Advertisement

ಪುಟ್ಟ ಐಸ್‌ಲ್ಯಾಂಡ್‌ ಆಡುತ್ತಾದರೆ ಭಾರತಕ್ಕೆ ಸಾಧ್ಯವಿಲ್ಲವೇ?

01:13 PM Jun 23, 2018 | |

ನಿಮಗೊಂದು ವಿಷಯ ಗೊತ್ತಾ? ಉತ್ತರ ಅಟ್ಲಾಂಟಿಕ್‌ ಖಂಡದಲ್ಲಿ ಬರೀ 3.50 ಲಕ್ಷ ಜನಸಂಖ್ಯೆ ಇರುವ ಐಸ್‌ಲ್ಯಾಂಡ್‌ ಎಂಬ ಪುಟ್ಟ ದೇಶವಿದೆ. ಕೇಂದ್ರ ಅಮೆರಿಕದಲ್ಲಿ ಬರೀ 40 ಲಕ್ಷ ಜನಸಂಖ್ಯೆ ಇರುವ ಪನಾಮ ಎಂಬ ದೇಶವಿದೆ. ಇವರೆಡೂ ಅತಿಚಿಕ್ಕ ದೇಶಗಳು. ಎಷ್ಟೆಂದರೆ ಐಸ್‌ಲೆಂಡ್‌ ಕರ್ನಾಟಕದ ಅರ್ಧದಷ್ಟಿದ್ದರೆ, ಪನಾಮ ಕರ್ನಾಟಕದ  ಕಾಲುಭಾಗದಷ್ಟಿದೆ. ಇಂತಹ ಎರಡು ದೇಶಕ್ಕೆ ಈ ಬಾರಿ ರಷ್ಯಾದಲ್ಲಿ ನಡೆಯುತ್ತಿರುವ ಫ‌ುಟ್‌ಬಾಲ್‌ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಸಿಕ್ಕಿದೆ. ಇವೆರಡೂ ಈ ಕೂಟದಲ್ಲಿ ಇದೇ ಮೊದಲ ಬಾರಿ ಆಡುತ್ತಿವೆ.

Advertisement

ಆದರೆ…ಜನಸಂಖ್ಯೆಯಲ್ಲಿ ಐಸ್‌ಲೆಂಡ್‌ಗಿಂತ 3771 ಪಟ್ಟು, ವಿಸ್ತೀರ್ಣದಲ್ಲಿ 30 ಪಟ್ಟು ದೊಡ್ಡದಿರುವ ಭಾರತಕ್ಕೆ ಈ ಕೂಟದಲ್ಲಿ ಆಡುವ ಅರ್ಹತೆಯಿಲ್ಲ. ಪನಾಮಕ್ಕೆ ಹೋಲಿಸಿದರೂ ಗಾತ್ರ, ಜನಸಂಖ್ಯೆಯಲ್ಲಿ ಭಾರತ ಬೃಹತ್‌ ರಾಷ್ಟ್ರ. ಇಂತಹ ರಾಷ್ಟ್ರಕ್ಕೆ ವಿಶ್ವದ ಶ್ರೇಷ್ಠ 32 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುವುದಿಲ್ಲವೇ? ಇದೆಂತಹ ನಿರಾಶೆಯ ಪ್ರಶ್ನೆ? ಕ್ರಿಕೆಟ್‌ನಲ್ಲಿ ದಂತಕಥೆಗಳನ್ನು ಸೃಷ್ಟಿಸಿರುವ ಭಾರತಕ್ಕೆ, ವಿಶ್ವದ ದೈತ್ಯ ಪ್ರತಿಭೆಗಳ ಆಶ್ರಯ ತಾಣದಂತಿರುವ ಭಾರತಕ್ಕೆ ಫ‌ುಟ್‌ಬಾಲ್‌ನಲ್ಲಿ ಪ್ರತಿಭೆಗಳನ್ನು ಸೃಷ್ಟಿಸಲಾಗುತ್ತಿಲ್ಲವೇ? 

ಇತಿಹಾಸವನ್ನು ಗಮನಿಸಿದರೆ ಭಾರತ ಫ‌ುಟ್‌ಬಾಲ್‌ನಲ್ಲಿ ಕೆಲವು ಅಪರೂಪದ ದಾಖಲೆ ಗಳನ್ನು ಹೊಂದಿದೆ. ಅಂತಹ ಪರಂಪರೆಯನ್ನು ನಮಗೆ ಮುಂದುವರಿಸಿಕೊಂಡು ಹೋಗಲಾಗ ಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅಂತಹ ಆಸಕ್ತಿಗಳೇ ಇರಲಿಲ್ಲ ಎನ್ನುವುದು ಬೇಸರದ ಸಂಗತಿ.

