ಮುಂಬೈ: 2024ರ ಫೋರ್ಬ್ಸ್ ಬಿಲಿಯನೇರ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಭಾರತದ ಅತೀ ಹಿರಿಯ ಬಿಲಿಯಬೇರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ, ಉದ್ಯಮಿ ಲಕ್ಷ್ಮಣದಾಸ್ ಮಿತ್ತಲ್ (93ವರ್ಷ) ಶುಕ್ರವಾರ (ಏಪ್ರಿಲ್ 05) ವಿಧಿವಶರಾಗಿದ್ದಾರೆ.
ಇದನ್ನೂ ಓದಿ:UP Madarsa Act: ಯುಪಿ ಮದರಸಾ ಕಾಯ್ದೆ ರದ್ದುಗೊಳಿಸಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
ಈ ಹಿಂದೆ ಮಹೀಂದ್ರಾ & ಮಹೀಂದ್ರಾ ಗ್ರೂಪ್ ಮಾಜಿ ಅಧ್ಯಕ್ಷರಾಗಿದ್ದ ಕೇಶುಬ್ ಮಹೀಂದ್ರ ಅವರು 2023ರ ಏಪ್ರಿಲ್ 12ರಂದು ತಮ್ಮ 99ನೇ ವಯಸ್ಸಿನಲ್ಲಿ ಕೊನೆಯುಸಿರೆಳೆಯುವವರೆಗೂ ದೇಶದ ಅತೀ ಹಿರಿಯ ಬಿಲಿಯನೇರ್ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಲಕ್ಷ್ಮಣದಾಸ್ ಮಿತ್ತಲ್ ಅವರು 1931ರಲ್ಲಿ ಪಂಜಾಬ್ ನ ಹೋಶಿಯಾರ್ ಪುರ್ ನಲ್ಲಿ ಜನಿಸಿದ್ದರು. ಆರಂಭದಲ್ಲಿ ಎಲ್ ಐಸಿ ಏಜೆಂಟ್ ಆಗಿ ಮಿತ್ತಲ್ ಕಾರ್ಯನಿರ್ವಹಿಸುತ್ತಿದ್ದರು. ಉರ್ದು ಭಾಷೆಯಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದ ಮಿತ್ತಲ್ ಅವರು, ಪಂಜಾಬ್ ಯೂನಿರ್ವಸಿಟಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದರು. ನಂತರ ಮಿತ್ತಲ್ ಅವರು ಮಾರುತಿ ಉದ್ಯೋಗ್ ಡೀಲರ್ ಶಿಪ್ ಗಾಗಿ ಅರ್ಜಿ ಸಲ್ಲಿಸಿದ್ದರು, ಆದರೆ ಅದು ತಿರಸ್ಕರಿಸಲ್ಪಟ್ಟಿತ್ತು ಎಂದು ವರದಿ ತಿಳಿಸಿದೆ.
ತದನಂತರ ಉದ್ಯಮದಲ್ಲಿ ತೊಡಗಿಕೊಂಡ ಲಕ್ಷ್ಮಣದಾಸ್ ಮಿತ್ತಲ್ ಅವರು, ಇಂಟರ್ ನ್ಯಾಶನಲ್ ಟ್ರ್ಯಾಕ್ಟರ್ಸ್ ಲಿಮಿಟೆಡ್(ಐಟಿಎಲ್) ಸ್ಥಾಪಿಸಿ, 1990ರಲ್ಲಿ ಸೋನಾಲಿಕಾ ಟ್ರ್ಯಾಕ್ಟರ್ ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದರು. ಇಂದು ಸೋನಾಲಿಕಾ ಗ್ರೂಪ್ ಐದು ದೇಶಗಳಲ್ಲಿ ಪ್ಲ್ಯಾಂಟ್ ಅನ್ನು ಹೊಂದಿದ್ದು, ಜಗತ್ತಿನ 120ಕ್ಕೂ ಅಧಿಕ ದೇಶಗಳಲ್ಲಿ ಮಾರುಕಟ್ಟೆಯನ್ನು ಹೊಂದಿದೆ.
ಮಿತ್ತಲ್ ಅವರು ಕಂಪನಿಯ ವ್ಯವಹಾರದಲ್ಲಿ ಹೆಚ್ಚು ಕಾಲ ನೇರವಾಗಿ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ. ಆದರೆ ಅವರ ಕುಟುಂಬ ಸದಸ್ಯರ ಪಾತ್ರ ಪ್ರಮುಖವಾಗಿತ್ತು. ಮಿತ್ತಲ್ ಹಿರಿಯ ಪುತ್ರ ಅಮೃತ್ ಸಾಗರ್ ಕಂಪನಿಯ ಉಪಾಧ್ಯಕ್ಷರಾಗಿದ್ದು, ಕಿರಿಯ ಮಗ ದೀಪಕ್ ಆಡಳಿತ ನಿರ್ದೇಶಕರಾಗಿದ್ದಾರೆ. ಮೊಮ್ಮಕ್ಕಳಾದ ಸುಶಾಂತ್ ಮತ್ತು ರಮಣ್ ಕೂಡಾ ಕಂಪನಿಯಲ್ಲಿ ಸಹಭಾಗಿತ್ವ ಹೊಂದಿರುವುದಾಗಿ ವರದಿ ತಿಳಿಸಿದೆ.