ಬೆಂಗಳೂರು : ಮಾಲೂರು ಕ್ಷೇತ್ರದ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಖಚಿತವಾಗಿದೆ ಎನ್ನಲಾಗಿದೆ.
ಮಂಜುನಾಥ್ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೆ ಮಾಲೂರು ವಿಧಾನಸಭಾ ಕ್ಷೇತ್ರದ ಹಲವು ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಪಕ್ಷದ ನಾಯಕರನ್ನು ಒತ್ತಾಯಿಸಿದ್ದಾರೆ. ಹಲಸವು ಸ್ಥಳೀಯ ನಾಯಕರು ಬೆಂಗಳೂರಿಗೂ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಶುಕ್ರವಾರ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದು,ಮಂಜುನಾಥ್ ಬಿಜೆಪಿ ಸೇರ್ಪಡೆಗೆ ವಿರೋಧ ಇಲ್ಲ, ತೀರ್ಮಾನ ಆಗಿದೆ, ನಾಳೆ ಸೇರ್ಪಡೆ ಆಗುತ್ತಾರೆ. ಮಾಜಿ ಶಾಸಕರು ಯುವ ನಾಯಕರು ಯಾರಿದ್ದಾರೋ ಅವರೆಲ್ಲಾ ಬಿಜೆಪಿ ಸೇರ್ಪಡೆ ಆಗುತ್ತಾರೆ. ಹೈಕಮಾಂಡ್ ಯಾರಿಗೆಲ್ಲಾ ಒಪ್ಪಿಗೆ ಕೊಟ್ಟಿದೆಯೋ ಅವರೆಲ್ಲಾ ಸೇರುತ್ತಾರೆ. ವರ್ತೂರು ಪ್ರಕಾಶ್ ಕೂಡಾ ಸೇರ್ಪಡೆ ಆಗುತ್ತಾರೆ ಎಂದರು.
ಇದೆ ವೇಳೆ ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ಕಾದು ನೋಡಿ ಎಂದರು.
ಮಾಲೂರು ಮಂಜುನಾಥ್ 2013 ರಲ್ಲಿ ಮಾಲೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಆದರೆ 2018 ರಲ್ಲಿ ಕಾಂಗ್ರೆಸ್ ನ ಕೆ.ವೈ. ನಂಜೇಗೌಡ ಅವರ ವಿರುದ್ಧ ಸೋಲು ಅನುಭವಿಸಿದ್ದರು. ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿ ಅವರು ಬಿಜೆಪಿಯಿಂದ ಎರಡು ಬಾರಿ ಗೆಲುವು ಸಾಧಿಸಿ ತನ್ನದೆ ಆದ ಬಲ ಹೊಂದಿತ್ತು ಆದರೆ ಕಳೆದ ಚುನಾವಣೆಯಲ್ಲಿ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ ಪಟ್ಟಿದ್ದರು.
ಹಳೆ ಮೈಸೂರು ಭಾಗದಲ್ಲಿ ಗೆಲ್ಲುವ ಪ್ರಬಲ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿರುವ ಬಿಜೆಪಿ ಪ್ರಮುಖ ನಾಯಕರನ್ನು ಪಕ್ಷಕ್ಕೆ ಸೆಳೆಯುವ ಕಸರತ್ತು ಆರಂಭಿಸಿದೆ.