Advertisement

ಅರಣ್ಯ ಅಧಿನಿಯಮ ತಿದ್ದುಪಡಿ ಕಾನೂನು ಬಾಹಿರ 

01:41 AM Mar 06, 2019 | |

ಬೆಂಗಳೂರು: ಮುನ್ಸಿಪಲ್‌ ಏರಿಯಾ ಅಥವಾ ಕೈಗಾರಿಕಾ ಪ್ರದೇಶದಲ್ಲಿ ಹೊಸದಾಗಿ ಸಾಮಿಲ್‌ ಹಾಗೂ ಮರ ಆಧಾರಿತ ಉದ್ದಿಮೆ ಸ್ಥಾಪಿಸಲು ಅಧಿಸೂಚಿತ ಅರಣ್ಯ ಪ್ರದೇಶದ 10 ಕಿ.ಮೀ ವ್ಯಾಪ್ತಿ ಅನ್ವಯವಾಗುವುದಿಲ್ಲ ಎಂದು ಕರ್ನಾಟಕ ಅರಣ್ಯ ಅಧಿನಿಯಮ 1969ರ ನಿಯಮ 163ಕ್ಕೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿ ಕಾನೂನು ಬಾಹಿರ ಎಂದು ಹೈಕೋರ್ಟ್‌ ಹೇಳಿದೆ.

Advertisement

ಸರ್ಕಾರ ತಂದಿರುವ ಈ ತಿದ್ದುಪಡಿ ಸಂವಿಧಾನ, ಕಾನೂನುಬಾಹಿರ ಹಾಗೂ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳಿಗೆ ತದ್ವಿರುದ್ಧ ವಾಗಿದ್ದು, ಅದನ್ನು ರದ್ದುಗೊಳಿಸಬೇಕೆಂದು ಕೋರಿ ಕೊಡಗು ಜಿಲ್ಲೆಯ “ಕೂರ್ಗ್‌ ವೈಲ್ಡ್‌ಲೈಫ್ ಸೊಸೈಟಿ’ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ರವಿ ಮಳಿಮಠ ಹಾಗೂ ನ್ಯಾ. ಎಸ್‌.ಜಿ. ಪಂಡಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮಾನ್ಯ ಮಾಡಿತು. ಮರ ಉದ್ದಿಮೆಗೆ ಉತ್ತೇಜನ ನೀಡುವ ಉದ್ದೇಶದಿಂದ ಖಾಸಗಿ ವ್ಯಕ್ತಿಗಳು ಮುನ್ಸಿಪಲ್‌ ಏರಿಯಾ ಅಥವಾ ಕೈಗಾರಿಕಾ ಪ್ರದೇಶಗಳಲ್ಲಿ ಹೊಸದಾಗಿ ಸಾಮಿಲ್‌ ಅಥವಾ ಮರ ಆಧಾರಿತ ಉದ್ದಿಮೆಗಳನ್ನು ಸ್ಥಾಪಿಸಲು ಮುಂದಾದರೆ, ಅದಕ್ಕಾಗಿ ಅಧಿಸೂಚಿತ ಅರಣ್ಯ ಪ್ರದೇಶದ 10 ಕಿ.ಮೀ. ವ್ಯಾಪ್ತಿಯಲ್ಲಿ ಸಾಮಿಲ್‌ ಅಥವಾ ಮರ ಆಧಾರಿತ ಉದ್ದಿಮೆ ಸ್ಥಾಪಿಸಲು ಅವಕಾಶವಿಲ್ಲ ಅನ್ನುವ ಕರ್ನಾಟಕ ಅರಣ್ಯ ಅಧಿನಿಯಮ-1969ರ ನಿಯಮ 163ಕ್ಕೆ ತಿದ್ದುಪಡಿ ತಂದು ಅರಣ್ಯ ಇಲಾಖೆ 2013ರ ಮೇ 20ರಂದು ಗೆಜೆಟ್‌ ಅಧಿಸೂಚನೆ ಪ್ರಕಟಿಸಿತ್ತು. ಆದರೆ, ಈ ತಿದ್ದುಪಡಿಗೆ ಆಕ್ಷೇಪಿಸಿದ್ದ ಅರ್ಜಿದಾರರು, ಸರ್ಕಾರ ತಂದಿರುವ ತಿದ್ದುಪಡಿ ಜಾರಿಯಲ್ಲಿದ್ದರೆ ಅರಣ್ಯ ಪ್ರದೇಶಕ್ಕೆ ಅಪಾಯ ಕಾದಿದೆ. ಇದರಿಂದ ಸಾಮಿಲ್‌ಗ‌ಳು “ಅಣಬೆ’ಗಳ (ನಾಯಿ ಕೊಡೆ) ರೀತಿಯಲ್ಲಿ ಬೆಳೆಯುತ್ತವೆ. ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದು ಹಾಕುವುದರಿಂದ ವ್ಯಾಪಕ ಅರಣ್ಯ ನಾಶಕ್ಕೆ ಕಾರಣವಾಗಲಿದೆ.

