Advertisement
ತುಮಕೂರು ಜಿಲ್ಲೆ ಹುಳಿಯಾರಿನಲ್ಲಿ ವಿಷಾಹಾರ ಸೇವಿಸಿ ಮೂವರು ಮುಗ್ಧ ಮಕ್ಕಳು ಸಾವನ್ನಪ್ಪಿರುವುದು ತೀವ್ರ ಆಘಾತ ಮೂಡಿಸಿದೆ. ಇಡೀ ರಾಜ್ಯದ ಜನತೆ ಆ ಮಕ್ಕಳ ದಾರುಣ ಸಾವಿಗಾಗಿ ಕಂಬನಿ ಮಿಡಿದಿದ್ದಾರೆ.
Related Articles
ಇಂದಿಗೂ ಗ್ರಾಮೀಣ ಪ್ರದೇಶದ ಅನುಸೂಚಿತ ಜಾತಿ/ ಪಂಗಡ/ ಬುಡಕಟ್ಟು ಜನಾಂಗದ ಮಕ್ಕಳಿಗಾಗಿ ಇರುವ ಹಾಸ್ಟೆಲ್‌ಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಅಥವಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಹಾಸ್ಟೆಲ್‌ಗಳಲ್ಲಿ ಎಲ್ಲ ವ್ಯವಸ್ಥೆ ನೂರಕ್ಕೆ ನೂರು ಖಂಡಿತ ತೃಪ್ತಿಕರವಾಗಿಲ್ಲ.
Advertisement
ಅದರಲ್ಲೂ ಊಟ, ತಿಂಡಿ, ಅಡುಗೆ ತಯಾರಿಸುವ ಬಗ್ಗೆ ಮಕ್ಕಳಲ್ಲಿ ಸಾಕಷ್ಟು ಅಸಮಾಧಾನವಿದೆ. ಆದರೆ ಆ ಮಕ್ಕಳ ಕುಂದು-ಕೊರತೆಗಳನ್ನು ಕೇಳುವವರೇ ಇಲ್ಲ. ಶುಚಿಯಾಗಿರದ ಪಾತ್ರೆಗಳು, ಕಲುಷಿತ ನೀರು, ಅಪೌಷ್ಠಿಕ ಆಹಾರಗಳು, ಕರಿದುಳಿದ ಎಣ್ಣೆಯ ಮರುಬಳಕೆ, ಜಿರಲೆ, ಹಲ್ಲಿ, ನೊಣ ಮೊದಲಾದ ಕ್ರೀಮಿಕೀಟಗಳಿಗೆ ತೆರೆದಿಟ್ಟ ಆಹಾರ ಸೇವನೆ, ತಯಾರಿಕರಿಗೆ ಇಲ್ಲದ ನೈರ್ಮಲ್ಯದ ಪರಿಕಲ್ಪನೆ, ಹಳಸಿದ ಊಟ ನೀಡುವುದು ಇವುಗಳಿಂದ ಆಗಾಗ್ಗೆ ಹಾಸ್ಟೆಲ್ ಮಕ್ಕಳು ಅಸ್ವಸ್ಥರಾಗುವುದು ಕೇಳಿಬರುತ್ತಲೇ ಇರುತ್ತದೆ.
