ಹೊಟ್ಟೆ ಚುರುಗುಡುತ್ತಿದ್ದರೂ ಊಟಕ್ಕೆ ಮೊದಲು ಅನ್ನಬ್ರಹ್ಮ ಎಂದು ಕಣ್ಮುಚ್ಚಿ ಶ್ಲೋಕ ನುಡಿದು ಅನ್ನಕ್ಕೆ ವಂದಿಸುವ ನಾಡಿನಲ್ಲಿ ಅನ್ನಕ್ಕೇ ಅಗೌರವವೊಡ್ಡುವ, ಬೆಳೆಯುವ ಅನ್ನವನ್ನು ಪುನಃ ನೆಲಕ್ಕೇ ಚೆಲ್ಲುವ ವಿಪರ್ಯಾಸ ನಮ್ಮನ್ನು ಕಾಡದಿರಲಿ.
ನೋಡಿ ಸುಮ್ಮನೇ ಬಿಟ್ಟು ಬಿಡುವುದಾದರೆ ಅದೊಂದು ಪುಟ್ಟ ವೀಡಿಯೋವಷ್ಟೇ. ಒಂದಿಷ್ಟು ಕಾಲೇಜಿನ ವಿದ್ಯಾರ್ಥಿಗಳು ಬಸ್‌ನಿಲ್ದಾಣದಲ್ಲಿ ತಮ್ಮ ಸಹಪಾಠಿಯೊಬ್ಬನ ಹುಟ್ಟುಹಬ್ಬವನ್ನು ತಮ್ಮದೇ ಮೋಜಿನ ಲೋಕದಲ್ಲಿ ವಿಹರಿಸುತ್ತಾ ಆಚರಿಸುವ ಸನ್ನಿವೇಶ. ನೋಡಿದರೆ ಎಲ್ಲರೂ ಅನುಕೂಲಸ್ಥರೇ. ಹುಟ್ಟು ಹಬ್ಬ ದಿನದ ಹುಡುಗ ಎಲ್ಲರ ಮಧ್ಯೆ ನಿಂತಿರುತ್ತಾನೆ. ಎಲ್ಲರೂ ನಗುತ್ತಾ ಛೇಷ್ಟೆ ಮಾಡುತ್ತ ಸಂಭ್ರಮಿಸುತ್ತಿದ್ದಾರೆ. ಇದನ್ನೆಲ್ಲ ಒಬ್ಬ ಬಡಬಾಲಕ ಅದೇ ಬಸ್‌ನಿಲ್ದಾಣದ ಮೂಲೆಯಲ್ಲಿ ಕೂತು ನೋಡುತ್ತಿದ್ದಾನೆ, ಆತನಿಗೆ ಅವರ ಸಂಭ್ರಮಾಚರಣೆಯ ಕಾರಣ ತಿಳಿಯಲೂ ಇಲ್ಲ, ಅದರ ಅಗತ್ಯವೂ ಆತನಿಗಿಲ್ಲ. ನೋಡಿದರೆ ತುತ್ತು ಅನ್ನಕ್ಕಾಗಿ ಹಪಹಪಿಸುತ್ತಿರುವವನಂತೆ ಕಾಣುವನು ಆತ. ಒಮ್ಮೆಲೇ ಆ ಗುಂಪಿಗೆ ಸೇರಿಕೊಳ್ಳುವ ಇನ್ನೊಬ್ಬ ಮಿತ್ರ ಕೇಕನ್ನು ಆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವವನ ಮುಖಕ್ಕೆ ಸವರಿ ಚೇಷ್ಟೆ ಮಾಡುತ್ತಾನೆ. ಸರಿ, ಅವರು ಅದೇ ಜೋಶ್‌ನಲ್ಲಿ ಮುಂದಕ್ಕೆ ಸಾಗುತ್ತಾರೆ ಎನ್ನುವಷ್ಟರಲ್ಲಿ ಮೂಲೆಯಲ್ಲಿ ಕೂತಿದ್ದ ಆ ಬಾಲಕ ಕೂಡಲೇ ಓಡಿಬಂದು ಆತನ ಮುಖಕ್ಕೆ ಸವರುವಾಗ ಬಿದ್ದಿದ್ದ ಕೇಕಿನ ತುಂಡನ್ನು ಹೆಕ್ಕಿ ತಿನ್ನುತ್ತಾನೆ! ಅಷ್ಟೇ! ಪುಟ್ಟದೊಂದು ದೃಶ್ಯ ಕೆಲವೇ ಕ್ಷಣಗಳಲ್ಲಿ ಕರುಳು ಹಿಂಡಿಬಿಡುತ್ತದೆ. ಅದು ಹೇಳುವ ಹೇಳದ ಕಥೆಗಳು ಜೀವಂತವಾಗುತ್ತವೆ.
