Advertisement

ಲಾಭಕ್ಕಾಗಿ ಸ್ಕೈವಾಕ್‌ ನಿರ್ಮಾಣ

12:11 PM Apr 15, 2017 | |

ಬೆಂಗಳೂರು: ರಾಜಧಾನಿ ನಗರಿಯಲ್ಲಿ ಪಾದಚಾರಿಗಳ ಸುರಕ್ಷತೆಗಾಗಿ ನಿರ್ಮಾಣಬೇಕಿದ್ದ ಸ್ಕೈವಾಕ್‌ಗಳು ಜಾಹೀರಾತು ಏಜೆನ್ಸಿಗಳ ಲಾಭದ ಉದ್ದೇಶಕ್ಕೆ ನಿರ್ಮಾಣವಾಗುತ್ತಿವೆ. ಅಷ್ಟೇ ಅಲ್ಲ, ಜಾಹೀರಾತು ಮಾಫಿಯಾದ ಕೈಗೆ ಸಿಲುಕಿ ನಗರದ ವಾಣಿಜ್ಯ ಪ್ರದೇಶಗಳಲ್ಲಿ ಸ್ಕೈವಾಕ್‌ಗಳನ್ನು ನಿರ್ಮಿಸುತ್ತಿರುವುದರಿಂದ ಪ್ರಮುಖ ಕಟ್ಟಡಗಳ ಸೌಂದರ್ಯವನ್ನೂ ಇವು ಹಾಳು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. 

Advertisement

ನಗರದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಪಾದಚಾರಿಗಳು ಹೆಚ್ಚು ತೊಂದರೆಗೊಳಗಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಸುರಕ್ಷಿತವಾಗಿ ರಸ್ತೆ ದಾಟಲು ನಗರದ ಪ್ರಮುಖ ಭಾಗಗಳಲ್ಲಿ ಸ್ಕೈವಾಕ್‌ಗಳನ್ನು ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ಆದರೆ, ಬಿಬಿಎಂಪಿ ವತಿಯಿಂದಲೇ ನಗರದಾದ್ಯಂತ ಸ್ಕೈವಾಕ್‌ಗಳನ್ನು ನಿರ್ಮಿಸಲು ಹಣಕಾಸಿನ ಸಮಸ್ಯೆಯಿದೆ ಎಂಬ ಕಾರಣವೊಡ್ಡಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಅವುಗಳನ್ನು ನಿರ್ಮಿಸಲು ತೀರ್ಮಾನಿಸಿದೆ.

ಹೀಗಾಗಿ ಸ್ಕೈವಾಕ್‌ಗಳ ನಿರ್ಮಾಣ ಗುತ್ತಿಗೆ ಪಡೆದ ಏಜೆನ್ಸಿಗಳಿಗೆ ಲಾಭವೇ ಪ್ರಮುಖ ಉದ್ದೇಶವಾಗಿರುವುದರಿಂದ ಪಾದಚಾರಿಗಳಿಗೆ ಅಗತ್ಯವಿರುವ ಸ್ಥಳಗಳ ಬದಲು ಜಾಹೀರಾತು ಪ್ರದರ್ಶನಕ್ಕೆ ಅನುಕೂಲವಾಗುವ ಸ್ಥಳಗಳನ್ನು ಸ್ಕೈವಾಕ್‌ಗಳ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಏಜೆನ್ಸಿಗಳ ಪ್ರಭಾವಕ್ಕೆ ಮಣಿದ ಪಾಲಿಕೆಯ ಅಕಾರಿಗಳೂ ಅದಕ್ಕೆ ಅನುಮತಿ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ಸ್ಕೈವಾಕ್‌ ನಿರ್ಮಾಣಕ್ಕೆ ನಿಗದಿಪಡಿಸಿರುವ ಸ್ಥಳಗಳು ಈ ಆರೋಪವನ್ನು ಪುಷ್ಠಿàಕರಿಸುವಂತಿದೆ. ನಗರದಲ್ಲಿ ಸ್ಕೈವಾಕ್‌ಗಳನ್ನು ನಿರ್ಮಿಸಲು ಗುತ್ತಿಗೆದಾರರು ಆಸಕ್ತಿ ತೋರುತ್ತಿಲ್ಲವೆಂಬ ಅಂಶವನ್ನು ಬಿಬಿಎಂಪಿ ಸರ್ಕಾರದ ಮುಂದಿಟ್ಟ ಪರಿಣಾಮ, ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಸ್ಕೈವಾಕ್‌ಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪಾಲಿಕೆಗೆ 80 ಕೋಟಿ ರೂ. ಬಿಡುಗಡೆ ಮಾಡಿದೆ.

