ಬೆಂಗಳೂರು: ನಗರದಲ್ಲಿ ಶುಕ್ರವಾರ ಗಾಳಿ ಸಹಿತ ಸುರಿದ ಮಳೆಯಿಂದಾಗಿ 20ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಹಲವು ಭಾಗಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.
ಗಾಳಿ ಸಹಿತ ಮಳೆಗೆ ಶಂಕರಮಠ, ಮಲ್ಲೇಶ್ವರ, ಗೊರಗುಂಟೆ ಪಾಳ್ಯ, ಬಿಎಂಶ್ರೀ ಮುಖ್ಯರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಯಶವಂತಪುರ, ಬಾಣಸವಾಡಿ, ಮಡಿವಾಳ, ಸಂಜಯ್‌ನಗರ, ನಾಗರಬಾವಿ, ಬನಶಂಕರಿ 2ನೇ ಹಂತ ಸೇರಿದಂತೆ ಹಲವಾರು ಕಡೆಗಳಲ್ಲಿ ಬೃಹದಾಕಾರದ ಮರಗಳು ಧರೆಗುರುಳಿದ ಪರಿಣಾಮ ತೀವ್ರ ಸಂಚಾರ ದಟ್ಟಣೆ ವಾಹನ ಸವಾರರು ತೊಂದರೆಗೊಳಗಾದರು.
ಪಾಲಿಕೆಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿ ಬಿದ್ದ ಮರಗಳನ್ನು ತೆರವುಗೊಳಿಸಿದರು. ಕೆಲವು ಭಾಗಗಳಲ್ಲಿ ಮರದ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಸಹ ಉರುಳಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಆದರೆ, ಯಾವುದೇ ರೀತಿಯ ಜೀವ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೌಡಾಯಿಸಿದ ಆಯುಕ್ತರು: ನಗರದಲ್ಲಿ ಮಳೆ ಆರಂಭವಾದ ಕೂಡಲೇ ಬಿಬಿಎಂಪಿ ಕೇಂದ್ರ ಕಚೇರಿಗೆ ಭೇಟಿ ನೀಡಿದ ಪಾಲಿಕೆಯ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಸ್ವತಃ ನಿಯಂತ್ರಣ ಕೊಠಡಿಯಲ್ಲಿ ಕುಳಿತು ಸಾರ್ವಜನಿಕರಿಂದ ಬರುವ ದೂರುಗಳನ್ನು ಸ್ವೀಕರಿಸಿದರು. ಜತೆಗೆ ಪರಿಹಾರ ಕಾರ್ಯಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಹವಾಮಾನ ಇಲಾಖೆ ಮಾಹಿತಿಯ ಹಿನ್ನೆಲೆಯಲ್ಲಿ ಅಗತ್ಯ ಮಂಜಾಗ್ರತಾ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಯಾವುದೇ ಹಾನಿಯುಂಟಾಗಿಲ್ಲ. ನಗರದಲ್ಲಿ ಭಾರಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಗಳಿಗೆ ಸಿದ್ಧರಾಗಿರುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಮರಗಳು ಬಿದ್ದ ಕೂಡಲೇ ಸಿಬ್ಬಂದಿ ತೆರವುಗೊಳಿಸಿದ್ದಾರೆ ಎಂದರು ಹೇಳಿದರು.
ಮನೆಗಳಿಗೆ ನುಗ್ಗಿದ ನೀರು: ನಗರದಲ್ಲಿ ಶುಕ್ರವಾರ ಸುರಿದ ಮಳೆಯಿಂದ ಮಹದೇವಪುರದ ಹಲವಾರು ಪ್ರದೇಶಗಳಿಗೆ ನೀರು ನುಗ್ಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು. ವಲಯದ ಬೆಳ್ಳಂದೂರು, ಮಾರತ್ತಹಳ್ಳಿ, ಬೆಳತೂರು, ಕಾಡುಗುಡಿ, ಹಗದೂರು ಭಾಗದ ತಗ್ಗುಪ್ರದೇಶಗಳಲ್ಲಿ ಬಡಾವಣೆಗಳಿಗೆ ಮಳೆನೀರು ನುಗ್ಗಿದ್ದು,
ಗಾಳಿಸಹಿತ ಮಳೆಯಿಂದ ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದರಿಂದ ವಿದ್ಯುತ್ ವ್ಯತ್ಯಯ ಉಂಟಾಯಿತು. ವೈಟ್‌ಫೀಲ್ಡ್, ಮಹದೇವಪುರ, ಮಾರತಹಳ್ಳಿ, ಕುಂದಲಹಳ್ಳಿ, ಐಟಿಪಿಎಲ್ ಭಾಗದ ಮುಖ್ಯರಸ್ತೆಗಳಲ್ಲಿ ನೀರು ನಿಂತು ದಟ್ಟಣೆ ಉಂಟಾದ ಪರಿಣಾಮ ವಾಹನ ಸವಾರರು ಮಳೆಯಲ್ಲಿ ನಿಲ್ಲುವಂತಾಯಿತು.