ಹೊಸಪೇಟೆ: “ನನಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರೂ ಪಕ್ಷದವರ ಬೆಂಬಲವಿದ್ದು, ನನ್ನನ್ನು ಗೆಲ್ಲಿಸಲು ಎಲ್ಲರೂ ತೆರೆಮರೆಯಲ್ಲಿ ತುದಿಗಾಲಿನಲ್ಲಿ ನಿಂತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಕೊನೆಗೆ ನನ್ನ ಓಟು ನನಗೆ ಬಿದ್ದರೆ ಸಾಕು’ ಎಂದು ಬಂಡಾಯ ಅಭ್ಯರ್ಥಿ ಕವಿರಾಜ್ ಅರಸ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. ಒಂದೊಮ್ಮೆ ಸಿಎಂ ಯಡಿಯೂರಪ್ಪ ಬಂದು ಹೇಳಿದರೂ ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಆನಂದ್‌ಸಿಂಗ್ ಅವರ ಬಿಜೆಪಿ ಸೇರ್ಪಡೆಗೆ ನನ್ನ ವಿರೋಧವಿಲ್ಲ. ಅವರಿಗೆ ಟಿಕೆಟ್ ನೀಡಿರುವುದು ನಿಷ್ಠಾವಂತ ಕಾರ್ಯಕರ್ತರಿಗೆ ಬೇಜಾರಾಗಿದೆ. ಈ ಹಿಂದೆ ನಾನು ಜಿ.ಪಂ.ಗೆ ಸ್ಪರ್ಧಿಸಿದಾಗ ನನ್ನನ್ನು ಸೋಲಿಸಲು ಸಿಂಗ್ ಪ್ರಯತ್ನಿಸಿದ್ದರು. ಒಂದೊಮ್ಮೆ ನಾನು ಗೆದ್ದರೆ ತಮಗೆ ಪ್ರತಿಸ್ಪರ್ಧಿಯಾಗುತ್ತೇನೆಂಬ ಭಯದಿಂದ ನನ್ನನ್ನು ರಾಜಕೀಯವಾಗಿ ತುಳಿದರು ಎಂದರು.
ಆನಂದಸಿಂಗ್ ಪ್ರಬಲ ನಾಯಕರಾಗಿ ಬೆಳೆದಿದ್ದಾರೆ. ಆನಂದಸಿಂಗ್ ಆನೆ. ನಾನು ಇರುವೆ. ನನ್ನನ್ನು ಅವರು ಕಾಲಿನಲ್ಲಿ ಹೊಸಕಿ ಹಾಕಬಹುದು. ಆದರೆ, ಆನೆ ಸೊಂಡಿಲಿನಲ್ಲಿ ಇರುವೆ ಹೊಕ್ಕರೆ ಆನೆಗೆ ತೊಂದರೆಯಾಗುತ್ತದೆ ಎಂದು ವ್ಯಂಗ್ಯವಾಡಿದರು.
ಮನವೊಲಿಕೆಗೆ ಬಿಜೆಪಿ ನಾಯಕರು ವಿಫಲ: ಬಂಡಾಯ ಅಭ್ಯರ್ಥಿ ಕವಿರಾಜ್ ಅರಸ್ ನಿವಾಸಕ್ಕೆ ತೆರಳಿ ಬಿಜೆಪಿ ನಾಯಕರು ಶನಿವಾರ ನಡೆಸಿದ ಸಂಧಾನ ವಿಫಲವಾಗಿದೆ. ಬಿಜೆಪಿ ಅಭ್ಯರ್ಥಿ ಆನಂದ್‌ಸಿಂಗ್, ಚುನಾವಣಾ ಉಸ್ತುವಾರಿ ಎಂಎಲ್‌ಸಿ ರವಿಕುಮಾರ್, ಸಂಸದ ದೇವೇಂದ್ರಪ್ಪ, ಸಂಸದ ಕರಡಿ ಸಂಗಣ್ಣ ಸೇರಿದಂತೆ ಇತರರು ಅರಸ್ ನಿವಾಸಕ್ಕೆ ತೆರಳಿ ಮನವೊಲಿಸುವ ಪ್ರಯತ್ನ ನಡೆಸಿದರೂ ಅರಸ್ ಮಾತ್ರ ತಮ್ಮ ನಿಲುವಿನಿಂದ ಹಿಂದೆ ಸರಿಯಲೇ ಇಲ್ಲ. ಸುಮಾರು ಒಂದು ತಾಸುಗಳ ಕಾಲ ನಡೆಸಿದ ಪ್ರಯತ್ನ ವಿಫಲವಾಗುತ್ತಿದ್ದಂತೆಯೇ ಬಿಜೆಪಿ ನಾಯಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸಾದರು.
ಸಿಂಗ್ ಕಾಲಿಗೆ ಬಿದ್ದ ಅರಸ್: “ಈ ಬಾರಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ಕೊಡಿ’ ಎಂದು ಅರಸ್ ಅವರು ಬಂಡಾಯ ಶಮನಕ್ಕೆ ನಿವಾಸಕ್ಕೆ ಆಗಮಿಸಿದ ಆನಂದ್ ಸಿಂಗ್ ಕಾಲಿಗೆ ಎರಗಿ ಅಂಗಲಾಚಿದರು. ಈ ಹಂತದಲ್ಲಿ ಸಿಂಗ್ ಹಿಂದೆ ಸರಿದರು. ಈ ದೃಶ್ಯವನ್ನು ಕಂಡ ಕೆಲವರು ದಂಗಾದರು.