Advertisement

ನೀರಿಗಾಗಿ ಕಾಡು

07:10 AM Aug 21, 2017 | Harsha Rao |

ಬ್ರಿಟೀಷರಿಗಾಗಿ ಶತಮಾನಗಳ ಹಿಂದೆ ತೇಗದ ತೋಟ ಬೆಳೆಸಿದ್ದೇವೆ.  ನಮ್ಮ ಉದ್ಯಮಗಳಿಗಾಗಿ ನೀಲಗಿರಿ, ಅಕೇಶಿಯಾ, ಕ್ಯಾಸುರಾ ಹಬ್ಬಿಸಿದ್ದೇವೆ. ಮಲೆನಾಡಿನ ಸಸ್ಯ ವೈವಿಧ್ಯಗಳನ್ನು  ಬುಲ್ಡೋಜರ್‌ ಮೂಲಕ ಬುಡಮೇಲು ಮಾಡಿದ್ದೇವೆ. ಸುಮಾರು 180 ವರ್ಷಗಳ ನಂತರ ಈಗ ನೀರಿಗಾಗಿ ಅರಣ್ಯ  ಬೆಳೆಸುವ ಘೋಷಣೆ ಮಾಡಿದ್ದೇವೆ. ಮಲೆನಾಡಿನ ಮಳೆ ಕಾಡಿನ ಪ್ರದೇಶದಲ್ಲಿ ಖುರ್ಚಿಗೇರುವ ಅಧಿಕಾರಿಗಳು ವರ್ಗಾವಣೆಗೆ ಲಕ್ಷ ಲಕ್ಷ ಸುರಿಯುತ್ತಿರುವ ಕಾಸಿನ ಆಟದಲ್ಲಿ, ನೀರಿಗಾಗಿ ಅರಣ್ಯ ಅಭಿವೃದ್ಧಿಯ ಕಾಳಜಿಯನ್ನು  ಇಲಾಖೆಯಲ್ಲಿ ಎಲ್ಲಿ ಹುಡುಕೋಣ?

Advertisement

“ನೀರಿಗಾಗಿ ಅರಣ್ಯ’  ಕರ್ನಾಟಕ ಅರಣ್ಯ ಇಲಾಖೆಯ ವಿಶ್ವಪರಿಸರ ದಿನದ ಸಂದೇಶವಾಗಿದೆ.  ಕಾಡು ನೀರಿನ ಸಂಬಂಧಗಳ ಬಗ್ಗೆ ಜನಜಾಗೃತಿ ಮೂಡಿಸಿ ನೈಸರ್ಗಿಕ ಅರಣ್ಯ ಉಳಿಸುವುದು ಮುಖ್ಯ ಕಾಳಜಿಯಾಗಿದೆ. ನೀರಿಗಾಗಿ ಅರಣ್ಯ ವಿಷಯ ಚರ್ಚೆಗೆ ಮುಂಚೆ ಒಂದು ಚಾರಿತ್ರಿಕ ಘಟನೆ  ಹೇಳಬೇಕು. ಕ್ರಿ.ಶ 1920ರ ಸುಮಾರಿಗೆ ನಮ್ಮ ಕೆನರಾ ಕರಾವಳಿಯಲ್ಲಿ ಬ್ರಿಟೀಷ್‌ ಕಲೆಕ್ಟರ್‌ ಕಾಲಿನ್ಸ್‌ ಪಯಣಿಸುತ್ತಿದ್ದರು. ಸಮುದ್ರ ತಟದ ಹಳ್ಳಿಗಳಂಚಿನಲ್ಲಿ ಅಲ್ಲಲ್ಲಿ ಒಂದಿಷ್ಟು ಅರಣ್ಯ ದಟ್ಟವಾಗಿತ್ತು. ಆದರೆ ಅಕ್ಕಪಕ್ಕದ ಗುಡ್ಡಗಳು ರಾಗಿ ಕೃಷಿಯಿಂದ ಬೋಳಾಗಿದ್ದವು. ದೂರದ ಬೆಟ್ಟಗಳಲ್ಲಿ ಮರಗಳಿಲ್ಲ, ಹಳ್ಳಿಯ ಹತ್ತಿರದಲ್ಲಿ ಅರಣ್ಯ ಉಳಿದಿರುವುದು ಹೇಗೆ? ಕಾಲಿನ್ಸ್‌ ವಿಚಾರಿಸಿದರು.  ನೀರಿರುವ ತಾಣಗಳನ್ನು ಜನ ಪೂಜನೀಯವಾಗಿ ನೋಡುತ್ತಾರೆ. ಅಲ್ಲಿನ ಮರಗಿಡಗಳನ್ನು ಕಡಿಯುವುದಿಲ್ಲವೆಂಬ ಮಾಹಿತಿ ದೊರೆಯುತ್ತದೆ.