ಹಸಿವು ಮತ್ತು ಆಹಾರ ವ್ಯರ್ಥ – ಕಟುವಾಸ್ತವ: ಭಾರತ ಎಂದೊಡನೆ ಸಮಾಜ ವಿಜ್ಞಾನ ಕಲಿಸಿಕೊಟ್ಟ “ಬಡದೇಶ’ ಎಂಬ ಟ್ಯಾಗ್‌ಲೈನ್ ಕೂಡಲೇ ಆ ಪದಕ್ಕೆ ಜೋಡಣೆಯಾಗುತ್ತದೆ. ಆದರೆ ಆಹಾರದ ವಿಚಾರದಲ್ಲಿ ಬಡತನವಿರುವ ದೇಶ ಭಾರತ ಮಾತ್ರವಲ್ಲ, ಅದು ಇಡಿಯ ಜಾಗತಿಕ ಮಟ್ಟದ ಸಮಸ್ಯೆಯೂ ಆಗಿದೆ. ಒಂದು ವೇಳೆ ಈ ವಿಚಾರದಲ್ಲಿ ಕೇವಲ ನಮ್ಮ ದೇಶವನ್ನು ಮಾತ್ರ ಗಣನೆಗೆ ತೆಗೆದುಕೊಂಡು ಜಾಗತಿಕ ಮಟ್ಟದ ಅಂಕಿಅಂಶಗಳನ್ನು ಗಮನಿಸುತ್ತ ಹೋದರೆ ಕಹಿವಿಚಾರಗಳ ಸರಣಿಯೇ ಅಟ್ಟಿಸಿಕೊಂಡು ಬರುತ್ತದೆ. ಜಗತ್ತಿನಲ್ಲಿ ಹಸಿವಿನಿಂದ ನರಳುವ ನೂರು ಮಂದಿಯಲ್ಲಿ ಇಪ್ಪತ್ತೆçದು ಮಂದಿ ಭಾರತೀಯರೇ ಆಗಿದ್ದಾರೆ! ಭಾರತದ ಇಪ್ಪತ್ತು ಕೋಟಿಗೂ ಅಧಿಕ ಮಂದಿ ತುತ್ತುಕೂಳಿಗೂ ಪರದಾಟ ಅನುಭವಿಸುತ್ತಾರೆ. ಪ್ರತಿನಿತ್ಯ ಅದೆಷ್ಟೋ ಜೀವಗಳು ಹಸಿವಿನಲ್ಲೇ ಮಲಗುತ್ತವೆ. ಹಾಗಾದರೆ ಭಾರತವೆಂದರೆ ಇಷ್ಟೇನಾ? ಖಂಡಿತ ಅಲ್ಲ, ಗಾಬರಿಗೊಳಿಸುವ ಅಂಕಿಅಂಶಗಳನ್ನು ನೋಡಿ. ಪ್ರತಿವರ್ಷ ದೇಶದಲ್ಲಿ 58,000 ಕೋಟಿ ರೂಪಾಯಿಯಷ್ಟು ಆಹಾರ ವ್ಯರ್ಥಗೊಳ್ಳುತ್ತಿದೆ. ಸಮೀಕ್ಷೆಯೊಂದು ಹೇಳುವಂತೆ ಎರಡು ವರ್ಷದ ಅವಧಿಯಲ್ಲಿ ಸುಮಾರು 22,000 ಮೆಟ್ರಿಕ್ ಟನ್ನುಗಳಷ್ಟು ಧಾನ್ಯಗಳು ಪೋಲಾಗಿವೆ. ದೇಶದಲ್ಲಿ ಉತ್ಪಾದನೆಗೊಳ್ಳುವ ಶೇ.40ರಷ್ಟು