ಆತಂಕಕಾರಿ ಸಂಗತಿಯೊಂದು ಈಗ ಬೆಳಕಿಗೆ ಬಂದಿದೆ. ಹಿಂದುಳಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ಕಾರ್ಯತಂತ್ರದ ಭಾಗವಾಗಿ ನೆಸ್ಲೆ ಇಂತಹ ಕಾರ್ಯದಲ್ಲಿ ನಿರತವಾಗಿರುವಂತೆ ಕಂಡುಬರುತ್ತಿದೆ.
Advertisement
ಸ್ವಿಟ್ಸರ್‌ಲ್ಯಾಂಡ್‌ನ ಸರಕಾರೇತರ ಸಂಸ್ಥೆ ಮತ್ತು ಐಬಿಎಫ್ಎಎನ್ ಜಂಟಿಯಾಗಿ ಬೆಲ್ಜಿಯನ್ ಪ್ರಯೋಗಾಲಯದಲ್ಲಿ ಸಿರಿಲ್ಯಾಕ್‌ನ ವಿವಿಧ ಪದಾರ್ಥಗಳ ಮಾದರಿಯನ್ನು ಪರೀಕ್ಷೆಗೊಳಪಡಿಸಿದ್ದವು. ಈ ವೇಳೆ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಸಿರಿಲ್ಯಾಕ್‌ನ ವಿವಿಧ ಮಾದರಿಗಳಲ್ಲಿ ಸಕ್ಕರೆ ಅಂಶ ಸೇರಿಸಿರುವುದು ಕಂಡುಬಂದಿದೆ. ಇದೇ ಕಂಪೆನಿ ಯುರೋಪ್, ಜರ್ಮನಿ, ಬ್ರಿಟನ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳಿಗೆ ಪೂರೈಸುತ್ತಿರುವಸಿರಿಲ್ಯಾಕ್ಗೆ ಸಕ್ಕರೆಯನ್ನು ಸೇರಿಸುತ್ತಿಲ್ಲ. ಜಾಗತಿಕ ಎಫ್ಎಂಸಿಜಿ ಕಂಪೆನಿಯ ಈ ಇಬ್ಬಗೆಯ ಧೋರಣೆ ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.
ವಿವಿಧ ಧಾನ್ಯಗಳನ್ನು ಬಳಸಿ ಈ ಶಿಶು ಆಹಾರವನ್ನು ತಯಾರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ 6 ತಿಂಗಳುಗಳಿಗಿಂತ ಮೇಲ್ಪಟ್ಟ ಕಂದಮ್ಮಗಳಿಗೆ 2 ವರ್ಷಗಳವರೆಗೆ ನೀಡುವ ಆಹಾರ ಪದಾರ್ಥಗಳಿಗೆ ಸಕ್ಕರೆಯನ್ನು ಸೇರಿಸಬಾರದು. ಹಾಲು, ಧಾನ್ಯ, ಹಣ್ಣುಗಳಲ್ಲಿರುವ ಸಿಹಿಯನ್ನಷ್ಟೇ ಶಿಶು ಆಹಾರ ಪದಾರ್ಥಗಳು ಹೊಂದಿರಬೇಕು. ಒಂದು ವೇಳೆ ಮಗುವಿಗೆ ಎಳವೆಯಲ್ಲೇ ಹೆಚ್ಚುವರಿಯಾಗಿ ಸಕ್ಕರೆಯನ್ನು ಒಳಗೊಂಡ ಆಹಾರಗಳನ್ನು ನೀಡಿದ್ದೇ ಆದಲ್ಲಿ ಮಕ್ಕಳಿಗೆ ಇದು ಒಂದು ವ್ಯಸನವಾಗಿ ಆ ಬಳಿಕ ಇಂತಹುದೇ ಆಹಾರಕ್ಕಾಗಿ ಪಟ್ಟು ಹಿಡಿಯುತ್ತವೆ. ಇದರಿಂದ ಅಧಿಕ ತೂಕ, ಬೊಜ್ಜು, ದೀರ್ಘಕಾಲೀನ ಕಾಯಿಲೆಗಳಾದ ಟೈಪ್ 2 ಡಯಾಬಿಟೀಸ್, ಹೃದಯದ ಕಾಯಿಲೆಗಳು ಹಾಗೂ ಕೆಲವೊಂದು ತೆರನಾದ ಕ್ಯಾನ್ಸರ್ ಬಾಧಿಸುವ ಸಂಭವ ಅಧಿಕವಾಗಿರುತ್ತದೆ. ಜತೆಯಲ್ಲಿ ದಂತ ಹುಳುಕು, ಪೋಷಕಾಂಶಯುಕ್ತ ಆಹಾರ ಸೇವನೆ ಪ್ರಮಾಣದಲ್ಲಿ ಇಳಿಕೆಯಾಗಿ
ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಅಧಿಕವಾಗಿವೆ.
Related Articles
Advertisement
ಇನ್ನಾದರೂ ದೇಶದಲ್ಲಿ ಮಾರಾಟ ಮಾಡಲಾಗುತ್ತಿರುವ ಆಹಾರ ಉತ್ಪನ್ನಗಳು ಮತ್ತು ಪದಾರ್ಥ ಗಳ ಗುಣಮಟ್ಟದ ಬಗೆಗೆ ಸಂಬಂಧಪಟ್ಟ ಸಂಸ್ಥೆಗಳು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸ ಬೇಕು. ಈಚೆಗಷ್ಟೇ ಕೇಂದ್ರ ಸರಕಾರ ಬೋರ್ನ್ವಿಟಾ ಪಾನೀಯ ವನ್ನು ಆರೋಗ್ಯ ಪೂರ್ಣ ಪಾನೀಯ ಪಟ್ಟಿಯಿಂದ ಹೊರ ತೆಗೆದಿರುವುದು ಇಲ್ಲಿ ಉಲ್ಲೇಖಾರ್ಹ. ರಾಜ್ಯದಲ್ಲಿ ಸಹ ಈಚೆಗೆ ಗೋಬಿ ಮಂಚೂರಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಎಂಬ ಕಾರಣಕ್ಕೆ ಕೆಲವು ರಾಸಾಯನಿಕ ವಸ್ತುಗಳನ್ನು ನಿಷೇಧಿಸಿದ್ದನ್ನುಸ್ಮರಿಸಬಹುದು. ಈ ರೀತಿಯ ಕ್ರಮಗಳು ಸ್ವಾಗತಾರ್ಹ. ಆಹಾರ ಉತ್ಪನ್ನಗಳು ನೂರು ಪ್ರತಿಶತ ಸುರಕ್ಷೆಯನ್ನು ಹೊಂದಿರುವಂತೆ ಖಾತರಿಪಡಿಸುವ ಹೊಣೆಗಾರಿಕೆ ಈ ಸಂಸ್ಥೆಗಳದ್ದಾಗಿದೆ. ಇನ್ನು ಜನತೆ ಕೂಡ ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಆಹಾರ ಉತ್ಪನ್ನಗಳಿಗೆ ಮಾರುಹೋಗದೆ, ಅವುಗಳ ಬಗೆಗೆ ತಿಳಿದುಕೊಂಡು ಸೇವಿಸಿದರೆ ಸಂಭಾವ್ಯ ಅನಾಹುತಗಳನ್ನು ತಪ್ಪಿಸಬಹುದು.