ಸದ್ಯ ನಿರ್ಮಿಸಲು ಮುಂದಾಗಿರುವ 137 ಸ್ಕೈವಾಕ್‌ಗಳ ಪೈಕಿ 100ಕ್ಕೆ ಮತ್ತು ಮುಂದಿನ ದಿನಗಳಲ್ಲಿ 140 ಸ್ಕೈವಾಕ್‌ಗಳಿಗೆ ಸರ್ಕಾರ ನೀಡಿದ ಅನುದಾನದಲ್ಲಿ ನಿರ್ಮಾಣ ವೆಚ್ಚದ ಶೇ.40ರಷ್ಟು ಸಬ್ಸಿಡಿ ನೀಡಲು ಪಾಲಿಕೆ ಅಕಾರಿಗಳು ತೀರ್ಮಾನಿಸಿದ್ದಾರೆ. ಈ ಸಬ್ಸಿಡಿ ಜತೆಗೆ ಏಜೆನ್ಸಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನೆಲಬಾಡಿಗೆಯಲ್ಲಿ ವಿನಾಯಿತಿ ನೀಡಲಾಗುತ್ತಿದೆ. ಹೀಗಿದ್ದರೂ ಜನರಿಗೆ ಬೇಕಾದ ಕಡೆಗಿಂತ ಜಾಹೀರಾತು ಪ್ರದರ್ಶನಕ್ಕೆ ಬೇಡಿಕೆ ಇರುವ ಕಡೆ ಸ್ಕೈವಾಕ್‌ ನಿರ್ಮಾಣ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. 

Advertisement

ನಿಗದಿತ ನೆಲ ಬಾಡಿಗೆ ಹಿಂತೆಗೆತ: ಬಿಬಿಎಂಪಿಯಿಂದ ನಗರದ ಪ್ರತಿಯೊಂದು ಭಾಗದಲ್ಲಿಯೂ ಈ ಹಿಂದೆ ನೆಲ ಬಾಡಿಗೆ ನಿಗದಿಪಡಿಸಲಾಗಿತ್ತು. ಯಾವುದೇ ಕಾಮಗಾರಿ ಕೈಗೊಂಡರೂ ಗುತ್ತಿಗೆದಾರರು ಪಾಲಿಕೆಗೆ ನೆಲ ಬಾಡಿಗೆ ಪಾವತಿಸಬೇಕಿತ್ತು. ಅದರಂತೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ಕೈವಾಕ್‌ಗಳನ್ನು ನಿರ್ಮಾಣ ಮಾಡಿದರೂ ಪಾಲಿಕೆಗೆ ವಾರ್ಷಿಕ ಲಕ್ಷಾಂತರ ರೂ. ನೆಲ ಬಾಡಿಗೆ ಹಾಗೂ ಜಾಹೀರಾತು ತೆರಿಗೆ ಪಾವತಿಸಬೇಕು.

ಆದರೆ, ಬಿಬಿಎಂಪಿ ಅಕಾರಿಗಳ ಮೇಲೆ ಒತ್ತಡ ತಂದ ಗುತ್ತಿಗೆ ಏಜೆನ್ಸಿಗಳು ಪಾಲಿಕೆಯಿಂದ ನಿಗದಿಪಡಿಸಿದ್ದ ನೆಲಬಾಡಿಗೆ ರದ್ದುಗೊಳಿಸುವಲ್ಲಿ ಸಫ‌ಲರಾಗಿದ್ದಾರೆ.  ಏಜೆನ್ಸಿಗಳೊಂದಿಗೆ ಕೈಜೋಡಿಸಿರುವ ಪಾಲಿಕೆಯ ಅಕಾರಿಗಳು, ಸ್ಕೈವಾಕ್‌ಗಳ ನಿರ್ಮಾಣಕ್ಕೆ ಗುತ್ತಿಗೆದಾರರು ಆಸಕ್ತಿ ತೋರುತ್ತಿಲ್ಲವೆಂಬ ಕಾರಣ ನೀಡಿ ಪಾಲಿಕೆಯಿಂದ ನಿಗದಡಿಪಡಿಸಿರುವ ನೆಲ ಬಾಡಿಗೆ ರದ್ದುಗೊಳಿಸಿ ಹೆಚ್ಚು ಬಿಡ್‌ ಮಾಡುವವರಿಗೆ ಗುತ್ತಿಗೆ ನೀಡಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.  

