Advertisement

ಇನ್ನೂ ಅನುಷ್ಠಾನ ಆಗದ ಫೂಟ್ ಬ್ರಿಡ್ಜ್ ಕಾಮಗಾರಿ

07:52 PM Oct 19, 2021 | Team Udayavani |

ಬಂಟ್ವಾಳ: ಬಂಟ್ವಾಳ ರೈಲ್ವೇ ನಿಲ್ದಾಣನಿಂದ ನಗರಕ್ಕೆ ಸಮೀಪ ಸಂಪರ್ಕ ಕಲ್ಪಿಸುವ ಆದರ್ಶ ರೈಲು ನಿಲ್ದಾಣ ಯೋಜನೆಯ ಮೂಲಕ ನಡೆಯಬೇಕಿದ್ದ ಫೂಟ್ ಬ್ರಿಡ್ಜ್ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಯೋಜನೆಯ ಇತರ ಕಾಮಗಾರಿಗಳು ಬಹುತೇಕ ಅಂತಿಮ ಹಂತದಲ್ಲಿ ಇದೆ.

Advertisement

ಕಳೆದ ಕೆಲವು ವರ್ಷಗಳ ಹಿಂದೆ ರೈಲ್ವೇ ಇಲಾಖೆಯಿಂದ ಆದರ್ಶ ರೈಲು ನಿಲ್ದಾಣ ಯೋಜನೆಯ ಮೂಲಕ ಬಂಟ್ವಾಳ ರೈಲು ನಿಲ್ದಾಣಕ್ಕೆ 5.56 ಕೋ.ರೂ. ಮಂಜೂರುಗೊಂಡು ಕಾಮಗಾರಿ ಆರಂಭಗೊಂಡಿತ್ತು. ನಿರೀಕ್ಷೆಯಂತೆ ಕಾಮಗಾರಿ ನಡೆದಿದ್ದರೆ 2020ರ ಫೆಬ್ರವರಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಕೊರೊನಾ ಕಾರಣದಿಂದ ನಿಂತ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ.

2019ರಲ್ಲಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದ ದ.ಕ.ಸಂಸದ ನಳಿನ್‌ಕುಮಾರ್‌ ಕಟೀಲು ಅವರು ನಿಲ್ದಾಣದ ಕಾಮಗಾರಿಯನ್ನು ಪರಿಶೀಲಿಸಿ ವೇಗವಾಗಿ ಮುಗಿಸುವಂತೆ ಸೂಚನೆಯನ್ನೂ ನೀಡಿದ್ದರು. ಒಟ್ಟು 2 ಫ್ಲ್ಯಾಟ್ ಫಾರ್ಮ್ ಗಳನ್ನು ಒಳಗೊಂಡಿರುವ ನಿಲ್ದಾಣದಲ್ಲಿ ಫ್ಲ್ಯಾಟ್ ಫಾರ್ಮ್ ಒಂದಕ್ಕೆ 1.57 ಕೋ.ರೂ. ಹಾಗೂ ಫ್ಲ್ಯಾಟ್ ಫಾರ್ಮ್ ಎರಡಕ್ಕೆ 2.60 ಕೋ.ರೂ. ಅನುದಾನ ಮಂಜೂರಾಗಿರುವ ಕುರಿತು ಸಂಸದರು ಮಾಹಿತಿ ನೀಡಿದ್ದರು.

ಬಿ.ಸಿ.ರೋಡ್‌ ತಲುಪಲು ಸಮೀಪದ ವ್ಯವಸ್ಥೆ
ಪ್ರಸ್ತುತ ಬಂಟ್ವಾಳ ರೈಲು ನಿಲ್ದಾಣವನ್ನು ಪ್ರವೇಶಿಸಬೇಕಾದರೆ ಬಿ.ಸಿ.ರೋಡ್‌ ನಗರ ಕೇಂದ್ರದಿಂದ ಪಾಣೆಮಂಗಳೂರು ರಸ್ತೆಯ ಮೂಲಕ ಸಾಗಿ ನಿಲ್ದಾಣ ಸೇರಬೇಕಿದೆ. ಆದರೆ ಇದು ಕೊಂಚ ದೂರದ ವ್ಯವಸ್ಥೆಯಾದ ಕಾರಣ ಜನರು ನಗರ ಕೇಂದ್ರದಿಂದ ಆಟೋ ರಿಕ್ಷಾ ಅಥವಾ ಇತರ ವಾಹನಗಳನ್ನು ಬಳಸಿ ಸಾಗಬೇಕಿದೆ.