ಅಲ್ಲಿ ಬರೆದಿಟ್ಟ ಮೆನು ಪ್ರಕಾರ ಯಾವುದೂ ತಯಾರಾಗುವುದಿಲ್ಲ. ಇದು ಹೊರಗಿನ ಜಗತ್ತಿಗೆ ತಿಳಿಯುವುದೇ ಇಲ್ಲ. ನನ್ನದೇ ಅನುಭವ ಹೇಳುವುದಾದರೆ, ಒಮ್ಮೆ ವಿದ್ಯಾರ್ಥಿನಿಯೊಬ್ಬಳು ಧೈರ್ಯವಾಗಿ ವಾರಕ್ಕೊಮ್ಮೆ ಎಲ್ಲ ಸಮಸ್ಯೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳಿಕೊಂಡು ತಮ್ಮನ್ನು ಆ ನರಕದಿಂದ ಪಾರುಮಾಡುವಂತೆ ಕೋರುತ್ತಿದ್ದಳು. ಸ್ವತಃ ಹಾಸ್ಟೆಲ್ ವನವಾಸ ಅನುಭವಿಸಿದ್ದ ನಾನು 20 ವರ್ಷಗಳ ಅನಂತರವೂ ಈ ಪರಿಸ್ಥಿತಿ ಸುಧಾರಿಸಿಲ್ಲವಲ್ಲ ಎಂದು ವ್ಯಥೆ ಪಟ್ಟಿದ್ದೆ. ಆಗಾಗ್ಗೆ ನಮ್ಮ ನಡುವಿನ ಜನಪ್ರತಿನಿಧಿಗಳು ಇಂತಹ ಹಾಸ್ಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿ ಸಂಬಂಧಪಟ್ಟವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಫೋಟೋ ತೆಗೆಸಿಕೊಂಡು ಪ್ರಚಾರಗಿಟ್ಟಿಸುವ ಪ್ರಹಸನಗಳೂ ನಡೆದೇ ಇರುತ್ತವೆ. ಆದರೆ ಒಟ್ಟಾರೆ ನಿರೀಕ್ಷಿತ ಸುಧಾರಣೆಯಂತೂ ಎಲ್ಲೂ ಕಂಡು ಬರುವುದೇ ಇಲ್ಲ. ಗುಣಮಟ್ಟವಿಲ್ಲದ ಉಚಿತ ಯೋಜನೆ
ಸರಕಾರ ವಿದ್ಯಾರ್ಥಿಗಳಿಗೆ ಹಲವು ಉಚಿತ ಯೋಜನೆಗಳನ್ನು ಜಾರಿ ಮಾಡಿದ ಮೇಲಂತೂ ಹಲವು ಹಾಸ್ಟೆಲ್‌ಗಳ ಸ್ಥಿತಿ ತೀರಾ ಶೋಚನೀಯ ಎನಿಸಿದೆ. ಸರಕಾರ ವಿದ್ಯಾರ್ಥಿಗಳಿಗೆ ಸೈಕಲ್ ಕೊಡುತ್ತದೆ. ಹಾಲು, ಮೊಟ್ಟೆ ಕೊಡುತ್ತದೆ. ಮಧ್ಯಾಹ್ನದ ಬಿಸಿಯೂಟ ಕೊಡುತ್ತದೆ. ಹೀಗಾಗಿ ಹಲವು ವಿದ್ಯಾರ್ಥಿಗಳು ಮತ್ತು ಪೋಷಕರ ಪಾಲಿಗೆ ಹಾಸ್ಟಲ್ ಒಂದು ತಾತ್ಕಾಲಿಕ ತಂಗುದಾಣ ಎನಿಸಿದೆ. ಹತ್ತಿರದ ಹಳ್ಳಿಗಳ ಹುಡುಗರು ಬೆಳಿಗ್ಗೆ ಒಂದು ರೌಂಡ್ ತಿಂಡಿ ತಿಂದೇ ಹಾಸ್ಟೆಲ್‌ಗೆ ಸೈಕಲ್‌ನಲ್ಲಿ ಬರುತ್ತಾರೆ. ಅಲ್ಲಿ ಇನ್ನೊಮ್ಮೆ ನಾಮಕಾವಸ್ಥೆ ತಿಂಡಿ ತಿಂದು ಶಾಲೆಗೆ ಬರುತ್ತಾರೆ. ಅಲ್ಲಿ ಮಧ್ಯಾಹ್ನ ಬಿಸಿಯೂಟ ಮಾಡುತ್ತಾರೆ. ಸಂಜೆ ವಾಪಸ್ ಸೈಕಲ್‌ನಲ್ಲಿ ತಮ್ಮ ಮನೆಗೆ ವಾಪಸಾಗುತ್ತಾರೆ. ಹೀಗಾಗಿ ಹಾಸ್ಟೆಲ್‌ನಲ್ಲಿ ಕೆಲವೇ ದೂರದೂರಿನ ವಿದ್ಯಾರ್ಥಿಗಳು ಉಳಿಯುವುದರಿಂದ ಅವರಿಗಷ್ಟೇ ಯಾಕೆ ಅಡುಗೆ ಮಾಡಬೇಕು ಎಂಬ ಧೋರಣೆ ಮೇಲ್ವಿಚಾರಕರಲ್ಲಿದೆ. ಹೀಗಾಗಿ ಬೆಳಿಗ್ಗೆ ಮಿಕ್ಕಿದ್ದು, ಹಳಸಿದ್ದು ಎಲ್ಲ ಈ ಮಕ್ಕಳ ಪಾಲಾಗುತ್ತದೆ. ಹಾಸ್ಟೆಲ್‌ನಲ್ಲಿರುವ ಎಷ್ಟೋ ಮಕ್ಕಳು ಒಂದು ರುಚಿಕಟ್ಟಾದ ಊಟ ಮಾಡುವುದೇ ಒಂದು ಪುಣ್ಯ ವಿಶೇಷ ಎನ್ನುವಂತಾಗಿದೆ. ವಿದ್ಯಾರ್ಥಿನಿಯರ ಹಾಸ್ಟೆಲ್ ಒಂದರಲ್ಲಿ ಎಷ್ಟೋ ದಿನ ಅಡುಗೆ ಮಾಡದೆ ಕಡ್ಲೆಪುರಿ ತಿಂದು ನೀರು ಕುಡಿದು ಹಸಿವಿನಿಂದ ಕಂಗಾಲಾಗಿ ನರಳಿದ ಘಟನೆಗಳೂ ಇವೆ. ಇನ್ನು ಹಲವು ಉಚಿತ, ಖಾಸಗಿ ಸಮುದಾಯದ ಹಾಸ್ಟೆಲ್‌ಗಳ ಅವಸ್ಥೆಯಂತೂ ದೇವರಿಗೇ ಪ್ರೀತಿ. ಇಲ್ಲಿನ ಆಡಳಿತ ಮಂಡಳಿಗಳಿಗೆ, ವ್ಯವಸ್ಥಾಪಕರಿಗೆ ತಾವು ತಮ್ಮ ಜನಾಂಗವನ್ನು ಉದ್ಧರಿಸಲಿಕ್ಕೆ ಅವತರಿಸಿದ್ದೇವೆ, ತಾವು ಏನು ಉಚಿತವಾಗಿ ನೀಡುತ್ತಿದ್ದೇವೆ ಅದೇ ಶ್ರೇಷ್ಠದಾನ, ಅದಕ್ಕಿಂತ ಮಿಗಿಲಾದುದಿಲ್ಲ ಎಂಬ ಭ್ರಮೆಯಿರುತ್ತದೆ. ಹಾಗಾಗಿ ಅಲ್ಲಿ ಅವರು ಎಂತಹ ಕಳಪೆ ಆಹಾರ ನೀಡಿದರೂ ಅದೇ ಪಂಚಭಕ್ಷ್ಯ ಪರಮಾನ್ನ, ಎಂತಹ ನೀರು ಕೊಟ್ಟರೂ ಅದೇ ಪರಮ ಪವಿತ್ರ ತೀರ್ಥ! ಹೀಗಾಗಿ ಮೂರು ದಿನ ಕಳೆಯದಾದ ಹುಳಿ ಮಜ್ಜಿಗೆಯಿಂದ ಮಾಡಿದ ಮಜ್ಜಿಗೆ ಹುಳಿ, ಮುಗ್ಗಿದ ಅಕ್ಕಿ ಅನ್ನ, ವಾರಕ್ಕೆ ನಾಲ್ಕು ದಿನ ಉಪ್ಪಿಟ್ಟು, ವಾರವೆಲ್ಲ ತೊಂಡೆಕಾಯಿ ಪಲ್ಯ ಸಾಲದ್ದಕ್ಕೆ ಕಳಪೆ ನೈರ್ಮಲ್ಯ ನಿರ್ವಹಣೆ. ಎಲ್ಲೋ ದೂರದೂರಿನಿಂದ ಓದಲು ಬಂದು ಸೇರಿದ ಮಕ್ಕಳು ಈ ಪಡಿಪಾಡಲು ಪಟ್ಟು ಒದ್ದಾಡಬೇಕು. ಇಷ್ಟು ಸಾಲದು ಎಂಬಂತೆ ಪಕ್ಕದ ಸಮುದಾಯ ಭವನದಲ್ಲೋ ಚೌಲ್ಟರಿಯಲ್ಲೋ ಮದುವೆ, ತಿಥಿ ನಡೆದರೆ ಅಂದು ಹಾಸ್ಟೆಲ್‌ನಲ್ಲಿ ಅಡುಗೆಯೇ ಇಲ್ಲ. ಅಲ್ಲಿ ಜನ ತಿಂದು ಉಳಿದದ್ದು, ಮುಟ್ಟಿ ಮೂಸಿದ್ದು ಎಲ್ಲಾ
ಈ ವಿದ್ಯಾರ್ಥಿಗಳ ಪಾಲು! ಅದನ್ನು ತಿನ್ನದೆ ಬೇರೆ ದಾರಿಯೇ ಇಲ್ಲ! ಮಕ್ಕಳ ಊಟದಲ್ಲೂ ಲಾಭ ಬಡುಕತನ
ಸರಕಾರ ಹಾಗೂ ಕೆಲ ಖಾಸಗಿ ಸಂಸ್ಥೆಗಳು ನಡೆಸುವ ಹಾಸ್ಟೆಲ್, ವಸತಿ ಶಾಲೆಗಳಲ್ಲಿ ಅಡುಗೆ ತಯಾರಿಸಲು ಪೈಪೋಟಿಯೇ ಇರುತ್ತದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಡುಗೆ ಕಂಟ್ರಾಕ್ಟ್ ಹಿಡಿಯಲು ಯಾವ ಲಾಬಿ ಬೇಕಾದರೂ ಮಾಡುತ್ತಾರೆ. ಮಕ್ಕಳಿಗೆ ಅಡುಗೆ ಮಾಡುವುದು ಒಂದು ಅತ್ಯಂತ ಪವಿತ್ರವಾದ ಸೇವೆ ಎಂದರೆ ತಪ್ಪಲ್ಲ. ಇಂತಹ ಕೆಲಸಕ್ಕೂ ಲಾಬಿ ಎಂದರೆ ಅಚ್ಚರಿ ಎನಿಸುತ್ತದೆ. ಯಾವ ಲಾಭವೂ ಇಲ್ಲದೆ ಇಂತಹ ಲಾಬಿಗಳು ನಡೆಯುತ್ತವೆ ಎಂದರೆ ಯಾರೂ ಒಪ್ಪುವುದಿಲ್ಲ. ಮಕ್ಕಳಿಗೆ ಅಡುಗೆ ಮಾಡುವುದೂ ಒಂದು ಲಾಭಕೋರ ದಂಧೆಯಾದ ಮೇಲೆ ಮಕ್ಕಳಿಗೆ ಯಾವ ಮಟ್ಟದ ಪೌಷ್ಠಿಕ ಆಹಾರ ಸಿಕ್ಕೀತು ಎಂದು ಯಾರಾದರೂ ಯೋಚಿಸಲೇಬೇಕು. ವಸತಿ ಶಾಲೆಯೊಂದರಲ್ಲಿ ಅಡುಗೆ ತಯಾರಕರ ಎರಡು ಗುಂಪಿನ ನಡುವಿನ ವೈಷಮ್ಯ ತಾರಕಕ್ಕೇರಿ ಎಷ್ಟೋ ದಿನ ವಿದ್ಯಾರ್ಥಿಗಳಿಗೆ ಅಡುಗೆಯೇ ತಯಾರಾಗಿರಲಿಲ್ಲ. ಈ ವೈಷಮ್ಯಕ್ಕೆ ಮಕ್ಕಳು ಬಲಿಯಾಗಬಾರದೆಂದು ಅಂಜಿ ಪೋಷಕರು ಮಕ್ಕಳನ್ನೇ ವಸತಿ ಶಾಲೆ ಬಿಡಿಸಿ ಕರೆದೊಯ್ದದ್ದನ್ನು ಕಣ್ಣಾರೆ ನೋಡಿದ್ದೇನೆ. ಗುಣಮಟ್ಟ ಸುಧಾರಿಸಬೇಕು
