Advertisement
1947ರ ಮೊದಲಾರ್ಧ ಭಾರತದ ಇತಿಹಾಸದಲ್ಲಿ ನಿರ್ಣಾಯಕವಾದ ಕಾಲಘಟ್ಟ. ಆಗ ವಸಾಹತುಶಾಹಿ ಆಡಳಿತ ಕೊನೆ ಗಾಣು ವುದು ನಿಶ್ಚಿತವಾಗಿತ್ತು, ಅಂತೆಯೇ ಭಾರತ ವಿಭಜನೆ ಕೂಡ ನಿಶ್ಚಿತವಾಗಿತ್ತು, ಆದರೆ ಅದು ಒಂದಕ್ಕಿಂತ ಹೆಚ್ಚು ಭಾಗವಾಗುತ್ತದೆಯೇ ಎಂಬುದು ಅನಿಶ್ಚಿತವಾಗಿತ್ತು. ಬೆಲೆಗಳು ಏರುತ್ತಿದ್ದವು, ಆಹಾರದ ಕೊರತೆ ಸಾಮಾನ್ಯವಾಗಿತ್ತು. ಆದರೆ ಇದೆಲ್ಲಕ್ಕಿಂತಲೂ ಮಿಗಿಲಾಗಿ, ಭಾರತದ ಏಕತೆ ಬೃಹತ್ ಸಮಸ್ಯೆಯಾಗಿ ಬದಲಾಗಿತ್ತು.
Related Articles
Advertisement
1947ರ ಆಗಸ್ಟ್ 15ರಂದು ನಾವು ಹೊಸ ರಾಷ್ಟ್ರೋದಯವನ್ನು ಸಂಭ್ರಮದಿಂದ ಆಚರಿಸಿದೆವು, ಆದರೆ ರಾಷ್ಟ್ರ ನಿರ್ಮಾಣದ ಕೆಲಸ ಇನ್ನೂ ಪೂರ್ಣವಾಗಿರಲಿಲ್ಲ. ಸ್ವತಂತ್ರ ಭಾರತದ ಪ್ರಥಮ ಗೃಹ ಸಚಿವ ರಾದ ಪಟೇಲರು ದೈನಂದಿನ ಆಡಳಿತದಲ್ಲಿ ಜನರ ಹಿತವನ್ನು, ಅದರಲ್ಲೂ ನಿರ್ದಿಷ್ಟವಾಗಿ ಬಡವರು ಮತ್ತು ಶೋಷಿತರ ಹಿತವನ್ನು ರಕ್ಷಿಸುವ ಸಲುವಾಗಿ ಆಡಳಿತಾತ್ಮಕ ಚೌಕಟ್ಟಿನ ವೇದಿಕೆಯನ್ನು ರೂಪಿಸಿದರು.
ಸರ್ದಾರ್ ಪಟೇಲ್ ಅವರು ನುರಿತ ಆಡಳಿತಗಾರರಾಗಿದ್ದರು. 1920ರ ದಶಕದಲ್ಲಿ ಅಹ್ಮದಾಬಾದ್ ಪುರಸಭೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೇ ಸ್ವತಂತ್ರ ಭಾರತದ ಆಡಳಿತಾತ್ಮಕ ಚೌಕಟ್ಟನ್ನು ಬಲಪಡಿಸುವ ಸಲುವಾಗಿ ಅವರು ಕೆಲಸ ಮಾಡುತ್ತಿದ್ದರು. ಅಹಮದಾಬಾದ್‌ನಲ್ಲಿದ್ದಾಗ ಅವರು ನಗರದ ಸ್ವಚ್ಛತೆಗಾಗಿ ಗಣನೀಯ ಸೇವೆ ಸಲ್ಲಿಸಿದ್ದರು. ನಗರದಾದ್ಯಂತ ಚರಂಡಿ ವ್ಯವಸ್ಥೆ ಮಾಡಿದ್ದರು, ಸ್ವತ್ಛತೆಗೆ ಆದ್ಯತೆ ನೀಡಿದ್ದರು. ಅಲ್ಲದೇ ಅವರು ನಗರಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳಾದ ರಸ್ತೆ, ವಿದ್ಯುತ್ ಮತ್ತು ಶಿಕ್ಷಣದಂಥ ಅಂಶಗಳ ಬಗ್ಗೆಯೂ ಗಮನ ಹರಿಸಿದ್ದರು.
ಇಂದು ಭಾರತ ಚೈತನ್ಯದಾಯಿ ಸಹಕಾರ ವಲಯಕ್ಕೆ ಹೆಸರಾಗಿದೆ. ಈ ಶ್ರೇಯದ ಅತಿ ದೊಡ್ಡ ಪಾಲು ಸರ್ದಾರ್ ಪಟೇಲ್ ಅವರಿಗೆ ಸಲ್ಲಬೇಕು. ಪಟೇಲರ ಸ್ಥಳೀಯ ಸಮುದಾಯದ ಅಭಿವೃದ್ಧಿ ಕಲ್ಪನೆಗಳಲ್ಲಿ, ಅದರಲ್ಲೂ ಮಹಿಳೆಯರ ಸಬಲೀಕರಣದ ಚಿಂತನೆಗಳಲ್ಲಿ ಅಮೂಲ್‌ನ ಬೇರುಗಳು ಕಾಣುತ್ತವೆ. ಹಲವರಿಗೆ ಆಸರೆ ಮತ್ತು ಘನತೆಯ ನೆಲೆ ನೀಡಿರುವ ವಸತಿ ಸಹಕಾರ ಸಂಘಗಳ ಕಲ್ಪನೆಯನ್ನು ಜನಪ್ರಿಯಗೊಳಿಸಿದ್ದೇ ಸರ್ದಾರ್ ಪಟೇಲ್. ನಂಬಿಕೆ ಮತ್ತು ಸಮಗ್ರತೆ ಎಂಬ ಎರಡು ಗುಣಗಳು ಸರ್ದಾರ್ ಪಟೇಲ್ ಅವರಿಗೆ ಸಮಾನಾರ್ಥಕವಾಗಿವೆ. ಭಾರತದ ರೈತರು ಅವರ ಬಗ್ಗೆ ಅನುಪಮ ವಿಶ್ವಾಸ ಹೊಂದಿದ್ದರು. ರೈತನ ಮಗನಾಗಿದ್ದ ಪಟೇಲರು, ಬರ್ದೋಲಿ ಸತ್ಯಾಗ್ರಹವನ್ನು ಮುನ್ನಡೆಸಿದ್ದರು. ಕಾರ್ಮಿಕ ವರ್ಗ ತಮ್ಮ ಕಷ್ಟಗಳಿಗೆ ಧ್ವನಿಯಾಗಿದ್ದ ಪಟೇಲರನ್ನು ಆಶಾಕಿರಣವೆಂದೇ ಕಾಣುತ್ತಿತ್ತು. ವರ್ತಕರು ಮತ್ತು ಕೈಗಾರಿಕೋದ್ಯಮಿಗಳು ಸರ್ದಾರ್ ಪಟೇಲ್ ಅವರೊಂದಿಗೆ ಕೆಲಸ ಮಾಡಲು ಇಚ್ಛಿಸುತ್ತಿದ್ದರು, ಕಾರಣ ಅವರಲ್ಲಿ ಭಾರತದ ಆರ್ಥಿಕತೆ ಮತ್ತು ಕೈಗಾರಿಕಾ ಪ್ರಗತಿಯ ಚಿಂತನೆಯನ್ನು ಅವರು ಗುರುತಿಸಿದ್ದರು.
