ಬ್ಯಾಡಗಿ: ಇತ್ತೀಚೆಗೆ ಆಹಾರ ಧಾನ್ಯಗಳತ್ತ ತಲೆ ಕೆಡಿಸಿಕೊಳ್ಳದ ರೈತರು ಕೇವಲ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿರುವುದು ದುರಂತ. ಸೂಕ್ತ ಸಮಯದಲ್ಲಿ ಎಚ್ಚೆತ್ತುಕೊಳ್ಳದಿದ್ದಲ್ಲಿ ಮತ್ತೂಮ್ಮೆ “ಫುಡ್ ಎಮರ್ಜೆನ್ಸಿ’ ಎದುರಿಸಬೇಕಾಗುತ್ತದೆ ಎಂದು ಕೃಷಿ ಇಲಾಖೆ ಉಪ ನಿರ್ದೇಶಕಿ ಜಿ.ಎಸ್. ಸ್ಪೂರ್ತಿ ಎಚ್ಚರಿಸಿದರು.
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಕೃಷಿ ಇಲಾಖೆಯಿಂದ ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಪ್ರಗತಿಪರ ರೈತ ಚನ್ನಬಸಪ್ಪ ಬೂದಿಹಾಳ ಅವರ ಜಮೀನಿನಲ್ಲಿ ರೈತರಿಗಾಗಿ ಆಯೋಜಿಸಿದ್ದ ಶೇಂಗಾ ಬೆಳೆ ಕ್ಷೇತ್ರೋತ್ಸವ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ಪ್ರಧಾನ ಭಾರತದಲ್ಲಿ ಕೃಷಿಯನ್ನು ಒಂದು ಉದ್ದಿಮೆಯಾಗಿ ನೋಡಲಾಗುತ್ತಿದೆ. ಹಸಿರುಕ್ರಾಂತಿ ಮೂಲಕ ಆಹಾರಕ್ಕೆ ಬೇಕಾಗುವಷ್ಟು ಹೈಬ್ರಿàಡ್ ಬೀಜ ಹಾಗೂ ರಾಸಾಯನಿಕ ಗೊಬ್ಬರವನ್ನು ಈಗಾಗಲೇ ಮೈಮೇಲೆ ಹಾಕಿಕೊಂಡಿದ್ದೇವೆ. ಇನ್ನಾದರೂ ರೈತರು ಎಚ್ಚೆತ್ತುಕೊಳ್ಳದಿದ್ದಲ್ಲಿ ದೇಶದ ಜನರು ಆಹಾರ ಕ್ಷಾಮ ಎದುರಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಕೇವಲ ಲಾಭಕ್ಕಾಗಿ ಕೃಷಿ ನಡೆಸುವುದರಿಂದ ಪ್ರಯೋಜನವಿಲ್ಲ. ಇದೊಂದು ಸೇವೆ ಎಂದು ಪರಿಗಣಿಸುವಂತೆ ಮನವಿ ಮಾಡಿದರು.
ಎಲ್ಲಿವೆ ದ್ವಿದಳ ಧಾನ್ಯಗಳು: ನಮ್ಮ ಪೂರ್ವಜರ ಕಾಲದಿಂದ ಇಂದಿನವರೆಗೂ ಕೃಷಿ ಕ್ಷೇತ್ರನ್ನು ಆಹಾರ ಧಾನ್ಯಗಳಿಗಾಗಿ ಮೀಸಲಿಡಲಾಗಿತ್ತು. ಹೀಗಾಗಿ, ಕೃಷಿಕರನ್ನು ಅನ್ನದಾತರೆಂದೇ ಸಂಬೋಧಿಸಲಾಗುತ್ತಿದೆ. ಆದರೆ, ಲಾಭದಾಸೆಗಿಳಿದಿರುವ ರೈತರು ಇತ್ತೀಚೆಗೆ ವಾಣಿಜ್ಯ ಬೆಳೆಗಳನ್ನು ಹೆಚ್ಚು ಬೆಳೆಯುತ್ತಿದ್ದಾರೆ. ತಾಲೂಕಿನ ಒಟ್ಟು 33 ಸಾವಿರ ಹೆಕ್ಟೇರ್ ಕೃಷಿಭೂಮಿಯಲ್ಲಿ ಕೇವಲ 3 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ದಿದ್ವಳ ಧಾನ್ಯ ಬಿತ್ತನೆಯಾಗುತ್ತಿದ್ದು, ಇನ್ನುಳಿದ 30 ಸಾವಿರ ಹೆಕ್ಟರ್‌ನಲ್ಲಿ ಹತ್ತಿ ಮತ್ತು ಗೋವಿನಜೋಳ ಬಿತ್ತನೆಯಾಗಿದೆ. ಇದೊಂದು ಉದಾಹರಣೆಯಷ್ಟೇ ಎಂದರು.
