Advertisement

ಅವಿಭಜಿತ ದ.ಕ. ಜಿಲ್ಲೆಯ 195 ಗ್ರಾ.ಪಂ. ಗಳಿಂದ ವರದಿ ಸಲ್ಲಿಕೆ

11:30 AM Jul 28, 2020 | mahesh |

ಉಡುಪಿ: ಅವಿಭಜಿತ ದ.ಕ. ಜಿಲ್ಲೆ ಗ್ರಾಮೀಣ ಭಾಗದ ಜೀವ ವೈವಿಧ್ಯಗಳ ರಕ್ಷಣೆ ಹಾಗೂ ನಿರ್ವಹಣೆಗೆ ದಿಟ್ಟ ಹೆಜ್ಜೆ ಇಟ್ಟಿದ್ದು, ಅವಳಿ ಜಿಲ್ಲೆಯ 380 ಗ್ರಾ.ಪಂ.ಗಳಲ್ಲಿ ಜೀವವೈವಿಧ್ಯ ನಿರ್ವಹಣೆ ಸಮಿತಿಗಳು ಅಸ್ತಿತ್ವಕ್ಕೆ ಬಂದಿವೆ. ಅವಳಿ ಜಿಲ್ಲೆಯ 195 ಗ್ರಾಪಂಗಳು ಸರ್ವೇ ಮುಗಿಸಿ ವರದಿಯನ್ನು ಸಲ್ಲಿಸಿವೆ.
ಗ್ರಾಮೀಣ ಭಾಗದಲ್ಲಿನ ಜನತಾ ಜೀವ ವೈವಿಧ್ಯವನ್ನು ಕಾಪಾಡಿ ಅದನ್ನು ಭವಿಷ್ಯದ ದೃಷ್ಟಿಯಿಂದ ಸಂರಕ್ಷಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ 150 ಗ್ರಾ.ಪಂ., ತಾ.ಪಂ.ಗಳು, ಜಿ.ಪಂ. ಹಾಗೂ ದ.ಕ. ಜಿಲ್ಲೆಯ 229 ಗ್ರಾ.ಪಂ., ತಾ.ಪಂ.ಗಳು. ಜಿ.ಪಂ.ನಲ್ಲಿ ಜೀವವೈವಿಧ್ಯ ನಿರ್ವಹಣೆ ಸಮಿತಿ ರಚನೆಯಾಗಿದೆ.

Advertisement

ಉಡುಪಿ ಜಿಲ್ಲೆಯ 150 ಗ್ರಾ.ಪಂ. ವ್ಯಾಪ್ತಿಯಲ್ಲಿ 35 ಗ್ರಾ.ಪಂ.ಗಳು ಹಾಗೂ ದ.ಕ. ಜಿಲ್ಲೆಯ 229 ಗ್ರಾ.ಪಂ. ವ್ಯಾಪ್ತಿಯಲ್ಲಿ 160 ಗ್ರಾ.ಪಂ. ಜನತಾ ಜೀವವೈವಿಧ್ಯ ವರದಿಯನ್ನು ಸಲ್ಲಿಸಿದೆ. ಬಾಕಿ ಉಳಿದ ಗ್ರಾಪಂಗಳು ಇನ್ನಷ್ಟೇ ವರದಿಯನ್ನು ಸಲ್ಲಿಸಬೇಕಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ವರದಿ ಸಲ್ಲಿಕೆ ಅವಧಿ ಮುಂದೆ ಹೋಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಸರ್ವೇಗೆ ಅನುದಾನ
ಪ್ರಸ್ತುತ ಸರ್ವೇ ನಡೆಸಲು ಪ್ರತಿ ಗ್ರಾ.ಪಂ.ಗೆ 30,000 ರೂ., ತಾ.ಪಂ., 80,000 ರೂ., ಜಿ.ಪಂ. 2 ಲ.ರೂ. ಸರಕಾರ ನೀಡಲಿದೆ. ಉಡುಪಿಗೆ 49.50 ಲ.ರೂ. ಹಾಗೂ ದ.ಕ. ಜಿಲ್ಲೆಯ ಗ್ರಾ.ಪಂ.ಗೆ 69 ಲ.ರೂ., ತಾ.ಪಂ.ಗೆ 4 ಲ.ರೂ., ಜಿ.ಪಂ.ಗೆ 2 ಲ.ರೂ ಸೇರಿದಂತೆ ಒಟ್ಟು 75 ಲ.ರೂ. ಸಿಗಲಿದೆ. ಪ್ರಸ್ತುತ ಜಿಲ್ಲೆಯಲ್ಲಿ ಬೆಂಗಳೂರಿನ ಸಂಸ್ಥೆಯೊಂದು ಸ್ಥಳೀಯರನ್ನೊಳಗೊಂಡ ಸಮಿತಿ ರಚಿಸಿ ವರದಿ ತಯಾರಿಸುತ್ತಿದೆ.

