ನವದೆಹಲಿ: ಟಾಟಾ ಸನ್ಸ್ ಸಂಸ್ಥೆಯು ಏರ್ ಇಂಡಿಯಾಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ಇಲ್ಕರ್ ಐಸಿ ಅವರನ್ನು ನೇಮಿಸಿದೆ.
ಈ ಹಿಂದೆ ಟರ್ಕಿಷ್ ಏರ್‌ಲೈನ್‌ನ ಮುಖ್ಯಸ್ಥರಾಗಿದ್ದ ಅವರು, ಏ.1ರಂದು ಟಾಟಾದ ಅಧಿಕಾರ ಸ್ವೀಕರಿಸಲಿದ್ದಾರೆ.
ಟರ್ಕಿಯ ಇಸ್ತಾನ್‌ಬುಲ್ ಮೂಲದವರಾಗಿರುವ ಇಲ್ಕರ್ ಅವರು, ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದಲ್ಲಿ ಪದವಿ ಹಾಗೂ ಅಂತಾರಾಷ್ಟ್ರೀಯ ಸಂಬಂಧ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಅವರು ರಿಪಬ್ಲಿಕ್ ಆಫ್ ಟರ್ಕಿಯ ಹೂಡಿಕೆ ಮತ್ತು ಬೆಂಬಲ ಮತ್ತು ಉತ್ತೇಜನ ಏಜೆನ್ಸಿಯ ಅಧ್ಯಕ್ಷರಾಗಿ, ಹೂಡಿಕೆ ಉತ್ತೇಜನ ಸಂಸ್ಥೆಗಳ ವಿಶ್ವ ಒಕ್ಕೂಟಕ್ಕೆ ಉಪಾಧ್ಯಕ್ಷರಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಗೋವಾ ಚುನಾವಣೆ : ಶೇ 78.94% ಮತದಾನ, ಮಾರ್ಚ್ 10 ಕ್ಕೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಅವರನ್ನು ಟಾಟಾ ಸನ್ಸ್ ಸಂಸ್ಥೆಗೆ ಸ್ವಾಗತಿಸಿರುವ ಏರ್ ಇಂಡಿಯಾ ಮುಖ್ಯಸ್ಥ ಎನ್.ಚಂದ್ರಶೇಖರನ್, “ಇಲ್ಕರ್ ಅವರು ವಿಮಾನಯಾನ ಉದ್ಯಮದ ನಾಯಕರಾಗಿದ್ದು, ಟರ್ಕಿಷ್ ಏರ್‌ಲೈನ್‌ನ ಯಶಸ್ಸಿಗೆ ಕಾರಣರಾಗಿದ್ದಾರೆ. ಅವರು ನಮ್ಮ ಏರ್ ಇಂಡಿಯಾವನ್ನು ಮತ್ತೂಂದು ಯುಗಕ್ಕೆ ಕರೆದೊಯ್ಯಲಿದ್ದಾರೆ’ ಎಂದು ಹೇಳಿದ್ದಾರೆ.