ಮಾಯವಾದ ಮಿಶ್ರತಳಿ ಬೇಸಾಯ: ಈ ಮೊದಲು ಮೆಣಸಿನಕಾಯಿ, ಹೆಸರು, ಉದ್ದು, ಎಳ್ಳು, ಶೇಂಗಾ, ಈರುಳ್ಳಿ, ಕುಸುಬೆ, ತೊಗರಿ, ಜೋಳ, ಇನ್ನಿತರ ಬೆಳೆಗಳನ್ನು ಮಿಶ್ರತಳಿ ಬೇಸಾಯದ ಮೂಲಕ ಬೆಳೆಯಲಾಗುತ್ತಿತ್ತು. ಆದರೆ ಕಳೆದೆರಡು ದಶಕಗಳಿಂದ ಮಿಶ್ರತಳಿ ಬೇಸಾಯ ಮಾಯವಾಗಿದ್ದು, ವರ್ಷಕ್ಕೊಮ್ಮೆ ಬೆಳೆಯುವ ಹತ್ತಿ ಗೋವಿನಜೋಳ ಇನ್ನಿತರ ಬೀಜಗಳನ್ನು ಬಿತ್ತನೆ ಮಾಡಲಾಗುತ್ತಿದೆ. ಜನ ಜಾನುವಾರುಗಳಿಗೆ ಬೇಕಾದಂತಹ ಜೋಳವನ್ನೂ ಸಹ ಬೆಳೆಯಲು ನಮ್ಮ ರೈತರು ಹಿಂದೇಟು ಹಾಕುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಶಿವಮೂರ್ತಿ ಮಾತನಾಡಿ, ಕೃಷಿ ಇದೀಗ ಮೊದಲಿನಂತಿಲ್ಲ. ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು. ಶೇಂಗಾ ಬೆಳೆಯುವ ರೈತರಿಗೆ ಸುಧಾರಿತ ತಳಿ ಹಾಗೂ ಬೇಸಾಯ ಕ್ರಮಗಳು ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುವಂತಹ ಬೀಜಗಳು ಬಿತ್ತನೆಗೆ ಸಿದ್ಧವಾಗಿದ್ದು, ರೋಗ ಮತ್ತು ಕೀಟ ಹತೋಟಿ ಕ್ರಮಗಳನ್ನು ಪ್ರತಿಯೊಬ್ಬರು ಅನುಸರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿ ಕಾರಿ ಎಸ್. ಪಿ. ಮರಬಸಣ್ಣನವರ, ಕೃಷಿ ಅಧಿ ಕಾರಿಗಳಾದ ಆರ್. ಮಂಜುನಾಥ, ನಾಗರಾಜ ಬನ್ನಿಹಟ್ಟಿ, ಆತ್ಮಾ ಸಿಬ್ಬಂದಿ ಎಸ್.ಕೆ.ಚಂದ್ರಶೇಖರ, ಸುರೇಶ ನಾಯಕ, ತಾಂತ್ರಿಕ ಉತ್ತೇಜಕರಾದ ಅಣ್ಣಪ್ಪ, ಪ್ರಭು ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.