ಸಮಿತಿ ಕೆಲಸವೇನು?
ಈ ಸಮಿತಿಗಳು ತಮ್ಮ ವ್ಯಾಪ್ತಿಗೆ ಬರುವ ಅರಣ್ಯ ಭೂಮಿ, ಕೃಷಿ ಜಮೀನು, ಸಂರಕ್ಷಿತ ಅರಣ್ಯ ಪ್ರದೇಶ, ಅರಣ್ಯ ಸಂಪತ್ತು, ಗಿಡ-ಮರ, ಹುಳು-ಜಂತು, ಪ್ರಾಣಿ-ಪಕ್ಷಿ ಇವುಗಳ ವಿವಿಧ ಪ್ರಭೇದ ಮತ್ತು ತಳಿಗಳ ಮಾಹಿತಿ, ಔಷಧೀಯ ಗಿಡಮೂಲಿಕೆಗಳ ವಿವರ, ಪಾರಂಪರಿಕ ತಾಣ, ನಾಟಿ ವೈದ್ಯರು, ಗುಡಿ-ದೈವಸ್ಥಾನ, ಇತಿಹಾಸದ ಜತೆಗೆ ಪ್ರಸಕ್ತ ಅಂಕಿ-ಅಂಶಗಳನ್ನು ದಾಖಲೆ ಹಾಗೂ ಚಿತ್ರಗಳನ್ನು ತಾಲೂಕು ಸಮಿತಿಗೆ ನೀಡಬೇಕು. ತಾಲೂಕು ಸಮಿತಿ ಅದನ್ನು ಜಿಲ್ಲಾ ಸಮಿತಿಗೆ ನೀಡಲಿದ್ದು, ಆ ಬಳಿಕ ರಾಜ್ಯ ಸಮಿತಿಗೆ ಕೊನೆಯ ವರದಿ ಸಲ್ಲಿಸಲಾಗುತ್ತದೆ.

ಸಮಿತಿ ರಚನೆಗೆ ವೇಗ!
ಜೈವಿಕ ವೈವಿಧ್ಯ ಅಧಿನಿಯಮ 2002ರ ಸೆಕ್ಷನ್‌ 41 (1), ಜೈವಿಕ ವೈವಿಧ್ಯ ನಿಯಮ ಗಳು-2005ರ ನಿಯಮ 22 ಮತ್ತು ಕರ್ನಾಟಕ ಜೈವಿಕ ವೈವಿಧ್ಯ ನಿಯಮಗಳು-2005ರ ನಿಯಮ 21ರ ಪ್ರಕಾರ ಪಂಚಾಯತ್‌ಗಳಲ್ಲಿ ಜೀವವೈವಿಧ್ಯ ನಿರ್ವಹಣೆ ಸಮಿತಿಗಳ ರಚನೆ ಕಡ್ಡಾಯವಾಗಿದೆ.
ಆದರೆ, ಈ ಬಗ್ಗೆ ಅಷ್ಟೊಂದು ಗಮನ ಹರಿಸಲಾಗುತ್ತಿರಲಿಲ್ಲ. 2019ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಪಂಚಾಯತ್‌ಗಳಲ್ಲಿ ಈ ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕೆಂದು ಆದೇಶ ನೀಡಿರುವುದು, ಸಮಿತಿ ಕೆಲಸಗಳಿಗೆ ವೇಗ ಸಿಕ್ಕಿದೆ.