ಹಳ್ಳಿಗರು ಸಂರಕ್ಷಿಸಿದ ಅರಣ್ಯಗಳನ್ನು ಗ್ರಾಮದ ಅರಣ್ಯಗಳೆಂದು  ಅರಿತ ಕಾಲಿನ್ಸ್‌  1924ರಲ್ಲಿ ಅರಣ್ಯ ಪಂಚಾಯತ್‌ ವ್ಯವಸ್ಥೆ ಜಾರಿಗೆ ತರುತ್ತಾರೆ. ಅರಣ್ಯ ಅಲ್ಲಿನ ಜನರ ಸ್ವಂತ ಭೂಮಿಯಿದ್ದಂತೆ, ಸಂರಕ್ಷಣೆ, ಬಳಕೆಗೆ ಜನರ ನಿರ್ಧಾರವೇ ಅಂತಿಮವಾದುದೆಂದು ಘೋಷಿಸುತ್ತಾರೆ. ಪರಿಣಾಮ 136 ಅರಣ್ಯ ಪಂಚಾಯತ್‌ಗಳು ಕರಾವಳಿ ಜಿಲ್ಲೆಗಳಲ್ಲಿ ಜಾರಿಗೆ ಬರುತ್ತವೆ. ಈಗ ಉತ್ತರ ಕನ್ನಡದ ಕುಮಟಾದ ಹಳಕಾರಿನಲ್ಲಿ ಇಂಥದ್ದೊಂದು ಅಪರೂಪದ ಯೋಜನೆ 90 ವರ್ಷಗಳಿಂದಲೂ ಜಾರಿಯಲ್ಲಿದೆ. ಅಲ್ಲಿನ ಅರಣ್ಯ ಅರಣ್ಯ ಇಲಾಖೆಯ ಬದಲು ಕಂದಾಯ ಇಲಾಖೆಯಡಿಲ್ಲಿದೆ. ಹಳ್ಳಿಯ ವಿವಿಧ ಜನಾಂಗಗಳ ಪ್ರತಿನಿಧಿಗಳು ಅರಣ್ಯ ಆಡಳಿತ ನಡೆಸುತ್ತಾರೆ. ನೀರಿಗಾಗಿ ದೇವರಕಾಡು ಉಳಿಸಿದ ಕೆನರಾ ಹಳ್ಳಿಗರ ಯೋಜನೆ ಬ್ರಿಟೀಷರ ಗಮನಕ್ಕೆ ಬಂದು ಫಾರೆಸ್ಟ್‌ ಪಂಚಾಯತ್‌ ಕೇಂದ್ರೀಕೃತ ಅರಣ್ಯ ಆಡಳಿತ ಜಾರಿಯಾಗಿದ್ದು ವಿಶೇಷವಾಗಿದೆ. 

ಕಾಡೇ ನದಿಗಳ ತಾಯಿ, ನದಿ ನಾಡಿನ ಜೀವನಾಡಿಯೆಂದು ಮಾತಾಡುತ್ತೇವೆ. ನದಿಗಳು ಮಳೆ ಇಲ್ಲದೇ ಒಣಗುತ್ತಿವೆ. ಅಭಯಾರಣ್ಯದಲ್ಲಿ ಕೊಳವೆ ಬಾವಿ ಕೊರೆಯುತ್ತಿದ್ದೇವೆ. ಸೌರಶಕ್ತಿಯ ಮೂಲಕ ನೀರೆತ್ತಿ ವನ್ಯಜೀವಿಗಳಿಗೆ ನೀರು ಒದಗಿಸಿದ್ದೇವೆ. ವನ್ಯಜೀವಿಗಳ ನೀರಿಗಾಗಿ ಹಣ ಖರ್ಚುಮಾಡುತ್ತೇವೆ.  ಅರಣ್ಯಾಡಳಿತ ಸೂತ್ರ ಹಿಡಿದ ಹಿರಿಯ ಅಧಿಕಾರಿಗಳು ಬೇಸಿಗೆ ಬಂದ ತಕ್ಷಣ ಹೊಸ ಹೊಸ ಯೋಜನೆ ರೂಪಿಸುತ್ತಿರುತ್ತಾರೆ. ಕಳೆದ ವರ್ಷ ಕಾಡಿನಲ್ಲಿ ಗುಂಡಿ ತೆಗೆದು ಸಿಲ್ಫಾಲಿನ್‌ ಸೀಟ್‌ನಲ್ಲಿ ಕೃತಕ ಕೆರೆರೂಪಿಸಿ, ಟ್ಯಾಂಕರ್‌ ನೀರು ತುಂಬಿ ವನ್ಯಜೀವಿಗಳ ಜಲದಾಹ ತೀರಿಸುವ ಕೆಲಸ ಮಾಡಿದ್ದರು. ತೇಗ, ನೀಲಗಿರಿ, ಲಂಟಾನಾ ನೆಲೆಗಳೂ ಅಭಯಾರಣ್ಯದ ನಕ್ಷೆಯಲ್ಲಿರುವುದರಿಂದ ವನ್ಯಜೀಗಳು ದಾಹತೀರಿಸಿಕೊಳ್ಳಲು ಸನಿಹದ ಕೃಷಿ ನೆಲೆಗೆ ನುಗ್ಗುತ್ತವೆ. ರಸ್ತೆ ಅಪಘಾತ, ನಾಯಿ ದಾಳಿ, ಬೇಟೆಯಿಂದ ಸಾವನ್ನಪ್ಪುತ್ತವೆ. ಮಳೆ ಕೊರತೆಯ ವರ್ಷಗಳಲ್ಲಿ ಕಾಡಿನಲ್ಲಿ ನೀರಿರುವಂತೆ ಮಾಡುವ ಸಾಹಸ ಸದಾ ನಡೆಯುತ್ತದೆ. 

