ಇತ್ತೀಚೆಗೆ ಪ್ರವಾಸಿಗರಲ್ಲಿ ತಮ್ಮ ಆರೇೂಗ್ಯದ ಬಗ್ಗೆಯೂ ಕಾಳಜಿ ಹೆಚ್ಚಾಗುತ್ತಿದ್ದು ತಮ್ಮ ಊಟ, ವಸತಿ ಬಗ್ಗೆ ಎಷ್ಟು ಆದ್ಯತೆ ಕೊಡುತ್ತಿದ್ದಾರೆ ಅಷ್ಟೇ ಪ್ರಾಮುಖ್ಯತೆಯನ್ನು ತಮ್ಮ ಬೆಳಿಗ್ಗಿನ ಅಥವಾ ಸಂಜೆಯ ವಾಕಿಂಗ್ ಗಾಗಿಯೇ ಒಂದಿಷ್ಟು ಸಮಯ ಮೀಸಲಿಡುವುದು ಸಾಮಾನ್ಯವಾಗಿ ಬಿಟ್ಟಿದೆ..ಆದರೆ ಇಂದು ಅದೇಷ್ಟೊ ನಗರ ಪ್ರದೇಶಗಳಲ್ಲಿ ವಾಕಿಂಗ್ ಅರ್ಥಾತ್ ವಾಯು ವಿಹಾರಕ್ಕೆ ಉತ್ತಮ ಪರಿಸರಯುಕ್ತ ವಿಶಾಲ ಪ್ರದೇಶ ಸಿಗುವುದು ತೀರ ಕಡಿಮೆ. ಹಾಗಾಗಿ ಹೆಚ್ಚಿನವರು ತಾವು ಉಳಿದು ಕೊಂಡ ವಸತಿಗೃಹಗಳ ಸುತ್ತಿನಲ್ಲಿಯೇ ಗಿರಕಿ ಹೊಡೆಯುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ..
ನಾನು ಅಬುಧಾಬಿಯ ಮುಖ್ಯ ನಗರ ಪ್ರದೇಶಕ್ಕೆ ಹೇೂದಾಗ ಮೊದಲು ಹುಡುಕಿಕೊಂಡಿದ್ದು ವಾಕಿಂಗ್ ಗೆ ಎಲ್ಲಿ ಜಾಗ ಸಿಗಬಹುದು ಅನ್ನುವುದನ್ನು..ಆದರೆ ನನ್ನ ಕಣ್ಣಿಗೆ ಹತ್ತಿರದಲ್ಲೇ ಸಿಕ್ಕಿದ ಪ್ರದೇಶವೆಂದರೆ ಅಲ್ಲಿನ ಸಮುದ್ರ ತಡದಲ್ಲಿಯೇ ಅತೀ ಸುಂದರವಾದ ವಿಸ್ತಾರವಾದ ಪ್ರಕೃತಿಯ ಮಡಿಲಲ್ಲಿಯೇ ವಾಕಿಂಗ್ ಗಾಗಿಯೇ ರೂಪಿತವಾದ ಕೊರ್ನಿಕ ವಾಕಿಂಗ್ ಬೀಚ್. ಇದರ ಸೌಂದರ್ಯತೆಯನ್ನು ನೇೂಡಿ ಕಣ್ಣು ತುಂಬಿಕೊಂಡಾಗಲೇ ಇದರ ವಾಸ್ತವಿಕತೆಯ ಪರಿಚಯವಾಗ ಬಲ್ಲದು.
ಒಂದೆಡೆ ವಿಸ್ತಾರವಾದ ಉದ್ದದ ಪ್ರಶಾಂತವಾದ ಸಮುದ್ರದ ವಿಹಂಗಮ ನೇೂಟ. ಇದನ್ನು ನೇೂಡಿಯೇಅಲ್ಲಿನ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಅತ್ಯಂತ ಕಾಳಜಿಯಿಂದ ವಾಕಿಂಗ್ ಟ್ರ್ಯಾಕ್ ರಸ್ತೆಯನ್ನು ನಿರ್ಮಾಣ ಮಾಡಿದೆ ಅನ್ನುವುದನ್ನು ನೇೂಡಿದ ತಕ್ಷಣವೇ ಅರಿವಾಗುತ್ತದೆ. ಸಮುದ್ರ ಕಿನಾರೆಯಲ್ಲಿ ಸುಮಾರು ಎಂಟು ಕಿ.ಮಿ.ಉದ್ದಕ್ಕೂ ಗಟ್ಟಿ ಮುಟ್ಟಾಗಿ ಸಿಮೆಂಟ್ ಇಂಟರ್ ಲಾಕ್ ಅಳವಡಿಸಿ ಅತ್ಯಂತ ಕಲಾತ್ಮಕವಾಗಿ ರಚನೆ ಮಾಡಿರುವ ವಾಕಿಂಗ್ ಟ್ರ್ಯಾಕ್ . ಈ ಉದ್ದೇಶಕ್ಕಾಗಿಯೇ ವಿಸ್ತಾರವಾದ ಸುಸಜ್ಜಿತವಾದ ರಸ್ತೆ..
