ಹಾವೇರಿ : ಮಾಜಿ ಶಾಸಕ, ಅಪ್ಪಟ ಗಾಂಧಿವಾದಿ ಡಾ.ಚಿತ್ತರಂಜನ್ ಕಲಕೋಟಿ (90) ಅವರು ರವಿವಾರ ಸಂಜೆ ಬೆಳಗಾವಿಯಲ್ಲಿ ನಿಧನರಾಗಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಬೆಳಗಾವಿಯಿಂದ ತರಲಾಗುತ್ತಿದ್ದು ನಾಳೆ ಮಧ್ಯಾಹ್ನ 2 ಗಂಟೆಗೆ ಹಾವೇರಿ ತಾಲೂಕಿನ ಕೊರಡೂರ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಮುಖ್ಯಮಂತ್ರಿಗಳ ಸಂತಾಪ:
ಹಾವೇರಿ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕರಾದ ಡಾ.ಚಿತ್ತರಂಜನ್ ಕಲಕೋಟಿ ಅವರು ಇಂದು ನಿಧನರಾದ ವಿಷಯ ತಿಳಿದು ನನಗೆ ಅತ್ಯಂತ ದುಃಖವಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ವಿಷಾಧ ವ್ಯಕ್ತ ಪಡಿಸಿದ್ದಾರೆ.
1983-85 ರ ಅವಧಿಯಲ್ಲಿ ಹಾವೇರಿ ವಿಧಾನಸಭಾ ಮತಕ್ಷೇತ್ರ ವನ್ನು ಜನತಾದಳ ಮತ್ತು ಜನತಾ ಪಕ್ಷದಿಂದ ಪ್ರತಿನಿಧಿಸುತ್ತಿದ್ದ ಡಾ.ಚಿತ್ತರಂಜನ್ ಕಲಕೋಟಿ ಅವರು ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಮ್ಮ ತಂದೆಯವರಾದ ಎಸ್.ಆರ್. ಬೊಮ್ಮಾಯಿ ಅವರೊಡನೆ ನಿಕಟವಾದ ಸಂಪರ್ಕವನ್ನು ಇವರು ಹೊಂದಿದವರಾಗಿದ್ದು, ಜನತಾದಳ ಮತ್ತು ಜನತಾಪಕ್ಷವನ್ನು ಕಟ್ಟುವಲ್ಲಿ ಶ್ರಮಿಸಿದವರಾಗಿದ್ದರು. ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಹಲವಾರು ಜನಪರ ಕೆಲಸಗಳನ್ನು ಅವರು ಮಾಡಿದ್ದಾರೆ. ಅಷ್ಟೇ ಅಲ್ಲದೆ ವೈದ್ಯಕೀಯರಂಗದಲ್ಲಿ ಸಹ ಬಡವರ ಕಣ್ಣೀರನ್ನು ಒರೆಸುವಂಹ ಕೆಲಸವನ್ನು ಅವರು ಮಾಡಿದ್ದರು.
ವೈದ್ಯರಾಗಿ ಹಾಗೂ ಸಮಾಜ ಸೇವಕರಾಗಿ ಸೇವೆ ಸಲ್ಲಿಸಿರುವ ಇವರ ನಿಧನದಿಂದ ಸಮಾಜಕ್ಕೆ ಹಾಗೂ ನಮ್ಮ ಹಾವೇರಿ ಜಿಲ್ಲೆಗೆ ನಷ್ಟವಾಗಿದೆ.
ಇಂತಹ ಈ ದುಃಖದ ಸಂದರ್ಭದಲ್ಲಿ ಅವರ ಆತ್ಮಕ್ಕೆ ಆ ದೇವರು ಚಿರಶಾಂತಿಯನ್ನು ನೀಡಲಿ, ಹಾಗೂ ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.