ಕಾಡಲ್ಲಿ ನೀರಿದ್ದರೆ ವನ್ಯಜೀವಿಗಳಿಗಷ್ಟೇ ಅಲ್ಲ,  ಸುತ್ತಲಿನ ಸಸ್ಯ ಪರಿಸರವೂ ಬದಲಾಗುತ್ತದೆ. ಮಳೆಗಾಲದಲ್ಲಿ ಒಂದೆರಡು ಕಿಲೋ ಮೀಟರ್‌ ಸುತ್ತಳತೆಯಲ್ಲಿ ಆಹಾರವುಂಡು, ಬದುಕುವ ಜಿಂಕೆಗಳು ಬೇಸಿಗೆ ಬಂದರೆ ಹಸಿರು ಮೇವು ಹುಡುಕಿ ಏಳೆಂಟು ಕಿಲೋ ಮೀಟರ್‌ ಸಂಚರಿಸುತ್ತವೆ. ಅಪರಿಚಿತ ತಾಣಗಳಿಗೆ ದಾಹ ತಾಳಲಾರದೇ ನೀರಿಗೆ ನುಗ್ಗುವ ಇವಕ್ಕೆ ಅಪಾಯ ಜಾಸ್ತಿ. ನಮ್ಮ ದನಕರು ಒಣಹುಲ್ಲು ತಿಂದಾಗ ನೀರು ಸೇವಿಸುವ ಪ್ರಮಾಣಕ್ಕೂ, ಹಸಿರು ಹುಲ್ಲು ಮೇಯ್ದಾಗ ಕುಡಿಯುವ ನೀರಿಗೂ ವ್ಯತ್ಯಾಸವಿರುತ್ತದೆ. ಭೂಮಿ ತೇವವಾಗಿದ್ದರೆ ಮರಗಿಡಗಳ ನೆರಳಲ್ಲಿ ಮರದಾಳಿ, ಜಲಗ, ಅವಲಕ್ಕಿ ಜಡ್ಡು ಮುಂತಾದ ಹುಲ್ಲು ಬೇಸಿಗೆಯಲ್ಲೂ ಹಸಿರಾಗಿರುತ್ತದೆ. ಪ್ರಾಣಿಗಳಿಗೆ ಹಸಿರು ಮೇವು ಸಿಕ್ಕರೆ ನೀರಿನ ದಾಹದ ಸುತ್ತಾಟ ಅಷ್ಟರಮಟ್ಟಿಗೆ ಕಡಿಮೆಯಾಗುತ್ತದೆ. ಕಾಡು ಮರದ ಚಿಗುರು, ಕಲಂ ಮರದ ತೊಗಟೆ, ಕಣಗಿಲ ಹಣ್ಣು ತಿಂದು ವನ್ಯಸಂಕುಲ ನೀರು ಕುಡಿದ ಸಂತೃಪ್ತಿ ಪಡೆಯುತ್ತವೆ. ಉರಿ ಬೇಸಿಗೆಯಲ್ಲಿ ಕಾಡು ಜೀವಿಗೆ ಹಸಿರು ಮೇವು ದೊರೆಯುವ ವ್ಯವಸ್ಥೆ ನೈಸರ್ಗಿಕವಾಗಿಯೇ ಇದೆ. ಸಾಲಿನಲ್ಲಿ ಸಸಿ ಬೆಳೆಸುವ ಅರಣ್ಯ ನಿರ್ವಹಣೆಯ ದೋಷದಿಂದ ಮುಳ್ಳುಕಂಟಿ, ನೆಲಹಂತದ ಬಳ್ಳಿಗಳನ್ನು ನಾಶಮಾಡಿದ್ದೇವೆ.  ಪರಿಣಾಮ ಮಳೆ ಸುರಿದ ತಕ್ಷಣ ನೀರು ಹರಿದು ಓಡುತ್ತದೆ, ಬೇಸಿಗೆ ಆರಂಭದಲ್ಲಿಯೇ ಮಣ್ಣಿನ ತೇವವು ಒಣಗುತ್ತದೆ. ನೀರಿಗಾಗಿ ಅರಣ್ಯ ಉಳಿಸಲು ಯೋಜಿಸುವವರು ಕಾಡಿನ ಬಳ್ಳಿ, ಮುಳ್ಳಿನ ಮೂಲ ಸ್ವರೂಪ ಅರ್ಥಮಾಡಿಕೊಂಡು ಹೆಜ್ಜೆ ಇಡಬೇಕಾಗುತ್ತದೆ. 

