Advertisement

ಬೆಟ್ಟಕ್ಕೆ ಪ್ರೀತಿಯಾದರೆ ಯಾರು ಕೊಡಿಸುವರಯ್ಯ

03:45 AM Jan 24, 2017 | |

ಕರವೀರ ಹೂ ಅಂದುಕೊಂಡಳು, ಅರೆ ಕರವೀರ ಅಂತ ಉದ್ಗರಿಸಿದಳು.

Advertisement

“ಏಯ್‌ ಅಲ್ಲ, ಯಾವೊªà ಕಾಡು ಹೂ’ ಅಂತ ಅವನೆಂದ.

ಅವಳ ಮುಖ ಚಿಕ್ಕದಾಯಿತು. ಅವಳ ಊರಲ್ಲಿ ಕರವೀರದ ಮರವೇ ಮನೆ ಪಕ್ಕ ಇತ್ತು, ಇನ್ನೂ ಮೊಗ್ಗಾಗಿದ್ದಾಗಲೇ ಅದನ್ನು ಕೊಯ್ದರೆ ಅದರಲ್ಲೊಂದು ನೀರು ಜಿನುಗುತ್ತಿತ್ತು, ಅದನ್ನು ಬಾಯಲ್ಲಿಟ್ಟುಕೊಂಡರೆ ಆ ರಸ, ಅಬ್ಟಾ ಏನು ರುಚಿ! ಬಾಯಿ ಚಪ್ಪರಿಸಿದಳು. “ಹಾಗೆಲ್ಲಾ ಇದನ್ನೂ ಕಿತ್ತು ರಸ ಕುಡಿಯೋದಕ್ಕೆ ಹೋಗಿಬಿಟ್ಟಿàಯಾ, ತುಂಬ ವಿಷ’ ಅಂದ ಅವನು.

“ಸಾಯೋದಂತೂ ಸಾಯೋದೇ ತಾನೇ, ಕರವೀರದ ರಸ ಕುಡಿದು ಸತ್ತೆ ಅಂತ ಖುಷಿಯಾಗಿ ಸಾಯೆ¤àನೆ ಬಿಡು’ ಅಂದಳು ಅವಳು.

ಅವನು ಕತ್ತು ಹೊರಳಿಸಿ ನೋಡಿದ ಅವಳ ಕಣ್ಣಲ್ಲಿ ಸಾವಿತ್ತು.

Advertisement

ಅವನಿಗರಿವಿಲ್ಲದೇ ಅವನ ಕೈ ಅವಳ ಕೈಯನ್ನು ಮುದ್ದೆ ಮಾಡಿ ಹಿಡಿದುಕೊಂಡಿತು, ಅವನ ಕೈಲೂ ಸಾವಿನ ಭಯವಿತ್ತು.

ಹೀಗೇ ಗುಡ್ಡ ಏರಿ ನಿಂತರೆ ಪರ್ವತ, ತಾವು ಈವರೆಗೆ ಏರಿದ ಅತ್ಯಂತ ಎತ್ತರದ ಪ್ರವೇಶ ಇದಾಗಿರುತ್ತದೆ, ಜಿಗಿದರೆ ಹಾರಿದ ಅತ್ಯಂತ ಆಳದ ಪ್ರದೇಶವೂ ಅದಾಗಿರುತ್ತದೆ. ಹೀಗೆ ಏರುತ್ತಾ ಹೋಗಿ ಹಾಗೇ ಹಾರಿ ಎದೆ ಹಗುರವಾಗುವ ಅನುಭವವನ್ನು ಅನುಭವಿಸುವುದಕ್ಕೆ ಸಾಧ್ಯವಿದೆಯಾ, ಜೀವ ಹೋಗುವಾಗ ಚಡಪಡಿಕೆಯಾಗುತ್ತದಾ, ಸಂತೋಷವಾಗುತ್ತದಾ, ಅದರ ಅನುಭವ ಹೇಗಿರುತ್ತದೆ, ಆ ಅನುಭವ ಆಗಬೇಕೆಂದರೆ ಹಾರಿಯೇ ನೋಡಬೇಕಾ, ಗೂಗಲ್‌ನಲ್ಲಿ ಸರ್ಚ್‌ ಕೊಟ್ಟರೆ ಗೊತ್ತಾಗುವುದಿಲ್ಲವಾ?

