Advertisement

Bengaluru rain: ಮಳೆಗೆ ವಿದೇಶಿ ತಳಿ ಮರಗಳೇ ಹೆಚ್ಚು ಧರೆಗೆ

10:16 AM May 13, 2024 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದ ಬಿರುಗಾಳಿ ಮಳೆಗೆ ದೊಡ್ಡ ದೊಡ್ಡ ಗಾತ್ರದ 270ಕ್ಕೂ ಅಧಿಕ ಮರಗಳು ನೆಲಕ್ಕುರುಳಿದ್ದು, ಇದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.

Advertisement

ಸಣ್ಣ ಬಿರುಗಾಳಿ ಮಳೆಗೆ ವಿವಿಧ ಜಾತಿಯ ಮರಗಳು ನೆಲಕ್ಕುರುಳಿದ್ದು, ಈ ಪೈಕಿ ವಿದೇಶಿ ತಳಿ ಮರಗಳೇ ಅಧಿಕವಾಗಿವೆ. ಬೆಂಗಳೂರು ವ್ಯಾಪ್ತಿಯಲ್ಲಿರುವ ಬಹುತೇಕ ಗಿಡ ಮರಗಳು ಮೂಲತಃ ದೇಶಿ ತಳಿಗಳಲ್ಲ. ಬದಲಾಗಿ ಹೆಚ್ಚಿನವು ವಿದೇಶಿ ತಳಿಗಳು. ಅವುಗಳ ಬೇರು, ಕಾಂಡ ಗಟ್ಟಿಯಾಗಿರುವುದಿಲ್ಲ. ದೇಶಿ ತಳಿಗಳಾದ ಅಶ್ವತ್ಥ, ಅರಳಿ ಮತ್ತಿತರ ಮರದ ಬೇರುಗಳು ಆಳಕ್ಕೆ ಇಳಿಯುತ್ತವೆ. ಎಂತಹ ಗಾಳಿ, ಮಳೆಗೂ ಉರುಳದೆ ನೂರಾರು ವರ್ಷ ಗಳ ಕಾಲ ಗಟ್ಟಿಯಾಗಿ ನಿಲ್ಲುತ್ತವೆ. ಆದರೆ, ಇತ್ತೀಚೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನೆಲಕ್ಕೆ ಉರುಳಿ ಬಿದ್ದಿರುವ ಮರಗಳು ಗುಲ್ಮೊಹರ್‌, ಸ್ಪಾಥೋಡಿಯಾ ಮತ್ತು ಪೆಲ್ಟೋಫೂರಮ್‌ ಸೆಪ್ಸಿಯ ಮರಗಳಾಗಿವೆ. ಇವುಗಳು ಭೂಮಿ ಆಳದಲ್ಲಿ ಬೇರು ಬಿಟ್ಟಿರುವುದಿಲ್ಲ ಎಂದು ಸಸ್ಯ ಸಂಶೋಧಕಿ, ಪರಿಸರವಾದಿ ಭಾರ್ಗವಿ ಹೇಳುತ್ತಾರೆ.