ಯಾವುದೇ ಸಂಸ್ಥೆ ಇರಲಿ, ಸರಕಾರ ವಿರಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ, ಪೌಷ್ಠಿಕ ಹಾಗೂ ಶುಚಿಯಾದ ಆಹಾರವನ್ನು ಒದಗಿಸುವ ಖಾತರಿ ನೀಡಬೇಕು. ಪೌಷ್ಠಿಕವಲ್ಲದ, ಕಳಪೆ ಆಹಾರ ಸೇವನೆಯಿಂದ ಮಕ್ಕಳು ಹಲವು ಕಾಯಿಲೆಗಳಿಗೆ ತುತ್ತಾಗಬಹುದು. ಅವರ ದೈಹಿಕ ಹಾಗೂ ಮಾನಸಿಕ ದೃಢತೆಯನ್ನು ಕಡಿಮೆ ಮಾಡಿ ಅವರ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರಬಹುದು. ಬೆಳೆಯುವ ವಯಸ್ಸಿನ ಮಕ್ಕಳನ್ನು ಪೌಷ್ಠಿಕ ಆಹಾರಗಳಿಂದ ವಂಚಿತರನ್ನಾಗಿ ಮಾಡುವುದು ಎಂದರೆ ಆಹಾರ ಶೋಷಣೆ, ಇದು ಕೂಡ ಒಂದು ಅಪರಾಧ ಎಂದೇ ಪರಿಗಣಿಸಬೇಕು. ಸರಕಾರ ಅಡುಗೆ ಮನೆಗಳಲ್ಲಿ ಸಿಸಿ ಟಿವಿ ಅಳವಡಿಸಿದರೆ ಸಾಲದು. ಪ್ರತಿ ವಸತಿನಿಲಯ, ಹಾಸ್ಟೆಲ್‌ಗೂ ವ್ಯಕ್ತಿಯೊಬ್ಬನನ್ನು ಉತ್ತರದಾಯಿಯನ್ನಾಗಿ ಮಾಡಬೇಕು. ಹೊರಗಿನಿಂದ ತಯಾರಿಸಿದ ಆಹಾರಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಮೊನ್ನೆ ಮೃತಪಟ್ಟ ಮಕ್ಕಳಿಗೆ ಸಕಾಲದಲ್ಲಿ ಆಕ್ಸಿಜನ್, ಆಂಬುಲೆನ್ಸ್ ಸಿಗಲಿಲ್ಲ ಎಂಬುದೇ ವಿಷಾದದ ಸಂಗತಿ. ಸರಕಾರ ಪ್ರತಿ ಹಾಸ್ಟೆಲ್, ವಸತಿ ನಿಲಯದ ವ್ಯಾಪ್ತಿಯ ಒಂದು ಆಸ್ಪತ್ರೆ ಅಥವಾ ವೈದ್ಯರನ್ನು ವಸತಿ ನಿಲಯದ ತತ್‌ಕ್ಷಣದ ಮೇಲ್ವಿಚಾರಣೆ, ತಪಾಸಣೆ, ಚಿಕಿತ್ಸೆಗೆ ಸಿಗುವಂತೆ ವ್ಯವಸ್ಥೆ ಮಾಡಬೇಕು. ಪ್ರತಿ ವಸತಿ ನಿಲಯವೂ ಕಡ್ಡಾಯವಾಗಿ ತನ್ನದೇ ಅದ ಒಂದು ವಾಹನ ಹೊಂದಿರಬೇಕು ಅಥವಾ ಒಂದು ಸರಕಾರ /ಖಾಸಗಿ ವಾಹನದ ವ್ಯವಸ್ಥೆಗೆ ಟ್ಯಾಗ್ ಆಗಿರಬೇಕು. ಆಗಷ್ಟೇ ಮಕ್ಕಳ ಪ್ರಾಣಹಾನಿಗೆ ಕಾರಣವಾಗುವ ಸಂಭವನೀಯ ಅನಾಹುತಗಳನ್ನು ತಪ್ಪಿಸಲು ಸಾಧ್ಯ. ತುರುವೇಕೆರೆ ಪ್ರಸಾದ್