ಬಳ್ಳಾರಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ತೆರೆಮರೆಗೆ ಸರಿದಿದ್ದ ವಿಜಯನಗರ ಜಿಲ್ಲೆ ರಚನೆ ವಿಷಯ ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್ ಅವರು 2021ಕ್ಕೆ ಜಿಲ್ಲೆ ರಚನೆಯಾಗಲಿದೆ ಎಂದು ಭರವಸೆ ನೀಡುವ ಮೂಲಕ ಪುನಃ ಮುನ್ನೆಲೆಗೆ ಬಂದಿದ್ದು ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಜಿಂದಾಲ್ ಜಮೀನು ಪರಭಾರೆ ವಿರೋಧಿಸಿ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ರಚಿಸಲು ಒತ್ತಾಯಿಸಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ವಿಜಯನಗರ ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ವಿಜಯನಗರ ಜಿಲ್ಲೆ ರಚನೆ ವಿಷಯ ತೆರೆಮರೆಗೆ ಸರಿದಿತ್ತು. ಇದೀಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೊದಲ ವಾರ್ಷಿಕೋತ್ಸವ ಆಚರಿಸಿಕೊಂಡರೂ ಆನಂದ್ ಸಿಂಗ್ ಸಚಿವರಾಗಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದರೂ ಗಣಿ ಜಿಲ್ಲೆ ಇಬ್ಭಾಗದ ಬಗ್ಗೆ ಎಲ್ಲೂ ಪ್ರಸ್ತಾಪಿಸಿರಲಿಲ್ಲ. ಆದರೆ ಆ. 15ರಂದು ಹೊಸಪೇಟೆಯ ಶಾನ್‌ಭಾಗ್ ವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ 150 ಅಡಿ ಎತ್ತರದ ರಾಷ್ಟ್ರ ಧ್ವಜಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಆನಂದ್‌ಸಿಂಗ್ ಜಿಲ್ಲೆ ರಚನೆ ಬಗ್ಗೆ ಪ್ರಸ್ತಾಪಿಸಿದ್ದಾರೆ.
2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದಿದ್ದ ಆನಂದ್‌ಸಿಂಗ್, 2019ರಲ್ಲಿ ರಾಜೀನಾಮೆ ನೀಡಿ ಪುನಃ ಮಾತೃಪಕ್ಷ ಬಿಜೆಪಿ ಸೇರ್ಪಡೆಯಾಗಿದ್ದರು. ಈ ವೇಳೆ ವಿಜಯನಗರ ಜಿಲ್ಲೆ ರಚಿಸುವಂತೆ ಸಿಎಂ ಯಡಿಯೂರಪ್ಪರ ಮುಂದೆ ಬೇಡಿಕೆಯಿಟ್ಟಿದ್ದರು. ಮುಖ್ಯಮಂತ್ರಿಗಳು ಸಹ ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಲು ಪ್ರಸ್ತಾವನೆ ಸಲ್ಲಿಸುವಂತೆ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಜಿಲ್ಲೆ ರಚನೆಗೆ ಪರ-ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಉದ್ದೇಶದಿಂದ ಜಿಲ್ಲೆ ರಚನೆ ವಿಷಯವನ್ನು ತಾತ್ಕಾಲಿಕವಾಗಿ ಮುಂದೂಡಿ ತೆರೆಮರೆಗೆ ಸರಿಸಲಾಗಿತ್ತು. ಆದರೆ ಇದೀಗ ಜಿಲ್ಲೆ ರಚನೆಗೆ ಕೂಗಿಗೆ ಮರುಜೀವ ಬಂದಂತಾಗಿದೆ.
ಜಿಲ್ಲೆ ಇಬ್ಭಾಗ ಮಾಡಿ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡಲು ಜಿಲ್ಲೆಯಲ್ಲಿ ಪರ ವಿರೋಧಗಳಿವೆ. ಈ ಹಿಂದೆ ವಿಜಯನಗರ ಜಿಲ್ಲೆ ರಚನೆಗೆ ಹೊಸಪೇಟೆಯಲ್ಲಿ ಪರವಾಗಿ ಪ್ರತಿಭಟನೆಗಳು ನಡೆದಿದ್ದರೆ, ಬಳ್ಳಾರಿ ನಗರದಲ್ಲಿ ನಗರ ಶಾಸಕರು, ರೈತಸಂಘದವರು ಸೇರಿ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲೆ ಇಬ್ಭಾಗಕ್ಕೆ ವಿರೋಧಿ ಸಿ ಬಳ್ಳಾರಿಯನ್ನು ಬಂದ್ ಮಾಡಿದ್ದರು. ಹೀಗೆ ಜಿಲ್ಲೆ ಇಬ್ಭಾಗಕ್ಕೆ ಸ್ವಪಕ್ಷೀಯರಲ್ಲೇ ಭಿನ್ನಮತಗಳಿವೆ. ಜತೆಗೆ ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಹರಪನಹಳ್ಳಿ, ಹ.ಬೊ.ಹಳ್ಳಿ ಶಾಸಕರು ಜಿಲ್ಲೆಯನ್ನು ಅಖಂಡವಾಗಿ ಮುಂದುವರೆಸಲಿ. ಇಲ್ಲದಿದ್ದಲ್ಲಿ ಹರಪನಹಳ್ಳಿ ಅಥವಾ ಹ.ಬೊ. ಹಳ್ಳಿಗಳನ್ನು ಕೇಂದ್ರ ಸ್ಥಾನವಾಗಿ ಮಾಡಿ ಜಿಲ್ಲೆಯನ್ನು ಇಬ್ಭಾಗ ಮಾಡಬೇಕು ಎಂದಿದ್ದರು. ಹೀಗೆ ಹೊಸಪೇಟೆ ಜಿಲ್ಲೆ ರಚನೆಗೆ ಹೊಸಪೇಟೆಯವರು ಪರವಾಗಿದ್ದರೆ, ಬಳ್ಳಾರಿ ಸೇರಿ ಪಶ್ಚಿಮ ತಾಲೂಕಿನವರು ವಿರೋಧ ವ್ಯಕ್ತಪಡಿಸಿದ್ದರು.
ಜಿಲ್ಲೆ ರಚನೆ ವಿಷಯ ಮರು ಪ್ರಸ್ತಾಪಿಸಿರುವುದು ಜಿಲ್ಲೆಯ ಇನ್ನುಳಿದ ಶಾಸಕರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದ್ದು, ಮುಂದಾಗುವ ಬೆಳವಣಿಗೆಯನ್ನು ಕಾದುನೋಡಬೇಕಿದೆ.
-ವೆಂಕೋಬಿ ಸಂಗನಕಲ್ಲು