ಕಂಪ್ಲಿ: ರಾಜ್ಯ ಪಕ್ಷಭೇದ ಮರೆತು ಇತಿಹಾಸ ಸಾರುವ ವೈಭವದ ಹಂಪಿ ಉತ್ಸವವನ್ನು ಪ್ರತಿ ವರ್ಷ ಆಚರಿಸಬೇಕು ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಬುಕ್ಕಸಾಗರ ಗ್ರಾಮದ ಕರಿಸಿದ್ದೇಶ್ವರ ಸಂಸ್ಥಾನ ಮಠ ಆವರಣದಲ್ಲಿ ಲಿಂ| ಕರಿಸಿದ್ದೇಶ್ವರ ಶಿವಾಚಾರ್ಯ ಶಿವಯೋಗಿಗಳ 6ನೇ ವರ್ಷದ ಪುಣ್ಯಾರಾಧನೆ ಹಾಗೂ ಕರಿಸಿದ್ದೇಶ್ವರ ತಾತನವರ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಧರ್ಮಜಾಗೃತಿ ಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಪ್ರತಿ ವರ್ಷದಲ್ಲಿ ಮೈಸೂರು ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಆದರೆ, ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವ ಹಂಪಿ ಉತ್ಸವ ಆಚರಣೆಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದು ವಿಷಾದನೀಯವಾಗಿದೆ.
ಇತಿಹಾಸ ಮೆಲುಕು ಹಾಕಿ ನೋಡಿದಾಗ ವಿಜಯನಗರ ಸಾಮ್ರಾಜ್ಯವನ್ನು ದೊಡ್ಡ ಮಟ್ಟದಲ್ಲಿ ಶ್ರೀಕೃಷ್ಣದೇವರ ಕಟ್ಟಿ ಆಳಿದ್ದಾರೆ. ಪ್ರಾಚೀನ ಕಾಲದಲ್ಲಿ ಹಂಪಿ ಉತ್ಸವ ಅದ್ಧೂರಿಯಾಗಿ ನಡೆದುಕೊಂಡು ಬಂದಿದೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರದಲ್ಲಿ ಮೈಸೂರು ದಸರಾ ಉತ್ಸವ ಆಚರಣೆಗೆ ಅಣಿಯಾಯಿತು. ಸರ್ಕಾರ ಮೈಸೂರು ದಸರಾ ಉತ್ಸವ ಮಾಡುತ್ತದೆ. ಆದರೆ, ಹಂಪಿ ಉತ್ಸವ ಆಚರಣೆಗೆ ಮಲತಾಯಿ ಧೋರಣೆ ತೋರುತ್ತಿರುವುದು ವಿಪರ್ಯಾಸ ಸಂಗತಿ. ಸರ್ಕಾರ ಹಾಗೂ ಎಲ್ಲ ಪಕ್ಷಗಳು ಪಕ್ಷಭೇದ ಮರೆತು ಪ್ರತಿ ವರ್ಷದಲ್ಲಿ ಹಂಪಿ ಉತ್ಸವ ಆಚರಿಸಲು ಗೆಜೆಟ್‌ನಲ್ಲಿ ಅನುಮೋದನೆ ಹೊರಡಿಸಬೇಕು. ಯಾವುದೇ ಪಕ್ಷ ಸರ್ಕಾರದ ಚುಕ್ಕಾಣಿ ಹಿಡಿದರೂ, ಪ್ರತಿ ವರ್ಷ ಹಂಪಿ ಉತ್ಸವ ಆಚರಿಸಬೇಕೆಂದು ಧರ್ಮಸಭೆಯಲ್ಲಿ ಒತ್ತಾಯಿಸಿದರು.
ಕರಿಸಿದ್ದೇಶ್ವರ ಸಂಸ್ಥಾನ ಮಠದ ಪೀಠಾಧಿ ಪತಿಗಳಾದ ವಿಶ್ವಾರಾಧ್ಯ ಕರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿ ಅಧ್ಯಕ್ಷತೆ ವಹಿಸಿ, ಶ್ರೀಮಠದ ಸದ್ಭಕ್ತರ ಆಸಕ್ತಿಯಿಂದ ಲಿಂಗೈಕ್ಯ ಶ್ರೀಗಳ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ. ಪ್ರತಿಯೊಬ್ಬರೂ ಶ್ರೀಮಠದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಪ್ರತಿವರ್ಷ ಶ್ರೀಮಠದಿಂದ ಕೊಡ ಮಾಡುವ ‘ಕರಿಸಿದ್ದ ಶ್ರೀ’ ಪ್ರಶಸ್ತಿಯನ್ನು ಗಂಗಾವತಿ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ| ಶರಣಬಸಪ್ಪ ಕೋಲ್ಕಾರ್ ಅವರಿಗೆ ನೀಡಿ ಗೌರವಿಸಲಾಯಿತು.
ತೆಕ್ಕಲಕೋಟೆ ಹಂದ್ಯಾಳುಮಠದ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿ, ಕುರುಗೋಡು ರಾಘವಾಂಕ ಶಿವಾಚಾರ್ಯ ಮಹಾಸ್ವಾಮಿ, ಹೆಬ್ಟಾಳು ನಾಗಭೂಷಣ ಶಿವಾಚಾರ್ಯ ಸ್ವಾಮಿಜಿ, ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ, ರೌಡಕುಂದ ಮರಿಸಿದ್ದಲಿಂಗ ಶಿವಾಚಾರ್ಯ, ಮಾಜಿ ಶಾಸಕ ರತನ್‌ಸಿಂಗ್, ಗ್ರಾಪಂ ಅಧ್ಯಕ್ಷ ಅಲ್ಲಿಪುರ ತಿಮ್ಮಪ್ಪ, ಗೊಗ್ಗ ಚನ್ನಬಸವರಾಜಸ್ವಾಮಿ, ಪಿ.ಮೂಕಯ್ಯಸ್ವಾಮಿ, ಎಸ್.ಎಸ್.ಎಂ. ಚನ್ನಯ್ಯಸ್ವಾಮಿ, ಸಾಲಿ ಸಿದ್ದಯ್ಯ, ಎಸ್.ಡಿ. ಬಸವರಾಜ, ವಿಶ್ವನಾಥ, ಕವಿತಾ ಈಶ್ವರಸಿಂಗ್, ವಾಣಿಶ್ರೀ ಹಾಗೂ ಸುತ್ತಲಿನ ಗ್ರಾಮದ ಭಕ್ತರು ಹಾಗೂ ಮಹಿಳೆಯರು ಇದ್ದರು.