ಪ್ರೀತಿಯಂತೆ ಸಾವು ಕೂಡ, ಆಳ, ಗೂಢಾಕರ್ಷಕ!

ಹೀಗೇ ಇಬ್ಬರಲ್ಲೂ ಆಲೋಚನೆಯ ಭಾರ, ಹೊತ್ತು ಹತ್ತುತ್ತಾ ಇದ್ದರು.

“ಗೊತ್ತಾದ್ರೆ ನಿಮ್ಮಣ್ಣ ನಿಜವಾಗ್ಲೂ ನಮ್ಮನ್ನ ಕತ್ತರಿಸಿ ಹಾಕ್ತಾನೇನೇ?’

ಅವಳನ್ನು ಅವನು ಮುಗ್ಧವಾಗಿ ಕೇಳಿದ, ಅವಳು ಅವನ ಕಾಲತ್ತ ನೋಡಿದಳು, ಎಡ ಕಂಕುಳಲ್ಲಿ ಊರುಗೋಲು ಸಿಕ್ಕಿಸಿಕೊಂಡು ಹಾರಿ ಹಾರಿ ಕಲ್ಲಿನ ಬೆಟ್ಟ ಏರುತ್ತಿದ್ದ, ಅವನಿಗೆ ಅವಳ ನೋಟದಲ್ಲೇ ಉತ್ತರ ಸಿಕ್ಕಿತು, ತಲೆ ತಗ್ಗಿಸಿದ. ಅವಳು ಕೈ ಬೆರಳಲ್ಲಿ ಅವಳ ಗಲ್ಲ ಹಿಡಿದು ಮೇಲೆತ್ತಿದಳು, ಅವನ ಕಣ್ಣಲ್ಲಿ ಅವಳ ಜೀವವೇ ಅಡಗಿತ್ತು.

“ಏಯ್‌ ಇಲ್ಲ, ಅಣ್ಣನ್ನ ಒಪೊÕàದು ಕಷ್ಟವೇನಲ್ಲ..’

ಅವಳು ಆಚೆ ಕಡೆಗೆ ಕತ್ತು ಹೊರಳಿಸಿದಳು. ಅವನು ಮತ್ತೂಂದು ಕಡೆ ಕತ್ತು ತಿರುಗಿಸಿದ. ಅವರಿಬ್ಬರ ಮಧ್ಯೆ ಸತ್ಯ ಕಾಲು ಮುರಿದು ಬಿದ್ದಿತ್ತು.

ಅವಳಿಗೆ ಅವನೆಂದರೆ ತುಂಬ ಇಷ್ಟ, ಯಾರನ್ನೂ ಅಷ್ಟು ಇಷ್ಟಪಡಲಿಲ್ಲ ಅಂದರೆ ತಪ್ಪು. ಪ್ರತಿ ವಯಸ್ಸಿನ ಬಾಗಿಲಲ್ಲೂ ಒಬ್ಬೊಬ್ಬರನ್ನು ನೋಡಿದ್ದಾಳೆ, ಮೆಚ್ಚಿದ್ದಾಳೆ, ಕಣ್ಣಲ್ಲಿ ಕನಸುಗಳ ಸಾಗರ ಮೊರೆದಿದೆ. ಆದರೂ ಯಶವಂತನನ್ನು ನೋಡಿದಾಗ ಅದ್ಯಾಕೋ ಗೊತ್ತಿಲ್ಲ, ತುಂಬ ಇಷ್ಟವಾಗಿಬಿಟ್ಟ. ಅವತ್ತು ಅವಳೇ ಹೋಗಿ ತನ್ನ ಪರಿಚಯ ಮಾಡಿಕೊಂಡಳು, ಅವನು ನಾಳೆ ಸಿಕ್ಕರೆ ಸಾಕಿತ್ತು ಅಂತ ಕಾಯುತ್ತಿದ್ದಳು, ಎಲ್ಲವೂ ಸಹಜ ವಯಸ್ಸಿನ ಸಂಪುಟಗಳೇ. ಪುಟಪುಟಗಳಲ್ಲೂ ಪುಟಿವ ಸಂಭ್ರಮ.