Advertisement

ಒಂದು ಪ್ರಶ್ನೆ ಸಹಜವಾಗಿ ಕಾಡುತ್ತಿದೆ. ನಮ್ಮ ಅರಣ್ಯ ಆಡಳಿತಕ್ಕೆ ನೀರಿಗಾಗಿ ಅರಣ್ಯ ಬೆಳೆಸುವ ಕಾಳಜಿ ಇದೆಯೇ? ಪಶ್ಚಿಮ ಘಟ್ಟ ಸುತ್ತಾಡಿದರೆ ಪ್ರಶ್ನೆ ಕಾಡುತ್ತದೆ. ಒಬ್ಬ ಅಧಿಕಾರಿ ಕಾಡಿನಲ್ಲಿ ಕೆರೆ ರೂಪಿಸಬೇಕು ಎನ್ನುತ್ತಾರೆ. ಮತ್ತೂಬ್ಬ ಬಂದವರು ಕಾಡಿನಲ್ಲಿ ಕೆರೆ ರೂಪಿಸುವುದಕ್ಕಿಂತ ಸಣ್ಣ ಸಣ್ಣ ಇಂಗುಗುಂಡಿ ಮಾಡಿದರೆ ಬಿದ್ದಲ್ಲೇ ನೀರು ಇಂಗುತ್ತದೆಂದು ಹೇಳುತ್ತಾರೆ. ಇಂಗುಗುಂಡಿ ನಿರ್ಮಿಸಲು ಕೂಲಿಗಳಿಲ್ಲದ ಇಲಾಖೆ, ಜೆಸಿಬಿಗಳನ್ನು ಅರಣ್ಯಕ್ಕೆ ನುಗ್ಗಿಸಿ ನೈಸರ್ಗಿಕ ಸಸ್ಯ ನಾಶಗೊಳಿಸಿ ಇಂಗುಗುಂಡಿ ತೋಡುತ್ತದೆ. ಅರಣ್ಯ ಭವನದ ಹಿರಿಯ ಅಧಿಕಾರಿ ವರ್ಗ ಕಾಡುಸುತ್ತದೇ ಮೀಟಿಂಗುಗಳಲ್ಲಿಯೇ ದಿನ ನೂಕುತ್ತಿದೆ. ಇವರ ಸಭೆ, ಕಾರ್ಯಕ್ರಮ ದಾಖಲೆ ನೋಡಿದರೆ ಹಸಿರು ಕರ್ನಾಟಕ ಹೊಳೆಯುತ್ತದೆ. ಅರಣ್ಯ ಅಭಿವೃದ್ಧಿಯಲ್ಲಿ ಸುಮಾರು 180 ವರ್ಷಗಳ ಅಪಾರ ಅನುಭವ ರಾಜ್ಯಕ್ಕೆ ಇದೆ. ಅದು ತೇಗ ಬೆಳೆಸುವುದರಿಂದ ಶುರುವಾಗಿ ಮೊನ್ನೆ ಮಳೆ ಶುರುವಾದಾಗ ಬಿತ್ತಿದ ಬೀಜದುಂಡೆಯವರೆಗೆ ವಿಸ್ತರಿಸಿದೆ. ಆದರೆ ಅಧಿಕಾರಿಗಳ ಜೊತೆ ಮಾತಿಗೆ ಕುಳಿತರೆ ಮಣ್ಣಿಗಿಳಿಯದ ಬಡತನ ಕಾಣಿಸುತ್ತದೆ. ಒಬ್ಬ ವಾಚಮನ್‌, ಗಾರ್ಡ್‌, ಫಾರೆಸ್ಟರ್‌ಗಳಿಗೆ ಗೊತ್ತಿರುವ ಶೇಕಡಾ ಒಂದರಷ್ಟು ಅನುಭವವೂ ತಿಂಗಳಿಗೆ ಲಕ್ಷ ಲಕ್ಷ ವೇತನ ಪಡೆಯುವ ಐಎಫ್ಎಸ್‌ಗಳಿಗೆ ಇಲ್ಲ. ಒಬ್ಬರು ಗುಡ್ಡದಲ್ಲಿ ಅಕೇಶಿಯಾ ಬೆಳೆಸಿ ಎನ್ನುತ್ತಾರೆ. ಮತ್ತೂಬ್ಬರು ಬಿದಿರಿಗೆ ಮಹತ್ವ ನೀಡುತ್ತಾರೆ. ಕಾಡಿನಲ್ಲಿ ಜಲ ಸಂರಕ್ಷಣೆಯ ಮೂಲಕ ಅರಣ್ಯಾಭಿವೃದ್ಧಿಯತ್ತ ಹೆಜ್ಜೆ ಇಟ್ಟರೆ, ಇನ್ನೊಬ್ಬರು ಕಾಡಿನಲ್ಲಿ ನೀರುಳಿಸುವ ಅಗತ್ಯವಿಲ್ಲವೆಂದು ತೀರ್ಮಾನಿಸುತ್ತಾರೆ. ಮ್ಯಾಂಜಿಯಂ ಬೆಳೆಸಲು ಹೇಳಿದವ ಒಬ್ಬ, ಅಕೇಶಿಯಾ ಅರುಕ್ಯುಲಿಫಾರ್ಮೀಸ್‌ ಎಂದವ ಇನ್ನೊಬ್ಬ. ಅಕೇಶಿಯಾ ಸ್ಪ್ರಿಂಗ್‌ವೆಲ್‌ ಅತ್ಯುತ್ತಮ ಎಂದವ ಮಗದೊಬ್ಬರು.

ಅನುಭವದಿಂದ ಪಾಠ ಕಲಿಯುತ್ತ ಸಂರಕ್ಷಣೆ, ಅಭಿವೃದ್ಧಿಯನ್ನು ಮುಂದಕ್ಕೆ ಒಯ್ಯುವುದು ಯಾವತ್ತೋ ಇವರಿಗೆಲ್ಲ ಮರೆತು ಹೋಗಿದೆ. ಅರಣ್ಯ ಇಲಾಖೆಯ ಸಂಶೋಧನೆ, ಜನಸಹಭಾಗಿತ್ವ, ಸಾಮಾಜಿಕ ಅರಣ್ಯ ಸೇರಿದಂತೆ ಹತ್ತಿಪ್ಪತ್ತು ಭಾಗಗಳು ಏನು ಮಾಡುತ್ತಿವೆಯೆಂದು ಇಲಾಖೆಗಾದರೂ ತಿಳಿದಿದೆಯೇ? ಅನುಮಾನವಿದೆ. ತಮ್ಮ ಕಾಲದಲ್ಲಿ ಏನಾದರೂ ಹೊಸತು ಮಾಡಲು ಹೋಗುವ ಅಧಿಕಾರಿಗಳಿಂದ ಅರಣ್ಯಾಭಿವೃದ್ಧಿಯೆಂಬುದು ಸರಕಾರೀ ಹಣ ಪೋಲುಮಾಡುವ ಪ್ರಯೋಗ ಭೂಮಿಯಾಗಿದೆ.  ಒಂದರ್ಥದಲ್ಲಿ ತುಘಲಕ್‌ ದರ್ಬಾರ್‌ ನೆನಪಿಸುತ್ತಿದೆ. ಅಟ್ಟ ತೆಗೆದು ಗಿರಿಗಿಟ್ಟಿಯಾಗಿಸಿ, ಗಿರಿಗಿಟ್ಟಿ ತೆಗೆದು ಅಟ್ಟವಾಗಿಸುವ ನಾಟಕ ಸದಾ ನಡೆಯುತ್ತಿದೆ. 