Advertisement

ಉಪಯೋಗ ಏನು?
ಜೀವ ವೈವಿಧ್ಯ ನಿರ್ವಹಣೆ ಸಮಿತಿ ರಚನೆಯಿಂದ ಗ್ರಾಮೀಣ ಭಾಗದ ಜನರಿಗೆ ಸ್ಥಳೀಯವಾಗಿ ಸಿಗುವ ಪ್ರಕೃತಿ ದತ್ತ ಸಂಪತ್ತುಗಳ ಅರಿವು ಸಿಗಲಿದೆ. ಕಲೆ, ಕರಕುಶಲ ವಸ್ತುಗಳ ಬಗ್ಗೆ ಬೇರೆ ಜಿಲ್ಲೆ, ರಾಜ್ಯದವರಿಗೆ ಮಾಹಿತಿ ಸಿಗಲಿದೆ. ಜತೆಗೆ ಜನರಿಗೆ ಉತ್ತಮ ಮಾರ್ಗದರ್ಶನ, ಅಧಿಕಾರ ಲಭ್ಯವಾಗಲಿದೆ. ಕೃಷಿ, ತೋಟಗಾರಿಕೆ, ಕೋಳಿ ಸಾಕಣೆ, ಹೈನುಗಾರಿಕೆ, ಪಶುಸಂಗೋಪನೆ ಸಾಂಪ್ರದಾಯಿಕ ಚಟುವಟಿಕೆಗೆ ಸಮಿತಿ ರಕ್ಷಣೆ ನೀಡಲಿದೆ. ಸ್ಥಳೀಯ ಸಂಪನ್ಮೂಲ ಸಂರಕ್ಷಣೆ, ಇತರೆ ಜವಾಬ್ದಾರಿ ನಿರ್ವಹಣೆ ಅಧಿಕಾರ ಸಮಿತಿ ವ್ಯಾಪ್ತಿಯಲ್ಲಿರುತ್ತದೆ.

ಸಮಿತಿ ರಚನೆ
ದ.ಕ. ಜಿಲ್ಲೆಯಲ್ಲಿ ಜನತಾ ಜೀವವೈವಿಧ್ಯ ನಿರ್ವಹಣ ಸಮಿತಿ ರಚನೆ ಮಾಡಲಾಗಿದೆ. ಅದರ ಸರ್ವೇಗೆ ಅಗತ್ಯವಿರು ತರಬೇತಿಯನ್ನು ಸಮಿತಿ ಸದಸ್ಯರಿಗೆ ನೀಡಲಾಗಿದೆ. ಸರಕಾರ ನೀಡಿದ ಅವಧಿಯಲ್ಲಿ ಸರ್ವೇ ಪೂರ್ಣಗೊಳಿಸಿ ವರದಿ ಸಲ್ಲಿಸಲಾಗುತ್ತದೆ.
-ಡಾ| ಸೆಲ್ವಮಣಿ ಆರ್‌., ಸಿಇಒ, ಜಿ.ಪಂ., ದ.ಕ. ಜಿಲ್ಲೆ.

ಮಾಹಿತಿ ಕ್ರೋಢೀಕರಣ
ಉಡುಪಿ ಜಿಲ್ಲೆಯ 35 ಗ್ರಾ.ಪಂ.ಗಳು ವರದಿ ನೀಡಿದೆ. ಬಾಕಿ ಉಳಿದ ಗ್ರಾ.ಪಂ.ಗಳ ವರದಿ ಸ್ವೀಕೃತವಾದ ತತ್‌ಕ್ಷಣ ತಾಲೂಕು ಹಾಗೂ ಜಿಲ್ಲಾ ಸಮಿತಿಯಿಂದ ಮಾಹಿತಿ ಕ್ರೋಢೀಕರಣಗೊಳಿಸಿ ರಾಜ್ಯಕ್ಕೆ ಸಲ್ಲಿಸಲಾಗುತ್ತದೆ.
-ಕಿರಣ್‌ ಫ‌ಡ್ನ್ ಕರ್‌, ಜಿ.ಪಂ. ಉಪಕಾರ್ಯದರ್ಶಿ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next