Advertisement
ನಮ್ಮ ಸೊಪ್ಪಿನ ಬೆಟ್ಟದಲ್ಲಿ ಖುಷಿಗಾಗಿ ಒಂದಿಷ್ಟು ಸಸ್ಯ ಪೋಷಿಸಿದ್ದೇವೆ. ಇನ್ನೊಂದಷ್ಟನ್ನು ನೆಟ್ಟು ಬೆಳೆಸಿದ್ದೇವೆ. ಪ್ರತಿ ವರ್ಷ ಹೊಸ ಸಸ್ಯ ಸೇರ್ಪಡೆಯಾಗುತ್ತಿದೆ. ತುರ್ತು ಸಂದರ್ಭದಲ್ಲಿ, ಒಂದೆರಡು ಸಸ್ಯ ಜಾತಿಗೆ ನೀರುಣಿಸಿದ್ದು ಬಿಟ್ಟರೆ ಬಹುತೇಕ ಸಸ್ಯಗಳು ಮಳೆ ಆಶ್ರಿತವಾಗಿ ಬೆಳೆದಿವೆ. ನೈಸರ್ಗಿಕವಾಗಿ ಬೆಳೆಯುವ ಕಾಡು ಹಣ್ಣಿನ ಗಿಡ ಮರಗಳು ಚಿಗುರಿವೆ. ಸಂಜೆ ಸುತ್ತಾಟದಲ್ಲಿ ತಿನ್ನಲು ಏನಾದರೊಂದು ಹಣ್ಣು/ಕಾಯಿ ದೊರೆಯುತ್ತದೆ. ಬಿಕ್ಕೆ, ಸಳ್ಳೆ, ನೇರಲೆ, ವಾಟೆ, ಮುರುಗಲು, ಗೇರು, ಗುಡ್ಡೇಗೇರು, ನೆಲ್ಲಿ, ಸಂಪಿಗೆ, ಮಾವು, ಎಕನಾಯಕ, ಹೊಳೆದಾಸವಾಳ, ಪರಿಗೆ, ಬಿಳೆಮುಳ್ಳೆ ಹಣ್ಣು(ಕೊಟ್ಟೆಹಣ್ಣು), ಕುಂಟು ನೇರಳೆ, ತೂಬರು, ಹಲಸು, ಚಿಕ್ಕು, ಹುಳಿಮಜ್ಜಿಗೆ ಹಣ್ಣು ಹೀಗೆ ಹಲವು ಫಲ ದೊರೆಯುತ್ತವೆ. ಮಳೆಗಾಲದಲ್ಲಿ ಗಿಳ್ಳಾಗಡ್ಡೆಯನ್ನು ಕಿತ್ತು ತಿನ್ನಬಹುದು. ಬೇಸಿಗೆಯಲ್ಲಿ ತಾರೆಕಾಯಿ ಒಡೆದು ತಿರುಳು ಚಪ್ಪರಿಸಬಹುದು. ಇವು ಹೊಟ್ಟೆ ತುಂಬಿಸುವ ಸರಕುಗಳಲ್ಲ. ಆದರೆ, ಹೀಗೆ ಹಣ್ಣು ಮೆಲ್ಲುವಲ್ಲಿ ಸಸ್ಯ ಸಂಬಂಧ ನೆನಪಿಸಿಕೊಳ್ಳುವ ಖುಷಿ ಇದೆ.