ಸುಳ್ಳು ಹೇಳುವುದಲ್ಲ, ಅವನು ಅವಳನ್ನು ಮೊದಲ ಸಲ ನೋಡಿದ ಮತ್ತು ನೋಡಿದ. ಎಲ್ಲರನ್ನೂ ನೋಡುವಂತೆ, ಸಹಜವಾಗಿ, ಹತ್ತರಲ್ಲಿ ಹನ್ನೊಂದನೆಯವಳ ಹಾಗೆ. ಏನೇನೂ ಆಕರ್ಷಕವಾಗಿಲ್ಲದ, ಸ್ವಲ್ಪ ಹಲ್ಲುಬ್ಬಿದಂತೆ ಕಾಣುವ ಅವಳು. ತನಗೆ ಕಾಲಲ್ಲಿ ಊನ ಇದ್ದರೇನು, ಊನವಿರುವ, ಸಾಧಾರಣ ಹುಡುಗಿಯೇ ತನಗೆ ಸಿಗಬೇಕೇ? ಸುಂದರಿಯೇ ತನಗೆ ಸಿಗಬಾರದಾ ಅಂತ ಕನಸು ಕಂಡಿದ್ದ. ಆದರೆ ಮಾತಾಡಿಕೊಳ್ಳುತ್ತಾ ಮಾತಾಡಿಕೊಳ್ಳುತ್ತಾ ಅದೇನೋ ಅವಳ ಜೀವಂತಿಕೆಯೇ ಅವನನ್ನು ಹಿಡಿದಿಟ್ಟುಬಿಟ್ಟಿತು, ಅವಳ ಮೇಲೆ ದಿನೇ ದಿನೇ ಆಕರ್ಷಣೆ ಹೆಚ್ಚಿತು.

ಇಬ್ಬರೂ ಹೇಳಿಕೊಳ್ಳದೆಯೂ ಪ್ರೀತಿ ಹೇಳಿಕೊಂಡರು, ಒಬ್ಬರನ್ನೊಬ್ಬರು ಅರಿಯುತ್ತಲೇ ಬೆರೆತರು.

ತಾವಿಬ್ಬರೂ ಪ್ರೀತಿಸುತ್ತಿದ್ದೇವೆ ಅಂತ ಅವರಿಬ್ಬರಿಗೂ ಮನವರಿಕೆಯಾಗಿದ್ದೇ ಅವಳಣ್ಣ ಆ ಧಾಂಡಿಗ ಬಂದು ಅವಳನ್ನು ದರದರ ಎಳೆದುಕೊಂಡು ಹೋದಾಗ, ಅವಳನ್ನು ರೂಮಿಗೆ ಕೂಡಿಹಾಕಿ ಹೊಡೆದಾಗ, ನಾಲ್ಕು ದಿನ ಇಬ್ಬರೂ ಮಾತಾಡದೇ ಚಡಪಡಿಸಿದಾಗ, ಬೇರಾದ ಘಳಿಗೆಗಳು ತುಂಬ ಹೀನಾಯ ನೋವನ್ನು ತಂದುಕೊಟ್ಟಾಗ. ಕೂಡಿ ಹಾಕಿದ್ದು ಗಿಳಿ ಮರಿಯನ್ನಾದರೂ ಅದರ ರೆಕ್ಕೆಯನ್ನಲ್ಲವಲ್ಲ; ಗೂಡಿಂದ ಗಿಳಿಯ ಒಂದು ರೆಕ್ಕೆಗರಿ ಹಾರಿ ಹೊರ ಹೋಗುವಂತೆ ಅವಳ ಭಾವನೆಗಳು ಅವನನ್ನು ಸೇರಿದವು, ಒಂದು ದಿನ ಅರಗಿಣಿಯೂ ಹೊರಬಂತು. ಅವರಿಬ್ಬರೂ ಎದೆಬಡಿತದ ಅಂತರದಲ್ಲಿ ನಿಂತಾಗ ವಾಪಾಸು ಜಗತ್ತನ್ನೇ ಹಿಂಪಡೆದಷ್ಟು ಖುಷಿ, ಸಡಗರ, ನೋವು, ಭಾರ.

