Advertisement

ಫುಟ್ ಪಾತ್ ನಲ್ಲಿ ಮಾಜಿ ಹಾಕಿ ಆಟಗಾರನ ಬದುಕು..ನೆರವಿಗೆ ನಿಂತ ಬಿಗ್ ಬಿ, ಸಚಿವ ರಿಜಿಜು!

09:54 AM Dec 31, 2019 | Nagendra Trasi |

ನವದೆಹಲಿ: ಭಾರತೀಯ ಹಾಕಿ ತಂಡದ ಆಟಗಾರನಾಗಿದ್ದ ಈ ವ್ಯಕ್ತಿ ಮುಂದೊಂದು ದಿನ ತನಗೆ ಇಂತಹ ಪರಿಸ್ಥಿತಿ ಬರಲಿದೆ ಎಂಬುದನ್ನು ನಿರೀಕ್ಷಿಸಿರಲಿಲ್ಲವಾಗಿತ್ತು. ಈ ಆಟಗಾರ ದಿಲ್ಲಿಯ ರಸ್ತೆ ಬದಿಯಲ್ಲಿ ಮೈಕೊರೆಯುವ ಚಳಿಯಲ್ಲಿ ನಡುಗುತ್ತಾ ಕಾಲಕಳೆಯುತ್ತಿದ್ದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ನೆರವು ನೀಡಲು ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ದಿಲ್ಲಿಯ ಬೀದಿ ಬದಿಯಲ್ಲಿ ಅನಾಥರಾಗಿ ಕಾಲ ಕಳೆಯುತ್ತಿರುವ ಹಾಕಿ ಆಟಗಾರನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ ಪ್ರಕಾರ, ಹಾಕಿ ಆಟಗಾರನ ಹೆಸರು ಅಮರ್ ಜಿತ್ ಸಿಂಗ್. ಈ ವ್ಯಕ್ತಿ ಭಾರತೀಯ ಕಿರಿಯರ ಹಾಕಿ ತಂಡವನ್ನು ಪ್ರತಿನಿಧಿಸಿದ್ದರು. ಹಲವು ವರ್ಷಗಳ ಕಾಲ ಹಾಕಿ ಆಟಕ್ಕಾಗಿ ಲಂಡನ್ ಮತ್ತು ಜರ್ಮನಿಯಲ್ಲಿ ಕಳೆದಿದ್ದರು. ಆದರೆ ಈಗ ಮಾಜಿ ಹಾಕಿ ಆಟಗಾರ ದಿಲ್ಲಿಯ ಪಹಾರ್ ಗಂಜ್ ಪ್ರದೇಶದಲ್ಲಿ ಅನಾಥರಂತೆ ಇದ್ದಿರುವುದಾಗಿ ತಿಳಿಸಿದೆ.

ಮಾಜಿ ಹಾಕಿ ಆಟಗಾರ ಸಿಂಗ್ ಬಗ್ಗೆ ಹೆಚ್ಚಿನ ವಿವರಣೆ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಮನಿಸಿದ ಸಚಿವ ರಿಜಿಜು ತಾನು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ನಾನು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಹೇಳುತ್ತಾ ಬಂದಿದ್ದೇನೆ, ಯಾರು ದೇಶಕ್ಕಾಗಿ ಆಟವಾಡಿದ್ದಾರೋ ಅಂತಹ ಆಟಗಾರರು ಈಗ ದುರ್ಬಲರಾಗಿದ್ದರೆ, ಕಷ್ಟದಲ್ಲಿದ್ದರೆ ಅವರಿಗೆ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದೆ ಎಂದು ರಿಜಿಜು ಟ್ವೀಟ್ ಮಾಡಿದ್ದರು. ನಂತರ ಬಾಲಿವುಡ್ ಬಿಗ್ ಬಿ ಕೂಡಾ ಟ್ವೀಟ್ ಮೂಲಕ ಮಾಜಿ ಹಾಕಿ ಆಟಗಾರನಿಗೆ ನೆರವು ನೀಡಲು ಸಿದ್ಧ ಎಂದು ತಿಳಿಸಿದ್ದಾರೆ. ಈ ವ್ಯಕ್ತಿ ಎಲ್ಲಿದ್ದಾರೆ..ಹೇಗೆ ಸಹಾಯ ಮಾಡಬಹುದು ಎಂಬುದಾಗಿ ತಿಳಿಸಿ ಎಂದು ಅಮಿತಾಬ್ ಟ್ವೀಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next