1930ರಲ್ಲಿ ವಿಶ್ವಕಪ್‌ ಫ‌ುಟ್‌ಬಾಲ್‌ ಶುರು ವಾಯಿತು. ಒಮ್ಮೆಯೂ ಭಾರತ ಈ ಕೂಟದಲ್ಲಿ ಆಡುವ ಅರ್ಹತೆ ಪಡೆದುಕೊಂಡಿಲ್ಲ. 1950 ರಲ್ಲಿ ಭಾರತಕ್ಕೊಮ್ಮೆ ಅಪರೂಪದ ಅವಕಾಶ ಎದುರಾಯಿತು. ಹಲವು ಪ್ರಮುಖ ತಂಡಗಳು ಕೂಟದಿಂದ ಉದ್ದೇಶಪೂರ್ವಕವಾಗಿ ಹಿಂದೆ ಸರಿದಾಗ ದಿಢೀರನೆ ಭಾರತಕ್ಕೆ ಕರೆ ಬಂದಿತ್ತು. ಆದರೆ ಆಗಷ್ಟೇ ದೇಶಕ್ಕೆ ಸ್ವಾತಂತ್ರ್ಯ ಬಂದ ಹೊತ್ತದು. ಬಡತನ ಇಡೀ ದೇಶವನ್ನೇ ಹಿಂಡುತ್ತಿತ್ತು. ಭಾರತ ಫ‌ುಟ್‌ಬಾಲ್‌ ತಂಡವೂ ಈ ಬಡತನದಿಂದಲೇ ತಾನು ವಿಶ್ವಕಪ್‌ನಲ್ಲಿ ಆಡಲ್ಲವೆಂದು ತಿಳಿಸಿತು. ತಂಡದ ಆಟಗಾರರ ಬಳಿ ಕಾಲಿಗೆ ಹಾಕಲು ಸರಿಯಾದ ಶೂಗಳಿರಲಿಲ್ಲ. ಅಲ್ಲಿಯವರೆಗೆ ತೆರಳಲು ಹಣಕಾಸಿನ ವ್ಯವಸ್ಥೆಯೂ ಇರಲಿಲ್ಲ. 

ಅಂತಹ ಅಪೂರ್ವ ಅವಕಾಶ ಕಳೆದು ಕೊಳ್ಳುವ ಮುನ್ನ 1948ರಲ್ಲಿ ಭಾರತ ಒಲಿಂಪಿಕ್ಸ್‌ ನಲ್ಲಿ ಆಡಿತ್ತು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಫ್ರಾನ್ಸ್‌ನಂತಹ ಬಲಿಷ್ಠ ತಂಡ ಎದುರಿಸಿದ್ದ ಭಾರತ ಎರಡು ಪೆನಾಲ್ಟಿ ಅವಕಾಶಗಳನ್ನು ತಪ್ಪಿಸಿ ಕೊಂಡು 2-1ರಿಂದ ಸೋತು ಹೋಗಿತ್ತು. ವಿಶೇಷವೇನು ಗೊತ್ತಾ? ಭಾರತ ಆಗ ಆಡಿದ್ದು ಬರಿಗಾಲಲ್ಲಿ. ಮುಂದೆ ಅದು ವಿವಾದವೂ ಆಯಿತು. ಅದೇ ಕೂಟ ದಿಂದಲೇ ಫಿಫಾ ಬೂಟು  ಧರಿಸಿಯೇ ಆಡಬೇಕೆಂದು ತೀರ್ಮಾನ ಮಾಡಿತು.

Advertisement

1952ರಲ್ಲಿ ಭಾರತ ಇನ್ನೊಮ್ಮೆ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ ಪಡೆಯಿತು. ಅದು ಭಾರತಕ್ಕೆ ಸಿಕ್ಕ ಇನ್ನೊಂದು ಅಸಾಮಾನ್ಯ ಅವಕಾಶ. ಅಲ್ಲೂ ಸಿಕ್ಕಿದ್ದು ನಿರಾಶೆಯೇ. ಯುಗೋಸ್ಲಾವಿಯಾದ ವಿರುದ್ಧ 10-0ಯಿಂದ ಸೋತು ಹೊರಬಿತ್ತು. ಇಲ್ಲಿಂದ ಮುಂದೆ ಭಾರತಕ್ಕೆ ವಿಶ್ವಮಟ್ಟದಲ್ಲಿ ನಿರಾಶೆಯೇ ಉತ್ತರ. ಮುಂದೆ ಅರ್ಹತೆಯೂ ಸಿಗಲಿಲ್ಲ, ಆಡಲೂ  ಇಲ್ಲ. ಆದರೆ ಏಷ್ಯಾಮಟ್ಟದಲ್ಲಿ ಒಂದು ಪ್ರಬಲ ರಾಷ್ಟ್ರವಾಗಿ ಗುರ್ತಿಸಿಕೊಂಡಿತು. ಮುಂದೆ ಫ‌ುಟ್‌ಬಾಲ್‌ನಲ್ಲಿ ಗುಣಮಟ್ಟ, ಪೈಪೋಟಿ ಬೆಳೆಯುತ್ತಿದ್ದಂತೆ ಅದಕ್ಕೆ ಸರಿಸಮನಾಗಿ ಭಾರತದಲ್ಲಿ ಫ‌ುಟ್‌ಬಾಲ್‌ ಸಂಸ್ಕೃತಿ ಅರಳಲಿಲ್ಲ ಎನ್ನುವುದು ವಿಪರ್ಯಾಸ. 