ಅಷ್ಟಕ್ಕೂ, ಈ ರೀತಿಯ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ. ಮೇಲಾಗಿ, ಈ ತಿದ್ದುಪಡಿಗೆ ವಿಧಾನಸಭೆಯ ಉಭಯ ಸದನಗಳ ಒಪ್ಪಿಗೆ ಸಹ ದೊರೆತಿಲ್ಲ. ಆದ್ದರಿಂದ ಸಂವಿಧಾನ ಹಾಗೂ ಕಾನೂನು ಬಾಹಿರವಾಗಿರುವ ಈ ತಿದ್ದುಪಡಿ ಅಧಿಸೂಚನೆಯನ್ನು ರದ್ದುಗೊಳಿಸಬೇಕು. ಅರ್ಜಿ ಇತ್ಯರ್ಥಗೊಳ್ಳುವರೆಗೆ ಅಧಿಸೂಚನೆಗೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

ವಾದ ಆಲಿಸಿದ ಬಳಿಕ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಪೀಠ, ತಿದ್ದುಪಡಿ ಕಾನೂನು ಬಾಹಿರ
ಎಂದು ಹೇಳಿ, ಪ್ರಕರಣ ಇತ್ಯರ್ಥಪಡಿಸಿತು. ಅರ್ಜಿದಾರರ ಪರ ವಕೀಲ ಎನ್‌. ರವೀಂದ್ರನಾಥ ಕಾಮತ್‌ ವಾದ ಮಂಡಿಸಿದ್ದರು.

ಬಿಎಸ್‌ವೈ ಆಪ್ತ ಸಹಾಯಕನ ವಿರುದ್ಧದ ತನಿಖೆಗೆ ತಡೆ

Advertisement

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಅವರ ಆಪ್ತ ಸಹಾಯಕನಾಗಿದ್ದ ವಿನಯ್‌ ಮೇಲಿನ ಹಲ್ಲೆ, ಅಪಹರಣ ಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್‌.ಆರ್‌. ಸಂತೋಷ್‌ ವಿರುದ್ಧದ ಸಿಸಿಬಿ ತನಿಖೆಗೆ ಹೈಕೋರ್ಟ್‌ ಮಂಗಳವಾರ ತಡೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌.ಆರ್‌. ಸಂತೋಷ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆಲೋಕ್‌ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣದ ತನಿಖೆಯನ್ನು ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣೆಯಿಂದ ಸಿಸಿಬಿ ಪೊಲೀಸರಿಗೆ ವರ್ಗಾಯಿಸಿ 2019ರ ಜ.24ರಂದು ನಗರ ಪೊಲೀಸ್‌ ಆಯುಕ್ತರು ಹೊರಡಿಸಿದ ಆದೇಶಕ್ಕೆ ತಡೆ ನೀಡಿ ಆದೇಶಿಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್‌, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 2018ರ ಡಿ.17ರಂದು ವಿಚಾರಣಾ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ. ಆದರೆ, ಚಾರ್ಜ್‌ಶೀಟ್‌ ಸಲ್ಲಿಕೆಯಾದ ಬಳಿಕ, ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸುವಂತೆ ದೂರುದಾರ ಕೊಟ್ಟ ಮನವಿ ಆಧರಿಸಿ ನಗರ ಪೊಲೀಸ್‌ ಆಯುಕ್ತರು, ಪ್ರಕರಣವನ್ನು ಮಹಾಲಕ್ಷ್ಮೀಲೇಔಟ್‌ ಪೊಲೀಸ್‌ ಠಾಣೆಯಿಂದ ಸಿಸಿಬಿಗೆ ವರ್ಗಾಯಿಸಿ ಆದೇಶಿಸಿದ್ದಾರೆ. ಫೆ.5ರಂದು ವಿಚಾರಣೆಗೆ ಹಾಜರಾಗುವಂತೆ ಅರ್ಜಿದಾರರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಆದರೆ, ಪ್ರಕರಣವನ್ನು ಸಿಸಿಬಿ ಗೆ ವರ್ಗಾಯಿಸಿರುವುದಕ್ಕೆ ಸೂಕ್ತ ಕಾರಣ ನೀಡಲಾಗಿಲ್ಲ ಎಂದು ವಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next