ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ವಿಶ್ವಸಂಸ್ಥೆಯ 75ನೇ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ್ದು, ಭದ್ರತಾ ಮಂಡಳಿಯನ್ನು ಉಲ್ಲೇಖಿಸಿ ವಿಶ್ವಸಂಸ್ಥೆಯ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯ ಭಾಗವಾಗಲು ಭಾರತ ಎಷ್ಟು ಸಮಯ ಕಾಯಬೇಕು ಎಂದು ಪ್ರಶ್ನಿಸಿದ್ದಾರೆ.
ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ವಿಶ್ವದ 18 ಶೇಕಡಾ ಜನಸಂಖ್ಯೆ ಹೊಂದಿರುವ ದೇಶ, ಲಕ್ಷಾಂತರ ಭಾಷೆ ಮತ್ತು ಸಂಸ್ಕೃತಿಗಳನ್ನು ಹೊಂದಿರುವ ದೇಶ. ಯಾವ ಉದ್ದೇಶಗಳಿಗಾಗಿ ವಿಶ್ವಸಂಸ್ಥೆಯನ್ನು ಸ್ಥಾಪಿಸಲಾಗಿತ್ತೋ ಆದನ್ನು ಪಾಲಿಸಿಕೊಂಡು ಬರಲಾಗುತ್ತಿದೆಯೇ, ಪ್ರಮುಖ ನಿರ್ಧಾರಗಳಿಂದ ಭಾರತವನ್ನು ಹೊರಗಿಡುತ್ತಿರುವುದು ಏಕೆ ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ.
ಮಾತ್ರವಲ್ಲದೆ ವಿಶ್ವ ಸಂಸ್ಥೆಯ ಸಂಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂಬುದು ಹೆಮ್ಮೆಯ ಸಂಗತಿ. ಇದೊಂದು ಐತಿಹಾಸಿಕ ಸಂದರ್ಭವಾಗಿದ್ದು, 1.3 ಬಿಲಿಯನ್ ಭಾರತೀಯರ ಮನದ ಮಾತನ್ನು ಹಂಚಿಕೊಳ್ಳಲು ನಾನು ಈ ಜಾಗತಿಕ ವೇದಿಕೆಗೆ ಆಗಮಿಸಿದ್ದೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಜಗತ್ತು ಇದೀಗ ಸಾಂಕ್ರಾಮಿಕ ಕೋವಿಡ್ ವೈರಸ್ ವಿರುದ್ಧ ಹೋರಾಡುತ್ತಿದೆ. ಇಂತಹ ಸಮಯದಲ್ಲೂ ಭಾರತ 150ಕ್ಕೂ ಹೆಚ್ಚು ದೇಶಗಳಿಗೆ ಸೂಕ್ತ ಔಷಧಿ ನೀಡುವ ಮೂಲಕ ಜವಬ್ದಾರಿ ಮೆರೆದಿದೆ. ಭಾರತ ಶಾಂತಿಯನ್ನು ಪ್ರೀತಿಸುವ ದೇಶ. ಈ ಶಾಂತಿ ಸ್ಥಾಪನೆಗಾಗಿ ಹಲವು ಸೈನಿಕರನ್ನು ಕಳೆದುಕೊಂಡಿದ್ದೇವೆ. ವಿಶ್ವಸಂಸ್ಥೆಗೆ ಭಾರತ ನೀಡಿದ ಕೊಡುಗೆ ದೊಡ್ಡದು. ಹಾಗೇ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಹೆಚ್ಚಿನ ಮಹತ್ವ ಸಿಗಬೇಕು. ನಮ್ಮ ದೇಶದ ಪಾತ್ರಕ್ಕೆ ಇನ್ನಷ್ಟು ಆದ್ಯತೆ ನೀಡಬೇಕು ಎಂದು ಮೋದಿಯವರು ಒತ್ತಾಯಿಸಿದರು
ವಿಶ್ವಸಂಸ್ಥೆ ಸಾಮಾನ್ಯ ಸಭೆ ಚರ್ಚೆಯನ್ನು ಉದ್ದೇಶಿಸಿ ಈಗಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಹಲವು ಗಣ್ಯರು ಮಾತನಾಡಿದ್ದಾರೆ.