ಅರ್ಹತೆ ಯಾಕೆ ಸಿಗುತ್ತಿಲ್ಲ?
ಭಾರತಕ್ಕೆ ವಿಶ್ವಕಪ್‌ ಫ‌ುಟ್‌ಬಾಲ್‌ಗೆ ಅರ್ಹತೆ ಸಿಗದಿರುವುದಕ್ಕೆ ಯಾವುದೇ ವಿಶೇಷ ಕಾರಣಗಳಿಲ್ಲ. ಈ ದೇಶದಲ್ಲಿ ಫ‌ುಟ್‌ಬಾಲ್‌ ಸಂಸ್ಕೃತಿ ಬೆಳೆಯದಿರುವುದು ನೇರ ಕಾರಣ. ಕ್ರೀಡೆ ಈಗ ಎಂದಿನಂತೆ ಬರೀ ಮನರಂಜನಾತ್ಮಕವಾಗುಳಿದಿಲ್ಲ. ಅದಕ್ಕೆ ವೃತ್ತಿಪರ ಸ್ಪರ್ಶ ಸಿಕ್ಕಿದೆ. ಭಾರತದಲ್ಲಿ ಕಾಲಕ್ಕೆ ಸರಿಯಾಗಿ ವೃತ್ತಿಪರ ವ್ಯವಸ್ಥೆ ರೂಪುಗೊಳ್ಳಲಿಲ್ಲ. ಅಂದರೆ ವಿಶ್ವದರ್ಜೆಯ ತರಬೇತಿ ವ್ಯವಸ್ಥೆ, ಮೈದಾನ, ಪ್ರತಿಭೆಗಳನ್ನು ರೂಪಿಸುವುದು, ದೇಶೀಯ ಕೂಟಗಳಲ್ಲಿ ಗುಣಮಟ್ಟಕ್ಕೆ ಒತ್ತುಕೊಡುವುದು ಆಗಲಿಲ್ಲ. ಜೊತೆಗೆ ಫ‌ುಟ್‌ಬಾಲಿಗರು ಫ‌ುಟ್‌ಬಾಲನ್ನೇ ವೃತ್ತಿಯಾಗಿ ಸ್ವೀಕರಿಸುವ ಆರ್ಥಿಕ ಸದೃಢತೆ ಇನ್ನೂ ಇಲ್ಲ. ಸದ್ಯದ ಮಟ್ಟಿಗೆ ಐಪಿಎಲ್‌ ಮಾದರಿಯ ಐಎಸ್‌ಎಲ್‌ ಭಾರತ ಫ‌ುಟ್‌ಬಾಲ್‌ ಕ್ಷೇತ್ರದಲ್ಲಿ ಶುರುವಾಗಿದೆ. ಇಲ್ಲಿ ಎಲ್ಲವೂ ವೃತ್ತಿಪರವಾಗಿದೆ. ವಿಶ್ವದ ವಿವಿಧ ರಾಷ್ಟ್ರಗಳ ಆಟಗಾರರು ಇಲ್ಲಿ ಆಡುತ್ತಿದ್ದಾರೆ. ಇದು ಭಾರತೀಯರ ಕೌಶಲ್ಯವನ್ನೂ ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ಭವಿಷ್ಯದ ಬಗ್ಗೆ ಭರವಸೆ ಇರಲಿ
ಇಷ್ಟೆಲ್ಲ ನೋವಿನ ಕಥೆಗಳಿದ್ದರೂ ಭವಿಷ್ಯದ ಬಗ್ಗೆ ಭರವಸೆ ತಾಳುವುದಕ್ಕೆ ಸಾಧ್ಯವಿದೆ. ಭಾರತದ ಫ‌ುಟ್‌ಬಾಲ್‌ ಶ್ರೇಯಾಂಕ ಸುಧಾರಿಸುತ್ತಿದೆ. ಸುನೀಲ್‌ ಚೆಟ್ರಿ, ಬೈಚುಂಗ್‌ ಭುಟಿಯಾರಂತಹ ಕ್ರೀಡಾಪಟುಗಳು ರೂಪುಗೊಳ್ಳುತ್ತಿದ್ದಾರೆ. ಚೆಟ್ರಿಯಂತೂ ಗೋಲು ಗಳಿಕೆಯಲ್ಲಿ ಲಿಯೋನೆಲ್‌ ಮೆಸ್ಸಿಯನ್ನೇ ಮೀರಿದ್ದಾರೆ. ಭಾರತ ಆಡದಿದ್ದರೂ ವಿಶ್ವಕಪ್‌ ಫ‌ುಟ್‌ಬಾಲನ್ನು ಭಾರತೀಯರು ವೀಕ್ಷಿಸುತ್ತಿರುವ ಪರಿಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಭಾರತವೂ ಒಂದು ತಂಡವಾಗಿ ಕಾಣಿಸಿಕೊಂಡರೆ ಅದನ್ನು ಅಚ್ಚರಿ ಎನ್ನಲು ಸಾಧ್ಯವಿಲ್ಲ.

 ನಿರೂಪ 

Advertisement

Udayavani is now on Telegram. Click here to join our channel and stay updated with the latest news.

Next