ಮುಂಬಯಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಹಾರಾಷ್ಟ್ರದ ಮಾಜಿ ಸಚಿವ ಏಕ್ ನಾಥ್ ಗಾಯಕ್ವಾಡ್ (81ವರ್ಷ) ಕೋವಿಡ್ ಸೋಂಕಿನಿಂದ ಸಾವನ್ನಪ್ಪಿರುವ ಘಟನೆ ಬುಧವಾರ(ಏಪ್ರಿಲ್ 28) ನಡೆದಿದೆ.
ಇದನ್ನೂ ಓದಿ:100 ಆಕ್ಸಿಜನ್ ಸಾಂದ್ರಕ ದಾನ ಮಾಡಿದ ಅಕ್ಷಯ್-ಟ್ವಿಂಕಲ್ ಖನ್ನಾ ದಂಪತಿ
ಮಹಾರಾಷ್ಟ್ರ ಕಾಂಗ್ರೆಸ್ ಟ್ವೀಟರ್ ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಏಕ್ ನಾಥ್ ಜೀ ಗಾಯಕ್ವಾಡ್ ಅವರ ನಿಧನದ ಸುದ್ದಿ ಆಘಾತ ತಂದಿದೆ. ಪಕ್ಷದ ಹಿರಿಯ ವ್ಯಕ್ತಿಯಾಗಿದ್ದ ಅವರು ನಿಷ್ಠಾವಂತ ನಾಯಕರಾಗಿದ್ದರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ತಿಳಿಸಿದೆ.
ಮಾಜಿ ಸಂಸದರಾದ ಏಕ್ ನಾಥ್ ಗಾಯಕ್ವಾಡ್ ಅವರ ಪುತ್ರಿ ವರ್ಷಾ ಗಾಯಕ್ವಾಡ್ ಅವರು ಮಹಾರಾಷ್ಟ್ರ ಶಿಕ್ಷಣ ಸಚಿವೆಯಾಗಿದ್ದಾರೆ. ಕೋವಿಡ್ 19 ಸೋಂಕು ದೃಢಪಟ್ಟ ನಂತರ ಅವರು ಮುಂಬೈ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 10ಗಂಟೆಗೆ ನಿಧನರಾಗಿರುವುದಾಗಿ ಮೂಲಗಳು ಹೇಳಿವೆ.
ಏಕ್ ನಾಥ್ ಗಾಯಕ್ವಾಡ್ ಅವರು ಮುಂಬೈ ಕಾಂಗ್ರೆಸ್ ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಕಾಂಗ್ರೆಸ್ ಪಕ್ಷ ಹಿರಿಯ ಸಲಹೆಗಾರರನ್ನು ಕಳೆದುಕೊಂಡಂತಾಗಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಟ್ವೀಟ್ ಮಾಡಿದ್ದಾರೆ.