Advertisement

ಆಹಾರ ಹೇರಿಕೆ ಕಾನೂನಿಗೂ ಅಸಾಧ್ಯ

12:40 PM Jun 10, 2017 | Team Udayavani |

ಬೆಂಗಳೂರು: ದನ ಕೊಂದವರು ಜೈಲಿನಲ್ಲಿದ್ದಾರೆ. ಜನರನ್ನು ಕೊಂದವರು ದೇಶ ಆಳುತ್ತಿದ್ದಾರೆ. ಮನುಷ್ಯನಿಗಿಂತ ಪ್ರಾಣಿಯೇ ಮೇಲು ಎಂಬಂತಹ ಸ್ಥಿತಿ ನಿರ್ಮಿಸಿ ದೇಶದ ಸಂವಿಧಾನವನ್ನು ಮುರಿಯುವ ಹುನ್ನಾರಗಳು ನಡೆಯುತ್ತಿರುವುದು ದೇಶದ ದೊಡ್ಡ ದುರಂತ ಎಂದು ಹಿರಿಯ ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದರಾವ್‌ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಹಮ್ಮಿಕೊಂಡಿದ್ದ ಪ್ರೊ.ಬಿ.ಕೃಷ್ಣಪ್ಪ ಅವರ 79ನೇ ಜನ್ಮದಿನ ಅಂಗವಾಗಿ “ಸಂವಿಧಾನ ಉಳಿಸಿ- ಕೋಮುವಾದ ಅಳಿಸಿ’ ಸಂವಾದಲ್ಲಿ ಮಾತನಾಡಿದ ಅವರು, “ಮನುಷ್ಯನ ಆಹಾರ ಪದ್ಧತಿಯನ್ನು ಯಾವುದೇ ಕಾನೂನುಗಳು ಬದಲಿಸಲು ಸಾಧ್ಯವಿಲ್ಲ.

ಹಿಂಬಾಗಿಲ ಮೂಲಕ ಆತನ ನೀತಿಗಳ ಮೇಲೆ ನಿಯಂತ್ರಣ ಹೇರಲು ಅಸಾಧ್ಯ. ಸಂವಿಧಾನದ ಮೇಲೆ ನೇರವಾಗಿ ದಾಳಿ ಮಾಡಲಾಗದೆ, ಹಿಂಬದಿಯಿಂದ ದಾಳಿ ಮಾಡುತ್ತಿದ್ದಾರೆ. ಅವರ ಆಸೆಗಳು ಈಡೇರಲು ಸಾಧ್ಯವಿಲ್ಲ. ಜನರಿಗಿಂತ ಪ್ರಾಣಿಗಳಿಗೆ ಮಹತ್ವ ನೀಡುವ ಮೂಲಕ ಮನುಷ್ಯತ್ವ ಕಳೆದುಕೊಳ್ಳುತ್ತಿರುವುದು ಖಂಡನೀಯ,’ ಎಂದರು. 

“ಸವರ್ಣಿಯರು, ರಾಜಕೀಯ ನಾಯಕರು ದಲಿತರ ಮನೆಯಲ್ಲಿ ಊಟ ಮಾಡಿದ ಕೂಡಲೇ ದಲಿತರ ಉದ್ಧಾರ ಆಗುವುದಿಲ್ಲ. ಇದು ಕೇವಲ ಮಾಧ್ಯಮಗಳಲ್ಲಿ ಹೊಗಳಿಸಿಕೊಳ್ಳುವ ರಾಜಕೀಯ ತಂತ್ರವಷ್ಟೆ. ಮನುಷ್ಯರನ್ನು ಮನುಷ್ಯರಾಗಿ ಕಾಣುವಂತಹ ವಾತಾವರಣ ಮೊದಲು ನಿರ್ಮಾಣವಾಗಬೇಕು.

ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಾದರೂ ಗ್ರಾಮೀಣ ಪ್ರದೇಶಗಳಲ್ಲಿ ದಲಿತರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಪ್ರಕೃತಿಯೇ ಮನುಷ್ಯರೆಲ್ಲರನ್ನು ಸೃಷ್ಟಿಸಿದೆ. ಶಾಸ್ತ್ರ, ಪುರಾಣಗಳು, ವೇದೋಪನಿಷತ್ತುಗಳು ಮೇಲು-ಕೀಳೆಂಬ ಬೇಧ ಸೃಷ್ಟಿಸಿದ್ದು, ದಲಿತರ ಇಂದಿನ ಪರಿಸ್ಥಿತಿಗೆ ಅವುಗಳೇ ಕಾರಣ,’ ಎಂದು ಅಭಿಪ್ರಾಯಪಟ್ಟರು. 

Advertisement

ದೇವರಾಜು ಅರಸು ಸಂಶೋಧನಾ ಕೇಂದ್ರ ನಿರ್ದೇಶಕ ಪೊ›.ಎನ್‌.ನರಸಿಂಹಯ್ಯ ಮಾತನಾಡಿ, “ಮೇಲ್ವರ್ಗದವರು ದಲಿತರ ಮನೆಯಲ್ಲಿ ಊಟ ಮಾಡುವ ಮೂಲಕ ದಲಿತರನ್ನು ಅವಮಾನಿಸುತ್ತಿದ್ದಾರೆ. ಈ ಮೂಲಕ ಅವರು ನಮಗಿಂತ ಕೀಳಾಗಿದ್ದರೂ, ತಾವು ಅವರ ಮನೆಯಲ್ಲಿ ಊಟ ಮಾಡಿದ್ದೇವೆ ಎಂದು ಪ್ರಚಾರ ಪಡೆಯುವ ಹುನ್ನಾರ ರಾಜಕೀಯ ನಾಯಕರದ್ದಾಗಿದೆ.

ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಅಧಿಕಾರಕ್ಕಾಗಿ ಶೋಷಿತ ಸಮುದಾಯಗಳನ್ನು ಒತ್ತೆಯಾಗಿ ಇಡಲಾಗುತ್ತಿದೆ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಎಚ್ಚೆತ್ತುಕೊಳ್ಳಬೇಕಿದೆ,’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಸಂಸ ರಜ್ಯ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌, ರಾಜ್ಯ ಸಮಿತಿ ಸದಸ್ಯರಾದ ಜೋತಪ್ಪ ಹೊಸಳ್ಳಿ, ಇಂದಿರಾ ಕೃಷ್ಣಪ್ಪ,  ಪೊ›.ಚಂದ್ರಪ್ಪ, ಬೆಳ್ಳಂದೂರು ಮುನಿಯಲ್ಲಪ್ಪ, ಸಿದ್ಧಾಪುರ ಮಂಜುನಾಥ, ರಾಜಗೋಪಾಲ್‌, ಬಿಸ್ನಹಳ್ಳಿ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next