ಗುಂಡ್ಲುಪೇಟೆ(ಚಾಮರಾಜನಗರ): ಜಮೀನಿನಲ್ಲಿ ಬೆಳೆದಿರುವ ತೇಗದ ಮರ ಕಟಾವಾದ ನಂತರ ಸಾಗಣೆಗೆ ಅನುಮತಿ ನೀಡುತ್ತಿಲ್ಲ ಎಂದು ಮನನೊಂದ ರೈತನೋರ್ವ ಗುಂಡ್ಲುಪೇಟೆ ಪಟ್ಟಣದ ಅರಣ್ಯ ಇಲಾಖೆ ಕಚೇರಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎದುರೇ ವಿಷ ಸೇವಿಸಿರುವ ಘಟನೆ ಪಟ್ಟಣದಲ್ಲಿ ಬುಧವಾರ ನಡೆದಿದೆ.
ಇದನ್ನೂ ಓದಿ:ಮಗಳ ಪ್ರೇಮ ವಿವಾಹ: ಮನನೊಂದು ತಂದೆ ಆತ್ಮಹತ್ಯೆ
ಅಂಕಹಳ್ಳಿ ಗ್ರಾಮದ ನಿವಾಸಿ ಉಮೇಶ್(48) ವಿಷ ಕುಡಿದ ರೈತ.
ಈತ ತನ್ನ ಜಮೀನಿನಲ್ಲಿ ಬೆಳೆದಿದ್ದ 17 ತೇಗದ ಮರ ಕಟಾವು ಮಾಡಿ ನಂತರ ಸಾಗಣೆಗೆ ಅನುಮತಿ ಪಡೆಯಲು ಕಳೆದ 8 ತಿಂಗಳ ಹಿಂದೆ ಅರ್ಜಿ ಹಾಕಿದ್ದಾರೆ. ಆದರೆ ಸಾಗಣೆಗೆ ಅನುಮತಿ ನೀಡಲು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್) ರವೀಂದ್ರ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ, ಅರಣ್ಯ ಇಲಾಖೆ ಕಚೇರಿಯಲ್ಲೆ ವಿಷ ಸೇವಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಂತರ ಉಮೇಶ್ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ನಂತರ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಎಸಿಎಫ್ ಅವರಿಂದ ಹಣದ ಆಮಿಷ: ಗುಂಡ್ಲುಪೇಟೆ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಮರ ಕಟಾವು, ಸಾಗಣೆಗೆ ರೈತರ ಹತ್ತಿರ ಹಣ ಕೇಳಿದ್ದಾರೆ. ರೈತ ಹಣ ಕೊಡಲು ಹಿಂದೇಟು ಹಾಕಿದಾಗ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ರೈತ ಮುಖಂಡ ಕಡಬೂರು ಮಂಜುನಾಥ್ ಒತ್ತಾಯಿಸಿದ್ದಾರೆ.