Related Articles
(ಸವೌìಷಧಿ) ಇದಕ್ಕೆ ಬೇಕು. ತೋಟದ ಮಾವಿನ ಮರದ ನೆರಳಲ್ಲಿ ಕಾಡಿನ ಈ ಸಸ್ಯ ಮಳೆಗಾಲದಲ್ಲಿ ಬೀಸಾಕಿದರೂ ಚಿಗುರಿ ಬೆಳೆಯುತ್ತದೆ. ಬೇರು ಕಿತ್ತು ತಂದು ಲಿಂಬು ರಸದಲ್ಲಿ ತೇಯ್ದು ನೆಕ್ಕಿದರೆ ಅರ್ಧ ತಾಸಿನಲ್ಲಿ ಗಂಟಲು ನೋವು ಉಪಶಮನವಾಗುತ್ತದೆ. ಬೇರಿನ ನಿಜ ಬೆಲೆ ಗೊತ್ತಾಗುವುದು ಗಂಟಲು ನೋವು ಅನುಭಸಿದವರಿಗೆ ಮಾತ್ರ. ಕೈಕಾಲು ಮುರಿದು ಹೋಗಿ ವೈದ್ಯರ ಚಿಕಿತ್ಸೆ ಬಳಿಕ ಎಲುಬು ಇನ್ನಷ್ಟು ಬೆಳೆಯಲು ಶಿವಣೆ ಸೊಪ್ಪಿನ ಕಷಾಯ ಬೇಕು. ಬೇಧಿಗೆ ನೇರಳೆ ಚಕ್ಕೆಯ ಕಷಾಯ ಕುಡಿಯಬೇಕು. ಉಷ್ಣ ಪ್ರಕೃತಿ ಇರುವ ದೇಹ ತಂಪಾಗಿಸಲು ಹಾಡೇ ಬಳ್ಳಿ ಬೇಕು. ಅಣಲೆ ಕಾಯಿಯ ಸಿಪ್ಪೆ ಕುಟ್ಟಿ ಪುಡಿಯಾಗಿಸಿ ಕುದಿಸಿ ತಯಾರಿಸಿದ ಕಷಾಯ, ಮಲಬದ್ಧತೆಗೆ ಮದ್ದು. ಉರಿಯಲ್ಲಿ ತಂಪು ಪಾನಕಕ್ಕೆ ನುರುಕಲು ಎಳೆಯ ಎಲೆ ಅಥವಾ ಮಸೆಸೊಪ್ಪಿನ ಚಿಗುರೆಲೆ ಸಾಕು. ಬಳಕೆಯ ಜಾnನ ಹುಡುಕುತ್ತ ಸಸ್ಯ ನೋಡಿದರೆ ಸುತ್ತಲಿನ ಕಾಡು ಲೋಕ ಅಚ್ಚರಿ ಹುಟ್ಟಿಸುತ್ತದೆ.
Advertisement
ಮಲೆನಾಡಿನ ಅಡಿಕೆ ತೋಟ ಅಡುಗೆಯ ಸಸ್ಯ ಧಾಮ. ಮಕ್ಕಳ ಪಾಲಿಗೆ ಮಾವು, ಸೀಬೆ, ಪನ್ನೇರಲು, ಬೆಣ್ಣೆ ಹಣ್ಣು, ಹಲಸು, ಚಕ್ಕೋತ, ಇಳ್ಳಿ ಮುಂತಾದ ಫಲವೃಕ್ಷಗಳ ತಾಣ. ನಾಟಿ ಸಂಕುಲಗಳು ಸ್ವಲ್ಪವಾದರೂ ಇಲ್ಲಿ ಉಳಿದಿವೆ. ಈಗ 20-30 ವರ್ಷಗಳ ಹಿಂದೆ ನಮ್ಮ ಅಮ್ಮ, ಅಜ್ಜಿಯರು “ಅಡುಗೆಗೆ ಹುಡುಕೋದು’ ಎಂಬ ಪದ ಬಳಸುತ್ತಿದ್ದರು. ಮುಂಜಾನೆ ಉಪಹಾರದ ಬಳಿಕ ಮೋಟು ಕತ್ತಿ ಹಿಡಿದು ಇವರೆಲ್ಲ ಪುರುಷರಂತೆ ತೋಟ ಸುತ್ತುತ್ತಿದ್ದರು. ಒಂದೆಲಗ, ಕನ್ನೆಕುಡಿ, ಕೆಸವಿನ ಸೊಪ್ಪು, ಎಲವರಿಗೆ ಕುಡಿ, ಕೆಸವಿನ ಗಡ್ಡೆ, ಸುವರ್ಣ ಗಡ್ಡೆ, ಅಂಬೆಕೊಂಬು, ಸಣ್ಣ ಮೆಣಸು, ಲಿಂಬು ಹುಲ್ಲು, ನುಗ್ಗೆ ಕಾಯಿ, ನುಗ್ಗೆ ಸೊಪ್ಪು, ಅಮಟೆಕಾಯಿ, ಜಾಯಿಕಾಯಿ, ಬಿಂಬಳೆ, ಕಾಳು ಮೆಣಸು, ಅರಿಶಿನ, ಶುಂಠಿ, ಬಾಳೆ ಕುಂಡಿಗೆ, ಬಾಳೆ ದಿಂಡು, ಬಾಳೆ ಕಾಯಿ, ಲಿಂಬು, ಕಂಚಿ, ಬೇರು ಹಲಸು, ಹೆಗ್ಗರ್ಣಿ ಕಾಯಿ, ಕೆಂದಿಗೆ ಕುಡಿ, ನಡ್ತೆ ಕುಡಿಗಳನ್ನು ಕೊಯ್ದು ತಂದು ಅಡುಗೆ ಮಾಡುತ್ತಿದ್ದರು. ಒಂದು ದಿನ ಮಾಡಿದ್ದು ಮರು ದಿನವಲ್ಲ, ಮಳೆಗಾಲದಲ್ಲಿ ಮಾಡುವುದು ಬೇಸಿಗೆಗೆ ಇಲ್ಲ. ಜೋರು ಮಳೆಯಲ್ಲಿ ಕನ್ನೆಕುಡಿ ಕಟೆ°, ದೀಪಾವಳಿ ಮುಗಿದ ಬಳಿಕ ಅರಿಸಿನ ಗೊಜ್ಜು ಶುರುವಾಗುತ್ತಿತ್ತು. ಬೇಸಿಗೆ ಶುರುವಾದರೆ ಒಂದೆಲಗದ ತಂಬುಳಿ ತಯಾರಿ. ಅಡುಗೆ ತಜ್ಞೆಯರಾಗಿ ಬದುಕಿದ ಮಹಿಳೆಯರು ಆಹಾರದಿಂದ ಆರೋಗ್ಯ ಪಾಠ ಹೇಳಿದವರು. ಅಡಿಕೆ ತೋಟದ ಕೃಷಿ ಹಾಗೂ ಕಾಡು ಸಸ್ಯ ಸಂಪತ್ತು ಜಾnನ ಪೋಷಿಸಿತ್ತು. ತೋಟದ ಕೆರೆಯಂಚಿನಲ್ಲಿ ಔಷಧ ಸಸ್ಯ ಬಜೆ, ಬೇರು ಯಾವತ್ತೂ ಸಿಗುತ್ತಿತ್ತು. ಮಕ್ಕಳ ನಾಲಿಗೆ ಚುರುಕಾಗಿಸಲು ಇದು ನೆರವಾಯಿತು.
ದನಕರುಗಳ ರೋಗಕ್ಕೆ ಕೂಮನಗಡ್ಡೆ ದೊರಕುವುದು ಇಂಥ ಜೌಗು ನೆಲೆಯಲ್ಲಿ! ಮಲ್ಲಿಗೆ, ದಾಸವಾಳ, ಬಿಲ್ವ, ಚಂದ್ರಕಾಂತಿ, ಗೆಂಟಿಗೆ, ಕನಕಾಂಬರ ಮುಂತಾದವು ತೋಟದಲ್ಲಿರುತ್ತಿದ್ದರಿಂದ ದೇವರ ಪೂಜೆಗೆ ಹೂ ಕೊಯ್ಯಲು ತೋಟಕ್ಕೆ ಹೋಗಬೇಕು. ನಿತ್ಯ ತೋಟದ ಜೊತೆಗಿನ ಒಡನಾಟ ಎಳೆ ಮಕ್ಕಳಿಂದ ಶುರುವಾಗಿ ಮನೆಯವರಿಗೆಲ್ಲ ಬೆಳೆಯುವುದಕ್ಕೆ ಸಸ್ಯ ಸಂಬಂಧ ಕಾರಣವಾಗಿತ್ತು.