ಬೆಳಗಾವಿಯ ಗೋಕಾಕ ಮಿಲ್‌ ಗುಡ್ಡದಲ್ಲಿ ಟ್ರೆಂಚ್‌ ತೆಗೆದು ಕ್ಯಾಮರಾ ನೆಡಲಾಗಿದೆ. ಸಸ್ಯಗಳು ದಶಕಗಳಿಂದ ಉತ್ತಮವಾಗಿ ಬೆಳೆಯುತ್ತಿವೆ. ಇದೇ ಮಾದರಿಯನ್ನು ಬೆಂಗಳೂರಿನ ಜಾnನ ಭಾರತಿ ವಿಶ್ವದ್ಯಾಲಯದ ಅರಣ್ಯ ಅಭಿವೃದ್ಧಿಯಲ್ಲೂ ನೋಡಬಹುದು. ಚಿತ್ರದುರ್ಗದ ಬಾಂಡ್ರಾಯ 200 ಮಿಲಿ ಮೀಟರ್‌ ಮಳೆ ಇಲ್ಲದ ನೆಲೆಯಲ್ಲಿ ಸಂರಕ್ಷಣೆಯಿಂದ ಅರಣ್ಯ ಬೆಳೆದಿದೆ. ಉತ್ತರ ಕನ್ನಡದ ಹೊನ್ನಾವರದ ರಾಮತೀರ್ಥ ಕೆಂಪುಕಲ್ಲು ಗುಡ್ಡದಲ್ಲಿ ಫೈಕಸ್‌ ಸಸ್ಯಗಳನ್ನು ಇಲಾಖೆಯೇ ಚೆನ್ನಾಗಿ ಬೆಳೆಸಿದೆ. ರಾಣಿಬೆನ್ನೂರಿನಿಂದ ಮೈಲಾರ ರಸ್ತೆಯಂಚಿನ ಬೇವಿನ ಮರಗಳ ಸಾಲು, ಕರಾವಳಿಯಲ್ಲಿ ಸಾಲುಮರವಾಗಿ ನಿಂತ ಹೊನ್ನೆ, ಬೆಂಗಳೂರಿನ ಕಾಡುಗೋಡಿಯಲ್ಲಿ ಗೆದ್ದ ನೂರಿನ್ನೂರು ಪಶ್ಚಿಮ ಘಟ್ಟದ ಸಸ್ಯ ಸಂಕುಲಗಳಲ್ಲಿ ಕಲಿಯುವುದು ಹಲವಿದೆ. ಅರಣ್ಯ ಅಭಿವೃದ್ಧಿಯ ಸೋಲು-ಗೆಲುವಿನ ಮೂಲಕ ಪಾಠ ಕಲಿತು ಮುಂದಕ್ಕೆ ಹೋಗಬೇಕು. ಆದರೆ ಇಲಾಖೆಯಲ್ಲಿ ಒಬ್ಬ ಅಧಿಕಾರಿ ಮಾಡಿದ್ದು ಇನ್ನೊಬ್ಬರಿಗೆ ಆಗುವುದಿಲ್ಲ ! ಹಿರಿಯ ಅಧಿಕಾರಿಗಳ ನಡುವಿನ ಮತ್ಸರಗಳು ಇಡೀ ವ್ಯವಸ್ಥೆಯನ್ನು ಹಾಳುಗೆಡವುತ್ತಿವೆಯಷ್ಟೇ ಅಲ್ಲ, ಯುವ ಅಧಿಕಾರಿಗಳಿಗೆ ಕೆಲಸ ಮಾಡುವ ಉತ್ಸಾಹವನ್ನೇ ನಾಶಪಡಿಸಿದೆ. 

ಜೂನ್‌ 7ರಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಘೋಕ್ಲೃಕರ್‌ ಶ್ರೀಗಂಧದ ಕುರಿತು ಸರಕಾರಕ್ಕೆ ಒಂದು ಪ್ರಶ್ನೆ ಕೇಳಿದ್ದರು. ಶಿರಸಿ ಅರಣ್ಯ ವಲಯದ ಹೊನ್ನೆಗದ್ದೆ, ನೀರ್ನಹಳ್ಳಿ, ಶೀಗೇಹಳ್ಳಿ, ಇಟಗುಳಿ ಭಾಗದಲ್ಲಿ ಶ್ರೀಗಂಧದ ಮರಗಳು ಕಳವಾಗುತ್ತಿದ್ದರೂ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ಗಮನ ಸೆಳೆದಿದ್ದರು. ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ರಮಾನಾಥ ರೈ 2014-15ರಲ್ಲಿ ಎರಡು, 2016-17ರಲ್ಲಿ ಒಂದು ಶ್ರೀಗಂಧದ ಮರ ಕಟಾವಾಗಿದೆ. ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆಯೆಂದು ಉತ್ತರಿಸಿದರು. ಮಲೆನಾಡಿನ ಶಿರಸಿ, ಸಿದ್ದಾಪುರ, ಸಾಗರ, ಹಾಸನದ ಯಾವುದೇ ಅರಣ್ಯ ಪ್ರದೇಶಕ್ಕೆ ಹೋದರೆ ಶ್ರೀಗಂಧ ಮರ ಕಟಾವಿನ ದೃಶ್ಯಗಳು ರಸ್ತೆಯಲ್ಲಿ ನಿಂತರೂ ಕಾಣಿಸುತ್ತವೆ.

