Advertisement

ವಿದೇಶಿ ಉದ್ಯೋಗಕ್ಕೆ ಹೋಗೋರಿಗೆ ತರಬೇತಿ ನೀಡಲು ಕೇಂದ್ರ

03:45 AM Jan 09, 2017 | |

ಬೆಂಗಳೂರು: ಉದ್ಯೋಗ ಅರಸಿ ಹೊರದೇಶಗಳಿಗೆ ತೆರಳುವ ಯುವಸಮೂಹಕ್ಕೆ ತರಬೇತಿ ನೀಡಲು ಪ್ರವಾಸಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Advertisement

ಭಾನುವಾರ ಪ್ರವಾಸಿ ಭಾರತೀಯ ದಿವಸ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೊರ ದೇಶಗಳಿಗೆ ಹೋಗುವ ಯುವ ಸಮೂಹಕ್ಕೆ ಅಗತ್ಯವಾದ ಕೌಶಲ್ಯ ತರಬೇತಿ ನೀಡಿದರೆ ಅವರ ಭವಿಷ್ಯ ಉಜ್ವಲವಾಗುತ್ತದೆ. ಈ ನಿಟ್ಟಿನಲ್ಲಿ 15ರಿಂದ 30 ದಿನ ತರಬೇತಿ ನೀಡುವ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಹೊರ ದೇಶಗಳಿಗೆ ಉದ್ಯೋಗ ಅರಸಿ ಹೋಗುವ ನಮ್ಮ ಯುವ ಸಮೂಹ ಅಲ್ಲಿನ ಜನರೊಂದಿಗೆ ಹೇಗೆ ಬೆರೆಯಬೇಕು, ಅಲ್ಲಿನ ಕಲೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಹೇಗೆ ಗೌರವಿಸಬೇಕು ಎಂಬುದರ ಬಗ್ಗೆಯೂ ತಿಳಿವಳಿಕೆ ಅಗತ್ಯ. ಹೊರ ದೇಶಕ್ಕೆ ಹೋದವರಲ್ಲಿ ನಾವು ಪರಕೀಯರು ಎಂಬ ಭಾವನೆ ಬರಬಾರದು. ಬದಲಿಗೆ ಅಲ್ಲಿರುವವರೊಂದಿಗೆ ಒಬ್ಬರಾಗಿ ಅಲ್ಲಿನ ಕಾನೂನಿಗೆ ಗೌರವ ನೀಡಿ ಬದುಕಬೇಕಾಗುತ್ತದೆ. ಈ ಎಲ್ಲದರ ಬಗ್ಗೆ ಅರಿವು ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಕೌಶಲ್ಯ ತರಬೇತಿಯು ಸಣ್ಣಪುಟ್ಟ ಉದ್ಯೋಗ ಅರಸಿ ಹೋಗುವವರಿಗೆ ಬಹಳಷ್ಟು ಉಪಯೋಗವಾಗಲಿದೆ. ನಮ್ಮ ನಡೆ- ನುಡಿಯಿಂದ ಹೊರ ದೇಶಗಳಲ್ಲಿ ಗೌರವ ಸಿಗುವಂತಾಗಲಿದೆ ಎಂದು ಹೇಳಿದರು.

ಹೊರದೇಶಗಳಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ವಂಚಿಸುವ ಏಜೆನ್ಸಿಗಳ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಉದ್ಯೋಗ ಕೊಡಿಸುವ ಏಜೆನ್ಸಿಗಳು ಪೋರ್ಟಲ್‌ನಲ್ಲಿ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಆ ಏಜೆನ್ಸಿಗಳು ಇಡಬೇಕಾದ ಠೇವಣಿ ಮೊತ್ತವನ್ನು 20 ಲಕ್ಷ ರೂ.ನಿಂದ 50 ಲಕ್ಷ ರೂ.ಗೆ ಏರಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.
ಬಡತನ ಮತ್ತಿತರ ಕಾರಣಗಳಿಂದ ಬಹಳ ಹಿಂದೆಯೇ ವಿದೇಶಗಳಿಗೆ ಹೋಗಿ ಜೀತದಾಳುಗಳಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಭಾರತೀಯ ಗುರುತಿನ ಚೀಟಿ ನೀಡುವ ಬಗ್ಗೆಯೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಅನಿವಾಸಿ ಭಾರತೀಯರು ಹೊಂದಿರುವ ಪಿಐಓ (ಪೀಪಲ್‌ ಆಫ್ ಇಂಡಿಯನ್‌ ಒರಿಜಿನ್‌) ಕಾರ್ಡ್‌ ಅನ್ನು ಓಸಿಐ (ಓವರ್‌ಸೀಸ್‌ ಸಿಟಿಜನ್‌ ಆಫ್ ಇಂಡಿಯಾ) ಕಾರ್ಡ್‌ಗಳಾಗಿ ಪರಿವರ್ತಿಸಿಕೊಳ್ಳಲು ಜೂನ್‌ 30ರವರೆಗೆ ಕಾಲಾವಕಾಶ ನೀಡಲಾಗಿದ್ದು ಅಷ್ಟರಲ್ಲಿ ಎಲ್ಲರೂ ಬದಲಾಯಿಸಿಕೊಳ್ಳಬೇಕು. ಬೆಂಗಳೂರು ಮತ್ತು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇದಕ್ಕಾಗಿ ವಿಶೇಷ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