ಟೊಮೆಟೊ, ಬಟಾಟೆ, ಬೀನ್ಸ್ ಬೆಲೆ ಗಗನಕ್ಕೆ ಏರಿದರೂ ಮನೆ ಖರ್ಚಿಗೆ ಮಾರುಕಟ್ಟೆ ತರಕಾರಿಯ ಸಂಬಂಧವಿಲ್ಲದಂತೆ ಸರಳ ಬದುಕಿನ ಅರ್ಥಶಾಸ್ತ್ರ ಅಳವಡಿಸಿದವರು ಮಹಿಳೆಯರು. ಇಂದು ಸಾವಯವ ತರಕಾರಿ, ಆರೋಗ್ಯವೆಂದು ನಗರಗಳಲ್ಲಿ ಬೊಬ್ಬೆ ಹೊಡೆಯುತ್ತಿದ್ದೇವೆ. ಸಾವಯವ ಉತ್ಪನ್ನ ಬೆಳೆಯುವವರಿಗಿಂತ ಮಾರುಕಟ್ಟೆ ವಿಸ್ತರಿಸಿದ ಪರಿಣಾಮ ನಕಲಿ ಸರಕಿನ ರಾಜ್ಯಭಾರ ಜೋರಾಗಿದೆ. ಆದರೆ, ನೆಲದ ನಾರಿಯರ ಆರೋಗ್ಯದ ದಾರಿ ಸಹಜವಾಗಿ ನೈಸರ್ಗಿಕವಾಗಿತ್ತು. ಕುಟುಂಬ ನಿರ್ವಹಣೆಗೆ ಕೃಷಿ ಉತ್ಪಾದನೆಯ ಹಣ ಜಾಸ್ತಿ ಖರ್ಚಾಗದಂತೆ “ಅಡುಗೆಗೆ ಹುಡುಕಿ’ ಕಿಸೆಯ ತೂತು ಮುಚ್ಚುತ್ತಿದ್ದ ಜಾಣೆಯರು ಇವರು. ಚೌತಿಯ ಚಕ್ಕುಲಿ ತಿಂದು ಕೆಮ್ಮುವಾಗ ಪರಂಪರೆಯ ಜಾnನ ಈಗಲೂ ನೆನಪಾಗುತ್ತದೆ. ತೋಟದಂಚಿನ ಅತ್ತಿ ಮರದ ಬೇರು ಕತ್ತರಿಸಿ, ಅದರ ನೀರು ಹಿಡಿದು ಚೆಕ್ಕುಲಿ ತಯಾರಿಸುತ್ತಿದ್ದರು. ಕೆಮ್ಮಿಗೆ ಅತ್ತಿ ಚಕ್ಕೆಯ ಬಿಸಿನೀರು ಕುಡಿಸುವ ವೈದ್ಯವನ್ನೇ ಚಕ್ಕುಲಿ ತಯಾರಿಗೆ ಬಳಸಿ ಆಹಾರದಿಂದ ಆರೋಗ್ಯ ದರ್ಶನ ಮಾಡಿದ್ದರು. ಇಂದು ಅಡುಗೆ ಸರಕಿನಂತೆ ಮನೆ ಮನೆಯಲ್ಲಿ ಬಣ್ಣ ಬಣ್ಣದ ಮಾತ್ರೆ ಭರ್ತಿಮಾಡಿದ್ದೇವೆ. ಇದಕ್ಕೂ ಪೂರ್ವದಲ್ಲಿ ಎಲೆ, ಚಿಗುರು, ಬೇರು, ಚಕ್ಕೆಗಳೆಂಬ ತಾಜಾ ಹಸಿರು ಮಾತ್ರೆಗಳನ್ನು ಕಾಲಕ್ಕೆ ತಕ್ಕಂತೆ ಬಳಸಿದ ಬಹುದೊಡ್ಡ ಜಾnನ ಸಂಪತ್ತು ನಮ್ಮದಾಗಿತ್ತೆಂಬುದು ಹಲವರಿಗೆ ಮರೆತು ಹೋಗಿರಬಹುದು. ಒಂದು ಬೆಳೆಯ ಹಿಂದೆ ಕಣ್ಣುಮುಚ್ಚಿ ಓಡುವ ನಮ್ಮ ಹೊಟ್ಟೆಗೆ ಹಲವು ಕಂಪನಿಗಳ ಮಾತ್ರೆಗಳು ಸೇರುವಂತಾಗಿದೆ. ಕಾಡು ತೋಟದ ಪರಿಕಲ್ಪನೆ ಯಾವತ್ತೂ ಕಾಸಿನ ಲೆಕ್ಕ ಹೇಳುವುದಲ್ಲ, ಆಹಾರ ಭದ್ರತೆಯ ಸುರಕ್ಷಿತ ಭರವಸೆ ನೀಡುತ್ತದೆ.
