ಬೆಂಗಳೂರು: “ಜನಪದ ಸಾಹಿತ್ಯ ಆಡಂಬರವಿಲ್ಲದೆ ವಾಸ್ತವದ ನೆಲೆಗಟ್ಟಿನಲ್ಲಿ ರಚಿತಗೊಂಡಿರುವುದರಿಂದಲೇ ಇಂದಿಗೂ ಜೀವಂತಿಕೆ ಉಳಿಸಿಕೊಂಡಿದೆ,’ ಎಂದು ಜಾನಪದ ವಿದ್ವಾಂಸ ಡಾ. ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು.
ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಚನ ಜ್ಯೋತಿ ಬಳಗ ಹಾಗೂ ಗೀರ್ವಾಣಿ ಅಕಾಡೆಮಿ ಆಯೋಜಿಸಿದ್ದ ಜಾನಪದ ಕವಯತ್ರಿ ಚಂದ್ರಕಲಾ ಸಂಗಪ್ಪ ಹಾರಕುಡೆ ರಚಿಸಿರುವ “ಚಂದ್ರಸಂಗ ಸಿರಿ’ ಕೃತಿ ಹಾಗೂ” ಚಂದ್ರಸಂಗ ಸಿರಿಗಾನ’ ಧ್ವನಿಸಾಂದ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಪಂಡಿತ ಪಾಮರರು ರಚಿಸಿರುವ ಸಾಹಿತ್ಯ ವರ್ಣನೆಗಳಿಂದ ಕೂಡಿದ್ದು, ವಾಸ್ತವತೆ ಕಡಿಮೆ. ಹೀಗಾಗಿ ಅವರ ಸಾಹಿತ್ಯದಲ್ಲಿರುವ ಬಣ್ಣಗಳ ಲೇಪನ ಕಾಲ ಸರಿದಂತೆ ಮಸುಕಾಗಲಿದೆ. ಆದರೆ ಜನಪದರು ಸ್ವಂತ ಅನುಭವದಿಂದ ರಚಿಸಿರುವ ಸತ್ವಯುತ ಜನಪದ ಸಾಹಿತ್ಯ ಸದಾ ಜೀವಂತಿಕೆ ಕಾಪಾಡಿಕೊಂಡಿದೆ,’ ಎಂದರು.
“ಜನಪದ ಸಾಹಿತ್ಯ ಹೃದಯದಿಂದ ಮೂಡಿದ ಭಾವನೆಗಳಿಂದ ರಚಿತಗೊಂಡಿದೆ. ಶಾಲೆಯ ಮುಖವನ್ನೇ ಕಾಣದವರು ಸ್ವಂತ ಅನುಭವದಿಂದ ಸರಳವಾಗಿ ಅದ್ಬುತ ಸಾಹಿತ್ಯ ರಚಿಸಿದ್ದಾರೆ. ಅದೇ ರೀತಿ ವಾಸ್ತವದ ನೆಲೆಗಟ್ಟಿನಲ್ಲಿ ಸಾಹಿತ್ಯ ರಚಿಸಿದ ತತ್ವಪದಕಾರರು ಶ್ರೇಷ್ಠ ಆಧ್ಯಾತ್ಮಕ ಚಿಂತಕರಾಗಿದ್ದರು. ಜೊತೆಗೆ ಲೋಕದ ತಪ್ಪುಗಳನ್ನು ತಮ್ಮ ಮೇಲೆಯೇ ಆರೋಪಿಸಿಕೊಂಡು ವಿಡಂಬನಾತ್ಮಕ ಶೈಲಿಯಲ್ಲಿ ಶರಣರು ರಚಿಸಿದ ವಚನ ಸಾಹಿತ್ಯ ನಿಜವಾದ ಸಾಹಿತ್ಯವಾಗಿದೆ,’ ಎಂದು ಹೇಳಿದರು.
ವಚನ ಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ ಮಾತನಾಡಿ, “ಕೇವಲ ಐದಾರು ಜನಪದ ಗೀತೆಗಳನ್ನು ಕಲಿತು ಅಂತಾರಾಷ್ಟ್ರೀಯ ಗಾಯಕರು ಎಂದು ತೋರ್ಪಡಿಸಿಕೊಳ್ಳುವವರು ರಾಜಧಾನಿಯಲ್ಲಿದ್ದಾರೆ. ಹೆಣ್ಣುಮಕ್ಕಳಿಗೆ ವೇಷ ಭೂಷಣ ತೊಡಿಸಿ ಜಾನಪದ ಜಾತ್ರೆಯಲ್ಲಿ ಕುಣಿಸುವವರ ಮಧ್ಯೆ, ತಮ್ಮ ನೆನಪಿನ ಶಕ್ತಿಯಿಂದ ಜೀವನಕ್ಕೆ ಹತ್ತಿರವಾಗಿರುವ ಜನಪದ ಹಾಡುಗಳನ್ನು ಹಾಡುತ್ತ ಅನುಪಮ ಸೇವೆ ಸಲ್ಲಿಸುತ್ತಿರುವ ಚಂದ್ರಕಲಾ ಸಂಗಪ್ಪ ಹಾರಕುಡೆಯವರ ಸಾಧನೆ ಮೆಚ್ಚುವಂತಹದ್ದು,’ ಎಂದರು.
ಹಿರಿಯ ಸಾಹಿತಿ ಡಾ. ಶಿವಾನಂದ ಕುಬಸದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಬಸವ ಸಮಿತಿ ಹಿರಿಯ ಉಪಾಧ್ಯಕ್ಷ ಪ್ರಭುದೇವ ಚಿಗಟೇರಿ ಮತ್ತಿತರರು ಇದ್ದರು.