ಕಳುಹಿಸುವ ಸಾಧ್ಯತೆಯಿದೆ. ಜೂನ್ 30 ಕ್ಕೆ ಜೆಡಿಎಸ್‌ನ ಒಬ್ಬರು ಸೇರಿ ಮೇಲ್ಮನೆಯ 6 ಸದಸ್ಯರು ನಿವೃತ್ತಿಯಾ ಗಲಿದ್ದು ಅದಕ್ಕೂ ಚುನಾವಣೆ ನಡೆಯಬೇಕಿದೆ. ವಿಧಾನಸಭೆ ಸಂಖ್ಯಾಬಲ ಪ್ರಕಾರ ವಿಧಾನಪರಿಷತ್ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿ ಗೆಲುವಿಗೆ 32 ಮತ ಅಗತ್ಯ ಬೀಳಲಿದೆ. ಕಾಂಗ್ರೆಸ್ ಸಂಖ್ಯಾಬಲದಲ್ಲಿ 2, ಜೆಡಿಎಸ್ ಸಂಖ್ಯಾಬಲದಲ್ಲಿ ಒಂದು ಸ್ಥಾನ ಗೆಲ್ಲಬಹುದು ಎಂದು ಹೇಳಲಾಗಿದೆ.
* ಎಸ್.ಲಕ್ಷ್ಮಿನಾರಾಯಣ