ಪಟೇಲರ ರಾಜಕೀಯ ಸಹವರ್ತಿಗಳು ಸಹ ಅವರಲ್ಲಿ ವಿಶ್ವಾಸವಿಟ್ಟಿದ್ದರು. ಆಚಾರ್ಯ ಕೃಪಲಾನಿ ಅವರು ತಮಗೆ ಬಾಪೂ ಅವರ ಮಾರ್ಗದರ್ಶನ ಲಭ್ಯವಾಗದಿದ್ದಾಗ ಮತ್ತು ತಾವು ಸಮಸ್ಯೆ ಎದುರಿಸಿದಾಗಲೆಲ್ಲಾ ಸರ್ದಾರ್ ಪಟೇಲ್ ಅವರ ಬಳಿ ಹೋಗುತ್ತಿದ್ದುದಾಗಿ ಉಲ್ಲೇಖೀಸಿದ್ದಾರೆ. 1947ರಲ್ಲಿ ರಾಜಕೀಯ ಚಟುವಟಿಕೆಗಳು ಉತ್ತುಂಗದಲ್ಲಿದ್ದಾಗ ಸರೋಜಿನಿ ನಾಯ್ಡು ಅವರು ಪಟೇಲರನ್ನು “ದೃಢ ಸಂಕಲ್ಪದ ಕ್ರಿಯಾಶೀಲ ವ್ಯಕ್ತಿ’ ಎಂದು ಕರೆದಿದ್ದರು. ಪ್ರತಿಯೊಬ್ಬರೂ ಪಟೇಲರಲ್ಲಿ, ಪಟೇಲರ ಮಾತಿನಲ್ಲಿ ಮತ್ತು ಕೃತಿಗಳಲ್ಲಿ ನಂಬಿಕೆ ಇಟ್ಟಿದ್ದರು. ಸರ್ದಾರ್ ಪಟೇಲ್ ಜಾತಿ, ಮತ, ಧರ್ಮ, ನಂಬಿಕೆ, ವಯಸ್ಸನ್ನು ಮೀರಿ ಗೌರವಿಸಲ್ಪಡುತ್ತಿದ್ದರು.
ಈ ವರ್ಷ ಸರ್ದಾರ್ ಜಯಂತಿ ಮತ್ತಷ್ಟು ವಿಶೇಷತೆಗಳಿಂದ ಕೂಡಿದೆ. 130 ಕೋಟಿ ಭಾರತೀಯರ ಆಶೀರ್ವಾದದ ಫಲವಾಗಿ “ಏಕತೆಯ ಪ್ರತಿಮೆ’ ಇಂದು ಅನಾವರಣಗೊಳ್ಳುತ್ತಿದೆ. ನರ್ಮದಾ ನದಿಯ ದಂಡೆಯಲ್ಲಿರುವ ಈ ಏಕತೆಯ ಪ್ರತಿಮೆ ವಿಶ್ವದಲ್ಲಿಯೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. “ಮಣ್ಣಿನ ಮಗ’ ಸರ್ದಾರ್ ಪಟೇಲ್ ಅವರು ಬಾನೆತ್ತರಕ್ಕೆ ನಿಂತು ನಮಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಮತ್ತು ಸ್ಫೂರ್ತಿ ನೀಡುತ್ತಿದ್ದಾರೆ.
ಸರ್ದಾರ್ ಪಟೇಲ್ ಅವರ ಶ್ರೇಷ್ಠತೆ ಮತ್ತು ಗೌರವಾದರಗಳ ಸಂಕೇತವಾದ ಈ ಬೃಹತ್ ಪ್ರತಿಮೆಯ ಸಾಕಾರಕ್ಕೆ ಹಗಲಿರುಳು ಶ್ರಮಿಸಿದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ. ನನ್ನ ಮನಸ್ಸು 2013ರ ಅಕ್ಟೋಬರ್ 31ಕ್ಕೆ ಸಾಗುತ್ತದೆ. ನಾವು ಅಂದು ಈ ಮಹತ್ವಾಕಾಂಕ್ಷೆಯ ಯೋಜನೆಗೆ ಶಿಲಾನ್ಯಾಸ ನೆರವೇರಿಸಿ¨ªೆವು. ದಾಖಲೆಯ ಅವಧಿಯಲ್ಲಿ ಇಷ್ಟು ಬೃಹತ್ ಯೋಜನೆ ಸಾಕಾರಗೊಂಡಿದ್ದು ಪ್ರತಿಯೊಬ್ಬ ಭಾರತೀಯರೂ ಹೆಮ್ಮೆ ಪಡುವಂತೆ ಮಾಡಿದೆ. ನಾನು ನಿಮ್ಮಲ್ಲರಿಗೂ ಮುಂಬರುವ ದಿನಗಳಲ್ಲಿ ಏಕತೆಯ ಪ್ರತಿಮೆಗೆ ಭೇಟಿ ನೀಡುವಂತೆ ಮನವಿ ಮಾಡುತ್ತೇನೆ.
