ಮುಂಬೈ: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶ್ ಮುಖ್ ಅವರು ವರ್ಷದ ನಂತರ ಇಂದು ಬಿಡುಗಡೆಯಾಗಿದ್ದಾರೆ. ಸೆರೆಮನೆಯಿಂದ ಹೊರ ಬಂದ ಮಾಜಿ ಸಚಿವರನ್ನು ಬೆಂಬಲಿಗರು ಅದ್ಧೂರಿಯಾಗಿ ಸ್ವಾಗತಿಸಿದರು.
ಸಿಬಿಐ ದಾಖಲಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ 72 ವರ್ಷದ ದೇಶ್ ಮುಖ್ ಒಂದು ವರ್ಷಕ್ಕೂ ಹೆಚ್ಚು ಕಾಲ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದಾರೆ.
ಡಿಸೆಂಬರ್ 12ರಂದು ಅನಿಲ್ ದೇಶ್ ಮುಖ್ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಈ ವಿಚಾರವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ಸಿಬಿಐ ಕಾಲಾವಕಾಶ ಕೇಳಿದ ಕಾರಣದಿಂದ ಜಾಮೀನು ಆದೇಶಕ್ಕೆ ತಡೆ ನೀಡಿದ್ದರು.
ಸಿಬಿಐ ಸುಪ್ರೀಂ ಮೊರೆ ಹೋಗಿದ್ದು, ಆದರೆ ಚಳಿಗಾಲದ ರಜೆಯ ನಂತರ ಜನವರಿಯಲ್ಲಿ ನ್ಯಾಯಾಲಯವು ಮತ್ತೆ ತೆರೆದ ನಂತರವೇ ಅದರ ಮೇಲ್ಮನವಿಯನ್ನು ಆಲಿಸಬಹುದು.
ಇದನ್ನೂ ಓದಿ:ಸಹಾಯಕ ಬ್ಯಾಟಿಂಗ್ ಕೋಚ್ ಸ್ಥಾನಕ್ಕೆ ಕನ್ನಡಿಗನನ್ನು ನೇಮಿಸಿದ ಮುಂಬೈ ಇಂಡಿಯನ್ಸ್
ಈ ಹಿಂದೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಅವರಿಗೆ ನೀಡಿದ್ದ ಜಾಮೀನಿನ ವಿರುದ್ಧ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
ಅನಿಲ್ ದೇಶ್ ಮುಖ್ ಅಕ್ಟೋಬರ್ ನಲ್ಲಿ ಜಾಮೀನು ಪಡೆದಿದ್ದರು. ಆದರೆ ಸಿಬಿಐ ದಾಖಲಿಸಿದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಜೈಲಿನಲ್ಲೇ ಇರಬೇಕಾಗಿತ್ತು.