ಸರಕಾರ ವಿಧಾನ ಪರಿಷತ್‌ಗೆ ನೀಡಿದ ಉತ್ತರ ಹಿಡಿದು ಕಾಡು ತಿರುಗಿದರೆ ಕಟಾವಾದ ಒಂದೆರಡು ಸಾವಿರ ಮರ ಹುಡುಕಬಹುದು! ಅನುಮಾನವಿದ್ದರೆ ಜನರ ಜೊತೆ ಸೇರಿ ಈಗ ಇಂಥದ್ದೊಂದು ಸರ್ವೆ ಆರಂಭಿಸಬಹುದು. ಮರ ಕಟಾವಾಗಿ ಪ್ರಕರಣ ದಾಖಲಾದದ್ದು ಮಾತ್ರ ಸರಕಾರೀ ಭಾಷೆಯಲ್ಲಿ ಅಧಿಕೃತ ಅಂಕಿಸಂಖ್ಯೆಯಾಗುತ್ತದೆ. ಅರಣ್ಯ ಅಪರಾಧ ಪ್ರಕರಣಗಳನ್ನು ಮುಚ್ಚಿ ಹಾಕುವಲ್ಲಿ  ಅಧಿಕಾರಿಗಳು ಬಹಳ ಜಾಣರು. ನೂರು ತೇಗದ ಮರ ಕಡಿದರೆ ಎರಡು ಮರ ನಾಶವಾಗಿದೆಯೆಂಬ ಫ‌ಟಿಂಗರು. ಮರಸಂಖ್ಯೆ ಕಡಿಮೆ ತೋರಿಸಿ ಇಡೀ ಕಾಡು ಸಂರಕ್ಷಿ$ತವಾಗಿದೆಯೆಂಬ ಮಾಹಿತಿ ಬಿತ್ತರಿಸುತ್ತಾರೆ. ಕಳೆದ ಸುಮಾರು 20 ವರ್ಷಗಳಿಂದ ಶ್ರೀಗಂಧ ಲೂಟಿ ಮಲೆನಾಡಿನ ಜನಕ್ಕೆಲ್ಲ ಚಿರಪರಿಚಿತ. ಇಲಾಖೆ, ಕಠಿಣ ಕಾನೂನಿದ್ದರೂ ಕಾಡಿನ ಮರ ಮಾತ್ರ ಉಳಿಯುತ್ತಿಲ್ಲ. ಶ್ರೀಗಂಧ ಕಡಿದ ಒಬ್ಬ ಕಳ್ಳನಿಗೆ ಕಠಿಣ ಶಿಕ್ಷೆಯಾದ ಒಂದು ಪ್ರಕರಣವೂ ಸಿಗುವುದು ಕಷ್ಟವಿದೆ. 

ಬ್ರಿಟೀಷರಿಗಾಗಿ ಶತಮಾನಗಳ ಹಿಂದೆ ತೇಗದ ತೋಟ ಬೆಳೆಸಿದ್ದೇವೆ. ನಮ್ಮ ಉದ್ಯಮಗಳಿಗಾಗಿ ನೀಲಗಿರಿ ಹಬ್ಬಿಸಿದ್ದೇವೆ. ಅಕೇಶಿಯಾ, ಕ್ಯಾಸುರಾ ಸಸ್ಯ ಬೆಳೆಸಲು  ಮಲೆನಾಡಿನ ಬೆಟ್ಟಗಳ ಸಸ್ಯ ವೈವಿಧ್ಯಗಳನ್ನು  ಬುಲ್ಡೋಜರ್‌ ಮೂಲಕ ಬುಡಮೇಲು ಮಾಡಿದ್ದೇವೆ. ಸುಮಾರು 180 ವರ್ಷಗಳ ನಂತರ ಈಗ ನೀರಿಗಾಗಿ ಅರಣ್ಯ  ಬೆಳೆಸುವ ಘೋಷಣೆಯೇನೋ ಉತ್ತಮವಾಗಿದೆ. ಗುಡ್ಡದಲ್ಲಿ ನೀರಿಂಗಿಸುವಾಗ ಅಲ್ಲಿನ ಮಣ್ಣಿನ ಸ್ವರೂಪ ಗಮನಿಸಿ ನಿರ್ಧರಿಸಬೇಕಾಗುತ್ತದೆ. ಕೆಲವು ಮಾದರಿಯ ಮಣ್ಣುಗಳಲ್ಲಿ ನೀರಿಂಗುವುದಿಲ್ಲ, ಆದರೆ ಅಲ್ಲಿ ಅರಣ್ಯವಿದ್ದರೆ ಅಂತರ್ಜಲ ಏರುತ್ತದೆ. ನಾವು ಕೃತಕವಾಗಿ ಮಾಡಲಾಗದ್ದನ್ನು ಮರಗಳು ಮಾಡುತ್ತವೆ. ಆಳಕ್ಕೆ ಬೇರಿಳಿಸುವ ಮರಗಳು ಬಿರುಗಾಳಿಗೆ ತೊನೆದಾಡಿದಾಗ ಮಳೆಗಾಲದ ಒರತೆ ಮೂಡುವುದನ್ನು ಮಲೆನಾಡಿನಲ್ಲಿ ನೋಡಬಹುದು. ಕಾಡು ಜಲಕೊಯ್ಲಿನ ಪರಿಣಾಮಕಾರಿ ಸುಸ್ಥಿರ ಮಾದರಿಯಾಗಿದೆ. ಮಣ್ಣು, ನೀರು ಉಳಿಸಲು ಮರಗಳು ಬೇಕು. ಆದರೆ ನೀರಿಗಾಗಿ ಅರಣ್ಯ ಘೋಷಣೆಯಾದರೆ ಸಾಲದು, ಅದು ಸಂರಕ್ಷಣೆಯ ಕಾಳಜಿಯೂ ಆಗಬೇಕು. 