ರಸ್ತೆಯ ಇಕ್ಕಡೆಯಲ್ಲಿ ವಿವಿಧ ಬಗೆಯ ಮರಗಳು ಹಸಿರು ಹಾಸಿದ ಹುಲ್ಲಿನ ಲಾನ್ ಗಳು ..ಸಂಜೆಯ ಹೊತ್ತಿನಲ್ಲಿ ಝಗ ಮಗಿಸುವ ವಿದ್ಯುತ್ ಅಲಂಕೃತ ದಾರಿ ದೀಪಗಳು..ನೀರಿನ ಕಾರಂಜಿಗಳು ವಾಕಿಂಗ್ ಮಾಡಿ ಆಯಾಸವಾದವರಿಗೆ ವಿರಮಿಸಲು ಅಲ್ಲಲ್ಲಿ ವಾಕಿಂಗ್ ಟ್ರ್ಯಾಕ್ ಉದ್ದಕ್ಕೂ ಆಸನದ ವ್ಯವಸ್ಥೆ ಮಾಡಲಾಗಿದೆ.
ಇದಕ್ಕಿಂತ ಮಿಗಿಲಾಗಿ ಸ್ವಚ್ಛತೆ ಕಾಪಾಡಿಕೊಂಡು ಬಂದಿರುವುದು ಪ್ರವಾಸಿಗರ ಗಮನ ಸೆಳೆಯುವ ಪ್ರಮುಖವಾದ ಅಂಶ. ವಾಕಿಂಗ್ ಪರಿಸರದಲ್ಲಿ ಯಾವುದೇ ವಾಹನಗಳಿಗೆ ಪ್ರವೇಶವಿಲ್ಲ.. ಆನಂದವಾಗಿ ಮುಕ್ತ ಮನಸ್ಸಿನಲ್ಲಿ ವಾಯುವಿಹಾರ ಮಾಡುವವರಿಗೆ ಸ್ವರ್ಗದ ತಾಣವಾಗಿ ಕಾಣುವುದಂತೂ ಸತ್ಯ. ಒಂದೆಡೆ ಸಮುದ್ರದ ಅಬ್ಬರ ಇಳಿತದ ದೃಶ್ಯವಾದರೆ ಇನ್ನೊಂದು ಪಕ್ಕದಲ್ಲಿ ವಿಸ್ತಾರವಾದ ರಾಷ್ಟ್ರ ಹೆದ್ದಾರಿ.ವಾಕಿಂಗ್ ಮುಗಿಸಿ ರಸ್ತೆ ಧಾಟಿ ಹೇೂಗುವವರ ಅನುಕೂಲಕ್ಕಾಗಿಯೇ ಹೆದ್ದಾರಿಯ ಅಡಿಯಲ್ಲಿಯೇ ಬಹು ಕಲಾತ್ಮಕವಾಗಿ ಬಣ್ಣ ಬಣ್ಣದ ದೀಪಗಳಿಂದ ರಚನೆಗೊಂಡ ಅಂಡರ್ ಪಾಸ್ ಜನರು ನಡೆದು ಹೇೂಗಲೆಂದೇ ಮಾಡಿದ ಕಿರುದಾದ ರಸ್ತೆ..
ಅಂತೂ ಅಬುಧಾಬಿಯ ಸಮುದ್ರ ತೀರದಲ್ಲಿ ನಡೆದಾಡುವಾಗ ಬೇರೆ ಬೇರೆ ದೇಶ ವಿದೇಶಗಳ ಜನರ ಮುಖ ದರ್ಶನ ಮಾಡಬಹುದು ಭಾಷೆ ಗಳನ್ನು ಕೇಳ ಬಹುದು. ಅವರ ಮುಖದಲ್ಲಿ ಎಲ್ಲಿಯೂ ನಗೆಯೂ ಇಲ್ಲ ಹಗೆಯೂ ಇಲ್ಲ.ಎಲ್ಲರೂ ಕೂಡಾ ಅಲ್ಲಿನ ನಿಯಮಗಳನ್ನು ಚಾಚು ತಪ್ಪದೆ ಪಾಲಿಸುತ್ತಾರೆ ಅನ್ನುವುದು ಮೊದಲಾಗಿ ಗಮನಕ್ಕೆ ಬರುತ್ತದೆ..ರಸ್ತೆಯ ಮಧ್ಯದಲ್ಲಿ ವ್ಯಾಪಾರ ಮಾಡುವವರಿಲ್ಲ ಭಿಕ್ಷೆ ಬೇಡುವವರಿಲ್ಲಉಗುಳುವರು ಇಲ್ಲ ತೆಗೆಳುವವರು ಇಲ್ಲ. ಅಂತು ಇದನ್ನೆಲ್ಲಾ ಯಾರು ಗಮನಿಸುತ್ತಾರೊ ಗೊತ್ತಿಲ್ಲ..ಅಂತೂ ಅಲ್ಲಿನ ಸ್ವಚ್ಛತೆಯನ್ನು ನೇೂಡಿಯೇ ಜನ ಸ್ವಚ್ಛತೆಯ ಪಾಠ ಕಲಿತ್ತಿದ್ದಾರೆ ಅನ್ನಿಸುವಂತಿದೆ.ಏನೇ ಆಗಲಿ ಪ್ರವಾಸೋದ್ಯಮದ ಕುರಿತಾಗಿ ಗಂಭೀರವಾಗಿ ಚಿಂತನೆ ಮಾಡುವ ಸರ್ಕಾರಗಳಿಗೆ ಇದೊಂದು ಉತ್ತಮ ಪರಿಕಲ್ಪನೆಯಾಗಿ ನಿಲ್ಲಬಹುದು ಅನ್ನುವುದು ನನ್ನ ಪ್ರವಾಸಕಾಲದಲ್ಲಿ ಅರಿತುಕೊಂಡ ಅಧ್ಯಯನವೂ ಹೌದು.
*ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ (ಅಬುಧಾಬಿಯಿಂದ)