ಬೆಂಗಳೂರು:ಚುನಾವಣೆ ಹತ್ತಿರವಾಗುತ್ತಿರುವಂತೆ ಪಕ್ಷಾಂತರ ಪರ್ವ ಹೆಚ್ಚಾಗುತ್ತಿದ್ದು, ಅಫಜಲ್‌ಪುರ ಕ್ಷೇತ್ರದ ಶಾಸಕ ಮಾಲಿಕಯ್ಯ ಗುತ್ತೆದಾರ್ ಪಕ್ಷ ತೊರೆದ ಬೆನ್ನಲ್ಲೇ ಮಾಜಿ ಶಾಸಕ ಎಂ.ವೈ. ಪಾಟೀಲ್ ಪಕ್ಷಕ್ಕೆ ಸೆಳೆಯುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಸಮ್ಮುಖದಲ್ಲಿ ಸೋಮವಾರ ಮಾಜಿ ಶಾಸಕ ಎಂ.ವೈ ಪಾಟೀಲ್‌ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಮಾಲೀಕಯ್ಯ ಗುತ್ತೇದಾರ್ ವಿರುದ್ಧ ಅಫjಲ್‌ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಇವರಿಗೆ ಟಿಕೆಟ್ ನೀಡುವ ಭರವಸೆ ದೊರೆತಿದೆ ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ವೈ ಪಾಟೀಲ್, ಮೂವತ್ತು ವರ್ಷಗಳಿಂದ ಮಾಲಿಕಯ್ಯ ಗುತ್ತೆದಾರ್ ಅಕ್ರಮಗಳ ವಿರುದ್ಧ ಹೋರಾಟ ಮಾಡುತ್ತ ಬಂದಿದ್ದೇನೆ. ಈಗ ಅವರು ಬಿಜೆಪಿ ಸೇರಿದ್ದರಿಂದ ಅನಿವಾರ್ಯವಾಗಿ ನಾನು ಕಾಂಗ್ರೆಸ್ ಸೇರ್ಪಡೆಯಾಗಬೇಕಾಯಿತು.
ಕಾಂಗ್ರೆಸ್ ನನ್ನ ತವರು ಮನೆ, ಮೊದಲು ಮಾಲಿಕಯ್ಯ ಗುತ್ತೆದಾರ್‌ನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದರಿಂದ ಕಾಂಗ್ರೆಸ್ ತೊರೆದಿದ್ದೆ, ಈಗ ಮರಳಿ ಗೂಡಿಗೆ ಬಂದಿದ್ದೇನೆ. ಬಿಜೆಪಿಯಲ್ಲಿ ಅಲ್ಪ ಸಂಖ್ಯಾತರು ಮತ್ತು ದಲಿತರನ್ನು ದೂರ ಇಟ್ಟಿದ್ದರಿಂದ ನಮ್ಮವರನ್ನು ಕಳೆದುಕೊಂಡಿದ್ದೆ ಎಂಬ ಭಾವ ಮೂಡುತ್ತಿತ್ತು. ಈಗ ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಎಂ.ವೈ. ಪಾಟೀಲರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಮಾಲಿಕಯ್ಯ ಗುತ್ತೇದಾರ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಮತ್ತು ನಾನು ಸಾಕಷ್ಟು ಪ್ರಯತ್ನ ನಡೆಸಿದೆವು. ಆದರೆ, ಅವರು ಪಕ್ಷ ತೊರೆಯುವ ಮೊದಲೇ ಅನಗತ್ಯ ಕಾರಣ ನೀಡಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಿಗಿರುವುದರಿಂದ ಅವರನ್ನು ಉಚ್ಚಾಟನೆ ಮಾಡಲಾಯಿತು. ಪಕ್ಷ ತೊರೆಯಲು ಅವರಿಗೆ ಸರಿಯಾದ ಕಾರಣ ಇರಲಿಲ್ಲ ಎಂದರು.
ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಇದ್ದು, ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆಯ ಸಂದರ್ಭದಲ್ಲಿ ಅಲ್ಲಿನ ಜನತೆ ಉತ್ತಮ ಸ್ಪಂದನೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಯಾವುದೇ ಷರತ್ತು ವಿಧಿಸದೇ ಎಂ.ವೈ ಪಾಟೀಲ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ನಾಯಕರು ಅವರಿಗೆ ಟಿಕೆಟ್ ನೀಡುವ ಕುರಿತು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದರಂತೆ ನಡೆದುಕೊಳ್ಳಲಾಗುವುದು ಎಂದು ಹೇಳಿದರು.