ಈಗ ನಮ್ಮ ಅರಣ್ಯ ಆಡಳಿತಕ್ಕೆ ಅಗಳ ತೆಗೆಯುವುದು, ಗುಂಡಿ ತೆಗೆಯುವ ಸಿವಿಲ್‌ ಕಾಮಗಾರಿಯೆಂದರೆ ಬಹಳ ಪ್ರೀತಿ, ಯೋಜನೆಗೆ ಹಣತಂದು ಒಂದಿಷ್ಟು ಬಾಚಿಕೊಳ್ಳುವ ತವಕವಿದೆ. ಇದಕ್ಕೆ ಕಾರಣ ದಶಕಗಳಿಂದ ಹದಗೆಟ್ಟ ಆಡಳಿತ ವ್ಯವಸ್ಥೆಯಾಗಿದೆ.   ಎರಡು ವರ್ಷ ಕೆಲಸ ಮಾಡಲು ಮಲೆನಾಡಿನ ಪ್ರದೇಶದಲ್ಲಿ ಖುರ್ಚಿಗೇರುವ ಡಿಸಿಎಫ್ಗಳು 60-70 ಲಕ್ಷ ತೆರಬೇಕಾದ ಪರಿಸ್ಥಿತಿ ಇದೆಯಂತೆ ! ವಲಯ ಅರಣ್ಯಾಧಿಕಾರಿಗಳು 15-18 ಲಕ್ಷ ಕಕ್ಕಬೇಕು. ಹೊಸ ಅಧಿಕಾರಿಗಳ ವರ್ಗಾವಣೆಯಾದಾಗ ಎಷ್ಟು ಹಣಕೊಟ್ಟು ಬಂದವರೆಂಬ ಆಧಾರದಲ್ಲಿ ಅರಣ್ಯ ಸಂರಕ್ಷಣೆಯ ಪರಿಣಾಮ ಕಾಣಿಸುತ್ತದೆ. ಕೆಳಹಂತದ ಗಾರ್ಡ್‌, ಫಾರೆಸ್ಟರ್‌ಗಳು ಹತ್ತಾರು ಲಕ್ಷ ರೂಪಾಯಿಗಳನ್ನು ವರ್ಗಾವಣೆಗೆ ಸುರಿಯುತ್ತಿರುವಷ್ಟು ವ್ಯವಸ್ಥೆ ಹಾಳಾಗಿದೆ.  ಕಾಸಿನ ಆಟದಲ್ಲಿ ಕಾಡಿನ ಕಾಳಜಿ ಹುಡುಕುವುದು ಬಹಳ ಕಷ್ಟವಿದೆ. ದಕ್ಷತೆ, ಪ್ರಾಮಾಣಿಕತೆ ಬೆಲೆ ಕಳೆದುಕೊಂಡಿದೆ.  ಇಂಥ ವ್ಯವಸ್ಥೆಯಲ್ಲಿ ಇರುವ ಅರಣ್ಯ ಉಳಿಯುವುದೇ ಕಷ್ಟವಿದೆ. ನೀರಿಗಾಗಿ ಕಾಡು ಬೆಳೆಸುವುದು ಯಾವಾಗ? ಜನ ಜಾಗೃತಿ ಮೂಲಕ ಹದಗೆಟ್ಟ ವ್ಯವಸ್ಥೆಗೆ ಚಿಕಿತ್ಸೆ ಬೇಕಾಗಿದೆ.   

– ಶಿವಾನಂದ ಕಳವೆ

Advertisement

Udayavani is now on Telegram. Click here to join our channel and stay updated with the latest news.

Next