ಇಬ್ಬರೂ ಪ್ರೀತಿಸುವುದ ಹೇಳಿಕೊಂಡು ನೋಡಿದರು, ಮನೆಯವರ ಒದೆತವನ್ನು ಅನುಭವಿಸಿದರು. ಯಶವಂತನ ತಂದೆ ಅವನನ್ನು ಯಾವುದಾದರೂ ಶ್ರೀಮಂತ ಹುಡುಗಿಗೆ ಮದುವೆ ಮಾಡಿಕೊಟ್ಟು ಅವನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ನೋಡಿದ್ದರಂತೆ. ಈ ಅರಗಿಣಿ ಸಾಧಾರಣ ಮಧ್ಯಮ ವರ್ಗ, ದುಡಿಮೆಗಿಂತ ಸಾಲವೇ ಜಾಸ್ತಿ ಇದೆ ಅಂತ ಗೊತ್ತಾದಾಗ ಪ್ರೀತಿಯ ಮಧ್ಯೆ ಒಂದು ಗೋಡೆ ಅಡ್ಡಬಿತ್ತು.

ಇಬ್ಬರೂ ತಮ್ಮನ್ನು ಉಳಿಸಿಕೊಳ್ಳಲಾಗದಿದ್ದರೂ ಪರವಾಗಿಲ್ಲ, ಪ್ರೀತಿಯನ್ನಾದರೂ ಉಳಿಸಿಕೊಳ್ಳೋಣ ಅಂತ ಬೆಟ್ಟ ಏರಿದರು, ಅವರ ಪ್ರೀತಿಯನ್ನು ಬೆಟ್ಟ ತೋಳಲ್ಲಿಟ್ಟು ಕಾಪಾಡುತ್ತಿತ್ತು. ಬೆಟ್ಟದ ಮೇಲೆ ಬಂದು ನಿಂತಾಗ ಇಡೀ ಪ್ರಕೃತಿಯೇ ಅವರನ್ನು ಅತಿಥಿಗಳ ಹಾಗೆ ಬರಮಾಡಿಕೊಂಡಿತು, ಹಕ್ಕಿಪಕ್ಷಿಗಳು ಶಿಳ್ಳೆ ಹೊಡೆದವು, ತರಗೆಲೆಗಳು ಗಸಗಸನೆ ಕೈ ಮಸೆದು ಬನ್ನಿ ಬನ್ನಿ ಅಂದವು. ಅವರಿಗೆ ಮೊದಲ ಸಲ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಬಲ್ಲೆವು ಅನ್ನುವ ಭ್ರಮೆ ಮೂಡಿತು.

ಅವಳೆಂದಳು, “ಹೇಗೆ ಸಾಯೋದು, ಬೀಳುವಾಗ ಭಯ ಆಗತ್ತಲ್ವೇನೋ?’

“ಪ್ರೀತಿ ಹೋದರೆ ನೋವಾಗತ್ತಲ್ವೇನೇ, ಅದಕ್ಕಿಂತ ಇದು ವಾಸಿ ಅಲ್ವಾ’ ಅಂತ ಅವನಂದ.

ಅವಳ ಕಣ್ಣು ನೆಲದ ಕಡೆ ಮುಖ ಮಾಡಿತು.