ಆಹಾರ ವ್ಯರ್ಥವಾಗುತ್ತದೆ. ಆಹಾರ ಬಿಡಿ, ನೀರಿಲ್ಲವೆಂದು ಪರದಾಡುವ ಅದೆಷ್ಟೋ ಕುಗ್ರಾಮಗಳು ನಮ್ಮಲ್ಲಿರುವಾಗ ಈ ವ್ಯರ್ಥಗೊಳ್ಳುತ್ತಿರುವ ಆಹಾರಕ್ಕೆ ನಾವು ವ್ಯಯಿಸುವ ಸಿಹಿನೀರಿನ ಪ್ರಮಾಣ ಶೇ.25! ಇದಕ್ಕೆ ಖರ್ಚಾಗುತ್ತಿರುವ ಇಂಧನ ಸುಮಾರು 30 ಕೋಟಿ ಬ್ಯಾರೆಲ್‌ಗಳಷ್ಟು! ಆಹಾರ ಪೋಲಾಗುವಿಕೆಯ ಬಗ್ಗೆ ಅಧ್ಯಯನ ನಡೆಸಲು ಹೊರಟ ಬೆಂಗಳೂರಿನ ಹತ್ತು ಪ್ರಾಧ್ಯಾಪಕರ ತಂಡ ಸುಮಾರು ಎಪ್ಪತ್ತೆ çದು ಚೌಲಿóಗಳಲ್ಲಿ ಆರು ತಿಂಗಳ ಅವಧಿಯಲ್ಲಿ ಸುಮಾರು 943 ಟನ್‌ಗಳಷ್ಟು ಎಸೆದ ಆಹಾರವನ್ನು ಕಂಡಿದ್ದಾಗಿ ತಿಳಿಸುತ್ತಾರೆ, ಆ ಆಹಾರದ ಒಟ್ಟು ಪ್ರಮಾಣ ಸುಮಾರು ಎರಡೂವರೆ ಕೋಟಿಗೂ ಮಿಕ್ಕಿ ಹಸಿದವರ ಹಸಿವೆಯನ್ನು ತಣಿಸಬಲ್ಲದಿತ್ತು ಎಂಬುದು ಆ ಸಮೀಕ್ಷೆಯ ಒಟ್ಟಾರೆ ಸಾರಾಂಶವಾಗಿತ್ತು. ಈ ಅಂಕಿಅಂಶಗಳನ್ನು ಕಂಡ ಯಾರಿಗೆ ಭಾರತವನ್ನು ಬಡದೇಶ ಎನ್ನುವ ಮನಸಾದೀತು? ಇದೆಂಥ ದ್ವಂದ್ವ ನೋಡಿ, ಒಂದೆಡೆ ಈ ಪರಿಯಾಗಿ ಆಹಾರ ವ್ಯರ್ಥವಾಗುತ್ತಿದ್ದರೆ ಇನ್ನೊಂದೆಡೆ ಹಸಿದ ಹೊಟ್ಟೆಗಳು ತುತ್ತುಕೂಳಿಗೆ ಪರದಾಡುತ್ತಿವೆ. ಮನೆಯ ದಿನನಿತ್ಯದ ಅಡುಗೆಯಲ್ಲಿ ಹೋಟೇಲು ರೆಸ್ಟೋರೆಂಟುಗಳಲ್ಲಿ ಮದುವೆ ಇನ್ನಿತರ ಶುಭ ಸಮಾರಂಭಗಳಲ್ಲಿನ ಅದ್ದೂರಿ ಭೋಜನ ಆಯೋಜನೆಗಳ ಮುಖಾಂತರ ಆಹಾರವು ನೆಲ ಸೇರುತ್ತಿದೆ.