ಸೌಂದರ್ಯ ಮರೆಮಾಚುತ್ತಿರುವ ಸ್ಕೈವಾಕ್‌! 
ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದ ಎಲ್‌ಐಸಿ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಸ್ಕೈವಾಕ್‌ ಕೆಲವೊಂದು ಪ್ರಮುಖ ಕಟ್ಟಡಗಳ ಸೌಂದರ್ಯ ಕಳೆಗುಂದುವಂತೆ ಮಾಡಿದೆ. ಸ್ಕೈವಾಕ್‌ ನಿರ್ಮಾಣದಿಂದ ಬಿಬಿಎಂಪಿ ಕೇಂದ್ರ ಕಚೇರಿ, ಹಡ್ಸರ್ನ್ ಚರ್ಚ್‌, ಬಾದಾಮಿ ಹೌಸ್‌ಗಳು ಟೌನ್‌ ಹಾಲ್‌ ಕಡೆಯಿಂದ ಬರುವಂತಹವರಿಗೆ ಕಾಣುವುದಿಲ್ಲ.

ಮುಂದಿನ ದಿನಗಳಲ್ಲಿ ಜೆಸಿ ರಸ್ತೆಯಿಂದ ಹಡ್ಸರ್ನ್ ವೃತ್ತದವರಿಗೆ ಪಾಲಿಕೆಯಿಂದ ಉಕ್ಕಿನ ಸೇತುವೆ ನಿರ್ಮಾಣ ಯೋಜನೆಯಿದ್ದು, ಒಂದೊಮ್ಮೆ ಯೋಜನೆ ಅನುಷ್ಠಾನವಾದರೆ ಸ್ಕೇವಾಕ್‌ ತೆರವುಗೊಳಿಸಬೇಕಾಗುತ್ತದೆ. ಇದಲ್ಲದೆ, ಪಾಲಿಕೆಯ ಮುಂದಿರುವ ಸ್ಕೈವಾಕ್‌ನಲ್ಲಿ ಅಶ್ಲೀಲ ಜಾಹೀರಾತುಗಳನ್ನು ಅಳವಡಿಸಿದರೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂಬುದು ಕೆಲ ಪಾಲಿಕೆ ಸದಸ್ಯ ಅಭಿಪ್ರಾಯ.  

ಸ್ಥಳ ಗುರುತಿಸುವವರು ಯಾರು? 
ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿರುವ ಪ್ರದೇಶಗಳಲ್ಲಿ ಸ್ಕೈವಾಕ್‌ ನಿರ್ಮಿಸುವಂತೆ ಆಯಾ ವಾರ್ಡ್‌ಗಳ ಪಾಲಿಕೆ ಸದಸ್ಯರು ಅಕಾರಿಗಳಿಗೆ ಮನವಿ ನೀಡುತ್ತಾರೆ. ಅದರಂತೆ ಅಕಾರಿಗಳು ಸ್ಥಳ ಗುರುತಿಸಿ ಟೆಂಡರ್‌ ಕರೆಯುತ್ತಾರೆ. ಆದರೆ, ಇತ್ತೀಚೆಗೆ ಪಾಲಿಕೆಯಿಂದ ಅನುಮತಿ ನೀಡಲಾಗಿರುವ ಪಾಲಿಕೆಯ ಕೇಂದ್ರ ಕಚೇರಿಯ ಮುಂದೆ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ಸಿಗ್ನಲ್‌ ವ್ಯವಸ್ಥೆಯಿದೆ. ಇದರೊಂದಿಗೆ ಕಸ್ತೂರ್‌ಬಾ ರಸ್ತೆಯಲ್ಲಿ ನಿರ್ಮಿಸುತ್ತಿರುವ ಸ್ಕೈವಾಕ್‌ ಬಳಿ ರಸ್ತೆ ದಾಟುವವರ ಸಂಖ್ಯೆ ಕಡಿಮೆಯಿದೆ. ಆದರೂ ಸ್ಕೈವಾಕ್‌ ನಿರ್ಮಾಣಕ್ಕೆ ಪಾಲಿಕೆಯ ಅಕಾರಿಗಳು ಅನುಮತಿ ನೀಡಿದ್ದಾರೆ. 

ಪಾಲಿಕೆಯ ಬೊಕ್ಕಸಕ್ಕೆ ನಷ್ಟ! 
ಬಿಬಿಎಂಪಿ ವತಿಯಿಂದ ಈ ಹಿಂದೆ ಇಂತಿಷ್ಟು ನೆಲ ಬಾಡಿಗೆ ನಿಗದಿಪಡಿಸಿದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಪ್ರತಿ ವರ್ಷ ನಿಗದಿತ ಬಾಡಿಗೆ ಪಾವತಿಸಬೇಕಿತ್ತು. ಇದೀಗ ನಿಗದಿತ ನೆಲ ಬಾಡಿಗೆ ತೆಗೆದು ಟೆಂಡರ್‌ ಮೂಲಕ ಹೆಚ್ಚು ಮೊತ್ತಕ್ಕೆ ಬಿಡ್‌ ಮಾಡಿದವರಿಗೆ ಗುತ್ತಿಗೆ ನೀಡಲು ಪಾಲಿಕೆ ತೀರ್ಮಾನಿಸಿದೆ.