ಬಿಬಿಎಂಪಿ ಅರಣ್ಯ ವಿಭಾಗದವರಿಗೆ ಯಾರು ವಿದೇಶಿ ಗಿಡಗಳನ್ನು ನೆಡಲು ಸಲಹೆ ಸೂಚನೆ ನೀಡುತ್ತಿ ದ್ದಾರೋ ತಿಳಿಯುತ್ತಿಲ್ಲ. ಬಹುತೇಕ ನರ್ಸರಿಗಳು ಕೂಡ ವಿದೇಶಿ ತಳಿಗಳಿಗೆ ಅವಲಂಬಿತವಾಗಿವೆ. ಜತೆಗೆ ವಿದೇಶಿ ತಳಿಗಳನ್ನೇ ಆಯ್ಕೆ ಮಾಡುತ್ತಿದ್ದಾರೆ. ಬೆಂಗ ಳೂರು ಅಂತಾರಾಷ್ಟ್ರೀಯ ವಿಮಾನದಿಂದ ನಮ್ಮ ಚರ್ಚ್‌ ಸ್ಟ್ರೀಟ್‌ ತನಕ ದುಬೈ ಪಾಮ್‌ ಟ್ರೀಗಳನ್ನೇ ಕಾಣುತ್ತಿದ್ದೇವೆ. ಇವುಗಳಿಂದ ಏನೇನೂ ಪ್ರಯೋಜನ ವಿಲ್ಲ. ಆದರೆ ಮಾವು, ಬೇವು, ಹಲಸು, ಚೇಪೆಕಾಯಿ ಅಂತಹ ಗಿಡಗಳನ್ನು ನೆಡಲು ಬಿಬಿಎಂಪಿ ಏಕೆ ಆಸಕ್ತಿ ತೋರುತ್ತಿಲ್ಲ ಎಂಬುವುದೇ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಮರಗಳ ಬುಡವೇ ಭದ್ರವಾಗಿಲ್ಲ: ಬೆಂಗಳೂರಿನಲ್ಲಿ ರುವ ಮರಗಳ ಬುಡವೇ ಭದ್ರವಾಗಿಲ್ಲ. ಬೃಹತ್‌ ಮರಗಳ ಕಾಂಡಗಳು ಟೊಳ್ಳು. ಸ್ವಲ್ಪ ಗಾಳಿ ಬೀಸಿದರೂ ನೆಲಕ್ಕೆ ಉರುಳುತ್ತವೆ ಎನ್ನುವುದು ಹಿರಿಯ ಪರಿಸರ ತಜ್ಞ ಡಾ.ಯಲ್ಲಪ್ಪ ರೆಡ್ಡಿ ಅವರ ಮಾತಾಗಿದೆ. ಅತ್ಯಂತ ವೇಗವಾಗಿ ಬೆಳೆಯುತ್ತವೆ ಎಂಬ ಒಂದೇ ಒಂದು ಕಾರಣದಿಂದ ಬೆಂಗಳೂರಿನ ರಸ್ತೆಗಳ ಪಕ್ಕದಲ್ಲಿ ವಿದೇಶಿ ತಳಿಯ ಗಿಡಗಳನ್ನು ನೆಡಲಾಗಿದೆ. ಇವುಗಳ ಬೇರುಗಳು ಗಟ್ಟಿಯಾಗಿರುವುದಿಲ್ಲ. ಮೊನ್ನೆ ಗಾಳಿಗೆ ಬಿದ್ದ ಮರಗಳಲ್ಲಿ ಹೆಚ್ಚಿನವು ವಿದೇಶಿ ತಳಿಯ ಮರಗಳು. ನಗರದಲ್ಲಿರುವ ಹೆಚ್ಚಿನ ಗಿಡ ಮರಗಳು ವಿದೇಶಿ ತಳಿಗಳಾಗಿದ್ದು, ಅವುಗಳ ಬೇರು, ಕಾಂಡ ಗಟ್ಟಿಯಾಗಿರುವುದಿಲ್ಲ ಎನ್ನುತ್ತಾರೆ. ಈ ಕುರಿತು ಬಿಬಿಎಂಪಿಯ ಅರಣ್ಯ ವಿಭಾಗದ ಅಧಿಕಾರಿಗಳು ಗಮನ ಹರಿಸಿ ಸ್ವದೇಶಿ ತಳಿಗಳು, ಹೆಚ್ಚು ಕಾಲ ಬಾಳಿಕೆಗೆ ಬರುವ ಸಸಿಗಳನ್ನು ನೆಟ್ಟು ಬೆಳೆಸಲು ಮುಂದಾಗಬೇಕು ಎಂಬುದು ಪರಿಸರಪ್ರೇಮಿಗಳ ಒತ್ತಾಯವಾಗಿದೆ.

ಮರಗಳ ಬುಡಕ್ಕೆ ಹಾಕಿರುವ ಕಾಂಕ್ರಿಟ್‌ ತೆರವುಗೊಳಿಸಿ: ಟ್ರೀ ತಜ್ಞ : ರಾಜಧಾನಿಯ ಪಾದಚಾರಿ ರಸ್ತೆ ಮಾರ್ಗಗಳಲ್ಲಿರುವ ಮರಗಳ ಬುಡು ಪೂರ್ತಿಯಾಗಿ ಸಿಮೆಂಟ್‌ಗಳಿಂದ ಸುತ್ತುವರಿದಿದೆ. ಹೀಗಾಗಿ, ಮರದ ಬೇರುಗಳಿಗೆ ನೀರು ಹೋಗುವುದು ಎಲ್ಲಿಂದ ಸಾಧ್ಯ, ಬಿಬಿಎಂಪಿ ಮೊದಲು ಮರಗಳ ಬುಡಕ್ಕೆ ಹಾಕಲಾಗಿರುವ ಸಿಮೆಂಟ್‌ ತೆಗೆಸುವ ಕಾರ್ಯಕ್ಕೆ ಮುಂದಾಬೇಕು. ಗುತ್ತಿಗೆದಾರರಿಗೆ ಮರಗಳನ್ನು ಚೌಕು ಮಾಡದಂತೆ ತಾಕೀತು ಮಾಡಬೇಕು. ಜತೆಗೆ ನೀರು ಪೂರೈಕೆಗೆ ಜಾಗ ಬಿಡಬೇಕು. ಮರಗಳಿಗೆ ಲವಣಾಂಶ ದೊರೆಯದಿದ್ದರೆ ಅವುಗಳು ಕೂಡ ಆರೋಗ್ಯವಾಗಿ ಇರುವುದಿಲ್ಲ. ಇದನ್ನು ಬಿಬಿಎಂಪಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಟ್ರೀ ತಜ್ಞ ವಿಜಯ್‌ ನಿಶಾಂತ್‌ ಹೇಳುತ್ತಾರೆ.

Advertisement

ನಗರದಲ್ಲಿ ಆಳವಾಗಿ ಬೇರೂರುವ ದೇಶಿಯ ತಳಿಗಳನ್ನು ನೆಡುತ್ತಿಲ್ಲ. ಬಹು ಬೇಗನೆ ಬೆಳೆಯುವ ಸಣ್ಣಗಾಳಿಗೂ ಬುಡಮೇಲಾಗುವ ಗಿಡಗಳನ್ನೇ ನೆಡುತ್ತಿರುವುದು ಕೂಡ ಮರಗಳು ಬೀಳಲು ಒಂದು ಕಾರಣ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕು. ●ಯಲ್ಲಪ್ಪ ರೆಡ್ಡಿ, ಹಿರಿಯ ಪರಿಸರವಾದಿ

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next