Advertisement

ನೋಟು ರದ್ದತಿ ಬಗ್ಗೆ ಪೂಜಾರಿಗಳಿಂದ ಗೊಂದಲ: ಮೋದಿ
ನೋಟು ಅಮಾನ್ಯ ಕ್ರಮದ ಸಮರ್ಥನೆಗೆ ಪ್ರವಾಸಿ ಭಾರತೀಯ ದಿವಸ ಸಮಾವೇಶದ ವೇದಿಕೆಯನ್ನು ಬಳಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರ ಮತ್ತು ಕಪ್ಪುಹಣ ನಿಯಂತ್ರಣಕ್ಕೆ ಇಂಥದ್ದೊಂದು ದಿಟ್ಟ ಕ್ರಮ ಕೈಗೊಂಡಿದ್ದೇನೆ. ಆದರೆ, ಕೆಲವು ರಾಜಕೀಯ ಪಕ್ಷಗಳ ಪೂಜಾರಿಗಳು ವಿನಾಕಾರಣ ಜನರಲ್ಲಿ ಗೊಂದಲ ಮೂಡಿಸಿ. ಏನೇನೋ ಸಮಸ್ಯೆಯಾಗಿದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸಮಾಜ ಮತ್ತು ರಾಜಕಾರಣವನ್ನು ಕಲುಷಿತಗೊಳಿಸುತ್ತಿರುವ ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ನನ್ನ ಸಮರ ನಿಲ್ಲುವುದಿಲ್ಲ. ಇದಕ್ಕೆ ಬೇಕಾದ ಎಲ್ಲ ಕ್ರಮ ಕೈಗೊಳ್ಳುತ್ತೇನೆ. ಅಗತ್ಯವಾದರೆ ತಿದ್ದುಪಡಿ, ನಿಯಮ ರೂಪಿಸುತ್ತೇನೆ. ಈ ವಿಚಾರದಲ್ಲಿ ನೀವು ನನ್ನೊಂದಿಗೆ ಇದ್ದೀರಲ್ಲವೇ ಎಂದಾಗ ಎಲ್ಲರೂ ಕೈ ಎತ್ತಿ ಬೆಂಬಲ ಸೂಚಿಸಿದಾಗ ಮುಗುಳ್ನಗೆ ಬೀರಿದ ಮೋದಿ, ನಿಮಗೆ ಧನ್ಯವಾದ ಎಂದರು.

ಮೋದಿ… ಮೋದಿ… ಮೋದಿ….
ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತೀಯ ದಿವಸ್‌ನಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಅವರು ವೇದಿಕೆಗೆ ಆಗಮಿಸಿ, ನಿರ್ಗಮಿಸುವವರೆಗೂ ಸಭಿಕರು ಮೋದಿ… ಮೋದಿ… ಎಂದು ಘೋಷಣೆ ಕೂಗಿದರು. ಮೋದಿ ಅವರು ನೋಟು ನಿಷೇಧ, ಭ್ರಷ್ಟಾಚಾರ, ಕಪ್ಪು ಹಣ ವಿಷಯಗಳನ್ನು ಪ್ರಸ್ತಾಪಿಸಿದಾಗಲೂ ಮೋದಿ… ಮೋದಿ…ಮುಗಿಲುಮುಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next