Advertisement

ಹುಲಿ ದಾಳಿ ಪ್ರದೇಶಕ್ಕೆ ಅರಣ್ಯ ಸಚಿವರ ಭೇಟಿ

10:40 AM May 12, 2020 | Team Udayavani |

ಗುಂಡ್ಲುಪೇಟೆ: ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸುತ್ತಿರುವ ಕುಂದಕೆರೆ ವಲಯದ ಕಾಡಂಚಿನ ಕಡಬೂರು ಗ್ರಾಮಕ್ಕೆ ಅರಣ್ಯ ಸಚಿವ ಆನಂದ್‌ ಸಿಂಗ್‌ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ  ಪರಿಶೀಲಿಸಿದರು. ಇತ್ತೀಚೆಗೆ 20ಕ್ಕೂ ಹೆಚ್ಚು ಹಸುಗಳನ್ನು ತಿಂದಿರುವ ಹುಲಿಯನ್ನು ಸೆರೆ ಹಿಡಿಯುವಂತೆ ರೈತರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಖುದ್ದು ಅರಣ್ಯ ಸಚಿವರೇ ಭೇಟಿ ನೀಡಿ ರೈತರ ಸಮಸ್ಯೆಗಳನ್ನು  ಆಲಿಸಿದರು.

Advertisement

ಕೂಡಲೇ ಹುಲಿಗಳ ಸೆರೆ ಹಿಡಿದು ರೈತರ ಜಾನುವಾರು ರಕ್ಷಣೆ ಮಾಡಬೇಕು. ರೈತ ಸಂಘದ ಸಂಪತ್ತು ಹಾಗೂ ಕಡಬೂರು ಮಂಜುನಾಥ್‌ ಮಾತನಾಡಿ, ಕಾಡಂಚಿನಲ್ಲಿ ಸೋಲಾರ್‌ ಬೇಲಿಗಳು ನಿಷ್ಕ್ರಿಯವಾಗಿವೆ. ಮಳೆಯಿಂದ ಕಂದಕ ಮುಚ್ಚಿಕೊಂಡಿವೆ. ಆದ್ದರಿಂದಲೇ ವನ್ಯಜೀವಿಗಳ ದಾಳಿ ಹೆಚ್ಚುತ್ತಿವೆ. ಕಳೆದ 10 ವರ್ಷಗಳಿಂದಲೂ ರೈಲ್ವೇ ಕಂಬಿ ಅಳವಡಿಸುವಂತೆ ಮನವಿ ಮಾಡಿದ್ದರೂ ನಿರ್ಲಕ್ಷ ಮಾಡಲಾಗಿದೆ.

ಕಂದಕಗಳನ್ನು ದಾಟುವ ಜಿಂಕೆಗಳನ್ನು ಹುಲಿ, ಚಿರತೆ ಹಿಂಬಾಲಿಸಿ ಗ್ರಾಮಗಳತ್ತ ಆಗಮಿಸುತ್ತಿವೆ ಎಂದು ಹೇಳಿದರು. ಹುಲಿ ದಾಳಿಗೊಳಗಾದ ಜಾನುವಾರು ಮಾಲೀಕರಿಗೆ ಅರಣ್ಯ ಇಲಾಖೆ ನೀಡುತ್ತಿರುವ  ಪರಿಹಾರ ಸಾಕಾಗುತ್ತಿಲ್ಲ. ಜೀವನೋಪಾಯಕ್ಕೆ ಹೈನುಗಾರಿಕೆಯನ್ನೇ ಅವಲಂಬಿಸಿದ ಕುಟುಂಬಗಳು ಬೀದಿ ಪಾಲಾಗುತ್ತಿವೆ. ವನ್ಯಜೀವಿಗಳು ಅರಣ್ಯದಿಂದ ಹೊರಬರದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು  ಗ್ರಾಮಸ್ಥರು ಮನವಿ ಮಾಡಿದರು.

ಕೂಡಲೇ ಹುಲಿ ಸೆರೆಗೆ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಸಚಿವ ಆನಂದ್‌ ಸಿಂಗ್‌ ಭರವಸೆ ನೀಡಿದರು. ಈ ವೇಳೆ ಪಿಸಿಸಿಎಫ್ ಅಜಯ್‌ ಮಿಶ್ರ, ಸಿಸಿಎಫ್ಗಳಾದ  ಟಿ.ಹೀರಾಲಾಲ್‌, ಸಿಎಫ್ ಬಾಲಚಂದ್ರ, ಎಎಸ್‌ಪಿ ಅನಿತಾ ಹದ್ದಣ್ಣನವರ್‌, ತಹಶೀಲ್ದಾರ್‌ ನಂಜುಂಡಯ್ಯ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next