ತೋಟದಲ್ಲಿ ಅಡಿಕೆ, ತೆಂಗು, ಮಾವು ಮುಂತಾದ ವಾಣಿಜ್ಯ ಬೆಳೆಯ ಜೊತೆಗೆ ಅಡುಗೆ, ಔಷಧ ಸಸ್ಯಗಳ ಪೋಷಣೆ ಬಹಳ ಮುಖ್ಯವಿದೆ. ಹೆಚ್ಚು ಹೆಚ್ಚು ಸಸ್ಯ ವೈವಿಧ್ಯ ಪೋಷಣೆಯಿಂದ ಮುಖ್ಯ ಬೆಳೆ ಉತ್ಪಾದನೆ ಕಡಿಮೆಯಾಗಬಹುದು. ಎಕರೆಗೆ 15 ಕ್ವಿಂಟಾಲ್ ನೀಡುವ ಅಡಿಕೆ 13 ಕ್ವಿಂಟಾಲ್ ನೀಡಬಹುದು. ಆದರೆ ಇದೇ ಸಂದರ್ಭದಲ್ಲಿ ಬಾಳೆ, ಜಾಯಿಕಾಯಿ, ದಾಲಿcನ್ನಿ, ಲವಂಗದಂಥ ಸಸ್ಯಗಳು ಪೂರಕವಾಗಿ ಇನ್ನಷ್ಟು ಆದಾಯ ಒದಗಿಸಬಹುದು. ತೋಟದಂಚಿನ ಒಂದು ಜೀರಿಗೆ ಮಾವಿನ ಮರ ವರ್ಷಕ್ಕೆ 45,000 ರೂಪಾಯಿ ಮಿಡಿ ಮಾವಿನ ಆದಾಯ ನೀಡಿದ ಉದಾಹರಣೆ ಇದೆ. ಕರಾವಳಿಯ ಹಳದಿಪುರದಲ್ಲಿ ಒಂದು ಜಾಯಿಕಾಯಿ ಮರ 15,000 ರೂಪಾಯಿ ಮೌಲ್ಯದ ಕಾಯಿಗಳನ್ನು ನೀಡಿದೆ. ತೋಟದಲ್ಲಿ ಆಗಾಗ ದೊರೆಯುವ ಲಿಂಬು, ಕಂಚಿ, ನುಗ್ಗೆ, ಬೇರು ಹಲಸು, ದಡ್ಲಿ, ಚಕ್ಕೋತಗಳನ್ನು ಮಾರಾಟ ಮಾಡುತ್ತ ಚಿಕ್ಕ ತೋಟಗಳಲ್ಲಿ ನೆಮ್ಮದಿ ಬದುಕು ಕಾಣುವ ಉದಾಹರಣೆಗಳು ಕರಾವಳಿಯಲ್ಲಿ ಸಿಗುತ್ತವೆ. ಫಲ ಮೌಲ್ಯವರ್ಧನೆ ಕಲಿತರೆ ಇನ್ನೂ ಅನುಕೂಲ.
ತೋಟ ಎಂಬುದು ಒಮ್ಮೆಗೇ ನಾಟಿ ಮಾಡಿ ಒಂದೇ ಬಾರಿ ಫಲ ಕೊಯ್ಯುವ ತಾಣವಲ್ಲ. ನಿತ್ಯವೂ ಇಲ್ಲಿನ ಸಸ್ಯವನ್ನು ಹಮನಿಸಬೇಕು. ಹೊಸದನ್ನು ಸಾಧ್ಯವಾದಲ್ಲಿ ಸೇರಿಸುತ್ತ ಬೆಳೆ ವಿನ್ಯಾಸ ಕಲಿಯುವುದು ಅಗತ್ಯ. ಮರದ ಲಾಭಕ್ಕೆ ಹಲವು ಮುಖಗಳಿವೆ. ಇವನ್ನು ಅರ್ಥಮಾಡಿಕೊಳ್ಳುತ್ತ ತೋಟ ಬೆಳೆಸಬೇಕು. ಸುಮಾರು 2000 ಸಸ್ಯ ಜಾತಿಗಳನ್ನು ಮನುಷ್ಯ ತಿಂದು ಬದುಕಬಹುದು. ಅವುಗಳಲ್ಲಿ 200 ಜಾತಿ ಸಸ್ಯಗಳನ್ನು