ಕಣ್ಮುಚ್ಚಿಕೊಂಡಳು, ಇಡೀ ಬಾಲ್ಯ, ಕೆಲಭಾಗದಷ್ಟು ಹರಯ, ಸ್ಕೂಲಲ್ಲಿ ಮರಿ ಹಾಕದೇ ಪುಸ್ತಕದಲ್ಲೇ ಸತ್ತ ನೀರೆಲೆ, ಕೈಗೆ ಸಿಕ್ಕರೂ ಹಾರಿ ಹೋದ ನವಿಲುಗರಿ, ಮೇಷ್ಟ್ರು ಹೊಡೆದ ಪೆಟ್ಟಿನ ಕೈ ಉರಿ, ಸ್ಕೂಲಿಂದ ಬಂದು, ಅಮ್ಮನನ್ನ ತಬ್ಬಿಕೊಂಡರೆ ಅಮ್ಮನ ಜ್ವರಕ್ಕೆ ಸುಡುತ್ತಿದ್ದ ಮೈ, ಅಪ್ಪನ ಎದೆ ಮೇಲೇ ಮಲಗಿ ನಿದ್ದೆ ಹೋಗಿ ಅಪ್ಪನ ಬನಿಯನ್ನೆಲ್ಲಾ ತೋಯಿಸಿದ ಜೊಲ್ಲು, ಪಕ್ಷಿಗೆ ಗುರಿ ಇಟ್ಟರೂ ತಾಗದೇ ವೇಸ್ಟ್‌ ಆದ ಕವಣೆ ಕಲ್ಲು, ತಿರುವಿನ ಸೇತುವೆ ದಾರಿ, ಗವ್ವೆನುವ ಕೋಣೆಯ ಕತ್ತಲು, ವಿಚಿತ್ರ ಪರಿಮಳದ ಅಮ್ಮನ ಹಳೆ ಸೀರೆ, ಅಜ್ಜಿ ಕುಟ್ಟುವ ಕುಟ್ಟಾಣಿಯ ಸದ್ದು- ಎಷ್ಟೆಲ್ಲಾ ನೆನಪುಗಳುಂಟು ಈ ಜೀವಕ್ಕೆ. ಹಾರುವ ಈ ಒಂದು ದೇಹ ಆ ನೆನಪುಗಳ ಜೀವವನ್ನು ಒಟ್ಟಿಗೇ, ಒಂದೇ ಪೆಟ್ಟಿಗೆ ತೆಗೆದುಬಿಡುತ್ತದಾ?

ಅವಳು ಕಣಿºಟ್ಟಳು.

“ಅಯ್ಯೋ, ನನ್ನ ಕಾಗೆಮರಿ!’

ಅವನು ವಿಚಿತ್ರವಾಗಿ ನೋಡಿದ.

“ಕಾಗೆನಾ, ಮರಿನಾ?’

“ಹೂಂ, ರಾತ್ರಿ ಟೆರಾಸು ಮೇಲೆ ಇತ್ತು. ಎಲ್ಲೋ ಗಾಯ ಮಾಡ್ಕೊಂಡ್‌ ಬಂದು ಬಿದ್ದಿತ್ತು, ಎಬ್ಬಿಸಿ, ನೀರು ಕೊಟ್ಟೆ, ಏನು ತಿನ್ನತ್ತೆ ಅಂತ ಗೊತ್ತಾಗದೇ ನೀರು ಕುಡಿಸಿ, ನಾಲ್ಕು ಭತ್ತದ ಕಾಳು ಹಾಕಿದೆ. ತಿನ್ನೋಕ್ಕೆ ಹೋಗಿ ಗಂಟಲಲ್ಲಿ ಸಿಕ್ಕಾಕ್ಕೊಂಡ್ರೆ? ಅಯ್ಯೋ’

ತಲೆ ಮೇಲೆ ಕೈ ಇಟ್ಟುಕೊಂಡಳು ಮುಗªವಾಗಿ, ಅವಳ ಕಣ್ಣು ತುಂಬಿದ ಬಿಂದಿಗೆಯಾಗಿ ತುಳುಕಿತು.

ಅವಸರಿಸಿದಳು ಅವಳು.