ರೈತನೊಬ್ಬ ಕಷ್ಟಪಟ್ಟು ಬೆವರು ಹರಿಸಿ ಮಳೆಗೆ ಕಾದು ಬೆಳೆಯುವ ಬೆಳೆಗೆ ಸರಿಯಾಗಿ ತಕ್ಕ ಪ್ರತಿಫಲ ಸಿಗದೆಯೂ ಒದ್ದಾಡುತ್ತಿರುವ ಸಂದರ್ಭದಲ್ಲಿ ಅದನ್ನೆಸೆದು ಸುಖವಾಗಿರುವ ನಾವು ಇದರ ಬಗ್ಗೆ ಕಿಂಚಿತ್ ಯೋಚನೆ ಮಾಡಲೇಬೇಕಿದೆಯಲ್ಲವೇ? ಇಂದು ಮನೆಯಲ್ಲಿ ಗೃಹಿಣಿಯಿಂದ ಹಿಡಿದು ಎಂತೆಂಥ ದೊಡ್ಡ ರೆಸ್ಟೋರೆಂಟಿನ ಪಾಕಪ್ರವೀಣರೂ ತಾವು ಮಾಡಿದ ಅಡುಗೆ ಹಾಳಾಗುವಾಗ, ವ್ಯರ್ಥವಾಗುವಾಗ ಮನದೊಳಗೆ ಒಂದು ತೆರನಾದ ವಿಚಿತ್ರ ಸಂಕಟ ಅನುಭವಿಸುತ್ತಿರುತ್ತಾರೆ. ಇನ್ನೂ ಕೆಲವರಿಗೆ ಒಂದು ವಿಚಿತ್ರ ಉಡಾಫೆಯಿದೆ, ಹಣ ತೆತ್ತಿರುವೆವಲ್ಲ, ತಿಂದರೇನು? ಬಿಟ್ಟರೇನು? ಎಂದು. ಅದೆಷ್ಟೋ ದೇಶಗಳಲ್ಲಿ ರೆಸ್ಟೋರೆಂಟುಗಳಿಂದ ಹೊರಡುವಾಗ ಪ್ಲೇಟಿನಲ್ಲೇನಾದರೂ ಆಹಾರ ಉಳಿದದ್ದು ಕಂಡು ಬಂದರೆ ಅದಕ್ಕೂ ದಂಡ ವಸೂಲಾತಿಯಿದೆ ಎಂಬುದನ್ನು ಅಂಥವರು ಮನದಟ್ಟು ಮಾಡಿಕೊಳ್ಳಬೇಕಾದ ಆವಶ್ಯಕತೆಯಿದೆ. ಇದೆಲ್ಲ ಸಮಸ್ಯೆಗಳ ನಡುವೆಯೂ ಅಲ್ಲಲ್ಲಿ ಅನೇಕ ಚಿಂತನಾಶೀಲ ಸಮಾಜಮುಖೀಗಳು ಆಹಾರದ ಸದ್ಬಳಕೆಗೆ ತಂತಮ್ಮ ಕೈಲಾದ ಯತ್ನವನ್ನು ಮಾಡುತ್ತಲೇ ಇದ್ದಾರೆ. ವೈಭವೋಪೇತ ಸಮಾರಂಭಗಳಲ್ಲಿ ಸಾಕಷ್ಟು ಆಹಾರ ಪೋಲಾಗುತ್ತಿದ್ದುದನ್ನು ಕಂಡು ಬೇಸತ್ತ ಅಂಕಿತ್ ಕವಾತ್ರಾ ಕೈತುಂಬ ಸಂಬಳ ಸಿಗುತ್ತಿದ್ದ ನೌಕರಿ ಬಿಟ್ಟು ಹಸಿದ ಹೊಟ್ಟೆಗಳಿಗೆ ತುತ್ತುಣಿಸಹೊರಟ ಕಥೆಯನ್ನು “ಫೀಡಿಂಗ್ ಇಂಡಿಯಾ’ ಎಂಬ ಸಂಸ್ಥೆ ಹೇಳುತ್ತದೆ. ಇದುವರೆಗೆ 44 ನಗರಗಳಲ್ಲಿ ಒಟ್ಟಾರೆ ಅರುವತ್ತು ಲಕ್ಷ ಜನರಿಗೆ ಹಸಿವಿನಿಂದ ಮುಕ್ತರನ್ನಾಗಿಸಿದ ಪುಣ್ಯಕಾರ್ಯ ಮಾಡಿದೆ.