ಹೆಚ್ಚಾಗಿ ಕೃಷಿಯಲ್ಲಿ ಬೆಳೆಯುತ್ತೇವೆ. ಅದರಲ್ಲೂ 20 ಬಗೆಯವನ್ನು, ಅತಿಹೆಚ್ಚು ಅಂದರೆ ಆರ್ಥಿಕ ಲಾಭದ ಉದ್ದೇಶ ಇಟ್ಟುಕೊಂಡೇ ಬೆಳೆಯುತ್ತೇವೆ. ಆದರೆ ನಮ್ಮ ಪ್ರತಿ ನಿತ್ಯದ ಆಹಾರದ ಶೇಕಡಾ 90 ರಷ್ಟನ್ನು ಕೇವಲ ಎರಡೇ ಎರಡು ಸಸ್ಯಗಳು ಆವರಿಸಿವೆ. ಕಾಡು ತೋಟವು ನೂರಾರು ಸಸ್ಯಗಳನ್ನು ಪೋಷಿಸುತ್ತ ಆಹಾರ ವೈವಿಧ್ಯದ ಜೊತೆ ಬದುಕುವುದನ್ನು ಕಲಿಸುತ್ತದೆ. ಬೀದರ್, ಬಾಗಲಕೋಟೆಯವರು ಹೇಗೆ ಕಾಡು ತೋಟ ಮಾಡುವುದು? ಬೆಳಗಾವಿ, ಕೋಲಾರ, ಮಂಡ್ಯದವರು ಏನೆಲ್ಲ ಸಸ್ಯ ಬೆಳೆಸಬಹುದು ಎಂಬುದಕ್ಕೆ “ಇದುಮಿತ್ತಂ’ ಎಂಬ ಮಾದರಿ ನೀತಿಗಳಿಲ್ಲ. ಇಲ್ಲಿನ ಕ್ರಿಯಾಶೀಲ ಕೃಷಿಕರ ತೋಟ ನೋಡುತ್ತ ಸ್ಥಳೀಯ ಪರಿಸರ, ಆಹಾರ ಜಾnನ ಬಳಸಿಕೊಂಡು ಹಸಿರು ಬೆಳೆಸುವುದನ್ನು ಕಲಿಯಬೇಕು. ಸೋಲಿಗ, ಮಲೆಕುಡಿಯ, ಹಾಲಕ್ಕಿ, ಗೌಳಿ, ಸಿದ್ದಿ, ಕುಣಬಿ, ಕುಂಬ್ರಿ, ಮರಾಠಿ ಮುಂತಾದ ವನವಾಸಿ ಜನರ ಅರಣ್ಯ ಜಾnನ ಇಲ್ಲಿ ಮುಖ್ಯವಾಗುತ್ತದೆ. ಕಲಿಕೆಯ ಹಸಿವು ನಿರಂತರವಾದಾಗ ತೋಟಕ್ಕೆ ಹೊಸ ಹೊಸ ಸಸ್ಯಗಳ ಆಗಮನವಾಗುತ್ತದೆ. ತೋಟ ಸುತ್ತಾಡುತ್ತ ಸಸಿ ಮಾತಾಡಿಸುವುದು ಅಭ್ಯಾಸವಾದರೆ ಹಸಿರು ಪ್ರೀತಿ ಇನ್ನಷ್ಟು ಹಬ್ಬುತ್ತದೆ. ಆಹಾರ- ಆರೋಗ್ಯದ ನಿಸರ್ಗಧಾಮ ನಿರ್ಮಾಣವಾಗುತ್ತದೆ. ಬೆಳೆಸುವುದರ ಜೊತೆಗೆ ಬಳಸುವುದನ್ನೂ ಕಲಿತು ಮಾತಾಡಿದಾಗ ಅನುಭವದ ಮಾತು ಹೃದಯಸ್ಪರ್ಶಿಯಾಗುತ್ತದೆ. ಆಗ, ಕಾಡು ತೋಟದ ವಿಸ್ತರಣೆಯ ವೇಗ ಹೆಚ್ಚುತ್ತದೆ. ಮುಂದಿನ ಭಾಗ- ಹಸಿರು ಬೇಲಿಯಲ್ಲಿ ಬೆಳೆ ಸುರಕ್ಷೆ – ಶಿವಾನಂದ ಕಳವೆ