“ಹೋಗೋಣ ಏಳು, ಸತ್ತುಗಿತ್ತು ಹೋದ್ರೆ.. ಇಲ್ಲ, ಪಾಪ ಅದು.. ಬದ್ಕತ್ತೆ, ಅಜ್ಜಿಗೆ ಕೇಳಿ ಕಾಗೆ ಏನ್‌ ತಿನ್ನತ್ತೆ ಅಂತ ಕೇಳ್ತೀನಿ. ಅದನ್ನೇ ತಿನ್ನುಸ್ತೀನಿ. ಸಾಯ್ಬಾರ್ದು ಪ್ಲೀಸ್‌.. ಕರ್ಕೊಂಡ್‌ ಹೋಗೋ!’

ಅವರಿಬ್ಬರನ್ನೂ ಕಳಕೊಳ್ಳುತ್ತಿರುವಂತೆ ಬೇಸರದಲ್ಲಿ ಬೆಟ್ಟದ ಪ್ರಪಾತ ಅವರನ್ನೇ ನೋಡಿತು.

ಓಡಿಕೊಂಡು ಬರುವಾಗ ಸಂಜೆಯಾಗಿತ್ತು, ಅವನ ಕಾಲು ಇನ್ನೂ ನೋಯುತ್ತಿತ್ತು, ಕುಂಟಿ ಕುಂಟಿ ಕಾಲು ಬೊಬ್ಬೆ ಬಂದಿತ್ತು. ಇಬ್ಬರೂ ಅವಸರದಿಂದಲೇ ಬಂದರು, ಅವನ ಮನೆಯಿಂದ ಸ್ವಲ್ಪ ದೂರದಲ್ಲೇ ನಿಂತ, ಅವಳು ಓಡಿ ಹತ್ತಿ ಟೆರಾಸಿಗೆ ಹೋದಳು.

ನೀರು ಕುಡಿದ ಕಾಗೆಮರಿ ಕಣ್ಮುಚ್ಚಿ ಮಲಗಿತ್ತು, ಹಾಕಿದ ಭತ್ತದ ಕಾಳನ್ನು ಅದು ತಿಂದಿರಲಿಲ್ಲ, ಹೋಗಿ ಮೈ ನೇವರಿಸಿದ ತಕ್ಷಣ ಕಚಗುಳಿ ಆದಂತಾಗಿ ಅದು ಮೈಕೊಡವಿಕೊಂಡಿತು.

ಕಣ್ಣನ್ನು ಸ್ವಲ್ಪವೇ ತೆರೆದು ಅವಳನ್ನೇ ನೋಡಿತು.

ಅದರ ಕಣ್ಣಲ್ಲೂ ಸಾವಿರಲಿಲ್ಲ, ಇವಳ ಕಣ್ಣಲ್ಲೂ ಸಾವಿರಲಿಲ್ಲ.

ಎದ್ದು ಕೈ ಬಳೆಯನ್ನು ಘಲಘಲ ಮಾಡುತ್ತಾ ಅವನನ್ನು ಅಲ್ಲಿಂದಲೇ ಕರೆದಳು.

ಕಾಗೆಮರಿ ಬದ್ಕಿದೆ ಕಣೋ ಅಂತ ಜೋರಾಗಿ ಕೂಗಿಕೊಂಡಳು.

ಅವನು ಅಬ್ಟಾ ಅಂತ ಎದೆ ಮೇಲೆ ಕೈ ಇಟ್ಟುಕೊಂಡ.

ತಮ್ಮ ಹಾಗೆ ತಮ್ಮ ಪ್ರೀತಿಯೂ ಎಲ್ಲೋ ಬದುಕಿಕೊಂಡಿರತ್ತೆ ಬಿಡು ಅನ್ನುವಂತೆ ಅವರಿಬ್ಬರೂ ಅಲ್ಲಲ್ಲೇ ನಿಂತು ಕಣ್ಣಲ್ಲಿ ಕಣ್ಣಿಟ್ಟುಕೊಂಡರು.

– ವಿಕಾಸ್‌ ನೇಗಿಲೋಣಿ

Advertisement

Udayavani is now on Telegram. Click here to join our channel and stay updated with the latest news.

Next