ಮಗನ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಉಳಿದುದ್ದನ್ನು ಎಸೆಯಲು ಕಸದ ತೊಟ್ಟಿಯ ಬಳಿ ಬಂದಾಗ ಕಂಡ ಆ ದೃಶ್ಯ ಕರುಳು ಹಿಂಡಿ ಬಂದಂತಾಗಿತ್ತು. ಎರಡು ಮಕ್ಕಳು ಕಸದ ತೊಟ್ಟಿಗೆ ಬಿದ್ದಿದ್ದ ಆಹಾರವನ್ನು ಆರಿಸಿ ತಿನ್ನುತ್ತಿದ್ದುದನ್ನು ಕಂಡ ಆ ತಂದೆಯ ಕಲ್ಪನೆಯೇ “ಫೀಡ್’ ಎಂಬ ಸಂಸ್ಥೆಯ ಹುಟ್ಟಿಗೆ ಕಾರಣವಾಯ್ತು. ಇಂದು “ಫೀಡ್’ ಕೂಡ ಎಸೆಯುತ್ತಿರುವ ಆಹಾರವನ್ನು ಒಟ್ಟುಗೂಡಿಸಿ ವ್ಯರ್ಥಗೊಡಲು ಬಿಡದೆ ಹಸಿದವರಿಗೆ ತಲುಪಿಸುವ ಕೆಲಸದಲ್ಲಿ ಮಗ್ನವಾಗಿದೆ. ಕೊಯಮತ್ತೂರಿನ ಮೊದಲ ಆಹಾರದ ಎಟಿಎಂ ಎಂಬ ಖ್ಯಾತಿ ಗಳಿಸಿತು “ನೋ ಫುಡ್ ವೇಸ್ಟ್’ ಎಂಬ ಸಂಸ್ಥೆ. ಇದೂ ಕೂಡ ಆಹಾರವನ್ನು ಕೆಡಿಸದೇ ವ್ಯರ್ಥಗೊಳಿಸದೇ ಹಸಿದ ಹೊಟ್ಟೆಗಳಿಗೆ ತುಂಬುವ ಪ್ರಯತ್ನವನ್ನು ಮಾಡುತ್ತಿದೆ. ಇದುವರೆಗೂ ಎರಡು ಲಕ್ಷಕ್ಕೂ ಮಿಕ್ಕಿ ಹಸಿದ ಹೊಟ್ಟೆಗಳಿಗೆ ತುತ್ತುಣಿಸಿದೆ. ತಮಿಳುನಾಡಿನಲ್ಲಿ ಹೆಚ್ಚಾಗಿ ವ್ಯಾಪಿಸಿರುವ ಇದು ಬೆಂಗಳೂರಿನಲ್ಲೂ ಶಾಖೆ ಹೊಂದಿದೆ. “ರಾಬಿನ್‌ಹುಡ್ ಆರ್ಮಿ’ ಎಂಬ ಸಂಘಟನೆ ಹೋಟೇಲುಗಳೊಂದಿಗೆ ಒಪ್ಪಂದ ಮಾಡಿಕೊಂಡು ದಿನಾಂತ್ಯಕ್ಕೆ ಉಳಿದ ಆಹಾರವನ್ನು ಅನಾಥಾಲಯ, ವಸತಿರಹಿತರು, ರೋಗಿಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಒಟ್ಟು 8870 ಕಾರ್ಯಕರ್ತರಿರುವ ಈ ಸಂಸ್ಥೆ ದೇಶದ ನಲ್ವತ್ತಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಒಟ್ಟು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನರ ಹೊಟ್ಟೆ ತುಂಬಿಸಿದ ಪುಣ್ಯಕಾರ್ಯ ಮಾಡಿದೆ.