ಆದರೆ, ಸ್ಕೈವಾಕ್‌ಗಳನ್ನು ನಿರ್ಮಿಸುವ ವಿವಿಧ ಸಂಸ್ಥೆಗಳು ಒಂದಾಗಿ ಅತಿ ಕಡಿಮೆ ಮೊತ್ತಕ್ಕೆ ಬಿಡ್‌ ಮಾಡುವ ಸಾಧ್ಯತೆಯಿದೆ. ಸ್ಕೈವಾಕ್‌ ನಿರ್ಮಿಸುವ ಗುತ್ತಿಗೆದಾರರಿಗೆ 30 ವರ್ಷಗಳ ಕಾಲ ಜಾಹೀರಾತು ಅಳವಡಿಸಿಕೊಳ್ಳಲು ಪಾಲಿಕೆಯಿಂದ ಅನುಮತಿ ನೀಡಲಾಗುತ್ತಿದೆ. ಇದರಿಂದ ಪಾಲಿಕೆಯ ಬೊಕ್ಕಸಕ್ಕೆ ಬರಬೇಕಾದ ಆದಾಯ ಕೈತಪ್ಪಿಹೋಗುವ ಸಾಧ್ಯತೆಯಿದೆ ಎನ್ನುತ್ತಾರೆ ಪಾಲಿಕೆಯ ಕೆಲವು ಅಕಾರಿಗಳು.

ಜಾಹೀರಾತು ಪ್ರದರ್ಶನಕ್ಕಾಗಿ ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗ ಸ್ಕೈವಾಕ್‌ ನಿರ್ಮಿಸಲಾಗುತ್ತಿದೆಯೇ ಹೊರತು, ಪಾದಚಾರಿಗಳ ಅನುಕೂಲದ ಉದ್ದೇಶವಿಲ್ಲ. ಇಲ್ಲಿ ಸಂಚಾರ ಸಿಗ್ನಲ್‌ ಇರುವುದರಿಂದ ಜನರಿಗೆ ರಸ್ತೆ ದಾಟಲು ತೊಂದರೆಯಾಗುವುದಿಲ್ಲ. ಆದರೂ ಅಕಾರಿಗಳು ಅನುಮತಿ ನೀಡಿದ್ದು, ಪ್ರಮುಖ ಕಟ್ಟಡಗಳ ಸೌಂದರ್ಯಕ್ಕೆ ಧಕ್ಕೆಯಾಗಲಿದೆ. 
-ಬಿ.ಎಸ್‌.ಸತ್ಯನಾರಾಯಣ, ಮಾಜಿ ಮೇಯರ್‌ 

ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಸ್ಕೈವಾಕ್‌ಗಳ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದೆ. ಆದರೆ, ಹಾಕಿದ ಬಂಡವಾಳ ಬರುವುದಿಲ್ಲವೆಂಬ ಕಾರಣದಿಂದ ಗುತ್ತಿಗೆದಾರರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಜತೆಗೆ ಪಾಲಿಕೆಯಿಂದ ನಿಗದಿಪಡಿಸಿರುವ ನೆಲಬಾಡಿಗೆ ಹೆಚ್ಚಾಯಿತು ಎಂದು ದೂರುತ್ತಿದ್ದಾರೆ. ಅದರ ಹಿನ್ನೆಲೆಯಲ್ಲಿ ಟೆಂಡರ್‌ ಮೂಲಕ ಹೆಚ್ಚು ಬಿಡ್‌ ಸಲ್ಲಿಸಿದವರಿಗೆ ಗುತ್ತಿಗೆ ನೀಡಲು ತೀರ್ಮಾನಿಸಲಾಗಿದ್ದು, ಇದೊಂದು ಪಾರದರ್ಶಕ ವ್ಯವಸ್ಥೆಯಾಗಿದೆ.  
-ಬಿ.ಎಸ್‌. ಪ್ರಹ್ಲಾದ್‌, ಮುಖ್ಯ ಎಂಜಿನಿಯರ್‌ (ರಸ್ತೆ ಮೂಲಸೌಕರ್ಯ)

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next