ಏಕತೆಯ ಪ್ರತಿಮೆಯು ನಮ್ಮ ಹೃದಯಗಳ ಒಗ್ಗೂಡುವಿಕೆ ಮತ್ತು ನಮ್ಮ ಮಾತೃಭೂಮಿಯ ಭೌಗೋಳಿಕ ಏಕೀಕರಣದ ಸಂಕೇತವಾಗಿದೆ. ನಾವು ಒಡೆದು ಹೋದರೆ, ನಮ್ಮನ್ನು ನಾವೇ ಎದುರಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಇದು ನೆನಪಿಸುತ್ತದೆ. ನಾವು ಒಗ್ಗಟ್ಟಿನಿಂದಿದ್ದರೆ ಜಗತ್ತನ್ನೇ ಎದುರಿಸಬಹುದು ಮತ್ತು ಅಭಿವೃದ್ಧಿ ಮತ್ತು ವೈಭವದಲ್ಲಿ ಹೊಸ ಎತ್ತರಕ್ಕೆ ಏರಬಹುದು.
ಸರ್ದಾರ್ ಪಟೇಲ್ ಸಾಮ್ರಾಜ್ಯಶಾಹಿ ಧೋರಣೆಯನ್ನು ಕೆಡವಲು ಮತ್ತು ರಾಷ್ಟ್ರೀಯತೆಯ ಸ್ಫೂರ್ತಿಯೊಂದಿಗೆ ಭೌಗೋಳಿಕ ಏಕೀಕರಣಕ್ಕಾಗಿ ಅದ್ಭುತ ವೇಗದಲ್ಲಿ ಶ್ರಮಿಸಿದರು. ದೇಶ ಒಡೆದು ಹೋಳಾಗುವುದರಿಂದ ರಕ್ಷಿಸಿದರು ಮತ್ತು ರಾಷ್ಟ್ರೀಯ ಚೌಕಟ್ಟಿನೊಳಗೆ ಅತ್ಯಂತ ದುರ್ಬಲವಾದ ಪ್ರದೇಶಗಳನ್ನೂ ಸಂಯೋಜಿಸಿದರು. ನಾವು ಇಂದು 130 ಕೋಟಿ ಭಾರತೀಯರು ಬಲಿಷ್ಠ, ಪ್ರಗತಿದಾಯಕ ಮತ್ತು ಸಮಗ್ರ ನವಭಾರತದ ನಿರ್ಮಾಣಕ್ಕೆ ಹೆಗಲಿಗೆ ಹೆಗಲುಕೊಟ್ಟು ದುಡಿಯುತ್ತಿದ್ದೇವೆ. ಸರ್ದಾರ್ ಪಟೇಲ್ ಅವರು ಬಯಸಿದ್ದಂತೆ ಯಾವುದೇ ರೀತಿಯ ಭ್ರಷ್ಟಾಚಾರ ಅಥವಾ ಪಕ್ಷಪಾತಕ್ಕೆ ಆಸ್ಪದವಿಲ್ಲದಂತೆ ಅಭಿವೃದ್ಧಿಯ ಫಲವನ್ನು ಅತ್ಯಂತ ದುರ್ಬಲರಿಗೂ ತಲುಪಿಸುವ ನಿಟ್ಟಿನಲ್ಲಿ ನಾವು ಪ್ರತಿಯೊಂದು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದೇವೆ.
ನರೇಂದ್ರ ಮೋದಿ, ಪ್ರಧಾನಮಂತ್ರಿ