ಇನ್ನೂ ಇಂತಹಾ ಹತ್ತು ಹಲವಾರು ಸಂಸ್ಥೆಗಳು ಯಾವುದೇ ಫಲಾಪೇಕ್ಷೆಯಿರದೇ ಸಮಾನ ಮನಸ್ಕರೊಡಗೂಡಿ ಸಮಾಜ ಸೇವೆಯಲ್ಲಿ ತೊಡಗಿವೆ. ಇವುಗಳ ಕಾರ್ಯವೈಖರಿ ಹೆಚ್ಚು ಕಡಿಮೆ ಒಂದೆ ತೆರನಾಗಿದೆ. ತಮ್ಮ ಶಾಖೆ ಅಥವಾ ಕಾರ್ಯಕರ್ತರಿರುವ ವ್ಯಾಪ್ತಿಯಲ್ಲಿ ಯಾವುದೇ ಸಮಾರಂಭದಲ್ಲೋ, ರೆಸ್ಟೋರೆಂಟುಗಳಲ್ಲೋ ಆಹಾರ ಉಳಿದ ಮಾಹಿತಿ ಲಭ್ಯವಾದರೆ ಆ ಕೂಡಲೇ ಅಲ್ಲಿಗೆ ಧಾವಿಸಿ ಅದನ್ನು ಕೊಂಡೊಯ್ದು ಸಮೀಪದ ನಿರ್ಗತಿಕರಿಗೆ, ಆಹಾರ ವಂಚಿತರಿಗೆ ತಲುಪಿಸುತ್ತದೆ.
ಬದುಕುವುದಕ್ಕೋಸ್ಕರ ತಿನ್ನುವುದು ಎಂಬ ವಿಚಾರವನ್ನೂ ಬದಿಗೊತ್ತಿ ತಿನ್ನುವುದಕ್ಕೋಸ್ಕರ ಬದುಕುವುದು ಎಂಬ ಹೊಟ್ಟೆಬಾಕತನವನ್ನು ಕಾಲಕ್ಕೆ ತಕ್ಕಂತೆ ಒಪ್ಪಿಕೊಂಡು ಮುನ್ನಡೆದರೂ ಸರಿ. ಆದರೆ ಅಡುಗೆ ತಯಾರಿಸುವುದೇ ಎಸೆಯಲಿಕ್ಕೋಸ್ಕರ ಎಂಬ ವಿಲಕ್ಷಣ ಭಾವ ಧೋರಣೆ ನಮ್ಮಲ್ಲಿ ಮೂಡದಿದ್ದರೆ ಸಾಕು. ಹೊಟ್ಟೆ ಚುರುಗುಡುತ್ತಿದ್ದರೂ ಊಟಕ್ಕೆ ಮೊದಲು ಅನ್ನಬ್ರಹ್ಮ ಎಂದು ಕಣ್ಮುಚ್ಚಿ ಶ್ಲೋಕ ನುಡಿದು ಅನ್ನಕ್ಕೆ ವಂದಿಸುವ ನಾಡಿನಲ್ಲಿ ಅನ್ನಕ್ಕೇ ಅಗೌರವವೊಡ್ಡುವ, ಬೆಳೆಯುವ ಅನ್ನವನ್ನು ಪುನಃ ನೆಲಕ್ಕೇ ಚೆಲ್ಲುವ ವಿಪರ್ಯಾಸ ನಮ್ಮನ್ನು ಕಾಡದಿರಲಿ.
ಅರ್ಜುನ್ ಶೆಣೈ, ಗಾವಳಿ