Advertisement

ಸಾಕಷ್ಟು ಅಧಿಕಾರಿಗಳಲ್ಲಿ ಆರ್‌ಎಸ್‌ಎಸ್ ಮೈಂಡಸೆಟ್ ಇದೆ : ಶೆಟ್ಟರ್

04:22 PM Oct 13, 2021 | Team Udayavani |

ಕೊಪ್ಪಳ: ದೇಶದಲ್ಲಿ ಸಾಕಷ್ಟು ಅಧಿಕಾರಿಗಳಲ್ಲಿ ಆರ್‌ಎಸ್‌ಎಸ್ ಮೈಂಡಸೆಟ್ ಇದೆ. ಇದಲ್ಲದೇ ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ ಸೇರಿದಂತೆ ಹಲವು ಸ್ಥಾನಗಳಲ್ಲಿರುವವರು ಆರ್‌ಎಸ್‌ಎಸ್‌ನಿಂದ ಬಂದವರು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಆರ್‌ಎಸ್‌ಎಸ್‌ನಿಂದ ಬಂದವರೂ ಅಧಿಕಾರಿಗಳು ಇದ್ದಾರೆ. ಆರ್‌ಎಸ್‌ಎಸ್ ಎನ್ನುವುದು ರಾಷ್ಟ್ರ ಪ್ರೇಮದ ಸಂಘಟನೆ. ಹಿಂದೂ ಸಂಸ್ಕೃತಿ ಉಳಿವಿಗಾಗಿ ಸ್ಥಾಪನೆಯಾದ ಸಂಘಟನೆ. ಈಗ ಸ್ಥಾಪನೆಯಾಗಿದ್ದಲ್ಲ. ಆರ್‌ಎಸ್‌ಎಸ್ ಎನ್ನುವುದು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡಲ್ಲ. ರಾಷ್ಟ್ರಪ್ರೇಮವನ್ನು ಬೆಳೆಸುವ ಸಂಘಟನೆಯಾಗಿದೆ. ನಾವೆಲ್ಲರೂ ಆರ್‌ಎಸ್‌ಎಸ್ ಮೂಲದಿಂದಲೇ ಬಂದಿದ್ದೇವೆ. ದೇಶದಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿದ್ದವರೂ ಆರ್‌ಎಸ್‌ಎಸ್‌ನಿಂದ ಮೂಲದಿಂದ ಬಂದವರು.

ದೇಶದಲ್ಲಿ ಆರ್‌ಎಸ್‌ಎಸ್ ಸಂಘಟನೆ ಇಲ್ಲದೇ ಹೋಗಿದ್ದರೆ ಇಷ್ಟೊತ್ತಿಗೆ ಭಾರತ ನಾಲ್ಕೈದು ಪಾಕಿಸ್ತಾನವಾಗಿ ಹೋಗುತ್ತಿತ್ತು. ಆರ್‌ಎಸ್‌ಎಸ್ ಸಂಘಟನೆ ಇದ್ದುದ್ದರಿಂದಲೇ ಉತ್ತಮವಾಗಿ ಮುನ್ನಡೆದಿದೆ ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡ್ತಾರೆ. ಆರ್‌ಎಸ್‌ಎಸ್ ಅನ್ನು ತಾಲಿಬಾನ್, ಅಪಘಾನಿಸ್ತಾನಕ್ಕೆ ಹೋಲಿಸ್ತಿದ್ದಾರೆ.  ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ೭ ವರ್ಷವಾಗಿದೆ. ದೇಶದಲ್ಲಿ ಶಾಂತಿಯುತವಾಗಿ ಆಡಳಿತ ನಡೆದಿದೆ. ಅಪಘಾನಿಸ್ಥಾನದಲ್ಲಿ ಏನಾಗ್ತಿದೆ ಎನ್ನುವುದನ್ನು ವಿಪಕ್ಷಗಳು ನೋಡಲಿ. ವಿಪಕ್ಷದವರೆಲ್ಲ ತಾಲಿಬಾನ್ ಅನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದರೆ ಅದನ್ನು ಒಪ್ಪಿಕೊಳ್ಳಲಿ ಎಂದರು.

ಇನ್ನು ಡಿ.ಕೆ.ಶಿವಕುಮಾರ ಅವರು ಕೋಟಿ ಕೋಟಿ ಹಣ ಮಾಡಿರುವ ಕುರಿತು ಉಗ್ರಪ್ಪ, ಸಲೀಂ ಅವರು ಮಾತನಾಡಿರುವ ಆಡಿಯೋ ವೈರಲ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್ ಅವರು, ನಾನು ಆ ವೀಡಿಯೋ ನೋಡಿಲ್ಲ. ಅದರಲ್ಲಿ ಏನು ಚರ್ಚೆಯಾಗಿದೆ ಎನ್ನುವುದು ನನಗೆ ಗೊತ್ತಿಲ್ಲ. ನೋಡದೇ ಸುಮ್ಮನೆ ಪ್ರತಿಕ್ರಿಯೆ ನೀಡುವುದು ತಪ್ಪಾಗುತ್ತದೆ. ಆ ವೀಡಿಯೋ, ಆಡಿಯೋ ಬಗ್ಗೆ ಕಾಂಗ್ರೆಸ್‌ನವರು ಏನಂತಾರೆ ಎಂದು ನೋಡಿಕೊಂಡು ಆಮೇಲೆ ಮಾತನಾಡುವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next