ಹುಬ್ಬಳ್ಳಿ:ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷ ನಿರೀಕ್ಷಿತ ಸಾಧನೆ ತೋರದಿರುವುದರಿಂದ ನೈತಿಕ ಹೊಣೆಹೊತ್ತು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಸುಮಾರು 9-10 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಹೊಂದಿತ್ತು. ಆದರೆ, ಒಂದು ಸ್ಥಾನದಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಪಕ್ಷ ಸಮರ್ಪಕ ಸಾಧನೆ ತೋರುವಲ್ಲಿ ವಿಫಲವಾಗಿರುವುದರಿಂದ ಅದರ ನೈತಿಕ ಹೊಣೆ ಹೊತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಪತ್ರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರಿಗೆ ಕಳುಹಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರಿಗೂ ಪ್ರತಿಗಳನ್ನು ಕಳುಹಿಸಿದ್ದೇನೆ ಎಂದರು.
ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಶಕ್ತಿ ಮೀರಿ ಶ್ರಮಿಸಿದ್ದಾರೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಫಲಿತಾಂಶ ಮಾತ್ರ ತೀವ್ರ ನಿರಾಸೆ ಮೂಡಿಸಿದೆ. ಸುಮಾರು 7-8 ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು. ‘
ಪಕ್ಷ ಸಂಘಟನೆಗೆ ಕೆಲವೊಂದು ಸಮಸ್ಯೆಗಳು, ಸೌಲಭ್ಯಗಳ ಕೊರತೆ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೂ ಇರುವ ವ್ಯವಸ್ಥೆಯಲ್ಲಿಯೇ ಪಾಲಿಕೆ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದೆವು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಗಮಿಸಿ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿದ್ದರು. ಇಷ್ಟಾದರೂಪಕ್ಷನಿರೀಕ್ಷಿತ ಸ್ಥಾನಗಳಿಸದಿರುವುದು ಅತ್ಯಂತ ನೋವು ತಂದಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆಯಂತೂ ನೀಡಿದ್ದೇನೆ. ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಣಯಕ್ಕೆ ಬದ್ಧನಾಗಿರುವುದಾಗಿ ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಬಿಜೆಪಿಗೆ ಬಹುಮತ ಬಾರದಿದ್ದರೂ, ನಮ್ಮ ಪಕ್ಷ ಒಂದು ಸ್ಥಾನ ಮಾತ್ರ ಪಡೆದಿದೆ. ನಮ್ಮ ಪಾತ್ರ ಏನೂ ಬಾರದು. ಕಾಂಗ್ರೆಸ್ ಏನಾದರು ಪಕ್ಷೇತರರು, ಎಐಎಂಐಎಂ ಜತೆಗೂಡಿ ಅಧಿಕಾರ ಹಿಡಿಯಲು ಬಂದರೆ ಆಗ ಯೋಚಿಸುತ್ತೇವೆ. ಕಲಬುರಗಿ ಪಾಲಿಕೆಯಲ್ಲಿ ಅತಂತ್ರ ಇದ್ದು, ಅಲ್ಲಿ ನಮ್ಮ ಪಕ್ಷ ನಿರ್ಣಾಯಕ ಸ್ಥಾನ ಪಡೆದಿದೆ. ನನ್ನ ವೈಯಕ್ತಿ ಅಭಿಪ್ರಾಯ ಪ್ರಕಾರ ಜಾತ್ಯತೀತ ಮನೋಭಾವದ ಪಕ್ಷಕ್ಕೆ ಬೆಂಬಲ ನೀಡಬೇಕು. ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ಎಂದರು.
ಕಳಸಾ-ಬಂಡೂರಿ, ಮಹದಾಯಿ ವಿಚಾರದಲ್ಲಿ ಬಿಜೆಪಿಯವರು ನುಡಿದಂತೆ ನಡೆದುಕೊಂಡಿಲ್ಲ. ಅಧಿಕಾರಕ್ಕೆ ಬಂದರೆ ಯೋಜನೆ ಅನುಷ್ಠಾನ ಮಾಡುವುದಾಗಿ ಘೋಷಿಸಿದ್ದನ್ನು ಮರೆತಂತಿದ್ದು, ಮತ್ತೂಂದು ಸುತ್ತಿನ ಹೋರಾಟ ಆರಂಭಿಸಲಾಗುವುದು ಎಂದು ಹೇಳಿದರು. ಜೆಡಿಎಸ್ ಮುಖಂಡರಾದ ಗುರುರಾಜ ಹುಣಸಿಮರದ, ಬಿ.ಬಿ.ಗಂಗಾಧರಮಠ, ಸಾದಿಕ್ ಹಕೀಂ ಇನ್ನಿತರರು ಇದ್ದರು.