ಇದನ್ನೂ ಓದಿ:ದಾಂಡೇಲಿ: ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅತಿಕ್ರಮಣ-ತೆರವುಗೊಳಿಸದ ನಗರ ಸಭೆ

Advertisement

ಪ್ರಯಾಣಿಕರು ನಿಲ್ದಾಣದಿಂದ ಇನ್ನೊಂದು ಭಾಗಕ್ಕೆ ನಡೆದುಕೊಂಡು ಹೋಗುವ ವ್ಯವಸ್ಥೆ ಇದ್ದರೆ ಕೈಕುಂಜೆ ಮಾರ್ಗವಾಗಿ ಬಿ.ಸಿ.ರೋಡ್‌ ನಗರವನ್ನು ಸುಲಭವಾಗಿ ತಲುಪಬಹುದಾಗಿದೆ. ಹೀಗಾಗಿ ಫ‌ೂಟ್‌ ಬ್ರಿಡ್ಜ್ ಬೇಡಿಕೆಯ ಹಿನ್ನೆಲೆಯಲ್ಲಿ ಸುಮಾರು 78 ಲಕ್ಷ ರೂ.ಗಳಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಆದರೆ ಅದು ಇನ್ನೂ ಅನುಷ್ಠಾನ ಹಂತದಲ್ಲೇ ಇರುವ ಕಾರಣ ಹತ್ತಿರದ ನಗರ ಸಂಪರ್ಕ ವ್ಯವಸ್ಥೆ ಇನ್ನೂ ಈಡೇರಿಲ್ಲ. ರೈಲು ನಿಲ್ದಾಣದಿಂದ ಕೈಕುಂಜೆ ಭಾಗಕ್ಕೆ ಬರುವವರು ಪ್ರಸ್ತುತ ರೈಲ್ವೇ ಹಳಿಯನ್ನು ದಾಟಿ ಬರುತ್ತಿದ್ದು, ರಸ್ತೆಯ ಮಾಹಿತಿ ಇರುವ ಪ್ರಯಾಣಿಕರು ಕೂಡ ಹಳಿ ದಾಟಿ ಬಿ.ಸಿ.ರೋಡ್‌ಗೆ ಬರುತ್ತಿದ್ದಾರೆ. ಆದರೆ ಹಳಿ ದಾಟುವುದು ಬಹಳ ತ್ರಾಸದಾಯಕವಾಗಿರುವುದರಿಂದ ಫ‌ೂಟ್‌ ಬ್ರಿಡ್ಜ್ ನಿರ್ಮಾಣ ಗೊಂಡರೆ ಹಳಿದಾಟುವುದಕ್ಕೆ ಅನುಕೂಲವಾಗಲಿದೆ.

ಆದರ್ಶ ಯೋಜನೆಯ ಕಾಮಗಾರಿಗಳೇನು?
ಆದರ್ಶ ನಿಲ್ದಾಣ ಯೋಜನೆಯ ಮೂಲಕ ಫ್ಲ್ಯಾಟ್ ಫಾರ್ಮ್ ಮೇಲ್ಛಾವಣಿ, ವಿದ್ಯುದ್ದೀಪ, ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ, ಶುದ್ಧೀಕರಿಸಿದ ಕುಡಿಯುವ ನೀರಿನ ಘಟಕ, ಅಂಗವಿಕಲರಿಗೆ ವಿಶೇಷ ಶೌಚಗೃಹ, ಹೊಸ ಶೌಚಾಲಯ ಕಾಂಪ್ಲೆಕ್ಸ್‌ ರಚನೆ, ಫ್ಲ್ಯಾಟ್ ಫಾರ್ಮ್ ಸುತ್ತಲೂ ಆವರಣಗೋಡೆ ನಿರ್ಮಾಣ, ಫ್ಲ್ಯಾಟ್ ಫಾರ್ಮ್ ನಲ್ಲಿ ಬೆಂಚು, ರೈಲ್ವೇ ಭದ್ರತೆ ವ್ಯವಸ್ಥೆ ಗಟ್ಟಿಗೊಳಿಸುವುದು, ಕಿತ್ತು ಹೋಗಿರುವ ಶೀಟ್‌ಗಳನ್ನು ಮತ್ತೆ ಹಾಕಿಸುವುದು, ರೈಲು ನಿಲ್ದಾಣದಲ್ಲಿ ಸಮರ್ಪಕವಾಗಿ ಸಿಸಿ ಕೆಮರಾ ಅಳವಡಿಸುವುದು ಮೊದಲಾದ ಕಾಮಗಾರಿಗಳು ನಡೆಯಬೇಕಿದೆ. ಇವುಗಳಲ್ಲಿ ಬಹುತೇಕ ಕಾಮಗಾರಿಗಳು ಅಂತಿಮ ಹಂತದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next